ಬಯಲಾಯ್ತು ಲಕ್ಕುಂಡಿ ನಿಧಿ ತೂಕದ ಸತ್ಯ! ಏಕಾಏಕಿ ಎಚ್ಚೆತ್ತ ಜಿಲ್ಲಾಡಳಿತ, ಒತ್ತಡಕ್ಕೆ ಬಿದ್ದರಾ ಅಧಿಕಾರಿ?

Published : Jan 13, 2026, 07:58 AM IST
Treasure Found in Lakkundi gadag

ಸಾರಾಂಶ

ಗದಗದ ಲಕ್ಕುಂಡಿಯಲ್ಲಿ ಮನೆಯ ಪಾಯ ತೆಗೆಯುವಾಗ ಎಷ್ಟು ತೂಕದ ಬಂಗಾರದ ಆಭರಣಗಳು ಪತ್ತೆಯಾಗಿವೆ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ್ದಾರೆ. ಆದರೆ, ಪುರಾತತ್ವ ಇಲಾಖೆ ಅಧಿಕಾರಿಯ ಹೇಳಿಕೆ ಮತ್ತು ಸಿಎಂ ಸಿದ್ದರಾಮಯ್ಯ ಅವರ ವೈರಲ್ ವಿಡಿಯೋದಿಂದಾಗಿ ಆಭರಣಗಳ ತೂಕದ ಬಗ್ಗೆ ಗೊಂದಲ ಸೃಷ್ಟಿಯಾಗಿದೆ.

ಗದಗ: ತಾಲೂಕಿನ ಐತಿಹಾಸಿಕ ಪ್ರಸಿದ್ಧ ಲಕ್ಕುಂಡಿ ಗ್ರಾಮದಲ್ಲಿ ಮನೆಯ ಪಾಯ ತೆಗೆಯುವ ವೇಳೆ ದೊರೆತಿರುವ ಬಂಗಾರದ ಆಭರಣಗಳ ಒಟ್ಟು ತೂಕ 466 ಗ್ರಾಂ ಇದ್ದು, 22 ವಿವಿಧ ವಸ್ತುಗಳಿವೆ ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ತಿಳಿಸಿದರು.

ಘಟನೆ ನಡೆದ ಮೂರು ದಿನಗಳ ನಂತರ ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಅವರು, ಈಗಾಗಲೇ ಕುಟುಂಬಸ್ಥರನ್ನು ಸನ್ಮಾನಿಸಿ ಗೌರವಿಸಲಾಗಿದೆ. ಅವರಿಗೆ ಸರ್ಕಾರದ ಜಾರಿಗೆ ತಂದಿರುವ 1962ರ ನಿಕ್ಷೇಪ ಅಧಿನಿಯದ ಪ್ರಕಾರ ಸಿಗಬೇಕಾದ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು. ಕಾನೂನಿನಲ್ಲಿ ಸಾಕಷ್ಟು ಉಪಕ್ರಮಗಳಿವೆ. ಅವುಗಳನ್ನು ಅನುಸರಿಸಿ ಅವುಗಳ ಆಧಾರದಲ್ಲಿಯೇ ಕುಟುಂಬಕ್ಕೆ ಯಾವ ರೀತಿಯ ನೆರವು ನೀಡಬೇಕು ಎನ್ನುವುದನ್ನು ಹಿರಿಯ ಅಧಿಕಾರಿಗಳು ನಿರ್ಧರಿಸುತ್ತಾರೆ ಎಂದರು.

ಭಾನುವಾರ ಅಧಿಕಾರಿಯೊಬ್ಬರು ಇದು ರಾಜರ ಕಾಲದ್ದು ಎನ್ನುವ ಬಗ್ಗೆ ಮಾಹಿತಿ ಇಲ್ಲ, ಇದು ಕುಟುಂಬಕ್ಕೆ ಸೇರಬೇಕಾದದ್ದು ಎಂದು ಹೇಳಿದ್ದರು. ಇದರಿಂದಾಗಿ ಸಾಕಷ್ಟು ಗೊಂದಲ ಉಂಟಾಗಿದೆ. ಅವರು ಬಾಯಿ ತಪ್ಪಿನಿಂದ ಹೀಗೆ ಆಗಿದೆ. ಅದು ಸರ್ಕಾರದ ಆಸ್ತಿಯೇ ಎಂದು ಹೇಳಿದ್ದಾರೆ. ಸ್ವತಃ ಸುದ್ದಿಗೋಷ್ಠಿಯಲ್ಲಿ ಕೂಡಾ ಇದ್ದಾರೆ ಎಂದು ಸ್ಪಷ್ಟಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಎಸ್ಪಿ ರೋಹನ್ ಜಗದೀಶ, ಪ್ರಾಧಿಕಾರದ ಸದಸ್ಯ ಸಿದ್ದಲಿಂಗೇಶ್ವರ ಪಾಟೀಲ, ಪ್ರಾಧಿಕಾರದ ಆಯುಕ್ತ ಡಾ. ಶರಣು ಗೋಗೇರಿ ಸೇರಿದಂತೆ ಪುರಾತತ್ವ ಇಲಾಖೆಯ ಹಿರಿಯ ಅಧಿಕಾರಿಗಳು ಇದ್ದರು.

ತಡವಾಗಿ ಬಂದ ಡಿಸಿ:

ಜಿಲ್ಲಾಡಳಿತ ಭವನದಲ್ಲಿ ಸೋಮವಾರ ಸಂಜೆ 4ಕ್ಕೆ ಆಯೋಜಿಸಿದ್ದ ಸುದ್ದಿಗೋಷ್ಠಿಗೆ ಜಿಲ್ಲಾಧಿಕಾರಿಗಳು 5.30ಕ್ಕೆ ಅಂದರೆ, ಒಂದೂವರೆ ತಾಸು ತಡವಾಗಿ ಆಗಮಿಸಿದರು. ಯಾವ ಕಾರಣಕ್ಕಾಗಿ ಸುದ್ದಿಗೋಷ್ಠಿ ನಡೆಸಲಾಗುತ್ತಿದೆ ಎನ್ನುವ ಸ್ಪಷ್ಟತೆ ಇಲ್ಲದೇ ಅವರೇ ಗೊಂದಲದಲ್ಲಿದ್ದರು. ನಾನು ಸುದ್ದಿಗೋಷ್ಠಿ ನಡೆಸುತ್ತಿಲ್ಲ. ನಿನ್ನೆ(ಭಾನುವಾರ) ರಮೇಶ ಎನ್ನುವ ಪುರಾತತ್ವ ಇಲಾಖೆ ಅಧಿಕಾರಿಗಳು ಆಭರಣದ ವಿಷಯವಾಗಿ ಜನರಿಗೆ ಮಾಧ್ಯಮಗಳ ಮೂಲಕ ತಪ್ಪು ಮಾಹಿತಿ ನೀಡಿದ್ದರು. ಹಾಗಾಗಿ ಅವರನ್ನು ನಿಮ್ಮ ಮುಂದೆ(ಮಾಧ್ಯಮ) ಕರೆ ತರಲಾಗಿದೆ ಎಂದರು.

ಮೂರು ದಿನ ಕಳೆದರೂ ಸ್ಪಷ್ಟತೆ ಇಲ್ಲ

ಲಕ್ಕುಂಡಿಯಲ್ಲಿ ದೊರೆತಿರುವುದು ನಿಧಿ. ಅಲ್ಲಿ 600ರಿಂದ 800 ಗ್ರಾಂ ಬಂಗಾರವಿದೆ ಎಂದು ಸಿಎಂ ಸಿದ್ದರಾಮಯ್ಯ ಅವರು ಮಾತನಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ. ಈ ವಿಷಯವಾಗಿ ಸಾರ್ವಜನಿಕರಲ್ಲಿ ಸಾಕಷ್ಟು ಗೊಂದಲವಿದ್ದು, ಅಷ್ಟೊಂದು ಬಂಗಾರ ಸಿಕ್ಕಿದೆ ಅಂದರೆ ಮುಖ್ಯಮಂತ್ರಿಗಳಿಗೆ ಯಾರಾದರೂ ತಪ್ಪು ಮಾಹಿತಿ ಹೇಳುತ್ತಾರೆಯೇ? ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ಸಿಕ್ಕಿದೆ. ಆದರೆ ಈಗ ಕಡಿಮೆ ಎಂದು ಹೇಳುತ್ತಿದ್ದಾರೆ ಎನ್ನುವ ಚರ್ಚೆಗಳು ಸಾರ್ವಜನಿಕ ವಲಯದಲ್ಲಿ ತೀವ್ರವಾಗಿ ನಡೆಯುತ್ತಿದೆ. ಘಟನೆ ನಡೆದು ಮೂರು ದಿನ ಕಳೆದರೂ ಜಿಲ್ಲಾಡಳಿತ ಮಾತ್ರ ಇದುವರೆಗೂ ಸ್ಪಷ್ಟತೆ ಬರದೇ ಇರುವುದು ಹಲವು ಸಂಶಯಕ್ಕೆ ಕಾರಣವಾಗಿದೆ.

ಏಕಾಏಕಿ ಎಚ್ಚೆತ್ತ ಜಿಲ್ಲಾಡಳಿತ 

ಸೋಮವಾರ ಸಂಜೆಯವರೆಗೂ ಸುಮ್ಮನಿದ್ದ ಜಿಲ್ಲಾಡಳಿತ ಒಮ್ಮೆಲೇ ಸುದ್ದಿಗೋಷ್ಠಿ ನಡೆಸಿ, ಲಕ್ಕುಂಡಿಯಲ್ಲಿ ಸಿಕ್ಕಿರುವುದು 466ರಿಂದ 470 ಗ್ರಾಂ ಬಂಗಾರ ಎಂದು ಹೇಳುವ ಮೂಲಕ ಮತ್ತಷ್ಟು ಗೊಂದಲ ಸೃಷ್ಟಿಸಿದರು. ಆಗ ಮಾಧ್ಯಮ ಪ್ರತಿನಿಧಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ ನಂತರ ಒಂದೊಂದು ಆಭರಣದ ತೂಕವನ್ನು ಪ್ರತ್ಯೇಕವಾಗಿಯೇ ಓದಿ ಹೇಳಿದರು. ಘಟನೆ ನಡೆದ ಮೂರು ದಿನ ಕಳೆದಿದ್ದರೂ ಜಿಲ್ಲಾಧಿಕಾರಿಗಳು ಮಾತ್ರ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸದಂತೆ ಕಾಣುತ್ತಿಲ್ಲ. ಇದರ ಬಗ್ಗೆ ಅವರಿಗೆ ಯಾವುದೇ ಸ್ಪಷ್ಟತೆ ಇರಲಿಲ್ಲ ಎನ್ನುವುದು ಸುದ್ದಿಗೋಷ್ಠಿಯಲ್ಲಿದ್ದ ಇನ್ನುಳಿದ ಅಧಿಕಾರಿಗಳಿಗೂ ಸ್ಪಷ್ಟವಾಗಿ ಗೊತ್ತಾಗುತ್ತಿತ್ತು.

ಒತ್ತಡಕ್ಕೆ ಬಿದ್ದರಾ ಅಧಿಕಾರಿ?

ಸುದ್ದಿಗೋಷ್ಠಿಯಲ್ಲಿದ್ದ ಪುರಾತತ್ವ ಇಲಾಖೆಯ ಅಧೀಕ್ಷಕ ರಮೇಶ ಮೂಲಿಮನಿ ಭಾನುವಾರ ಅದು ನಿಧಿಯಲ್ಲ, ಯಾವುದೇ ರಾಜರ ಕಾಲದ ಬಗ್ಗೆ ದಾಖಲೆ ಇಲ್ಲ ಎಂದು ಹೇಳಿದ್ದರು. ಆದರೆ ಸೋಮವಾರ ಸಂಜೆ ಮಾತ್ರ ನಾನು ನಿನ್ನೆ ಯಾಕೆ ಹಾಗೆ ಹೇಳಿದೆ ಎನ್ನುವ ಬಗ್ಗೆ ನನಗೆ ಗೊಂದಲವಿದೆ. ನಮ್ಮ ತಾಯಿಯವರ ಆರೋಗ್ಯ ಸರಿಯಾಗಿಲ್ಲ ಎಂದಷ್ಟೇ ಮಾತನಾಡಿ ಸುಮ್ಮನ್ನಾಗಿದ್ದು ಕೂಡಾ ಹಲವಾರು ರೀತಿಯ ಸಂಶಯಕ್ಕೆ ಕಾರಣವಾಯಿತು. ಅಧಿಕಾರಿಯ ಮೇಲೆ ಜಿಲ್ಲಾಡಳಿತ ಒತ್ತಡ ಹೇರಿದೆಯಾ ಎನ್ನುವ ಪ್ರಶ್ನೆಗೂ ಸುದ್ದಿಗೋಷ್ಠಿಯಲ್ಲಿ ಯಾವುದೇ ಉತ್ತರ ಬರಲೇ ಬರಲಿಲ್ಲ.

PREV
Read more Articles on
click me!

Recommended Stories

BMRCL: ಇನ್ಮುಂದೆ ಪ್ರತಿ ವರ್ಷ ನಮ್ಮ ಮೆಟ್ರೋ ದರ ಏರಿಕೆಗೆ ಪ್ರಸ್ತಾವನೆ? ಎಷ್ಟು ಹೆಚ್ಚಳ?
ಲಕ್ಕುಂಡಿ ನಿಧಿಗೆ ಇದೆಯಾ ಸರ್ಪಗಾವಲು? ಭಯದಿಂದ ವಿಭಿನ್ನ ಬೇಡಿಕೆಯಿಟ್ಟ ಕುಟುಂಬದ ಮಹಿಳೆ