ಪೆಂಡಾಲ್‌ ಹಾಕಿದ ಮೇಲೆ ಕೊಟೇಶನ್‌ ಕೇಳಿದ ಪಾಲಿಕೆ!

By Kannadaprabha News  |  First Published Sep 24, 2022, 8:17 AM IST
  • ಪೆಂಡಾಲ್‌ ಹಾಕಿದ ಮೇಲೆ ಕೊಟೇಶನ್‌ ಕೇಳಿದ ಪಾಲಿಕೆ!
  • ರಾಷ್ಟ್ರಪತಿ ಮುರ್ಮು ದ್ರೌಪದಿ ಪೌರಸನ್ಮಾನ ಕಾರ್ಯಕ್ರಮದ ವಿಷಯದಲ್ಲಿ ಯಡವಟ್ಟು

ಶಿವಾನಂದ ಗೊಂಬಿ

ಹುಬ್ಬಳ್ಳಿ (ಸೆ.24) : ಕೆಲಸವೆಲ್ಲ ಮುಗಿದ ಮೇಲೆ ಕೊಟೇಶನ್‌ ಆಹ್ವಾನ! ಇದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಕಾರ್ಯವೈಖರಿ. ಪೆಂಡಾಲ್‌ ಎಲ್ಲ ಹಾಕಿದ ಮೇಲೆ ಅದಕ್ಕಾಗಿ ಕೊಟೇಶನ್‌ ಕಳುಹಿಸಿ ಎಂದು ಕೋರಿ ಆಸಕ್ತರಿಂದ ಕೊಟೇಶನ್‌ ಆಹ್ವಾನಿಸಿ ಪತ್ರಿಕೆಗಳಿಗೆ ಜಾಹೀರಾತು ನೀಡಿದೆ. ಇದಕ್ಕೆ ಸಾರ್ವಜನಿಕರ ಆಕ್ರೋಶ ವ್ಯಕ್ತವಾಗಿದೆ.

Latest Videos

undefined

ಧಾರವಾಡ: ರಾಷ್ಟ್ರಪತಿಯಿಂದ ಐಐಐಟಿ ಹೊಸ ಕ್ಯಾಂಪಸ್‌ ಲೋಕಾರ್ಪಣೆ!

ಏನಿದು ಸಮಸ್ಯೆ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಸೆ. 26ರಂದು ಮಹಾನಗರ ಪಾಲಿಕೆಯಿಂದ ಪೌರಸನ್ಮಾನ ಮಾಡಲಾಗುತ್ತಿದೆ. ಪಾಲಿಕೆಯಿಂದ ಪೌರಸನ್ಮಾನ ಸ್ವೀಕರಿಸಲಿರುವ 2ನೇ ರಾಷ್ಟ್ರಪತಿ ಇವರಾಗಿದ್ದು ಮಹಾನಗರ ಜನತೆಗೆ ಹೆಮ್ಮೆಯ ವಿಷಯವೂ ಹೌದು. ಇದಕ್ಕಾಗಿ ಕಳೆದ ಒಂದು ವಾರದಿಂದಲೇ ಜಿಮ್‌ಖಾನಾ ಮೈದಾನದಲ್ಲಿ ಭರ್ಜರಿಯಾಗಿ ತಯಾರಿ ನಡೆದಿದೆ. ಮಳೆ, ಬಿಸಿಲಿನಿಂದ ಸಮಸ್ಯೆ ಆಗಬಾರದು ಎಂದು ಜರ್ಮನ್‌ ಟೆಕ್ನಿಕ್‌ ಬಳಸಿಕೊಂಡು ದೊಡ್ಡದಾದ ಪೆಂಡಾಲ್‌ ಹಾಕಲಾಗಿದೆ. ಅಲ್ಯುಮಿನಿಯಂ ಸಾಮಗ್ರಿಗಳಿಂದ ಈ ಟೆಂಟ್‌ ಹಾಕಲಾಗಿದೆ. 30 ಸಾವಿರ ಚದುರ ಅಡಿ ಪೆಂಡಾಲ್‌ ಹಾಕಲಾಗಿದೆ. ಕಾರ್ಯಕ್ರಮಕ್ಕಾಗಿ 3200 ಚದುರ ಅಡಿ ಅಳತೆಯ ವೇದಿಕೆಯನ್ನೂ ಸಿದ್ಧಪಡಿಸಲಾಗಿದೆ. 5 ಸಾವಿರ ಕುರ್ಚಿಗಳನ್ನು ಟೆಂಟ್‌ನೊಳಗೆ ಜೋಡಿಸುವ ಕೆಲಸ ನಡೆದಿದೆ. ಇನ್ನು ಸವಾಯಿ ಗಂಧರ್ವ ಹಾಲ್‌ ಪಕ್ಕದಲ್ಲಿ ಸಾರ್ವಜನಿಕರ ಊಟಕ್ಕಾಗಿಯೂ ಪ್ರತ್ಯೇಕ ಪೆಂಡಾಲ್‌ ಕೂಡ ಹಾಕಲಾಗಿದೆ. ಬಹುತೇಕ ಎಲ್ಲ ತಯಾರಿ ಕೂಡ ಮುಗಿದಾಗಿದೆ.

ಈಗ ಆಹ್ವಾನ: ಪೆಂಡಾಲ್‌, ಟೆಂಟ್‌, ಕುರ್ಚಿ ಅಳವಡಿಕೆ ಸೇರಿದಂತೆ ಎಲ್ಲ ಕೆಲಸಗಳು ಮುಗಿದಿವೆ. ಇದೀಗ ಕೊಟೇಶನ್‌ ಕಳುಹಿಸಿ, ಅದು 24ಗಂಟೆಯೊಳಗೆ ಪಾಲಿಕೆ ಕಚೇರಿಗೆ ಮುಟ್ಟಿಸಿ ಎಂದು ಪಾಲಿಕೆ ಅರ್ಜಿ ಆಹ್ವಾನಿಸಿದೆ. ಸೆ. 22ರಂದು ಆಸಕ್ತರಿಂದ ಕೊಟೇಶನ್‌ ಆಹ್ವಾನಿಸಿರುವ ಪಾಲಿಕೆ ಸೆ. 23ರ ಸಂಜೆ 5ರೊಳಗೆ ಸಲ್ಲಿಸುವಂತೆ ಸೂಚಿಸಿದೆ. ಈಗಾಗಲೇ ಎಲ್ಲ ಕೆಲಸಗಳು ಪೂರ್ಣಗೊಂಡ ಬಳಿಕ ಕೊಟೇಶನ್‌ ಕೇಳಿದ್ದು ಯಾವ ಉದ್ದೇಶಕ್ಕೆ?

ಇದು ಕಾಟಾಚಾರಕ್ಕೆಂದು ಕರೆದಿರುವ ಕೊಟೇಶನ್‌. ಸರ್ಕಾರಕ್ಕೆ ಕೊಟೇಶನ್‌ ಪಡೆದುಕೊಂಡೆ ಪೆಂಡಾಲ್‌ ಹಾಕಲು ಏಜೆನ್ಸಿ ಗೊತ್ತು ಮಾಡಿದ್ದೇವೆ ಎಂದು ತೋರಿಸುವ ಪ್ರಯತ್ನ. ತಮಗೆ ಬೇಕಾದವರಿಗೆ ಕೆಲಸ ಕೊಟ್ಟು ಅವರಿಂದಲೇ ಕೊಟೇಶನ್‌ ಪಡೆದು ಅವರಿಗೆ ಕೊಟ್ಟಿದ್ದೇವೆ ಎಂದು ತೋರಿಸಲು ಮಾಡುವ ಪ್ರಯತ್ನವೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

Hubballi: ರಾಷ್ಟ್ರಪತಿ ಪೌರಸನ್ಮಾನಕ್ಕೆ ಭರದಿಂದ ತಯಾರಿ

ಆದರೆ ಇದನ್ನು ತಳ್ಳಿಹಾಕುವ ಪಾಲಿಕೆ ಮೇಯರ್‌ ಈರೇಶ ಅಂಚಟಗೇರಿ, ಟೆಂಡರ್‌ ಕರೆದು ಕೊಡಬೇಕೆಂದು ಅಂದುಕೊಂಡಿದ್ದೇವು. ಆದರೆ ನಾವು ನಿರ್ಮಿತಿ ಕೇಂದ್ರಕ್ಕೆ ಜವಾಬ್ದಾರಿ ನೀಡಿದ್ದೇವೆ. ನಿರ್ಮಿತಿ ಕೇಂದ್ರದ ದರ ಹಾಗೂ ಖಾಸಗಿ ದರ ಪರಿಶೀಲನೆಗೆಂದು ಕೊಟೇಶನ್‌ ಆಹ್ವಾನಿಸಿದ್ದೇವೆ ಅಷ್ಟೇ ಎಂದು ಸಮಜಾಯಿಷಿ ನೀಡುತ್ತಾರೆ.

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಪೌರಸನ್ಮಾನ ಕಾರ್ಯಕ್ರಮದ ಸಿದ್ಧತೆಗಳೆಲ್ಲ ಪೂರ್ಣಗೊಂಡಿದೆ. ಪೆಂಡಾಲ್‌, ಕುರ್ಚಿ, ಸ್ಟೇಜ್‌ ಬಹುತೇಕ ಎಲ್ಲ ಕೆಲಸಗಳು ಮುಗಿದಿವೆ. ಪಾಲಿಕೆಯು ಪೆಂಡಾಲ್‌ ಅಳವಡಿಕೆಯ ಜವಾಬ್ದಾರಿಯನ್ನು ನಿರ್ಮಿತಿ ಕೇಂದ್ರಕ್ಕೆ ನೀಡಿದೆ.

ಈರೇಶ ಅಂಚಟಗೇರಿ ಮೇಯರ್‌

ರಾಷ್ಟ್ರಪತಿ ಆಗಮನ: ರಾಜಕಾಲುವೆ ದುರಸ್ತಿ:

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಪೌರಸನ್ಮಾನದ ಕಾರ್ಯಕ್ರಮದ ಸಕಲ ಸಿದ್ಧತೆ ಬಹುತೇಕ ಪೂರ್ಣಗೊಂಡಿವೆ. ಈ ನಡುವೆ ದಶಕಗಳಿಂದ ದುರಸ್ತಿ ಕಾಣದ ರಾಜಕಾಲುವೆಗಳಿಗೂ ಶುಕ್ರದೆಸೆ ಬಂದಿದೆ. ರಾಷ್ಟ್ರಪತಿ ಸಂಚರಿಸುವ ಮಾರ್ಗದಲ್ಲಿ ಬರುವ ರಾಜಕಾಲುವೆಗಳ ತಡೆಗೋಡೆ ನಿರ್ಮಾಣ, ದುರಸ್ತಿ ಕಾರ್ಯ ಭರದಿಂದ ಸಾಗಿದೆ.

ರಾಷ್ಟ್ರಪತಿ ವಿಮಾನ ನಿಲ್ದಾಣದಿಂದ ನೇರವಾಗಿ ಕಾರ್ಯಕ್ರಮ ನಡೆಯುವ ಜಿಮ್‌ಖಾನ್‌ ಕ್ಲಬ್‌ ಮೈದಾನಕ್ಕೆ ಬರುವರು. ಈ ಮಾರ್ಗದಲ್ಲಿ ಬರುವ ಗೋಕುಲ ರಸ್ತೆಯ ರಾಜಕಾಲುವೆ ಹಾಗೂ ಸವಾಯಿ ಗಂಧರ್ವ ಹಾಲ್‌ ಪಕ್ಕದ ರಾಜಕಾಲುವೆಯ ತಡೆಗೋಡೆಗಳು ಒಡೆದು ದಶಕಗಳೇ ಕಳೆದಿತ್ತು. ಮಳೆ ಬಂದಾಗ ರಾಜಕಾಲುವೆ ನೀರು ರಸ್ತೆ ಮೇಲೆ ಹರಿಯುತ್ತಿತ್ತು. ಈ ಕಾಲುವೆ ದುರಸ್ತಿ ಮಾಡುವಂತೆ ಸಾರ್ವಜನಿಕರು ಆಗ್ರಹಿಸಿದರೂ ಕಾರ್ಯಪ್ರವೃತ್ತವಾಗದ ಪಾಲಿಕೆ ಇದೀಗ ತಡೆಗೋಡೆ ನಿರ್ಮಿಸಿ ಸುಣ್ಣ ಬಳಿಯುತ್ತಿದೆ.

ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳ ಮುಚ್ಚುವ ಕಾರ್ಯವೂ ಬರದಿಂದ ಸಾಗಿದೆ. ರಾಷ್ಟ್ರಪತಿ ಸಂಚರಿಸುವ ರಸ್ತೆಯಲ್ಲಿ ಧೂಳು, ಗುಂಡಿಗಳು ಇಲ್ಲದಂತೆ ಪಾಲಕೆ ಹಗಲು-ರಾತ್ರಿ ಕೆಲಸ ಮಾಡುತ್ತಿದೆ,. ಇದನ್ನು ನೋಡಿದ ಸಾರ್ವಜನಿಕರು ಪ್ರತಿ ತಿಂಗಳು ಗಣ್ಯಾತಿಗಣ್ಯರು ನಗರಕ್ಕೆ ಬರಬೇಕು. ಇದರಿಂದ ರಸ್ತೆ ದುರಸ್ತಿ ಜತೆಗೆ ನಗರದ ಸೌಂದರ್ಯ ಹೆಚ್ಚುತ್ತದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕಾರ್ಯಕ್ರಮ ನಡೆಯುವ ಜಿಮ್‌ಖಾನ್‌ ಮೈದಾನದಲ್ಲಿ ಎಲ್ಲ ಸಿದ್ಧತೆ ಪೂರ್ಣಗೊಂಡಿವೆ. ಶುಕ್ರವಾರ ಮೇಯರ್‌ ಈರೇಶ ಅಂಚಟಗೇರಿ ಹಾಗೂ ಪಾಲಿಕೆ ಆಯುಕ್ತ ಗೋಪಾಲಕೃಷ್ಣ ಸ್ಥಳಕ್ಕೆ ಭೇಟಿ ನೀಡಿ ಸಿದ್ಧತೆ ಪರಿಶೀಲಿಸಿದರು.

click me!