ಜಾಗತೀಕರಣದ ಪ್ರಭಾವದಿಂದಾಗಿ ಜಗತ್ತಿನ 7000 ಭಾಷೆಗಳಲ್ಲಿ ಅರ್ಧದಷ್ಟುಅಳಿವಿನಂಚಿನಲ್ಲಿವೆ. ಅಂತಹ ಭಾಷೆಗಳನ್ನು ಗುರುತಿಸಿ ಉಳಿಸಬೇಕಾಗಿದೆ. ಅದಕ್ಕೋಸ್ಕರ ಮಾತೃಭಾಷೆಯ ಬಗ್ಗೆ ಜಾಗೃತಿಯನ್ನುಂಟುಮಾಡಬೇಕಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ನುಡಿದರು.
ತುಮಕೂರು : ಜಾಗತೀಕರಣದ ಪ್ರಭಾವದಿಂದಾಗಿ ಜಗತ್ತಿನ 7000 ಭಾಷೆಗಳಲ್ಲಿ ಅರ್ಧದಷ್ಟುಅಳಿವಿನಂಚಿನಲ್ಲಿವೆ. ಅಂತಹ ಭಾಷೆಗಳನ್ನು ಗುರುತಿಸಿ ಉಳಿಸಬೇಕಾಗಿದೆ. ಅದಕ್ಕೋಸ್ಕರ ಮಾತೃಭಾಷೆಯ ಬಗ್ಗೆ ಜಾಗೃತಿಯನ್ನುಂಟುಮಾಡಬೇಕಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ನುಡಿದರು.
ಜಿಲ್ಲಾ ಕ.ಸಾ.ಪ. ನಗರದ ರೇಣುಕಾ ವಿದ್ಯಾಪೀಠದಲ್ಲಿ ಏರ್ಪಡಿಸಿದ್ದ ಮಾತೃಭಾಷಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಂಕೇತಗಳ ಮೂಲಕ ಆರಂಭವಾದ ಮಾತೃಭಾಷೆ ಕ್ರಮೇಣವಾಗಿ ಲಿಪಿಯನ್ನು ಕಂಡುಕೊಂಡು ವಿಕಾಸವಾಯಿತು. ಕನ್ನಡ ಅತ್ಯಂತ ಸುಂದರವಾದ ಲಿಪಿಯನ್ನು ಹೊಂದಿರುವ ಜಗತ್ತಿನ ಪ್ರಮುಖ ಭಾಷೆಗಳಲ್ಲಿ ಒಂದಾಗಿದೆ ಎಂದರು.
ವಿಶೇಷ ಉಪನ್ಯಾಸ ನೀಡಿದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಪ್ರಾಂಶುಪಾಲ. ಪೊ›. ಕೆ.ಎಸ್.ಜಗದೀಶ್‌ರವರು ಬಾಂಗ್ಲಾದೇಶದಲ್ಲಿ ಬಂಗಾಳಿ ಭಾಷೆ ಮಾತನಾಡುವವರ ಸತತ ಹೋರಾಟದ ಫಲವಾಗಿ ವಿಶ್ವಸಂಸ್ಥೆ ಮಾತೃಭಾಷಾ ದಿನಾಚರಣೆಯನ್ನು ಆರಂಭಿಸಿತು ಎಂದರು.
ಮುಖ್ಯ ಅತಿಥಿಗಳಾಗಿದ್ದ ಡಾ. ಡಿ.ಎನ್.ಯೋಗೀಶ್ವರಪ್ಪ, ಭಾಷೆ ಸಂಸ್ಕೃತಿಯು ಭಾವನೆಗಳ ಪ್ರತೀಕ. ಮಾತೃಭಾಷೆ ಎಂಬುದು ಅಸ್ಮಿತೆಯ ಸಂಕೇತ. ಇದು ಭಾವುಕತೆಗೆ ಸಂಬಂಧಿಸಿದ ವಿಷಯವಾಗಿದೆ. ಹಲವಾರು ರಾಷ್ಟ್ರಗಳಲ್ಲಿ ಮಾತೃಭಾಷೆಯಲ್ಲೇ ತಾಂತ್ರಿಕತೆ ಮತ್ತು ವೈಜ್ಞಾನಿಕ ವಿಷಯಗಳನ್ನು ಅಧ್ಯಯನ ಮಾಡುವುದರಿಂದ ಹೊಸ ಆವಿಷ್ಕಾರಗಳು ನಡೆದಿದವೆ. ಆದ್ದರಿಂದ ಮಾತೃಭಾಷೆಯಲ್ಲೇ ಆಲೋಚನೆ ಮಾಡುವುದನ್ನು ರೂಢಿಸಿಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಚಿದಾನಂದ್, ಕನ್ನಡ ಭಾಷೆ ಶುದ್ಧೀಕರಣವಾಗಬೇಕಾಗಿದೆ. ಶುದ್ಧ ಕನ್ನಡ ಪದಗಳನ್ನು ಬಳಸಿ ಭಾಷೆಯನ್ನು ಉಳಿಸಬೇಕಾಗಿದೆ ಎಂದರು.
ವೇದಿಕೆಯಲ್ಲಿ ರೇಣುಕಾ ವಿದ್ಯಾಪೀಠದ ಅಧ್ಯಕ್ಷರಾದ ಕೆ.ವೈ.ಸಿದ್ಧಲಿಂಗಮೂರ್ತಿ, ಕಾರ್ಯದರ್ಶಿ ನಾಗರಾಜ್, ನಿರ್ದೇಶಕರಾದ ಮಲ್ಲೇಶ್ ಉಪಸ್ಥಿತರಿದ್ದರು.
ತುಮಕೂರು ತಾಲೂಕು ಕ.ಸಾ.ಪ. ಅಧ್ಯಕ್ಷ ಚಿಕ್ಕಬೆಳ್ಳಾವಿ ಶಿವಕುಮಾರ್ ಸ್ವಾಗತಿಸಿದರು, ಬೆಸ್ಟೆಕ್ಸ್ ರಾಮರಾಜು ವಂದಿಸಿದರು.
ಕನ್ನಡಕ್ಕೆ ಯಾವುದೇ ಅಡ್ಡಿ ಇಲ್ಲ
ಮಧುಗಿರಿ : ಕನ್ನಡ ಸಂಪದ್ಭರಿತ ಭಾಷೆ, ಕನ್ನಡಕ್ಕೆ ಯಾವುದೇ ಭಾಷೆ ಸಾಟಿಯಿಲ್ಲ. ಕನ್ನಡಕ್ಕೆ ಕುತ್ತು ಬಂದಿರುವುದು ಗ್ರಾಮೀಣರಿಂದಲ್ಲ, ಬೆಂಗಳೂರಿನಲ್ಲಿ ಕನ್ನಡಿಗರು ಅನ್ಯ ಭಾಷಿಕರ ಅಬ್ಬರದಲ್ಲಿ ಅಲ್ಪಸಂಖ್ಯಾತರಾಗುತ್ತಿದ್ದು, ಆಳುವ ಸರ್ಕಾರಗಳು ಕನ್ನಡ ಭಾಷೆ ಉಳಿಸಿ ಬೆಳಸುವ ನಿಟ್ಟಿನಲ್ಲಿ ಮುತುವರ್ಜಿ ವಹಿಸಬೇಕು ಎಂದು ಶಾಸಕ ಎಂ.ವಿ.ವೀರಭದ್ರಯ್ಯ ಸಲಹೆ ನೀಡಿದರು.
ತಾಲೂಕಿನ ಆಂಧ್ರದ ಗಡಿ ಭಾಗಕ್ಕೆ ಹೊಂದಿರುವ ಕೊಡಿಗೇನಹಳ್ಳಿಯಲ್ಲಿ ಸೋಮವಾರ ನಡೆದ ಹೋಬಳಿ ಮಟ್ಟದ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ಆಂಧ್ರದ ಗಡಿ ಭಾಗದಲ್ಲಿ ಸಮ್ಮೇಳನಗಳು ಹೆಚ್ಚು ನಡೆಯಬೇಕು. ಪ್ರತಿ ಬೀದಿಯಲ್ಲೂ ದ ತೇರು ಎಳೆಯುವಂತಾಗಬೇಕು ಎಂದರು.
ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ಮಾತನಾಡಿ, ದೊಡ್ಡರಂಗೇಗೌಡರಂತಹ ಮೇರು ವ್ಯಕ್ತಿತ್ವದ ಮಹನೀಯರನ್ನು ಕೊಡುಗೆಯಾಗಿ ನೀಡಿದ ಕೀರ್ತಿ ತಾಲೂಕಿಗೆ ಸಲ್ಲುತ್ತದೆ. ಗಡಿ ಭಾಗದ ಕೊಡಿಗೇನಹಳ್ಳಿಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದು ಗಡಿ ನಾಡಿನಲ್ಲಿ ಕನ್ನಡದ ತೇರು ಎಳೆಯುವ ಕ್ರಮ ಶ್ಲಾಘನೀಯ. ಗಡಿ ಗ್ರಾಮಗಳಲ್ಲಿ ತೆಲುಗಿನ ಮೇಲಾಟದಲ್ಲೂ ಕನ್ನಡ ಭಾಷೆ ಉಳಿದುಕೊಂಡು ಬಂದಿದೆ. ಕನ್ನಡಕ್ಕಿರುವ ಜೀರ್ಣಶಕ್ತಿ ಅಂತದ್ದು. ಇತರೆ ಭಾಷೆಗಳ ಪದಗಳನ್ನು ಕನ್ನಡಕ್ಕೆ ಎರವಲು ಪಡೆದುಕೊಂಡಿದ್ದರೂ ಕನ್ನಡ ಮೇರು ಭಾಷೆಯಾಗಿ ಇಂದಿಗೂ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದೆ. ಇಂಗ್ಲಿಷ್ ಭಾಷೆಯನ್ನು ಕನ್ನಡದಷ್ಟೇ ಎತ್ತರಕ್ಕೇರಿಸಿ ಬೆಳಸಿದ ಕೀರ್ತಿ ಕನ್ನಡಿಗರಿಗೆ ಸಲ್ಲುತ್ತದೆ. ಕನ್ನಡ ಕಲೆಯನ್ನು ಇಂದಿಗೂ ಜೀವಂತವಾಗಿರಿಸಿದವರು ಗ್ರಾಮೀಣರು. ಈ ವಿಚಾರದಲ್ಲಿ ಕೊಡಿಗೇನಹಳ್ಳಿ ಭಾಗದ ಜನತೆ ಎತ್ತರಕ್ಕೆ ನಿಲ್ಲುತ್ತಾರೆ ಎಂದರು.