ಖರೀದಿ ದರ ಇಷ್ಟೊಂದು ಪ್ರಮಾಣದಲ್ಲಿ ಏರಿಕೆ ಆಗುತ್ತಿರುವುದು ಬೆಳೆಗಾರರಿಗೆ ಸಂತಸ ತಂದಿದೆ. ಆದರೂ ಸ್ಥಿರ ಮಾರುಕಟ್ಟೆ ದೃಷ್ಟಿಯಿಂದ ಮತ್ತೆ ಏರುಪೇರಿನ ಭೀತಿ ಹೇಳಲಾಗುತ್ತಿದೆ.
ಆತ್ಮಭೂಷಣ್
ಮಂಗಳೂರು(ಆ.25): ಸುಮಾರು ಆರು ವರ್ಷ ಬಳಿಕ ಬೆಳೆಗಾರರ ಬಂಗಾರ ಎಂದೇ ಕರೆಸಿಕೊಳ್ಳುತ್ತಿರುವ ಕಾಳುಮೆಣಸಿನ ದರ ಈಗ ಕೇಜಿಗೆ 640 ರವರೆಗೆ ತಲುಪಿದೆ. ಕೆಲವು ವರ್ಷಗಳ ಹಿಂದೆ .380 ರವರೆಗೆ ದರ ಇಳಿಕೆಯಾಗಿತ್ತು. ನಂತರ 510 ರವರೆಗೆ, ಬಳಿಕ ಏಕಾಏಕಿ .600 ದಾಟಿ ಈಗ .640 ರವರೆಗೆ ತಲುಪಿದೆ. ಇದು .650ಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ತಜ್ಞರು ಹೇಳುತ್ತಿದ್ದಾರೆ. ಖರೀದಿ ದರ ಇಷ್ಟೊಂದು ಪ್ರಮಾಣದಲ್ಲಿ ಏರಿಕೆ ಆಗುತ್ತಿರುವುದು ಬೆಳೆಗಾರರಿಗೆ ಸಂತಸ ತಂದಿದೆ. ಆದರೂ ಸ್ಥಿರ ಮಾರುಕಟ್ಟೆ ದೃಷ್ಟಿಯಿಂದ ಮತ್ತೆ ಏರುಪೇರಿನ ಭೀತಿ ಹೇಳಲಾಗುತ್ತಿದೆ.
ದಿಢೀರ್ ಏರಿಕೆ ಏಕೆ?:
ಭಾರತಕ್ಕೆ ಕಾಳುಮೆಣಸು ಮುಖ್ಯವಾಗಿ ಆಮದು ಆಗುವುದು ವಿಯೆಟ್ನಾಂನಿಂದ. ಈ ಬಾರಿ ವಿಯೆಟ್ನಾಂನಲ್ಲಿ ಕಾಳುಮೆಣಸು ಉತ್ಪಾದನೆ ಕುಂಠಿತವಾಗಿದೆ. ಹವಾಮಾನ ವೈಪರೀತ್ಯದಿಂದ ಇಳುವರಿ ಕಡಿಮೆಯಾಗಿ ಮುಕ್ತ ಮಾರುಕಟ್ಟೆವ್ಯವಸ್ಥೆ ಇದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ಆಮದು ಮಾಡಲು ಸಾಧ್ಯವಾಗುತ್ತಿಲ್ಲ. ಇದಲ್ಲದೆ ಇನ್ನು ಹಬ್ಬಗಳ ಸರಣಿ ಆರಂಭವಾಗುತ್ತದೆ. ಆಗ ಪ್ರತಿ ವರ್ಷ ಧಾರಣೆ ಏರಿಕೆ ಸಾಮಾನ್ಯ. ಈ ಎರಡು ಅಂಶಗಳು ಕಾಳುಮೆಣಸು ಧಾರಣೆ ಏರಿಕೆಯಲ್ಲಿ ಗಣನೀಯ ಪಾತ್ರ ವಹಿಸಿವೆ. ಭಾರತದಲ್ಲಿ ಕೊಚ್ಚಿನ್ ಮಾರುಕಟ್ಟೆಪ್ರಮುಖವಾಗಿದ್ದು, ಅಲ್ಲಿ ಕೂಡ ಒಟ್ಟು ಪೂರೈಕೆಯಲ್ಲಿ ಇಳಿಮುಖವಾಗಿದೆ. ಬೇಡಿಕೆಗೆ ಅನುಗುಣವಾಗಿ ಉತ್ಪಾದನೆ ಇಲ್ಲದಿರುವುದೇ ದರ ಏರಿಕೆಗೆ ಕಾರಣ. ಧಾರಣೆ ಏರುಗತಿ ದೀಪಾವಳಿವರೆಗೂ ಮುಂದುವರಿದರೆ ಅಚ್ಚರಿ ಇಲ್ಲ ಎನ್ನುತ್ತಾರೆ ಕೃಷಿ ಮಾರುಕಟ್ಟೆತಜ್ಞ ಡಾ. ವಿಘ್ನೇಶ್ವರ ವರ್ಮುಡಿ.
ಬಂಧನಕ್ಕೆ ಹೆದರಿ ಕ್ರಿಮಿನಾಶಕ ಸೇವಿಸಿದ ಆರೋಪಿ; ಮಂಗಳೂರು ಜಿಲ್ಲಾಸ್ಪತ್ರೆಗೆ ದಾಖಲು!
ಕೇರಳ, ಕರ್ನಾಟಕದಲ್ಲಿ ಮುಖ್ಯ ಉಪ ಬೆಳೆ:
ಕಾಳುಮೆಣಸು ಅಧಿಕ ಪ್ರಮಾಣದಲ್ಲಿ ಉತ್ಪಾದನೆ ಆಗುತ್ತಿರುವುದು ಕರ್ನಾಟಕ ಹಾಗೂ ಕೇರಳದಲ್ಲಿ. ಕೇರಳದ ಕಾಸರಗೋಡು ಹಾಗೂ ಕರ್ನಾಟಕದ ಕರಾವಳಿ, ಮಲೆನಾಡು ಪ್ರದೇಶಗಳ ಅಡಕೆ ತೋಟಗಳಲ್ಲಿ ಕೃಷಿಕರು ಕಾಳುಮೆಣಸನ್ನು ಉಪ ಬೆಳೆಯಾಗಿ ಬೆಳೆಯುತ್ತಾರೆ. ಸುಮಾರು 40ರಿಂದ 50 ಸಾವಿರದಷ್ಟುಬೆಳೆಗಾರರು ಕಾಳುಮೆಣಸು ಕೃಷಿ ಮಾಡುತ್ತಿದ್ದಾರೆ.
ಕಾಳುಮೆಣಸನ್ನು ಬಹುಪಾಲು ಅಂತಾರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೋ ಖರೀದಿಸುತ್ತಿದೆ. ಇಲ್ಲಿಂದ ಕಾಳುಮೆಣಸು ಉತ್ಪನ್ನ ಉತ್ತರ ಭಾರತಕ್ಕೆ ಮಾರಾಟವಾಗುತ್ತಿದೆ. ಅಲ್ಲಿ ಮಸಾಲಾ ಕಂಪನಿಗಳಿಗೆ ಇದು ಪೂರೈಕೆಯಾಗುತ್ತಿದೆ. ಕಾಳುಮೆಣಸಿನಲ್ಲಿ 3-4 ವಿಧಗಳಿದ್ದು, ಅವುಗಳನ್ನು ವಿಂಗಡಿಸಿ ಮಾರಾಟ ಮಾಡಲಾಗುತ್ತದೆ ಎನ್ನುತ್ತಾರೆ ಅಧಿಕಾರಿಗಳು.
6 ವರ್ಷಗಳ ಬಳಿಕ ಬಂಗಾರದ ಬೆಲೆ
2016ರಲ್ಲಿ ಸಹಕಾರಿ ಸಂಸ್ಥೆ ಕ್ಯಾಂಪ್ಕೋ ಕಾಳುಮೆಣಸು ಮಾರುಕಟ್ಟೆಪ್ರವೇಶಿಸಿದೆ. ಡಿ.16ರಂದು ಪುತ್ತೂರಿನಲ್ಲಿ ಪ್ರಥಮ ಖರೀದಿ ಆರಂಭಿಸಿದಾಗ ಕಾಳುಮೆಣಸು ಕಿಲೋಗೆ .640 ಇತ್ತು. ಬಳಿಕ ಮಾರುಕಟ್ಟೆಯಲ್ಲಿ ಕಾಳುಮೆಣಸು ದರ ಭಾರಿ ಏರಿಳಿತ ಕಂಡಿತ್ತು. ಕಿಲೋಗೆ .550 ರಿಂದ .380ಕ್ಕೆ ದಿಢೀರ್ ಇಳಿದಿತ್ತು. ಈಗ ಆರು ವರ್ಷಗಳ ಬಳಿಕ ಮತ್ತೆ .650ರತ್ತ ನಾಗಲೋಟ ಕಂಡಿದೆ. ಏರುಗತಿಯಲ್ಲಿರುವ ಧಾರಣೆ ಎಲ್ಲಿವರೆಗೆ ಎಂದು ಹೇಳುವಂತಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಉತ್ತಮ ಧಾರಣೆ ಇದೆ ಎಂದು ಕ್ಯಾಂಪ್ಕೋ ವ್ಯವಸ್ಥಾಪಕ ನಿರ್ದೇಶಕ ಕೃಷ್ಣಕುಮಾರ್ ತಿಳಿಸಿದ್ದಾರೆ.