ರಾಜ್ಯದ್ಯಂತ ವರಮಹಾಲಕ್ಷ್ಮಿ ಹಬ್ಬವನ್ನು ಮಹಿಳೆಯರು ಅದ್ಧೂರಿಯಾಗಿ ಆಚರಣೆ ಮಾಡಿದ್ದಾರೆ. ಆದರೆ ಇಲ್ಲೊಂದು ದಂಪತಿ ತನ್ನ ಮಗಳಿಗೆ ವರಮಹಾಲಕ್ಷ್ಮಿಯ ವೇಷ ಧರಿಸಿ ಆಕೆಯನ್ನು ಪೂಜಿಸಿ ಸಂಭ್ರಮಿಸಿದ್ದಾರೆ.
ಕುಣಿಗಲ್ : ರಾಜ್ಯದ್ಯಂತ ವರಮಹಾಲಕ್ಷ್ಮಿ ಹಬ್ಬವನ್ನು ಮಹಿಳೆಯರು ಅದ್ಧೂರಿಯಾಗಿ ಆಚರಣೆ ಮಾಡಿದ್ದಾರೆ. ಆದರೆ ಇಲ್ಲೊಂದು ದಂಪತಿ ತನ್ನ ಮಗಳಿಗೆ ವರಮಹಾಲಕ್ಷ್ಮಿಯ ವೇಷ ಧರಿಸಿ ಆಕೆಯನ್ನು ಪೂಜಿಸಿ ಸಂಭ್ರಮಿಸಿದ್ದಾರೆ.
ಕುಣಿಗಲ್ ಪಟ್ಟಣದ ಕೋಟೆ ವಾಸಿಗಳಾದ ಪೂಜಾ ಹಾಗೂ ಮಹೇಶ್ ಅವರ ಮಗಳು ಅಪೂರ್ವ ( 9 ) ಹಬ್ಬದ ದಿನ ತನ್ನ ತಂದೆ ತಾಯಿಗಳಿಂದ ಪೂಜೆಗೆ ಒಳಗಾದ ಮಗಳು.
ಪಟ್ಟಣದ ತುಂಬೆಲ್ಲ ಪ್ರತಿ ಮನೆಯಲ್ಲಿ ವರಮಹಾಲಕ್ಷ್ಮಿಯ ವಿಗ್ರಹಗಳಿಗೆ ಸೀರೆ ಉಡಿಸಿ, ಒಡವೆ ಹಾಕಿ, ಒಬ್ಬಟ್ಟು, ಚಕ್ಕುಲಿ, ನಿಪ್ಪಟ್ಟು ಸೇರಿದಂತೆ ವಿವಿಧ ಖಾದ್ಯಗಳನ್ನು ತಯಾರಿಸಿ ಆ ವಿಗ್ರಹದ ಮುಂದೆ ಇಟ್ಟು ಮಹಾಲಕ್ಷ್ಮಿಯ ಗೀತೆಗಳು ಹಾಡುವ ಮುಖಾಂತರ ವಿಗ್ರಹವನ್ನು ಸಂತೈಸುವ ಹಾಗೂ ವಿವಿಧ ಇಷ್ಟಾರ್ಥಗಳನ್ನು ಬೇಡುವ ಆಚರಣೆ ನಡೆಯುತ್ತಿದೆ. ಅದರಂತೆ ಈ ದಂಪತಿಗಳು ತನ್ನ ಮಗಳನ್ನು ದೇವರ ಪೀಠದಲ್ಲಿ ಕೂರಿಸಿ ಅವಳಿಗೆ ಆ ದೇವಿಯ ಅಲಂಕಾರದ ಒಡವೆಗಳನ್ನು ಹಾಗೂ ಕಿರೀಟ ಸೇರಿದಂತೆ ಇತರ ಅಲಂಕಾರಗಳನ್ನು ಮಾಡಿ ಮಂಗಳಾರತಿ ಬೆಳಗಿ, ಗಂಧದ ಕಡ್ಡಿ ಹಾಗೂ ದೂಪಗಳನ್ನು ಬೆಳಗುತ್ತಾ ಆಕೆಯನ್ನೇ ಪ್ರಾರ್ಥಿಸುವ ಮುಖಾಂತರ ನಮ್ಮ ಮನೆಯ ವರಮಹಾಲಕ್ಷ್ಮಿ ಎಂದು ಬೇಡಿಕೊಂಡರು.
ಅಕ್ಕ ಪಕ್ಕದ ಹಲವಾರು ಮಹಿಳೆಯನ್ನು ಕರೆದು ಅವರಿಗೆ ಅರಿಶಿಣ ಕುಂಕುಮ ಬಳೆಗಳನ್ನು ನೀಡುವ ಮುಖಾಂತರ ವರಮಹಾಲಕ್ಷ್ಮಿ ಹಬ್ಬವನ್ನು ವಿಶೇಷವಾಗಿ ಆಚರಿಸಿದ್ದಾರೆ.
ಯಾವುದೋ ಒಂದು ವಿಗ್ರಹಕ್ಕೆ ಪೂಜೆ ಮಾಡುವ ಮುಖಾಂತರ ಆ ವರಮಹಾಲಕ್ಷ್ಮಿಯನ್ನು ನಾವು ಅನುಷ್ಠಾನ ಮಾಡುತ್ತೇವೆ ಅಷ್ಟೇ. ನಮ್ಮ ಮನೆಯಲ್ಲಿರುವ ಹೆಣ್ಣು ಮಗುವಿಗೆ ಆ ದಿನ ವಿಶೇಷವಾಗಿ ಗೌರವ ಸಲ್ಲುವ ಕೆಲಸ ಆಗಬೇಕು. ಮಹಿಳೆಯರನ್ನು, ಹೆಣ್ಣು ಮಕ್ಕಳನ್ನು ಗೌರವಿಸುವ ಕೆಲಸವನ್ನು ಈ ಸಮಾಜ ಮಾಡಬೇಕು. ಅದಕ್ಕಾಗಿ ಈ ಆಚರಣೆಯನ್ನು ಮಾಡುತ್ತಿದ್ದೇವೆ ಎಂದು ದಂಪತಿಗಳು ಹೇಳಿದರು.