ಮನುಕುಲದ ಒಳಿತಿಗಾಗಿ ಬಳಕೆಯಾಗಬೇಕಾದ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಪರಿಣಾಮ ಮಾನವ ಜಗತ್ತು ಇಂದು ವಿನಾಶದತ್ತ ತಲುಪಿದೆ ಎಂದು ಪರಿಸರ ವಾದಿ ಸಿ.ಯತಿರಾಜು ಆತಂಕ ವ್ಯಕ್ತಪಡಿಸಿದರು.
ತುಮಕೂರು : ಮನುಕುಲದ ಒಳಿತಿಗಾಗಿ ಬಳಕೆಯಾಗಬೇಕಾದ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಪರಿಣಾಮ ಮಾನವ ಜಗತ್ತು ಇಂದು ವಿನಾಶದತ್ತ ತಲುಪಿದೆ ಎಂದು ಪರಿಸರ ವಾದಿ ಸಿ.ಯತಿರಾಜು ಆತಂಕ ವ್ಯಕ್ತಪಡಿಸಿದರು.
ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ತುಮಕೂರು ವಿಜ್ಞಾನ ಕೇಂದ್ರವು ಆಯೋಜಿಸಿದ್ದ ವಿಜ್ಞಾನ ದಿನಾಚರಣೆ - ಬಹುಮಾನ ವಿತರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ವಿಜ್ಞಾನದ ಅನುಕೂಲತೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಾ ಹೋದಂತೆ ನಾವು ವಿನಾಶಕಾರಿ ಹಂತ ತಲುಪುತ್ತಿದ್ದೇವೆ. ಮಾನವ ಕಲ್ಯಾಣಕ್ಕಾಗಿ ಬಳಕೆಯಾಗಬೇಕಾದ ವಿಜ್ಞಾನವನ್ನು ಕೆಡುಕಿಗೆ ಬಳಕೆ ಮಾಡಿಕೊಳ್ಳುತ್ತಿರುವ ಪರಿಣಾಮವನ್ನು ನಾವಿಂದು ನೋಡುವಂತಾಗಿದೆ ಎಂದು ವಿಷಾದಿಸಿದರು. ಎರಡನೇ ಮಹಾಯುದ್ಧದಲ್ಲಿ ಶಸ್ತ್ರಾಸ್ತ್ರಗಳ ತಯಾರಿಕೆಗೆ ಬಳಸುತ್ತಿದ್ದ ಸಾರಜನಕ ಯುದ್ಧದ ನಂತರ ಅದನ್ನು ಆಹಾರ ಉತ್ಪಾದನೆ ಹೆಚ್ಚಳಕೆ ಕೃಷಿ ಕ್ಷೇತ್ರಕ್ಕೆ ಬಳಕೆ ಮಾಡಲಾಯಿತು. ಇದರ ಪರಿಣಾಮವಾಗಿ ಭೂಮಿ ಹಾಳಾಯಿತು. ಹೆಚ್ಚು ರಾಸಾಯನಿಕ ಮತ್ತು ಕೀಟನಾಶಕಗಳನ್ನು ಬಳಕೆ ಮಾಡಿದ ಪರಿಣಾಮ ಭೂಮಿ ಫಲವತ್ತತೆ ಕಳೆದುಕೊಂಡದ್ದಷ್ಟೇ ಅಲ್ಲ, ತಿನ್ನುವ ಆಹಾರವೂ ರಾಸಾಯನಿಕ ಮಿಶ್ರಣವಾಗಿ ಕ್ಯಾನ್ಸರ್‌ನಂತಹ ರೋಗಗಳು ಹುಟ್ಟಿಕೊಂಡವು. ಹೆಚ್ಚುತ್ತಿರುವ ಜನಸಂಖ್ಯೆಗೆ ತಕ್ಕಂತೆ ಹೆಚ್ಚು ಆಹಾರ ಉತ್ಪಾದನೆ ಮಾಡಲು ಕೃತಕ ರಾಸಾಯನಿಕಗಳ ಬಳಕೆ ಮಾಡಲು ಮುಂದಾದ ಪರಿಣಾಮವೇ ಮನುಷ್ಯನ ಅನಾರೋಗ್ಯಕ್ಕೆ ಕಾರಣವಾಯಿತು ಎಂದರು.
ತುಮಕೂರು ವಿಜ್ಞಾನ ಕೇಂದ್ರದ ಅಧ್ಯಕ್ಷ ಬಿ.ಮರುಳಯ್ಯ ಮಾತನಾಡಿ, ಪ್ರಕೃತಿಯನ್ನು ಹಾಳು ಮಾಡುತ್ತಿರುವ ಫಲವಾಗಿ ಇಂದು ವಿವಿಧ ರೀತಿಯ ನೈಸರ್ಗಿಕ ವಿಕೋಪಗಳು ಎದುರಾಗುತ್ತಿವೆ. ಭವಿಷ್ಯಕ್ಕಾಗಿ ವಿಜ್ಞಾನ ಇರಬೇಕೇ ಹೊರತು, ವಿನಾಶಕ್ಕಾಗಿ ಅಲ್ಲ ಎಂಬುದನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು. ಮೊಬೈಲ್‌ನಿಂದ ಹಿಡಿದು ರಾಸಾಯನಿಕಗಳವರೆಗೆ ಎಲ್ಲ ಆವಿಷ್ಕಾರಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದೇವೆ. ಇದರಿಂದಾಗಿ ಇಂದು ಜೀವಜಗತ್ತು ಅಪಾಯಕ್ಕೆ ಸಿಲುಕಿದೆ. ಬೆಳೆಯುವ ಮನಸ್ಸಿನ ಯುವಜನತೆ ವೈಜ್ಞಾನಿಕ ನೆಲೆಗಟ್ಟಿನಲ್ಲಿ ಚಿಂತಿಸುವ ವಾತಾವರಣ ಸಮಾಜದಲ್ಲಿ ನಿರ್ಮಾಣ ಮಾಡಬೇಕಿದೆ. ಈ ಹಿನ್ನೆಲೆಯಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ವಿಜ್ಞಾನದ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗುತ್ತಿದೆ. ಬೆಳಕಿನ ಆವಿಷ್ಕಾರದಲ್ಲಿ ಸಾಧನೆ ಗೈದ ಸರ್ ಸಿ.ವಿ.ರಾಮನ್ ಅವರ ರಾಮನ್ ಎಫೆಕ್ಟ್ ಎಂಬ ಘೋಷಣೆಯ ದಿನವನ್ನಾಗಿಯೂ ಈ ದಿನವನ್ನು ಆಚರಿಸಲಾಗುತ್ತಿದೆ ಎಂದು ವಿವರಿಸಿದರು.
ಅತ್ಯುತ್ತಮ ಪ್ರಬಂಧ ಬರೆದ ನಾಲ್ಕುವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು ಹಾಗೂ ಭಾಗವಹಿಸಿದ್ದ ಎಲ್ಲ ವಿದ್ಯಾರ್ಥಿಗಳಿಗೂ ಪುಸ್ತಕದ ಕೊಡುಗೆ ನೀಡಲಾಯಿತು. ಆರ್ಯನ್, ಕನ್ನಿಕಾ, ಎಸ್.ಜಿ.ಆರ್. ಸೇಂಟ್ ಮೇರಿಸ್, ಭಾರತ್ ಮಾತಾ, ವಾಲ್ಮೀಕಿ, ರೇಣುಕಾ ವಿದ್ಯಾಪೀಠ ಸೇರಿದಂತೆ ವಿವಿಧ ಶಾಲೆಗಳಿಂದ ಆಯ್ಕೆಯಾಗಿ ಬಂದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಬಿ.ಉಮೇಶ್, ಸುಬ್ರಹ್ಮಣ್ಯ ಮುಂತಾದವರು ಉಪಸ್ಥಿತರಿದ್ದರು. ಟಿ.ಜಿ.ಶಿವಲಿಂಗಯ್ಯ ಸ್ವಾಗತಿಸಿ, ಪಿ.ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.
ಯುದ್ಧ ಯಾವುದೇ ಕಾರಣಕ್ಕೂ ಒಳ್ಳೆಯದಲ್ಲ. ನಾವೀಗ ಶಾಂತಿ ಸಹಬಾಳ್ವೆಯ ವಾತಾವರಣದಲ್ಲಿದ್ದೇವೆ ಎಂದುಕೊಳ್ಳುತ್ತಿರುವಾಗಲೇ ರಷ್ಯಾ-ಉಕ್ರೇನ್ ಯುದ್ಧ ಶುರುವಾಗಿ ವರ್ಷವಾಯಿತು. ಇದು ಕೇವಲ ಎರಡು ದೇಶಗಳಿಗೆ ಮಾತ್ರ ಸೀಮಿತವಾಗುವುದಿಲ್ಲ. ಎಲ್ಲ ದೇಶಗಳಿಗೂ ಸರಬರಾಜು ಲಿಂಕ್ ಇರುವ ಕಾರಣ ಪ್ರತಿಯೊಂದು ದೇಶಕ್ಕೂ ಇದರ ಬಿಸಿ ತಟ್ಟುತ್ತದೆ. ಬೆಲೆ ಏರಿಕೆ ಹೆಚ್ಚಾಗುತ್ತದೆ. ಜಗತ್ತಿನೊಳಗೆ ಪರ-ವಿರೋಧದ ಬಣಗಳಾಗಿ ಶೀತಲಸಮರ ಮತ್ತೆ ಪ್ರಾರಂಭವಾಗುತ್ತದೆ. ವಿಜ್ಞಾನವನ್ನು ದುರುಪಯೋಗಪಡಿಸಿಕೊಂಡರೆ ಮನುಕುಲದ ವಿನಾಶ ಎಂಬುದನ್ನು ಮರೆಯಬಾರದು.
ಸಿ.ಯತಿರಾಜು ಪರಿಸರ ವಾದಿ
ವಿಜ್ಞಾನ ಎಂಬುದು ವಾಸ್ತವ. ಇದಕ್ಕೆ ವಿರುದ್ಧವಾದದು ಮೌಢ್ಯ ಮತ್ತು ಜೋತಿಷ್ಯ. ದುರಂತವೆಂದರೆ ವಾಸ್ತವಕ್ಕೆ ವಿರುದ್ಧ ನೆಲೆಗಟ್ಟಿನಲ್ಲಿ ಬದುಕಲು ಪ್ರಯತ್ನಿಸುತ್ತಿರುವುದು. ಇದರ ಪರಿಣಾಮ ನೈಸರ್ಗಿಕ ಅವಘಡಗಳು ಹೆಚ್ಚುತ್ತಿವೆ. ಇಂತಹ ಕ್ಲಿಷ್ಟಸಂದರ್ಭದಲ್ಲಿ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಮೂಡಿಸುವ ಅಗತ್ಯವಿದೆ.
ಸಾ.ಚಿ.ರಾಜಕುಮಾರ ಸಾಮಾಜಿಕ ಹೋರಾಟಗಾರ