ದೇಶದ ಪ್ರಗತಿಗೆ ಸಹಕಾರ ಕ್ಷೇತ್ರದ ಕೊಡುಗೆ ಅಪಾರ: ಶಾಸಕ ಲಕ್ಷ್ಮಣ ಸವದಿ

Kannadaprabha News   | Kannada Prabha
Published : Jun 08, 2025, 09:10 PM IST
Laxman savadi

ಸಾರಾಂಶ

ಸಹಕಾರ ಚಳುವಳಿಗೆ ಸುಮಾರು 120 ವರ್ಷಗಳ ಇತಿಹಾಸವಿದ್ದು, ಈ ಸಹಕಾರಿ ಕ್ಷೇತ್ರ ದೇಶದ ಆರ್ಥಿಕ ಪ್ರಗತಿಗೆ ಸಾಕಷ್ಟು ಕೊಡುಗೆ ನೀಡಿದೆ ಎಂದು ಅಥಣಿ ಶಾಸಕ ಲಕ್ಷ್ಮಣ ಸವದಿ ಹೇಳಿದರು.

ಕಾಗವಾಡ (ಜೂ.08): ಸಹಕಾರ ಚಳುವಳಿಗೆ ಸುಮಾರು 120 ವರ್ಷಗಳ ಇತಿಹಾಸವಿದ್ದು, ಈ ಸಹಕಾರಿ ಕ್ಷೇತ್ರ ದೇಶದ ಆರ್ಥಿಕ ಪ್ರಗತಿಗೆ ಸಾಕಷ್ಟು ಕೊಡುಗೆ ನೀಡಿದೆ ಎಂದು ಅಥಣಿ ಶಾಸಕ ಲಕ್ಷ್ಮಣ ಸವದಿ ಹೇಳಿದರು. ತಾಲೂಕಿನ ಉಗಾರ ಬುದ್ರುಕ್ ಗ್ರಾಮದ ವಿವಿಧೋದ್ದೇಶಗಳ ಪ್ರಾಥಮಿಕ ಕೃಷಿ ಸಹಕಾರ ಸಂಘದ ಶತಮಾನೋತ್ಸವದ ಕಾರ್ಯಕ್ರಮದಲ್ಲಿ ಕಟ್ಟಡ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ದೇಶದಲ್ಲಿ ಸುಮಾರು 40 ಸಾವಿರಕ್ಕೂ ಹೆಚ್ಚು ಸಹಕಾರ ಸಂಘಗಳು ಕೆಲಸ ನಿರ್ವಹಿಸುತ್ತಿದ್ದು, ಸುಮಾರು ₹80 ಸಾವಿರ ಕೋಟಿ ಠೇವಣಿ ಹೊಂದಿದೆ.

ಅಲ್ಲದೆ ಸಹಕಾರ ಸಂಘಗಳ ಮೂಲಕ ಸಾವಿರಾರು ಜನರಿಗೆ ಉದ್ಯೋಗಾವಕಾಶಗಳು ಸೇರಿದಂತೆ ಬಡವರಿಗೆ ಆರ್ಥಿಕ ಸಹಾಯ ನೀಡುವ ಮೂಲಕ ನಮ್ಮ ದೇಶ ಆರ್ಥಿಕ ಸಬಲತೆ ಗಳಿಸಲು ಸಾಧ್ಯವಾಗಿದೆ ಎಂದರು.ಅಥಣಿ ತಾಲೂಕಿನಲ್ಲಿ 154 ಸಹಕಾರ ಸಂಘಗಳಿದ್ದು, ನೂರಕ್ಕೆ ನೂರು ವಸೂಲಾತಿ ಇದೆ ಎಂದು ಹೇಳಲು ಹೆಮ್ಮೆ ಎನಿಸುತ್ತದೆ. ನೀವು ಬೇರೆ ತಾಲೂಕುಗಳಲ್ಲಿ ನೋಡಬಹುದು ಕೊಟ್ಟಾಂವ್ ಕೋಡಂಗಿ, ಇಸಗೊಂಡಾವ್ ವೀರಭದ್ರ ಎಂಬಂತಿದೆ. ಯಾರು ಪ್ರಾಮಾಣಿಕವಾಗಿ ಸಾಲ ಮರುಪಾವತಿ ಮಾಡುತ್ತಾರೋ, ಅಂಥವರಿಗೆ ಸಾಲ ನೀಡುವಂತೆ ಡಿಸಿಸಿ ಬ್ಯಾಂಕ್ ಅಧಿಕಾರಿಗಳಿಗೆ ಸೂಕ್ಷ್ಮವಾಗಿ ಸೂಚನೆ ನೀಡಿದರು.

ಕಾಗವಾಡ ಶಾಸಕ ರಾಜು ಕಾಗೆ ಮಾತನಾಡಿ, ಸಹಕಾರ ಸಂಘಗಳು ಬೈಕ್, ಕಾರು, ಫ್ರಿಜ್, ಬಂಗಾರ ಸೇರಿದಂತೆ ಮೋಜು ಮಸ್ತಿ ಮಾಡುವ ಚೈನಿ ವಸ್ತುಗಳನ್ನು ಖರಿದಿಸುವವರಿಗೆ ಸಾಲ ನೀಡಬಾರದು. ಬದಲಾಗಿ ಚಿಕ್ಕಪುಟ್ಟ ಗುಡಿ ಕೈಗಾರಿಕೆ ಮಾಡುವವರಿಗೆ ಸಾಲ ನೀಡಿದರೇ ವಸೂಲಾತಿಗೆ ಅನುಕೂಲವಾಗುತ್ತದೆ ಎಂದರು. ಈ ವೇಳೆ ಶಾಸಕದ್ವಯರು ಸಂಸ್ಥೆಯ ಅಧ್ಯಕ್ಷ ಶೀತಲಗೌಡ ಪಾಟೀಲರನ್ನು ಸನ್ಮಾನಿಸಿದರು. ಮಾಜಿ ಶಾಸಕ ಮೋಹನರಾವ್ ಶಹಾ ರಾಜಕೀಯ ಹಳೆಯ ನೆನಪುಗಳನ್ನು ಮೆಲಕು ಹಾಕಿದರು.

ಶ್ರೀಕ್ಷೇತ್ರ ಕನಕಗಿರಿಯ ಪ.ಪೂ.ಸ್ವಸ್ತಿಶ್ರೀ ಭುವನಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮೀಜಿ, ಪ.ಪೂ.ಸ್ವಸ್ತಿ ಶ್ರೀಧವಲಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮೀಜಿ, ಪ.ಪೂ.ಸ್ವಸ್ತಿಶ್ರೀ ಭಾನುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮೀಜಿ, ಪ.ಪೂ.ಸ್ವಸ್ತಿಶ್ರೀ ಜಗದ್ಗುರುಶ್ರೀ ದೇವೇಂದ್ರ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮೀಜಿ, ಪ.ಪೂ.ಸ್ವಸ್ತಿಶ್ರೀ ಲಕ್ಷ್ಮೀಸೇನ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮೀಜಿ, ಪ.ಫೂ.ಯತೀಸ್ವರಾನಂದ ಮಹಾಸ್ವಾಮಿಗಳು, ಪ.ಪೂ.ಅಮರೇಶ್ವರ ಮಹಾಸ್ವಾಮಿಗಳು, ಹ.ಬ.ಪ.ಆನಂದರಾವ್ ಅಪ್ಪಾಸಾಹೇಬ ಜಾಧವ ಮಹಾರಾಜರು ಪಾವನ ಸಾನ್ನಿಧ್ಯ ವಹಿಸಿದ್ದರು.

ಅತಿಥಿಗಳಾಗಿ ಡಿಸಿಸಿ ಬ್ಯಾಂಕಿನ ಉಪ ಪ್ರಧಾನ ವ್ಯವಸ್ಥಾಪಕ ಶಿವಪುತ್ರ ಬಾಗೇವಾಡಿ, ಡಿಸಿಸಿ ಬ್ಯಾಂಕಿನ ತಾಲೂಕು ನಿಯಂತ್ರಣಾಧಿಕಾರಿ ಶಂಕರ ನಂದೇಶ್ವರ, ಬ್ಯಾಂಕ್ ನಿರೀಕ್ಷಕ ಶಿವಾನಂದ ಬುರುಡ, ನೂತನ ಪಟ್ಟಡದ ಇಂಜನೀಯರ್‌ ಆದಿನಾಥ ವಸವಾಡೆ ಮುಖಂಡರಾದ ಕೆ.ಎ.ವನಜೋಳ, ರಾಜು ನಾಡಗೌಡ, ಅಭಯಕುಮಾರ ಅಕಿವಾಟೆ, ರವೀಂದ್ರ ಪೂಜಾರಿ, ಮುಕುಂದ ಪೂಜಾರಿ, ಅಮರ ದುರ್ಗನ್ನವರ, ಸಿದ್ದಪ್ಪ ಕನಾಳೆ, ಸುಭಾಷ ಪಾಟೀಲ(ಕಿತ್ತೂರ) ಸೇರಿದಂತೆ ಅನೇಕರು ಉಪಸ್ಥಿತರಿರುವರು.

ಕಳೆದ 35 ವರ್ಷಗಳಿಂದ ನಿರಂತರವಾಗಿ ಅಥಣಿ ತಾಲೂಕಿನಿಂದ ನನ್ನನ್ನು ಸಹಕಾರಿ ಧುರೀಣರು ಡಿಸಿಸಿ ಬ್ಯಾಂಕಿಗೆ ಅವಿರೋಧವಾಗಿ ಆಯ್ಕೆ ಮಾಡಿ ಕಳಿಸುತ್ತ ಬಂದಿದ್ದಾರೆ. ನಾನು ಸಹಕಾರ ಸಚಿವನಾಗಿದ್ದ ಸಂದರ್ಭದಲ್ಲಿ ಅಥಣಿ ತಾಲೂಕಿಗೆ ₹585 ಕೋಟಿ ಬಡ್ಡಿರಹಿತ ಸಾಲ ಕೊಡಲಿಕ್ಕೆ ಅನುಕೂಲವಾಯಿತು. ಸುಮಾರು 72 ಸಾವಿರ ಸದಸ್ಯರಿಗೆ ಲಾಭವಾಗಿದೆ. ರಾಜ್ಯದಲ್ಲಿ ಅಥಣಿ ತಾಲೂಕಿಗೆ ಅತಿ ಹೆಚ್ಚು ಸಾಲಮನ್ನಾ ಆಗಿದೆ.
-ಲಕ್ಷ್ಮಣ ಸವದಿ, ಶಾಸಕರು.

PREV
Read more Articles on
click me!

Recommended Stories

ನೊಂದವರಿಗೆ ನ್ಯಾಯ ಕೊಡಿಸುವಲ್ಲಿ ರಾಜ್ಯ ಮೊದಲ ಸ್ಥಾನ: ಗೃಹಸಚಿವ ಪರಮೇಶ್ವರ್
ಬೆಂಗಳೂರು: ನಗರದಲ್ಲಿ 1000ಕ್ಕೂ ಅಧಿಕ ಅಪಾಯಕಾರಿ ಮರ ಪತ್ತೆ!