ಮಹಾನಗರ ಸೇರಿ ತಾಲೂಕಿನ ವ್ಯಾಪ್ತಿಯಲ್ಲಿ ಸೋಮವಾರ ಸಂಜೆ ರಾತ್ರಿವರೆಗೆ ಧಾರಾಕಾರ ಮಳೆ ಸುರಿದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.
ಹುಬ್ಬಳ್ಳಿ (ಅ.11) : ಮಹಾನಗರ ಸೇರಿ ತಾಲೂಕಿನ ವ್ಯಾಪ್ತಿಯಲ್ಲಿ ಸೋಮವಾರ ಸಂಜೆ ರಾತ್ರಿವರೆಗೆ ಧಾರಾಕಾರ ಮಳೆ ಸುರಿದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಬೆಳಗ್ಗೆಯಿಂದಲೂ ಮೋಡ ಕವಿದ ವಾತಾವರಣವಿತ್ತು. ಸಂಜೆ ವೇಳೆ ಆರಂಭವಾದ ಧಾರಾಕಾರ ಮಳೆಯಿಂದ ನಗರದ ಹಳೇಹುಬ್ಬಳ್ಳಿ, ವಿದ್ಯಾನಗರ, ದೇಶಪಾಂಡೆ ನಗರ, ಮಂಟೂರ, ಪಿ.ಬಿ. ರಸ್ತೆಯ ಕುಂಬಾರ ಓಣಿ ಸೇರಿ ನಗರದ ವಿವಿಧೆಡೆಯ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಹಾನಿಯುಂಟು ಮಾಡಿದೆ. ಇದರಿಂದ ರಾತ್ರಿ ವೇಳೆಯಲ್ಲಿ ಜನರು ಮನೆಯಿಂದ ನೀರು ಹೊರಹಾಕಲು ಹರಸಾಹಸ ಪಟ್ಟರು. ಮನೆಯಲ್ಲಿಟ್ಟಿದ್ದ ದವಸ ಧಾನ್ಯ, ದಿನಬಳಕೆ ವಸ್ತುಗಳು ನೀರು ಪಾಲಾದವು.
ಮಳೆರಾಯನ ಕಾಟಕ್ಕೆ ಹಿಂದಾಯ್ತು ಹಿಂಗಾರು
ಇನ್ನು ನಗರದ ದಾಜೀಬಾನಪೇಟೆ, ಕೊಪ್ಪಿಕರ ರಸ್ತೆ, ಹಳೇಹುಬ್ಬಳ್ಳಿ, ದೇಶಪಾಂಡೆ ನಗರ, ಅಶೋಕ ನಗರ, ಲೋಕಪ್ಪನ ಹಕ್ಕಲ, ಹೊಸೂರು, ಲ್ಯಾಮಿಂಗ್ಟನ್ ರಸ್ತೆ, ಇಂದಿರಾಗ್ಲಾಸ್ ಹೌಸ್ ಸಮೀಪದ ರಸ್ತೆ, ನ್ಯೂಕಾಟನ್ ಮಾರ್ಕೆಟ್, ಶ್ರೀನಗರ ಹಾಗೂ ಎಪಿಎಂಸಿಯ ವಿವಿಧ ಪ್ರದೇಶಗಳ ರಸ್ತೆಗಳು ಜಲಾವೃತವಾಗಿದ್ದವು. ಮೊಣಕಾಲಿನವರೆಗೆ ರಸ್ತೆಯಲ್ಲಿ ನೀರು ತುಂಬಿತ್ತು. ದಾಜಿಬಾನಪೇಟೆಯ ತುಳಜಾಭವಾನಿ ದೇವಸ್ಥಾನದ ವೃತ್ತ ಸಂಪೂರ್ಣ ಜಲಾವೃತವಾಗಿತ್ತು. ಬಿಆರ್‌ಟಿಎಸ್ ನಿಲ್ದಾಣಗಳು ನೀರಿನಿಂದ ತುಂಬಿದ್ದವು. ರಸ್ತೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ತುಂಬಿದ್ದರಿಂದ ವಾಹನ ಸಂಚಾರ ಬಹುತೇಕ ಅಸ್ತವ್ಯಸ್ಯಗೊಂಡಿತ್ತು. ವಾಹನ ಸವಾರರು, ಪಾದಚಾರಿಗಳು ಪರದಾಟ ನಡೆಸಿದರು.
ಧಾರಾಕಾರ ಮಳೆಯಿಂದಾಗಿ ನಗರದ ಅಲ್ಲಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆ ಸಾಮಾನ್ಯವಾಗಿತ್ತು. ಕುಂದಗೋಳ ತಾಲೂಕು ವ್ಯಾಪಿಯಲ್ಲಿ ಸಂಜೆಯಿಂದ ರಾತ್ರಿವರೆಗೆ ಜಿಟಿಜಿಟಿ ಮಳೆಯಾಗಿದೆ. ಅಣ್ಣಿಗೇರಿ ತಾಲೂಕಿನಲ್ಲಿ ಸಂಜೆಯಿಂದ ಆರಂಭವಾದ ಮಳೆ ಅರ್ಧ ಜೋರಾಗಿತ್ತು. ಬಳಿಕ ಜಿಟಿಜಿಟಿ ಮುಂದುವರಿದಿತ್ತು.
ನವಲಗುಂದ ಮನೆಗಳಿಗೆ ನುಗ್ಗಿದ ಮಳೆ ನೀರು
ತಾಲೂಕಿನಲ್ಲಿ ಸೋಮವಾರ ಸಂಜೆಯಿಂದ ಆರಂಭವಾದ ಜಿಟಿಜಿಟಿ ಮಳೆ ರಾತ್ರಿ ವರೆಗೆ ಮುಂದುವರಿಯಿತು. ಆರೇಕುರಹಟ್ಟಿಗ್ರಾಮದಲ್ಲಿ ಸುಮಾರು ಸುಮಾರು 20ಕ್ಕೂ ಹೆಚ್ಚಿನ ಮನೆಗೆ ಮಳೆ ನೀರು ನುಗ್ಗಿದೆ. ರಸ್ತೆಯಲ್ಲಿ ನೀರು ತುಂಬಿ ಹರಿದಿದ್ದರಿಂದ ಕಾಲವಾಡ ಗ್ರಾಮದ ಬಸ್ ನಿಲ್ದಾಣದ ರಸ್ತೆ ಸಂಪರ್ಕ ಕಡಿತಗೊಂಡಿದೆ. ಬೆಣ್ಣಿಹಳ್ಳದ ಸುತ್ತಲಿನ ಗ್ರಾಮಸ್ಥರು, ರೈತರಲ್ಲಿ ಮತ್ತೆ ಆತಂಕ ಎದುರಾಗಿದೆ.
ಬೆಳೆನಷ್ಟಪರಿಹಾರ ಹೆಕ್ಟೇರ್ ಬದಲಾಗಿ ಎಕರೆಗೆ 24 ಸಾವಿರ ರು. ನೀಡಿ
ಧಾರವಾಡ:
ಹವಾಮಾನ ಇಲಾಖೆ ಮುನ್ಸೂಚನೆ ನೀಡಿದಂತೆ ಸೋಮವಾರ ಸಂಜೆ ಧಾರವಾಡ ಜಿಲ್ಲಾದ್ಯಂತ ಧಾರಾಕಾರ ಮಳೆ ಸುರಿದಿದೆ. ಬೆಳಗ್ಗೆಯಿಂದ ಮೋಡ ಮುಸುಕಿದ ವಾತಾವರಣ ಇದ್ದು ಸಂಜೆ 8 ರಿಂದ ಒಂದು ಗಂಟೆಗೂ ಹೆಚ್ಚು ಕಾಲ ಗುಡುಗು-ಸಿಡಿಲು ಸಮೇತ ಜೋರಾಗಿ ಮಳೆ ಸುರಿಯಿತು. ಬರೀ ನಗರ ಮಾತ್ರವಲ್ಲದೆ ಗ್ರಾಮೀಣ ಭಾಗದಲ್ಲೂ ಮಳೆ ಆಗಿದ್ದು ಹಿಂಗಾರಿ ಬಿತ್ತನೆಗೆ ತೀವ್ರ ಹಿನ್ನಡೆ ಆಗಿದೆ. ಧಾರವಾಡ ಗ್ರಾಮೀಣ, ಕಲಘಟಗಿ ಹಾಗೂ ಅಳ್ನಾವರ ಭಾಗದಲ್ಲೂ ಸಾಕಷ್ಟುಪ್ರಮಾಣದಲ್ಲಿ ಮಳೆ ಆಗಿದ್ದು, ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿ ಅವಾಂತರ ಸೃಷ್ಟಿಸಿದ ಮಳೆರಾಯ ರಾತ್ರಿ ವರೆಗೂ ಸುರಿದ.