ಆರ್‌.ಆರ್‌.ನಗರ ಉಪಚುನಾವಣೆ: ಮತಗಟ್ಟೆಗಳ ಸಂಖ್ಯೆ 381ರಿಂದ 688ಕ್ಕೆ ಏರಿಕೆ

By Kannadaprabha NewsFirst Published Sep 30, 2020, 9:11 AM IST
Highlights

ಕೊರೋನಾ ಹಿನ್ನೆಲೆ ಸೋಂಕು ಹರಡದಂತೆ ಮುನ್ನೆಚ್ಚರಿಕೆ| ಮತದಾರರಿಗೆ ಥರ್ಮಲ್‌ ಸ್ಕ್ಯಾನಿಂಗ್‌, ಗ್ಲೌಸ್‌ ಕಡ್ಡಾಯ| ಆನ್‌ಲೈನ್‌ನಲ್ಲಿ ನಾಮಪತ್ರ| ಮತಗಟ್ಟೆ ಬೂತ್‌ ಒಳಗೆ ಒಬ್ಬ ಮತದಾರರಿಗೆ ಮಾತ್ರ ಅವಕಾಶ| ಸಾಮಾಜಿಕ ಅಂತರಕ್ಕೆ ಆರು ಅಡಿ ದೂರಕ್ಕೆ ವೃತ್ತ ಮಾರ್ಕಿಂಗ್‌| 

ಬೆಂಗಳೂರು(ಸೆ.30): ಕೊರೋನಾ ಸೋಂಕಿನ ಭೀತಿ ಹಿನ್ನೆಲೆಯಲ್ಲಿ ರಾಜರಾಜೇಶ್ವರಿನ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಮತಗಟ್ಟೆಗಳ ಸಂಖ್ಯೆಯನ್ನು 381ರಿಂದ 688ಕ್ಕೆ ಏರಿಕೆ ಮಾಡುವುದು, ಕರೋನಾ ಸೋಂಕಿತರಿಗೆ ಅಂಚೆ ಮತಪತ್ರದ ಮೂಲಕ ಮತ ಚಲಾವಣೆ ಅವಕಾಶ ನೀಡುವುದು ಸೇರಿದಂತೆ ಹಲವು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಬೆಂಗಳೂರು ನಗರ ಜಿಲ್ಲಾ ಚುನಾವಣಾಧಿಕಾರಿ ಎನ್‌.ಮಂಜುನಾಥ ಪ್ರಸಾದ್‌ ತಿಳಿಸಿದ್ದಾರೆ. 

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರ್‌.ಆರ್‌.ನಗರ ಕ್ಷೇತ್ರದ ಉಪ ಚುನಾವಣೆಗಾಗಿ ಒಬ್ಬ ಆರೋಗ್ಯ ಅಧಿಕಾರಿ ನೇಮಕ ಹಾಗೂ ಮತದಾನದ ವೇಳೆ ಪ್ರತಿಯೊಬ್ಬ ಮತದಾರರಿಗೆ ಕಡ್ಡಾಯ ಥರ್ಮಲ್‌ ಸ್ಕ್ಯಾನಿಂಗ್‌, ಗ್ಲೌಸ್‌ ವ್ಯವಸ್ಥೆ ಮಾಡಲಾಗುವುದು ಎಂದರು

ಕೊರೋನಾ ಸೋಂಕಿನ ಭೀತಿ ಆರಂಭಗೊಂಡ ಮೇಲೆ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ನಡೆಯುತ್ತಿದೆ. ಚುನಾವಣೆಯ ನೀತಿ ಸಂಹಿತೆ ಜಾರಿಯ ಜೊತೆಗೆ ಕೊರೋನಾ ಸೋಂಕಿನ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಚುನಾವಣಾ ಆಯೋಗ ನಿರ್ದೇಶಿಸಿದೆ. ಅದರಂತೆ ಹಲವು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

RR ನಗರ ಬೈ ಎಲೆಕ್ಷನ್: ಕಣದಲ್ಲಿ ಕಾಂಗ್ರೆಸ್​​ನಿಂದ ಅಚ್ಚರಿ ಅಭ್ಯರ್ಥಿ, ಸಂಚಲನ ಮೂಡಿಸಿದ ಡಿಕೆಶಿ

ಆರ್‌.ಆರ್‌.ನಗರ ಕ್ಷೇತ್ರದಲ್ಲಿ ಒಟ್ಟು 381 ಮತಗಟ್ಟೆಗಳಿವೆ. ಒಂದು ಸಾವಿರ ಮತದಾರರಿಗಿಂತ ಹೆಚ್ಚಿರುವ 307 ಮತಗಟ್ಟೆಗಳಿವೆ. ಕೋವಿಡ್‌ ನಿಯಮಾವಳಿ ಪ್ರಕಾರ ಈ 307 ಮತಗಟ್ಟೆಗಳ ಸಂಖ್ಯೆಯನ್ನು ದ್ವಿಗುಣಗೊಳಿಸಲಾಗುತ್ತಿದ್ದು, ಮತಗಟ್ಟೆಗಳ ಸಂಖ್ಯೆ 688ಕ್ಕೆ ಹೆಚ್ಚಾಗಲಿವೆ. ಸಾಧ್ಯವಾದಷ್ಟುಸ್ಥಳಾವಕಾಶವಿರುವ ಮತಗಟ್ಟೆ ನಿರ್ಮಿಸುವುದಕ್ಕೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು. ಚುನಾವಣೆಗಾಗಿಯೇ ಒಬ್ಬ ಆರೋಗ್ಯ ಆಧಿಕಾರಿ ನೇಮಕಕ್ಕೆ ಚುನಾವಣಾ ಆಯೋಗ ಸೂಚನೆ ನೀಡಿದೆ. ಈ ಆರೋಗ್ಯ ಅಧಿಕಾರಿ ಮತಗಟ್ಟೆ, ಮತ ಏಣಿಕೆ ಕೇಂದ್ರದಲ್ಲಿ ಕೊರೋನಾ ಸೋಂಕಿನ ಮುನ್ನೆಚ್ಚರಿಕೆ ಕ್ರಮದ ಬಗ್ಗೆ ಕ್ರಮವಹಿಸಲಿದ್ದಾರೆ.

ನಾಮಪತ್ರಕ್ಕೆ ಇಬ್ಬರಿಗೆ ಮಾತ್ರ ಅವಕಾಶ

ನಾಮಪತ್ರ ಸಲ್ಲಿಕೆ ವೇಳೆ ಈ ಹಿಂದೆ ಐದು ಮಂದಿಗೆ ನೋಡಲ್‌ ಅಧಿಕಾರಿ ಕಚೇರಿ ಒಳಗೆ ಪ್ರದೇಶಕ್ಕೆ ಅವಕಾಶ ನೀಡಲಾಗುತ್ತಿತ್ತು. ಕೋವಿಡ್‌ ಹಿನ್ನೆಲೆಯಲ್ಲಿ ಅದನ್ನು ಇಬ್ಬರಿಗೆ ಮಾತ್ರ ಸೀಮಿತಗೊಳಿಸಲಾಗಿದೆ. ನಾಮಪತ್ರ ಸಲ್ಲಿಕೆ ಮೆರವಣಿಗೆ ವಾಹನ ಸಂಖ್ಯೆಯನ್ನು ಎರಡಕ್ಕೆ ಮಿತಿಗೊಳಿಸಲಾಗಿದೆ. ಚುನಾವಣಾ ಪ್ರಚಾರ ಹಾಗೂ ಸಾರ್ವಜನಿಕ ಸಭೆ ಸಮಾರಂಭದ ವೇಳೆ ನಿರ್ದಿಷ್ಟಸಂಖ್ಯೆಗೆ ಮಿತಿಗೊಳಿಸಲು ಆಯೋಗ ನಿರ್ದೇಶಿಸಿದೆ. ಅದರಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.

ಆನ್‌ಲೈನ್‌ನಲ್ಲಿ ನಾಮಪತ್ರ

ಚುನಾವಣಾ ಅಭ್ಯರ್ಥಿಗಳು ನಾಮಪತ್ರ, ಪ್ರಮಾಣ ಪತ್ರ (ಅಫಿಡವಿಟ್‌) ಹಾಗೂ ಠೇವಣಿ ಮೊತ್ತವನ್ನು ಆನ್‌ಲೈನ್‌ನಲ್ಲಿಯೇ ಸಲ್ಲಿಸುವುದಕ್ಕೆ ಅವಕಾಶ ನೀಡಲಾಗಿದೆ. ಆದರೆ, ಅಫಿಡವಿಟನ್ನು ನೋಡಲ್‌ ಅಧಿಕಾರಿಗೆ ನೇರವಾಗಿ ಸಲ್ಲಿಕೆ ಮಾಡಬೇಕಾಗಲಿದೆ. ಇನ್ನು ಒಟ್ಟಾರೆ ಚುನಾವಣಾ ಕಾರ್ಯಕ್ಕೆ ಮತಗಟ್ಟೆಅಧಿಕಾರಿಗಳು, ಭದ್ರತಾ ಸಿಬ್ಬಂದಿ ಸೇರಿದಂತೆ ಸುಮಾರು 10 ಸಾವಿರ ಮಂದಿ ಬೇಕಾಗಲಿದೆ. ಅವರಿಗೆ ಮಾಸ್ಕ್‌, ಗ್ಲೌಸ್‌, ಫೇಸ್‌ ಸೀಲ್ಡ್‌, ಸ್ಯಾನಿಟೈಸರ್‌ ನೀಡಲಾಗುತ್ತದೆ ಎಂದು ಮಂಜುನಾಥ್‌ ಪ್ರಸಾದ್‌ ತಿಳಿಸಿದರು.

ಟೋಕನ್‌ ವ್ಯವಸ್ಥೆ

ಪ್ರತಿ ಮತಗಟ್ಟೆಯಲ್ಲಿ ಸಹಾಯ ಕೇಂದ್ರ ಸ್ಥಾಪಿಸಲಾಗುವುದು. ಮತದಾನದ ವೇಳೆ ಜನದಟ್ಟಣೆ ಉಂಟಾದರೆ ಟೋಕನ್‌ ನೀಡಲಾಗುವುದು. ಟೋಕನ್‌ ಪಡೆದವರಿಗೆ ಹಾಗೂ ಥರ್ಮಲ್‌ ಸ್ಕಾ್ಯನಿಂಗ್‌ನಲ್ಲಿ ಉಷ್ಣಾಂಶ ಹೆಚ್ಚು ಕಂಡು ಬಂದ ಮತದಾರರಿಗೆ ಮತದಾನ ಕೊನೆಯ ಒಂದು ಗಂಟೆಯ ಅವಧಿಯಲ್ಲಿ ಮತದಾನಕ್ಕೆ ಅವಕಾಶ ನೀಡಲಾಗುತ್ತದೆ.

ಮತದಾನದಕ್ಕೆ ಆಗಮಿಸುವವರಿಗೆ ಥರ್ಮಲ್‌ ಸ್ಕ್ಯಾನಿಂಗ್‌ ಕಡ್ಡಾಯಗೊಳಿಸಲಾಗಿದೆ. ಮತಗಟ್ಟೆ ಬೂತ್‌ ಒಳಗೆ ಒಬ್ಬ ಮತದಾರರಿಗೆ ಮಾತ್ರ ಅವಕಾಶ. ಪ್ರತಿ ಮತದಾರರಿಗೆ ಸಹಿ ಮತ್ತು ಇವಿಎಂನಲ್ಲಿ ಮತ ಚಾಲಾವಣೆ ವೇಳೆ ಗ್ಲೌಸ್‌ ಬಳಕೆ ಕಡ್ಡಾಯಗೊಳಿಸಲಾಗುವುದು. ಅದಕ್ಕಾಗಿ ಮತಗಟ್ಟೆಯಲ್ಲಿ ಮರು ಬಳಕೆಯ ಗ್ಲೌಸ್‌ಗಳನ್ನು ವ್ಯವಸ್ಥೆ ಮಾಡಲಾಗುವುದು. ಸಾಮಾಜಿಕ ಅಂತರಕ್ಕೆ ಆರು ಅಡಿ ದೂರಕ್ಕೆ ವೃತ್ತ ಮಾರ್ಕಿಂಗ್‌ (ಗುರುತು) ಮಾಡಲಾಗುವುದು ಎಂದು ತಿಳಿಸಿದರು.

ಆರ್‌.ಆರ್‌.ನಗರ ವಿಧಾನಸಭಾ ಕ್ಷೇತ್ರದ ಮತದಾರರ ವಿವರ (ಜ.1.2020ರ ಅನ್ವಯ)

ಪುರುಷರು- 2,40,061
ಮಹಿಳೆ- 2,20,260
ಇತರೆ- 79
ಒಟ್ಟು- 4,60,401
 

click me!