ಮಡಿಕೇರಿ (ಆ.11) :ಮಳೆ, ಭೂಕುಸಿತದಿಂದ ನಲುಗಿ, ಮನೆ ಕುಸಿಯುವ ಭೀತಿ, ಮನೆಗೆ ಸಾಗಲು ದಾರಿ ಇಲ್ಲದೇ ಕಂಗೆಟ್ಟು ಕಾಳಜಿ ಕೇಂದ್ರದಲ್ಲಿದ್ದ ಕುಟುಂಬಗಳ ಮನದಲ್ಲಿ ಕೆಲಕಾಲ ದುಗುಡದ ನೋವು ಮರೆಯಾಗಿ ಸ್ವಲ್ಪ ನೆಮ್ಮದಿ, ಸಂತೋಷ ತುಂಬಿದ ಮನಸ್ಥಿತಿ ಕಂಡುಬಂತು. ಹೌದು, ಮಡಿಕೇರಿಯ ರೆಡ್‌ಕ್ರಾಸ್ ಶತಮಾನೋತ್ಸವ ಭವನದಲ್ಲಿರುವ ಜಿಲ್ಲಾಡಳಿತ, ರೆಡ್‌ಕ್ರಾಸ್‌ನ ಕಾಳಜಿ ಕೇಂದ್ರದಲ್ಲಿ ಜಿಲ್ಲಾ ರೆಡ್‌ಕ್ರಾಸ್ ವತಿಯಿಂದ 47 ಕುಟುಂಬದ 122 ಸದಸ್ಯರಿಗಾಗಿ ಮ್ಯಾಜಿಕ್ ಮೂಲಕ ನೋವು ತುಂಬಿದ ಮನದಲ್ಲಿ ಆತ್ಮವಿಶ್ವಾಸ ಹಾಗೂ ಸಂಭ್ರಮ ತರುವ ಕಾರ್ಯಕ್ರಮ ವ್ಯವಸ್ಥೆ ಮಾಡಲಾಗಿತ್ತು. ಹೆಸರಾಂತ ಜಾದೂಗಾರ ವಿಕ್ರಂ ಶೆಟ್ಟಿ1.30 ಗಂಟೆ ಅವಧಿಯ ಜಾದೂ ಪ್ರದರ್ಶಿಸಿದರು. ಮಳೆ, ಪ್ರವಾಹ, ಭೂಕುಸಿತದ ಮನಸ್ಥಿತಿಯಿಂದ ಕೆಲಕಾಲ ಸಂತ್ರಸ್ತರ ಮನಸ್ಸನ್ನು ಜಾದೂ ಲೋಕಕ್ಕ ಕೊಂಡೊಯ್ಯುವಲ್ಲಿ ವಿಕ್ರಂ ಶೆಟ್ಟಿಯಶಸ್ವಿಯಾದರು.
ಪ್ರವಾಹ ಪರಿಹಾರ ನೀಡದೆ ‘ಸ್ಲೀಪಿಂಗ್ ಮೋಡ್’ ಸರ್ಕಾರ: ಹರಿಪ್ರಸಾದ್
ಮಳೆ ಚಪ್ಪಾಳೆ, ಮಾಯಾ ಬಾP್ಸ…, ಹಗ್ಗ ಜಗ್ಗಾಟ, ಕೊರೋನಾ ಜಾಗೃತಿಯ ಜಾದೂ ಸೇರಿದಂತೆ 30ಕ್ಕೂ ಅಧಿಕ ವೈವಿಧ್ಯಮಯ ಜಾದೂ ಪ್ರದರ್ಶನವನ್ನು ವಿಕ್ರಂ ನೀಡಿದರು. ಜಾದೂ ವೀಕ್ಷಿಸಿದ ಸಂತ್ರಸ್ತರು ಸಂಭ್ರಮದಿಂದ ಚಪ್ಪಾಳೆ ತಟ್ಟುತ್ತಾ ಮನದಾಳದ ನೋವು ಮರೆಯುತ್ತಿದ್ದದ್ದು ಗಮನಾರ್ಹವಾಗಿತ್ತು.
ಎರಡನೇ ಮೊಣ್ಣಂಗೇರಿಯ ರಾಮಕೊಲ್ಲಿಯ ಮಮತಾ, ಪುಟ್ಟಮಕ್ಕಳೊಂದಿಗೆ ರೆಡ್‌ಕ್ರಾಸ್ ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದು, ಮನೆಗೆ ತೆರಳುವ ದಾರಿಯೇ ಭೂಕುಸಿತದಿಂದ ಕೊಚ್ಚಿಕೊಂಡು ಹೋಗಿದೆ. 2018ರಲ್ಲಿಯೂ ಇದೇ ಪರಿಸ್ಥಿತಿಯಿಂದ ಕಾಳಜಿ ಕೇಂದ್ರದಲ್ಲಿದ್ದೆ. ಈ ಬಾರಿಯೂ ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆಯುವಂತಾಗಿದೆ. ಪ್ರತೀ ಮಳೆಗಾಲದಲ್ಲಿಯೂ ಇದೇ ದುಸ್ಥಿತಿಯ ಆತಂಕ ಇದೆಯೇನೋ ಎಂದು ಹೇಳಿಕೊಂಡರಲ್ಲದೇ, ಕಾಳಜಿ ಕೇಂದ್ರದಲ್ಲಿನ ಜಾದೂ ಪ್ರದರ್ಶನ ತನಗೆ ಮತ್ತು ಮಕ್ಕಳಿಗೆ ಸಂತೋಷ ತಂದಿತು ಎಂದರು.
ಜಿಲ್ಲಾಡಳಿತ, ರೆಡ್‌ಕ್ರಾಸ್ ಎಲ್ಲ ರೀತಿಯಲ್ಲಿಯೂ ಉತ್ತಮ ವ್ಯವಸ್ಥೆಯನ್ನು ಕಾಳಜಿ ಕೇಂದ್ರದಲ್ಲಿ ಮಾಡಿದೆ. ಬೆಚ್ಚನೆಯ ಹೊದಿಕೆ, ಹಾಸಿಗೆ, ಬಿಸಿಯೂಟ ಸೇರಿದಂತೆ ಎಲ್ಲವೂ ಚೆನ್ನಾಗಿದೆ ಎಂದವರು ಎರಡನೇ ಮೊಣ್ಣಂಗೇರಿಯ ಹಿರಿಯ ನಾಗರಿಕರಾದ ಕಮಲ.
ಮಳೆಯಾಗಿ ನಾಲ್ಕು ದಿನವಾದ್ರೂ ಆರಂಭವಾಗದ ಸರ್ವೇ ಕಾರ್ಯ
ಮನೆ ಕುಸಿದು ಬೀಳುವ ಆತಂಕ ಇರುವುದರಿಂದಾಗಿ ಕಾಳಜಿ ಕೇಂದ್ರಕ್ಕೆ ಬಂದಿರುವೆ. ವಾಪಾಸ್ ಮಳೆಗಾಲದ ಭೀಕರತೆ ಕಣ್ಮರೆಯಾದ ಬಳಿಕವಷ್ಟೇ. ಬೆಟ್ಟದಡಿ ಮನೆಯಲ್ಲಿರುವುದು ಮಳೆಗಾಲದ ಮೂರೂ ತಿಂಗಳು ಭಯಕ್ಕೆ ಕಾರಣವಾಗುತ್ತಿದೆ ಎಂದು ನೋವಿನಿಂದ ಹೇಳಿಕೊಂಡ ತೀರ್ಥ, ಕಾಳಜಿ ಕೇಂದ್ರದಲ್ಲಿ ಆರೋಗ್ಯ ತಪಾಸಣೆ ಕೂಡ ಮಾಡಲಾಗುತ್ತಿದೆ. ಧೈರ್ಯ ತುಂಬಲಾಗುತ್ತಿದೆ. ಜಾದೂ ಮೂಲಕ ನಮ್ಮನ್ನೆಲ್ಲ ನೋವಿನ ಲೋಕದಿಂದ ಸಂಭ್ರಮದ ಲೋಕಕ್ಕೆ ಕೆಲಕಾಲ ಕೊಂಡೊಯ್ಯುವ ಪ್ರಯತ್ನ ಶ್ಲಾಘನೀಯವಾಗಿದೆ ಎಂದರು.
ರೆಡ್‌ಕ್ರಾಸ್ ಸಭಾಪತಿ ಬಿ.ಕೆ.ರವೀಂದ್ರ ರೈ ಮಾತನಾಡಿ, ಎರಡು ತಿಂಗಳ ಹಿಂದೆ ಲೋಕಾರ್ಪಣೆಯಾದ ರೆಡ್‌ಕ್ರಾಸ್ ಶತಮಾನೋತ್ಸವ ಭವನದಲ್ಲಿ 120 ಮಂದಿ ಆಶ್ರಯ ಪಡೆದಿದ್ದಾರೆ. ಜಿಲ್ಲಾಡಳಿತ ಎಲ್ಲ ರೀತಿಯಲ್ಲೂ ನೆರವು ನೀಡಿದೆ. ರೆಡ್‌ಕ್ರಾಸ್ ವತಿಯಿಂದ ಅಗತ್ಯ ಪರಿಕರಗಳನ್ನೂ ಸಂತ್ರಸ್ತರಿಗೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ರೆಡ್‌ಕ್ರಾಸ್ ಉಪಾಧ್ಯಕ್ಷ ಅನಿಲ್ ಎಚ್.ಟಿ. ಪ್ರತಿಕ್ರಿಯಿಸಿ, ಮಹಾಮಳೆಯಿಂದಾಗಿ ಜೀವನದ ಗತಿಯೇ ಬದಲಾಗಿರುವ ಅನೇಕರಿಗೆ ಜಾದೂ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ನೋವು, ಆತಂಕವನ್ನು ಮನದಿಂದ ಹೊರಹಾಕುವ ಕಾರ್ಯಕ್ಕೆ ರೆಡ್ ಕ್ರಾಸ್ ಮುಂದಾಗಿದೆ. ಈ ನಿಟ್ಟಿನಲ್ಲಿ ಜಾದೂ ಪ್ರದರ್ಶನ ಯಶಸ್ವಿಯಾಗಿದೆ ಎಂದರು.
ರೆಡ್‌ಕ್ರಾಸ್ ನಿರ್ದೇಶಕ ಮತ್ತು ಜಾದೂಗಾರ ವಿಕ್ರಂ ಶೆಟ್ಟಿಮಾತನಾಡಿ, ಭಯ ತುಂಬಿದ ಮನಸ್ಸುಗಳಿಗೆ ಅಭಯ ತುಂಬಿ, ನಿಮ್ಮೊಂದಿಗೆ ನಾವಿದ್ದೇವೆ. ಜೀವನ ಎಂಬುದೂ ಜಾದೂವಿನಂತೆ. ಸಂತೋಷ, ಶೋಕಗಳ ಮಿಳಿತ ಈ ಬದುಕು ಎಂದು ನಿರೂಪಿಸುವ ಪ್ರಯತ್ನವನ್ನು ಜಾದೂ ಮೂಲಕ ಮಾಡಿದ್ದೇನೆ, ಮಕ್ಕಳಂತೂ ಬಹಳ ಸಂತೋಷಪಟ್ಟಿದ್ದಾರೆ ಎಂದರು.ರೆಡ್‌ಕ್ರಾಸ್ ಪ್ರಧಾನ ಕಾರ್ಯದರ್ಶಿ ಎಚ್.ಆರ್. ಮುರಳೀಧರ್, ನಿರ್ದೇಶಕರಾದ ಸತೀಶ್ ರೈ, ಶರತ್ ಶೆಟ್ಟಿ, ವಿಜಯ್ ಶೆಟ್ಟಿ, ಸುರೇಶ್, ಅಂಬಿಕಾ, ಶಿಲ್ಪಾ ರೈ ಹಾಜರಿದ್ದರು.