ನಾರಾಯಣ ಹೆಗಡೆ
ಹಾವೇರಿ (ಅ.11) : ಅಗ್ನಿಪಥ್ ನೇಮಕಾತಿ ರಾರಯಲಿ ಮುಗಿದು 20 ದಿನಗಳೇ ಕಳೆದರೂ ಜಿಲ್ಲಾ ಕ್ರೀಡಾಂಗಣದ ಟ್ರ್ಯಾಕ್‌ನಲ್ಲಿ ಹಾಕಿದ್ದ ಕಲ್ಲು ಪುಡಿ ತೆಗೆಯದೇ, ಅಗೆದು ಹಾಕಿದ್ದ ಮೈದಾನ ಸರಿಪಡಿಸದೇ ಹಾಗೆ ಬಿಡಲಾಗಿದೆ. ಈ ಅವ್ಯವಸ್ಥೆಯಿಂದ ಬೇಸತ್ತಿರುವ ಕ್ರಿಡಾಪಟುಗಳು ಹಿಡಿಶಾಪ ಹಾಕುತ್ತಲೇ ತಾಲೀಮು ನಡೆಸುವಂತಾಗಿದೆ.
undefined
ನ.11ಕ್ಕೆ ಹಾವೇರಿ ಸಾಹಿತ್ಯ ಸಮ್ಮೇಳನ ಅಸಾಧ್ಯ: ಮಹೇಶ್ ಜೋಶಿ
ಇಲ್ಲಿಯ ಮೈಲಾರ ಮಹದೇವಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಕಳೆದ ಸೆ. 1ರಿಂದ 20ರ ವರೆಗೆ ಅಗ್ನಿವೀರರ ನೇಮಕಕ್ಕಾಗಿ ಅಗ್ನಿಪಥ್ ರಾರಯಲಿ ನಡೆದಿತ್ತು. ಆ ಸಂದರ್ಭದಲ್ಲಿ ನಿರಂತರ ಮಳೆಯಾಗುತ್ತಿದ್ದರಿಂದ ಟ್ರ್ಯಾಕ್ ಅಗೆದು ಕಲ್ಲು ಪುಡಿಯನ್ನು ಹಾಕಲಾಗಿತ್ತು. ಅಲ್ಲದೇ ದೈಹಿಕ ಸಾಮರ್ಥ್ಯ ಪರೀಕ್ಷೆಗೆಂದು ಕೆಲವು ಕಡೆ ಅಗೆಯಲಾಗಿತ್ತು. ಇದು ಮುಗಿದು 20 ದಿನಗಳೇ ಕಳೆದಿವೆ. ಆದರೆ, ಕ್ರೀಡಾಂಗಣದ ಟ್ರ್ಯಾಕ್ ಸರಿಪಡಿಸುವ, ಟ್ರ್ಯಾಕ್‌ನಲ್ಲಿರುವ ಕಲ್ಲಿನ ಪುಡಿಯನ್ನು ತೆರವುಗೊಳಿಸಿಲ್ಲ. ಇದರಿಂದ ಸ್ಥಳೀಯ ಕ್ರೀಡಾಶಾಲೆಯ ವಿದ್ಯಾರ್ಥಿಗಳಿಗೆ ಆಟೋಟದ ಅಭ್ಯಾಸ ನಡೆಸಲು ತೊಂದರೆಯಾಗುತ್ತಿದೆ. ನಿತ್ಯವೂ ತಾಲೀಮು ನಡೆಸುತ್ತಿದ್ದ ಕ್ರೀಡಾಪಟುಗಳು ಬೇಸತ್ತಿದ್ದಾರೆ.
ಗಮನಕ್ಕೆ ತಂದರೂ ಆಗದ ಪ್ರಯೋಜನ
ಅಗ್ನಿಪಥ್ ರಾರಯಲಿ ವೇಳೆ ನಿರಂತರವಾಗಿ ಮಳೆಯಾದ್ದರಿಂದ ಕ್ರೀಡಾಂಗಣವೇ ಕೆಸರು ಗದ್ದೆಯಂತಾಗಿತ್ತು. ಆಗ ಟ್ರ್ಯಾಕ್ ಅಗೆದು ಕಲ್ಲಿನ ಪುಡಿ ಹಾಕಲಾಗಿತ್ತು. ನೇಮಕಾತಿ ರಾರಯಲಿ ಮುಗಿದ ಮೇಲೆ ಕ್ರೀಡಾಂಗಣ ಸರಿಪಡಿಸಬಹುದು ಎಂದು ಕೆಲವು ದಿನ ಕಾದರೂ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಗಮನವನ್ನೇ ಹರಿಸಿಲ್ಲ. ಜಿಲ್ಲಾಡಳಿತ, ಕ್ರೀಡಾ ಇಲಾಖೆ ಕ್ರೀಡಾ ಸಂಘಟನೆಗಳು, ಕ್ರೀಡಾಪಟುಗಳು ಮನವಿ ಮಾಡಿದರೂ ಇದುವರೆಗೆ ಕ್ರೀಡಾಂಗಣ ಸರಿಪಡಿಸುವ ಕಾರ್ಯ ಆಗದಿರುವುದು ಬಳಕೆದಾರರ ಅಸಮಾಧಾನಕ್ಕೆ ಕಾರಣವಾಗಿದೆ. ಕ್ರೀಡಾ ಇಲಾಖೆ ಅಧಿಕಾರಿಗಳು ಜಿಲ್ಲಾಡಳಿತದತ್ತ ಬೊಟ್ಟು ತೋರಿಸಿ ಕಾಲ ಕಳೆಯುತ್ತಿದ್ದಾರೆ.
ಕಲ್ಲು ಪುಡಿ ಟ್ರ್ಯಾಕ್‌ನಲ್ಲೇ ತಾಲೀಮು
ಕ್ರೀಡಾಂಗಣದ ಪಕ್ಕದಲ್ಲೇ ಕ್ರೀಡಾ ವಸತಿ ಶಾಲೆಯಿದ್ದು, ಅಲ್ಲಿರುವ ವಿದ್ಯಾರ್ಥಿಗಳು ನಿತ್ಯವೂ ವಿವಿಧ ಆಟೋಟಗಳನ್ನು ಅಭ್ಯಾಸ ಮಾಡುತ್ತಾರೆ. ಅನೇಕರು ವರ್ಷವಿಡಿ ಕ್ರೀಡಾಕೂಟಕ್ಕೆ ತಯಾರಿ ನಡೆಸುತ್ತಿರುತ್ತಾರೆ. ಮಹಿಳೆಯರು, ವೃದ್ಧರು, ಮಕ್ಕಳಾದಿಯಾಗಿ ನಿತ್ಯವೂ ವಾಕಿಂಗ್‌ಗೆ ಬರುತ್ತಾರೆ. ಇವರಿಗೆಲ್ಲ ಈಗ ಸಮಸ್ಯೆಯಾಗಿದೆ. ಅನೇಕ ಬಡ ವಿದ್ಯಾರ್ಥಿಗಳು ಕಾಲಿಗೆ ಬೂಟು, ಚಪ್ಪಲಿಯೂ ಇಲ್ಲದೇ ಕಲ್ಲಿನ ಪುಡಿಯ ಟ್ರ್ಯಾಕ್‌ನಲ್ಲೇ ತಾಲೀಮು ನಡೆಸುತ್ತಿದ್ದಾರೆ. ಮಳೆ ಬಂದರಂತೂ ಕೆಸರು ಗದ್ದೆಯಂತಾಗುವ ಕ್ರೀಡಾಂಗಣವನ್ನು ಇಷ್ಟುದಿನ ಕಳೆದರೂ ದುರಸ್ತಿ ಮಾಡುವ ನಿಟ್ಟಿನಲ್ಲಿ ಸಂಬಂಧಪಟ್ಟಇಲಾಖೆ ಅಧಿಕಾರಿಗಳು ಗಮನ ನೀಡದಿರುವುದು ಅನೇಕರ ಅಸಮಾಧಾನಕ್ಕೆ ಕಾರಣವಾಗಿದೆ.
ಎಲ್ಲವೂ ಅವ್ಯವಸ್ಥೆ
ಜಿಲ್ಲಾ ಕ್ರೀಡಾಂಗಣ ಎಂದರೆ ಅಗತ್ಯ ಮೂಲಸೌಲಭ್ಯಗಳಿರಬೇಕು. ಆದರೆ, ಇಲ್ಲಿ ಎಲ್ಲವೂ ಅವ್ಯವಸ್ಥೆಯ ಆಗರವಾಗಿದೆ. ಒಳಾಂಗಣ ಕ್ರೀಡಾಂಗಣದಲ್ಲಿರುವ ಜಿಮ್, ಸ್ವಿಮಿಂಗ್ ಪೂಲ್‌ಗಳ ನಿರ್ವಹಣೆಯೂ ಸಮರ್ಪಕವಾಗಿ ಆಗುತ್ತಿಲ್ಲ. ಲಕ್ಷಾಂತರ ರು. ಖರ್ಚು ಮಾಡಿ ಖರೀದಿಸಿದ್ದ ಅನೇಕ ಕ್ರೀಡಾ ಸಾಮಗ್ರಿಗಳು ಧೂಳು ತಿನ್ನುತ್ತಿವೆ. ಬಿಲಿಯರ್ಡ್ಸ ಟೇಬಲ್ ಬಳಕೆಯೇ ಆಗದೇ ಹಾಳಾಗುತ್ತಿದೆ ಎಂದು ಸಾಮಾಜಿಕ ಕಾರ್ಯಕರ್ತ ಪ್ರಭು ಹಿಟ್ನಳ್ಳಿ ಆರೋಪಿಸಿದ್ದಾರೆ. ಕ್ರೀಡೆಯ ಬಗ್ಗೆ ಇಷ್ಟೊಂದು ನಿರ್ಲಕ್ಷ್ಯತೋರುತ್ತಿರುವುದರಿಂದ ಯುವಕರು ಈ ಬಗ್ಗೆ ಆಸಕ್ತಿಯನ್ನೇ ಕಳೆದುಕೊಳ್ಳುತ್ತಿದ್ದಾರೆ. ಕ್ರೀಡಾಂಗಣದಲ್ಲಿ ಸಿಂಥೆಟಿಕ್ ಟ್ರ್ಯಾಕ್ ಅಳವಡಿಸಬೇಕು ಎಂಬ ಬೇಡಿಕೆ ಈಡೇರಿಲ್ಲ.
ಕಾಂಗ್ರೆಸ್ಸಿನವರಿಗೆ ಬಿಜೆಪಿ ಬಗ್ಗೆ ಮಾತನಾಡುವ ನೈತಿಕತೆಯಿಲ್ಲ: ಸಚಿವ ಬೈರತಿ
ಕ್ರೀಡಾಂಗಣದ ಟ್ರ್ಯಾಕ್‌ನಲ್ಲಿ ಹಾಕಿದ್ದ ಕಲ್ಲು ಪುಡಿ ತೆರವುಗೊಳಿಸಿ ಮೊದಲಿನಂತೆ ಸಿದ್ಧಪಡಿಸಿಕೊಡುವಂತೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದೇನೆ. ಸರಿಪಡಿಸುವಂತೆ ಜಿಲ್ಲಾಧಿಕಾರಿಗಳು ನಿರ್ಮಿತಿ ಕೇಂದ್ರದ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಆದರೆ, ನಿರ್ಮಿತಿ ಕೇಂದ್ರದವರು ಇದುವರೆಗೆ ಮೈದಾನ ಸರಿಪಡಿಸಿಲ್ಲ.
-ಲತಾ ಬಿ.ಎಚ್. ಕ್ರೀಡಾ ಇಲಾಖೆ ಅಧಿಕಾರಿ
ಕ್ರೀಡಾಂಗಣ ದುರಸ್ತಿ ಮಾಡುವಂತೆ ಜಿಲ್ಲಾಡಳಿತಕ್ಕೆ, ಕ್ರೀಡಾ ಇಲಾಖೆ ಅಧಿಕಾರಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಕಲ್ಲು ಪುಡಿ ಹಾಕಿರುವ ಟ್ರ್ಯಾಕ್ ಮಧ್ಯೆಯೇ ಕ್ರೀಡಾಪಟುಗಳು ಪ್ರ್ಯಾಕ್ಟೀಸ್ ಮಾಡುತ್ತಿದ್ದಾರೆ. ಕ್ರೀಡಾ ಇಲಾಖೆ ಅಧಿಕಾರಿಗಳು ಈ ಬಗ್ಗೆ ತೀವ್ರ ನಿರ್ಲಕ್ಷ್ಯ ತೋರುತ್ತಿದ್ದಾರೆ. ಆದಷ್ಟುಬೇಗ ಕ್ರೀಡಾಂಗಣ ಸರಿಪಡಿಸಿ ಅನುಕೂಲ ಕಲ್ಪಿಸಿಕೊಡಬೇಕು.
-ರಮೇಶ ಆನವಟ್ಟಿ, ಕ್ರೀಡಾ ಸಂಘಟಕರು