ಹುಬ್ಬಳ್ಳಿ ಗಲಭೆ ಪ್ರಕರಣ ವಾಪಸ್ ತೆಗೆದುಕೊಳ್ಳುವಂತೆ ಡಿ.ಕೆ. ಶಿವಕುಮಾರ್ ಪತ್ರ ಬರೆದ ತಕ್ಷಣವೇ ಕೇಸ್ ವಾಪಾಸ್ ತೆಗೆದುಕೊಳ್ಳಲು ಆಗುವುದಿಲ್ಲ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ
ತುಮಕೂರು : ಹುಬ್ಬಳ್ಳಿ ಗಲಭೆ ಪ್ರಕರಣ ವಾಪಸ್ ತೆಗೆದುಕೊಳ್ಳುವಂತೆ ಡಿ.ಕೆ. ಶಿವಕುಮಾರ್ ಪತ್ರ ಬರೆದ ತಕ್ಷಣವೇ ಕೇಸ್ ವಾಪಾಸ್ ತೆಗೆದುಕೊಳ್ಳಲು ಆಗುವುದಿಲ್ಲ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.
ಅವರು ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಅದಕ್ಕೊಂದು ಪದ್ಧತಿಯಿದೆ. ಇದಕ್ಕಾಗಿಯೇ ಕ್ಯಾಬಿನೇಟ್ ಸಬ್ ಕಮಿಟಿ ಮಾಡಿದ್ದಾರೆ. ಆ ಸಬ್ ಕಮಿಟಿ ಮುಂದೆ ಈ ಪ್ರಕರಣವನ್ನು ಇಡುತ್ತೇವೆ ಎಂದರು.
ಕಮಿಟಿ ಮುಂದೆ ಇಡುವ ಮೊದಲೇ ಗೃಹ ಇಲಾಖೆಯಲ್ಲಿ ಪರೀಕ್ಷೆ ಮಾಡಿಕೊಳ್ಳುತ್ತೇವೆ. ನಂತರ ಪರಿಶೀಲಿಸಿ, ಕಮಿಟಿ ಮುಂದೆ ತರಲಾಗುತ್ತದೆ. ಕಾನೂನು ಹಾಗೂ ಇಲಾಖೆಯ ತಜ್ಞರು ಚರ್ಚೆ ಮಾಡುತ್ತಾರೆ ಎಂದರು.
ಕಾನೂನಿನ ಚೌಕಟ್ಟಿನಲ್ಲಿ ಪ್ರಕರಣ ವಾಪಸ್ ಪಡೆಯುವ ಬಗ್ಗೆ ತಿಳಿಸುತ್ತಾರೆ ಎಂದ ಅವರು ಗೃಹ ಸಚಿವರೇ ಅಧ್ಯಕ್ಷರಿರುತ್ತಾರೆ ಎಂದರು.
ಮತ್ತೆ ಕ್ಯಾಬಿನೇಟ್ ನಲ್ಲಿ ಇಡಲಾಗುತ್ತದೆ. ಕ್ಯಾಬಿನೇಟ್‌ನಲ್ಲಿ ಸ್ಪಷ್ಟವಾದರೆ, ಪ್ರಕರಣ ತೆಗೆದು ಹಾಕಲಾಗುತ್ತದೆ. ಇಲ್ಲದಿದ್ದರೆ ವಾಪಸ್ ಕಳುಹಿಸಲಾಗುತ್ತದೆ ಎಂದರು.
ಸಾಕಷ್ಟು ಶಾಸಕರು ಪತ್ರ ಬರಿಯುತ್ತಾರೆ. ನಾವು ಅಮಾಯಕರಿದ್ದೇವೆ, ಅಂತ ಅರ್ಜಿ ಕೊಟ್ಟಿರುತ್ತಾರೆ.ಆ ಪ್ರಕರಣದಲ್ಲಿ ಸೇರಿಸಿದ್ದಾರೆ, ವಾಪಸ್ ತೆಗೆದುಕೊಳ್ಳಿ ಅಂತ ಮನವಿ ಮಾಡಿರುತ್ತಾರೆ. ಪತ್ರ ಬಂದ ಕೂಡಲೇ ಪ್ರಕರಣ ವಾಪಸ್ ತೆಗೆದುಕೊಳ್ಳಲು ಬರುವುದಿಲ್ಲ ಎಂದರು
ಹುಬ್ಬಳ್ಳಿ ಗಲಾಟೆಗೆ ಸಿದ್ದರಾಮಯ್ಯ- ಪರಮೇಶ್ವರ್ ಕಾರಣ ಎಂಬ ಶೋಭ ಕರಂದ್ಲಾಜೆ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ಸುಲಭವಾಗಿ ಮಾತನಾಡೋದನ್ನ ನಿಲ್ಲಿಸಬೇಕು ಎಂದು ತಿರುಗೇಟು ನೀಡಿದರು.ಶೋಭಾ ಕರಂದ್ಲಾಜೆ ಕುಮ್ಮಕ್ಕಿನಿಂದ ಆಗಿದೆ ಅಂತ ಹೇಳಿ ಬಿಡಬಹುದಾ ಎಂದು ಪ್ರಶ್ನಿಸಿದ ಅವರು ನಾನು, ಜವಬ್ದಾರಿ ಸ್ಥಾನದಲ್ಲಿ ಇರುವವನು ಹಾಗೇ ಹೇಳುವುದಿಲ್ಲ ಎಂದರು.
ಅವರು ಜವಬ್ದಾರಿ ಸ್ಥಾನದಲ್ಲಿದ್ದಾರೆ, ತಿಳಿದು ಮಾತನಾಡೋದನ್ನ ಕಲಿತುಕೊಂಡರೆ ಬಹಳ ಒಳ್ಳೆಯದು ಎಂದರು.
ಘಟನೆ ನಡೆದಿದೆ, ಅದನ್ನು ನಿಯಂತ್ರಣ ಮಾಡಿದ್ದೇವೆ. ನಿಯಂತ್ರಣ ಮಾಡದಿದ್ದರೆ ದೊಡ್ಡದಾಗುತ್ತಿತ್ತು ಎಂದ ಅವರು ಪೊಲೀಸರು ನಿಯಂತ್ರಣ ಮಾಡಿದ್ದಾರೆ. ಅದಕ್ಕೆ ಪ್ರಶಂಸೆ ಮಾಡಬೇಕು ಎಂದರು.
ನಿಗಮಮಂಡಳಿಗೆ ಆದಷ್ಟು ಶೀಘ್ರವಾಗಿ ನೇಮಕ ಮಾಡುತ್ತೇವೆ. ಮುಖ್ಯಮಂತ್ರಿಗಳು ಅದನ್ನು ಗಮನಿಸಿದ್ದಾರೆ ಎಂದರು.