ಅಪಾಯಕಾರಿ ಬೆಳವಣಿಗೆ: ರೋಗಿಗಳಲ್ಲಿ ಕೊರೋನಾ ಸೋಂಕಿನ ಲಕ್ಷಣಗಳೇ ಇಲ್ಲ..!

By Kannadaprabha NewsFirst Published May 9, 2020, 10:48 AM IST
Highlights

ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಡಾಣಕಶಿರೂರನಲ್ಲಿ ಅಪಾಯಕಾರಿ ಬೆಳವಣಿಗೆ: ಜಿಪಂ ಸಿಇಒ ಗಂಗೂಬಾಯಿ ಮಾನಕರ| ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಇಲ್ಲಿವರೆಗೆ ಒಟ್ಟು 28493 ಕಾರ್ಮಿಕರ ಆಗಮನ| ಬಾದಾಮಿ ತಾಲೂಕಿಗೆ ಒಟ್ಟು 4220, ಹುನಗುಂದ ತಾಲೂಕಿಗೆ 7309 ಬಂದಿದ್ದು, ಅವರನ್ನು ಹೋಂ ಕ್ವಾರಂಟೈನ್‌ಗೆ ಒಳಪಡಿಸಲಾಗುತ್ತಿದೆ|

ಬಾಗಲಕೋಟೆ(ಮೇ.09): ಜಿಲ್ಲೆಯ ಬಾದಾಮಿ ತಾಲೂಕಿನ ಡಾಣಕಶಿರೂರ ಪ್ರಕರಣದಲ್ಲಿ ಸೋಂಕಿತ ದೃಢಪಟ್ಟವರಲ್ಲಿ ಕೊರೋನಾದ ಯಾವ ಲಕ್ಷಣಗಳು ಇರದೆ ಇರುವುದು ಒಂದು ರೀತಿಯಲ್ಲಿ ಅಪಾಯಕಾರಿ ಬೆಳವಣಿಗೆಯಾಗಿದೆ. ಜ್ವರ, ಕೆಮ್ಮು, ನೆಗಡಿಯಂತಹ ಸಣ್ಣ ಲಕ್ಷಣಗಳು ಇಲ್ಲದವರಲ್ಲಿ ಸೋಂಕು ಕಾಣಿಸಿಕೊಂಡಿದೆ. ಹೀಗಾಗಿ ರೋಗ ಲಕ್ಷಣಗಳಿಲ್ಲದ ಪ್ರಕರಣಗಳನ್ನು ತಕ್ಷಣ ಗುರುತಿಸುವಲ್ಲಿ ಜಿಲ್ಲಾ ಆರೋಗ್ಯ ಇಲಾಖೆ ಯಶಸ್ವಿಯಾಗಿದೆಯಾದರೂ ಬರುವ ದಿನಗಳಲ್ಲಿ ಮತ್ತಷ್ಟು ಮುನ್ನಚ್ಚರಿಕೆ ಅವಶ್ಯವಾಗಿದೆ ಎಂದು ಜಿಪಂ ಸಿಇಒ ಗಂಗೂಬಾಯಿ ಮಾನಕರ ತಿಳಿಸಿದ್ದಾರೆ. 

ಜಿಪಂ ಕಚೇರಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಾದಾಮಿ ತಾಲೂಕಿನ ಡಾಣಕಶಿರೂರ ಗ್ರಾಮದಲ್ಲಿ ಕೋವಿಡ್‌ ಸೋಂಕು ಪ್ರಕರಣ ದೃಢಪಟ್ಟ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯತಿಯಿಂದ ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗಿದೆ. ಡಾಣಕಶಿರೂರ ಗ್ರಾಮದಲ್ಲಿ ಒಟ್ಟು 235 ಕುಟುಂಬಗಳಿದ್ದು, 1173 ಸಂಖ್ಯೆಯಿಂದ ಕೂಡಿದೆ. 60 ವರ್ಷದ ವೃದ್ಧರು 112 ಇದ್ದು, ಇದರಲ್ಲಿ 11 ವೃದ್ಧರು ಬಿಪಿ, ಸಕ್ಕರೆ ಕಾಯಿಲೆ ಇದ್ದವರು ಇದ್ದಾರೆ. ಬಾಣಂತಿಯರು 8 ಜನ ಇದ್ದಾರೆ. ಕೋವಿಡ್‌ ಪ್ರಕರಣ ಹಿನ್ನಲೆಯಲ್ಲಿ ಡಾಣಕಶಿರೂರ ಗ್ರಾಮದ ಪ್ರೌಢಶಾಲೆಯಲ್ಲಿ 52, ಜಾಲಿಹಾಳ ಗ್ರಾಮದ ಪ್ರೌಢಶಾಲೆಯಲ್ಲಿ 19, ಚಿಕ್ಕ ಮುಚ್ಚಳಗುಡ್ಡ ವಸತಿ ನಿಲಯದಲ್ಲಿ 125 ಜನರನ್ನು ಕ್ವಾರಂಟೈನ್‌ ಮಾಡಿ ನಿಗಾ ವಹಿಸಲಾಗುತ್ತಿದೆ ಎಂದರು.

ಬಾಗಲಕೋಟೆಯಲ್ಲಿ ಕೊರೋನಾ ಅಟ್ಟಹಾಸ: ಕೊಪ್ಪಳದಲ್ಲೂ ಟೆನ್ಶನ್‌..!

ಡಾಣಕಶಿರೂರ ಗ್ರಾಮದಲ್ಲಿ ಒಟ್ಟು 15 ಪಾಜಿಟಿವ್‌ ಪ್ರಕರಣಗಳು ಪತ್ತೆಯಾಗಿದ್ದು, ಗ್ರಾಮವನ್ನು ಸಂಪೂರ್ಣ ಸೀಲ್‌ಡೌನ್‌ ಮಾಡಲಾಗಿದೆ. ಈ ಗ್ರಾಮದಲ್ಲಿ ಸೋಂಕಿತರ ಪ್ರಾಥಮಿಕ ಸಂಪರ್ಕ ಹೊಂದಿದವರು 149, ದ್ವಿತೀಯ ಸಂಪರ್ಕ ಹೊಂದಿದವರು 44 ಇದ್ದು, ಅವರೆಲ್ಲರ ಮೇಲೆ ತೀವ್ರ ನಿಗಾ ವಹಿಸಲಾಗುತ್ತಿದೆ. ಈ ಗ್ರಾಮದಲ್ಲಿ ಒಟ್ಟು 182 ಜನರ ಸ್ಯಾಂಪಲ್‌ಗಳನ್ನು ಕಲೆಕ್ಟ್ ಮಾಡಿದ್ದು ಪರೀಕ್ಷೆಗೆ ಕಳುಹಿಸಲಾಗಿದ್ದು, ಈ ಪೈಕಿ 167 ನೆಗೆಟಿವ್‌ ವರದಿಯಾಗಿವೆ ಎಂದು ತಿಳಿಸಿದರು.

ಕಡ್ಡಾಯವಾಗಿ ಕ್ವಾರಂಟೈನ್‌:

ಮಹಾರಾಷ್ಟ್ರ ರಾಜ್ಯದ ಪುಣೆ, ಮುಂಬಯಿದಿಂದ ಬಂದಿರುವ ಕಾರ್ಮಿಕರನ್ನು ಕಡ್ಡಾಯವಾಗಿ ವಸತಿ ನಿಲಯಗಳಲ್ಲಿ ಕ್ವಾರಂಟೈನ್‌ ಮಾಡಲಾಗುತ್ತಿದೆ. ಮಹಾರಾಷ್ಟ್ರದ ಪುಣೆ ಮತ್ತು ಮುಂಬಯಿನಂತಹ ನಗರಗಳಲ್ಲಿ ಹೆಚ್ಚಾಗಿ ಕೋವಿಡ್‌ ಪ್ರಕರಣಗಳು ಕಂಡುಬಂದಿದ್ದು, ಈ ನಗರಗಳಿಂದ ಆಗಮಿಸಿದ 90 ಜನರನ್ನು ಪ್ರತ್ಯೇಕ ವಸತಿ ನಿಲಯಗಳಲ್ಲಿ ಕ್ವಾರಂಟೈನ್‌ ಮಾಡಲಾಗಿದೆ. ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಇಲ್ಲಿವರೆಗೆ ಒಟ್ಟು 28493 ಕಾರ್ಮಿಕರು ಆಗಮಿಸಿದ್ದಾರೆ. ಬಾದಾಮಿ ತಾಲೂಕಿಗೆ ಒಟ್ಟು 4220, ಹುನಗುಂದ ತಾಲೂಕಿಗೆ 7309 ಬಂದಿದ್ದು, ಅವರನ್ನು ಗ್ರಾಪಂದಿಂದ ಎಲ್ಲ ಸೌಲಭ್ಯಗಳನ್ನು ನೀಡಿ ಹೋಮ್‌ ಕ್ವಾರಂಟೈನ್‌ಗೆ ಒಳಪಡಿಸಲಾಗುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾ​ಧಿಕಾರಿ ಡಾ.ಎ.ಎನ್‌.ದೇಸಾಯಿ ಉಪಸ್ಥಿತರಿದ್ದರು.
 

click me!