Huvina Hadagali: ಅಬಕಾರಿ ಇಲಾಖೆಗೆ ತಟ್ಟಿದ ಬರದ ಬಿಸಿ: ಮದ್ಯ ಮಾರಾಟದಲ್ಲಿ ಕುಸಿತ

Published : Oct 15, 2026, 07:24 AM IST
alcohol

ಸಾರಾಂಶ

ಮುಂಗಾರು ಮಳೆ ಇಲ್ಲದೆ ಆವರಿಸಿರುವ ಬರದ ಛಾಯೆ ಕೃಷಿ ಮಾತ್ರವಲ್ಲದೆ ಅಬಕಾರಿ ಇಲಾಖೆಯ ಮೇಲೂ ಗಂಭೀರ ಪರಿಣಾಮ ಬೀರಿದೆ. ಹೂವಿನಹಡಗಲಿ ತಾಲೂಕಿನಲ್ಲಿ ಕೂಲಿ ಕಾರ್ಮಿಕರ ವಲಸೆ ಮತ್ತು ಹಣದ ಕೊರತೆಯಿಂದ ಮದ್ಯ ಮಾರಾಟ ಕುಸಿದಿದೆ.

ಚಂದ್ರು ಕೊಂಚಿಗೇರಿ 

ಹೂವಿನಹಡಗಲಿ: ಬಹುತೇಕ ಕ್ಷೇತ್ರಗಳ ಅಭಿವೃದ್ಧಿಗೆ ಕೃಷಿಯೇ ಮೂಲಾಧಾರವಾಗಿದೆ. ಮುಂಗಾರು ಮಳೆ ಇಲ್ಲದೇ ಬರಛಾಯೆ ಆವರಿಸಿದ್ದು, ಅಬಕಾರಿ ಇಲಾಖೆಯೂ ಹೊರತಾಗಿಲ್ಲ. ಬರದ ಬರೆ ತಟ್ಟಿರುವ ಪರಿಣಾಮ ಸರ್ಕಾರಕ್ಕೆ ಅಬಕಾರಿ ಸುಂಕ ಭಾರಿ ಪ್ರಮಾಣದಲ್ಲಿ ಕುಸಿತ ಕಂಡಿದೆ.

ತಾಲೂಕಿನಲ್ಲಿ 22 ವಿವಿಧ ರೀತಿಯ ಮದ್ಯದ ಅಂಗಡಿಗಳಿವೆ. 10 ಸಿಎಲ್‌-2 (ಚಿಲ್ಲರೆ ಮದ್ಯ ಮಾರಾಟ), 5 ಎಂಎಸ್‌ಐಎಲ್‌, 3 ಸಿಎಲ್‌-9 (ಬಾರ್‌ ಮತ್ತು ರೆಸ್ಟೋರೆಂಟ್‌), 1 ಸಿಎಲ್‌-4 (ಕ್ಲಬ್‌), 3 ಸಿಎಲ್‌-7 (ಲಾಡ್ಜ್‌ ಮತ್ತು ಬೋರ್ಡಿಂಗ್‌) ಮದ್ಯದ ಅಂಗಡಿಗಳಿವೆ.

ಈ ಎಲ್ಲ ಮದ್ಯದ ಅಂಗಡಿಗಳಲ್ಲಿ ಮಾರಾಟದ ಆಧಾರದ ಮೇಲೆ ಪ್ರತಿ ತಿಂಗಳು, ಅಬಕಾರಿ ಇಲಾಖೆಯಿಂದ ಎತ್ತುವಳಿ ಹೆಚ್ಚು ಮಾಡಲಾಗುತ್ತಿದೆ. ಅದರಂತೆ ಕಳೆದ ಮೂರು ತಿಂಗಳ ಅವಧಿಯಲ್ಲಿ ಜುಲೈ ತಿಂಗಳಲ್ಲಿ 16911 ಬಾಕ್ಸ್‌ ಮಾರಾಟದ ಗುರಿ ಇತ್ತು. 15186 ಸಾಧನೆಯಾಗಿತ್ತು, 1725 ಬಾಕ್ಸ್‌ ಹೆಚ್ಚುವರಿ ಉಳಿದಿದೆ. ಆಗಷ್ಟ್‌ನಲ್ಲಿ 14036 ಬಾಕ್ಸ್‌ ಮಾರಾಟ ಗುರಿ ಇತ್ತು, 12843 ಸಾಧನೆ, 1192 ಹೆಚ್ಚುವರಿ ಉಳಿದಿದೆ. ಸೆಪ್ಟೆಂಬರ್‌ನಲ್ಲಿ 14498 ಬಾಕ್ಸ್‌ ಮಾರಾಟದ ಗುರಿ ನಿಗಧಿಯಾಗಿತ್ತು. ಇದರಲ್ಲಿ 14457 ಸಾಧನೆಯಾಗಿದ್ದು, 41 ಬಾಕ್ಸ್‌ ಹೆಚ್ಚುವರಿ ಉಳಿದಿತ್ತು.

ಒಟ್ಟಾರೆ 45445 ಬಾಕ್ಸ್‌ ಮಾರಾಟದ ಗುರಿ ಇದ್ದು, 42487 ಬಾಕ್ಸ್‌ ಮಾರಾಟದ ಸಾಧನೆಯಾಗಿದೆ. 2959 ಬಾಕ್ಸ್‌ ಹೆಚ್ಚುಯಾಗಿ ಉಳಿದಿದೆ. ಪ್ರತಿ ತಿಂಗಳು ₹7.42 ಕೋಟಿ ಸುಂಕ ಸಂಗ್ರಹದ ಗುರಿ ಇತ್ತು.ಒಟ್ಟಾರೆ 3 ತಿಂಗಳಲ್ಲಿ ಅಬಕಾರಿ ಇಲಾಖೆಗೆ ₹22,26,80,500 ಸುಂಕ ಸಂಗ್ರಹಕ್ಕೆ ಸರ್ಕಾರ ಗುರಿ ನಿಗದಿ ಮಾಡಿತ್ತು. ಇದರಲ್ಲಿ ₹20,81,86,300 ಅಬಕಾರಿ ಸುಂಕ ಸಂಗ್ರಹವಾಗಿದೆ. ₹ 2 ಕೋಟಿಗೂ ಅಧಿಕ ಸುಂಕ ಸರ್ಕಾರಕ್ಕೆ ಖೋತಾ ಆಗಿದೆ.

ಸಕಾಲದಲ್ಲಿ ಕೂಲಿ ಪಾವತಿಯಾಗಿಲ್ಲ

ಮಳೆ ಇಲ್ಲದ ಬರ ಬಿದ್ದ ಪರಿಣಾಮ ರೈತರು ಸೇರಿದಂತೆ ಕೂಲಿ ಕಾರ್ಮಿಕರ ಕೈಯಲ್ಲಿ ಹಣದ ಹರಿವು ಕಡಿಮೆಯಾಗಿದೆ. ಉದ್ಯೋಗ ಹುಡುಕಿಕೊಂಡು ಹಳ್ಳಿಗಳು ಮತ್ತು ತಾಂಡಾದಲ್ಲಿ ಕೂಲಿ ಕಾರ್ಮಿಕರು ಗುಳೆ ಹೋಗಿದ್ದಾರೆ. ತಾಲೂಕಿನ 26 ಗ್ರಾಪಂ ವ್ಯಾಪ್ತಿಯಲ್ಲಿನ ಹಳ್ಳಿ ಕೂಲಿ ಕಾರ್ಮಿಕರಿಗೆ, ವಿಬಿ ಜಿ ರಾಮ್‌ ಜಿ ಕೆಲಸ ನೀಡಿದ್ದರೂ, ಸಕಾಲದಲ್ಲಿ ಕೂಲಿ ಪಾವತಿಯಾಗಿಲ್ಲ, ಜತೆಗೆ ಮಾಸಾಶನವೂ ಬರುತ್ತಿಲ್ಲ, ಇತ್ತ ಗೃಹ ಲಕ್ಷ್ಮೀ ಹಣವೂ ಬಂದಿಲ್ಲ, ಜನರ ಬಳಿ ಹಣ ಇಲ್ಲ ಆದ್ದರಿಂದ ಮದ್ಯಪಾನ ಪ್ರಿಯರ ಸಂಖ್ಯೆ ಕಡಿಮೆಯಾಗಿದೆ. ಈ ಎಲ್ಲ ಕಾರಣಗಳಿಗಾಗಿಯೇ ಅಬಕಾರಿ ಸುಂಕ ಸಂಗ್ರಹಕ್ಕೂ ಕೊಕ್ಕೆ ಬಿದ್ದಿದೆ ಎಂಬ ಮಾತು ಕೇಳಿ ಬರುತ್ತಿದೆ.

ತಾಲೂಕಿನಲ್ಲಿ 22 ವಿವಿಧ ರೀತಿಯ ಮದ್ಯದ ಅಂಗಡಿಗಳಿವೆ, ಪ್ರತಿ ತಿಂಗಳು ಗುರಿ ನಿಗದಿ ಹೆಚ್ಚಾಗುತ್ತಿದೆ, ₹22.26 ಕೋಟಿ ಗುರಿ ನಿಗದಿ ಇತ್ತು. ₹20.81 ಕೋಟಿ ಸಾಧನೆಯಾಗಿದೆ. ಈಗ ಬರ ಬಂದಿರುವ ಕಾರಣ ಸಾಕಷ್ಟು ಕೂಲಿ ಕಾರ್ಮಿಕರು ಗುಳೆ ಹೋಗಿದ್ದಾರೆ. ಜತೆಗೆ ಹಣ ಹರಿವೂ ಅಷ್ಟಾಗಿ ಇಲ್ಲ ಇದರಿಂದ ಸಾಧನೆ ಕಡಿಮೆಯಾಗಿದೆ ಎಂದು ಹೂವಿನಹಡಗಲಿ ಅಬಕಾರಿ ಇಲಾಖೆ ನಿರೀಕ್ಷಕ ಸಿದ್ದೇಶ ನಾಯ್ಕ ತಿಳಿಸಿದ್ದಾರೆ.

ದುಡಿಯುವ ಕೈಗೆ ಕೆಲಸ ಇಲ್ಲದ ಕಾರಣ ಕೂಲಿ ಹಣವೂ, ಇತ್ತ ಮಾಸಾಶನ ಹಣ ಬರುತ್ತಿಲ್ಲ, ಕೈಯಲ್ಲಿ ಹಣವಿಲ್ಲ ಆದರಿಂದ ಮದ್ಯಪಾನ ಕಡಿಮೆ ಮಾಡಿದ್ದೇವೆ ಎಂದು ಹೆಸರು ಹೇಳಲು ಇಚ್ಛಿಸದ ಮದ್ಯಪಾನ ಪ್ರಿಯ ತಿಳಿಸಿದ್ದಾರೆ.

ಇದನ್ನೂ ಓದಿ: ಮೇವು-ನೀರಿಲ್ಲದೆ ಕಂಗಾಲಾದ ರೈತ: ಜಾನುವಾರು ಮಾರಾಟಕ್ಕೆ ಹೋದ್ರೂ ಖರೀದಿ ಮಾಡೋರೇ ಇಲ್ಲ

PREV
Read more Articles on
click me!

Recommended Stories

ಅಬ್ಬಬ್ಬಾ! ಮಂಗಳೂರು ಸೆಂಟ್ರಲ್‌ಗೆ ಬಂಪರ್ ಆದಾಯ, ಒಂದೇ ವರ್ಷದಲ್ಲಿ ಗಳಿಸಿದ್ದೆಷ್ಟು ಗೊತ್ತಾ?
ಕಾಂಗ್ರೆಸ್‌ಗೆ ಶೀಘ್ರದಲ್ಲೇ ಮೂರನೇ ಸಿಎಂ? ಪಕ್ಷದೊಳಗೇ ನಡೀತಿದೆ ದೊಡ್ಡ ಷಡ್ಯಂತ್ಯ, ವಿಜಯೇಂದ್ರ ಸ್ಫೋಟಕ ಹೇಳಿಕೆ!