ಸನಾತನ ಕಾಲದಿಂದಲೂ ಸ್ವರಾಜ್‌ ಪರಿಕಲ್ಪನೆ ಇದೆ; ಪ್ರಲ್ಹಾದ್ ಜೋಶಿ

By Kannadaprabha NewsFirst Published Jan 3, 2023, 2:39 PM IST
Highlights

ಸನಾತನ ಕಾಲದಿಂದಲೂ ಸ್ವರಾಜ್‌ ಪರಿಕಲ್ಪನೆ ಇದೆ. ಇದನ್ನು ನಮ್ಮ ರಾಷ್ಟ್ರದ ಒಳಿತಿಗಾಗಿ ಹಾಗೂ ಅಭಿವೃದ್ಧಿಗಾಗಿ ಸರಿಯಾಗಿ ಅಳವಡಿಸಿಕೊಳ್ಳುವ ಮೂಲಕ ಮುಂದೆ ಸಾಗೋಣ ಎಂದು ಕೇಂದ್ರ ಸಂಸದೀಯ ವ್ಯವಹಾರ, ಕಲ್ಲಿದ್ದಲು ಮತು ಗಣಿ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಗದಗ (ಜ.3) : ಸನಾತನ ಕಾಲದಿಂದಲೂ ಸ್ವರಾಜ್‌ ಪರಿಕಲ್ಪನೆ ಇದೆ. ಇದನ್ನು ನಮ್ಮ ರಾಷ್ಟ್ರದ ಒಳಿತಿಗಾಗಿ ಹಾಗೂ ಅಭಿವೃದ್ಧಿಗಾಗಿ ಸರಿಯಾಗಿ ಅಳವಡಿಸಿಕೊಳ್ಳುವ ಮೂಲಕ ಮುಂದೆ ಸಾಗೋಣ ಎಂದು ಕೇಂದ್ರ ಸಂಸದೀಯ ವ್ಯವಹಾರ, ಕಲ್ಲಿದ್ದಲು ಮತು ಗಣಿ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ನಗರದ ಹೊರವಲಯದಲ್ಲಿರುವ ಗ್ರಾಮೀಣಾಭಿವೃದ್ಧಿ ಪಂಚಾಯತ್‌ ರಾಜ್‌(Rural Development Panchayat Raj) ವಿಶ್ವ ವಿದ್ಯಾಲಯದ ಕೌಶಲ್ಯ ವಿಕಾಸ ಭವನ()ದಲ್ಲಿ(Koushalya vikas bhavan)ಸೋಮವಾರ ಜರುಗಿದ ಸ್ವರಾಜ್‌ ಅಂತಾರಾಷ್ಟ್ರೀಯ ಸಮ್ಮೇಳನ(Swaraj International Conference)ದ ಲಾಂಛನ ಕೈಪಿಡಿ ಹಾಗೂ ವೆಬ್‌ಸೈಟ್‌ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಬ್ರಿಟಿಷರು ಭಾರತ ದೇಶವನ್ನು 200 ವರ್ಷ ಆಳಿದರು. ತದನಂತರದ ಭಾರತ ಆರ್ಥಿಕವಾಗಿ ಮುಂದೆ ಸಾಗುತ್ತಾ ಆರ್ಥಿಕಾಭಿವೃದ್ಧಿಯಲ್ಲಿ ದೇಶವು ಇಂದು ಮೂರನೇ ಸ್ಥಾನದಲ್ಲಿದೆ. ಇದು ಹೆಮ್ಮೆ ಪಡುವ ವಿಷಯವಾಗಿದೆ. ದೇಶಕ್ಕೆ ಒಳಿತಾಗುವ ಸ್ವರಾಜ್‌ ಪರಿಕಲ್ಪನೆ ಹಾಗೂ ಧ್ಯೇಯೋದ್ದೇಶಗಳನ್ನು ಶಿಸ್ತು ಬದ್ಧವಾಗಿ ಅಳವಡಿಸಿಕೊಂಡು ಉತ್ತಮ ರಾಷ್ಟ್ರ ನಿರ್ಮಾಣದಲ್ಲಿ ಕೈ ಜೋಡಿಸೋಣ ಎಂದರು.

ಸ್ವರಾಜ್‌ ಪರಿಕಲ್ಪನೆಯಲ್ಲಿ ಸ್ಥಳೀಯವಾಗಿ ಸ್ವತಂತ್ರವಾಗಿ ನಿರ್ಧಾರ ತೆಗೆದುಕೊಳ್ಳುವ ಮೂಲಕ ಅಭಿವೃದ್ಧಿಯೆಡೆಗೆ ಮುನ್ನುಗ್ಗಬೇಕು. ಇದರಲ್ಲಿ ಇತರರ ಹಸ್ತಕ್ಷೇಪವಾಗಬಾರದು. ಒಟ್ಟಾರೆ ಗ್ರಾಮದ, ರಾಜ್ಯದ ಹಾಗೂ ದೇಶದ ಸ್ವರಾಜ್‌ ಪರಿಕಲ್ಪನೆ ಉತ್ತಮವಾಗಿದೆ ಎಂದರು.

ಕಳಸಾ ಬಂಡೂರಿ ಯೋಜನೆ ಡಿಪಿಆರ್ ಆಗೋದೆ ಇಲ್ಲ ಎನ್ನುತ್ತಿದ್ದವರಿಗೆ ಬಿಜೆಪಿ ಸರ್ಕಾರ ಉತ್ತರ ನೀಡಿದೆ: ಪ್ರಲ್ಹಾದ್ ಜೋಶಿ

ವಿಶ್ವವಿದ್ಯಾಲಯದ ಕುಲಪತಿ ಪ್ರೊ. ವಿಷ್ಣುಕಾಂತ ಚಟಪಲ್ಲಿ ಮಾತನಾಡಿ, ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ವಿಶ್ವ ವಿದ್ಯಾಲಯವು 2016ರಲ್ಲಿ ಆರಂಭಗೊಂಡಿತು. ಕಡಿಮೆ ಅವಧಿಯಲ್ಲಿ ಉತ್ತಮ ಮೂಲಸೌಕರ್ಯ ಹಾಗೂ ಕೌಶಲ್ಯ ಅಭಿವೃದ್ಧಿಗೆ ಮುನ್ನಡೆಯಾಗಿದೆ. ಗ್ರಾಮೀಣ ಬೇರು ಜಾಗತಿಕ ಮೇರು ಎಂಬ ಧ್ಯೇಯೋದ್ದೇಶದೊಂದಿಗೆ ಮುಂದಡಿ ಇಟ್ಟವಿಶ್ವವಿದ್ಯಾಲಯವು ಸ್ವರಾಜ್‌ ಪರಿಕಲ್ಪನೆಯ ಮೂಲಕ ಅಂತಾರಾಷ್ಟ್ರೀಯ ಸಮ್ಮೇಳನ ಆಯೋಜಿಸುವಷ್ಟರ ಮಟ್ಟಿಗೆ ಬಂದು ತಲುಪಿರುವುದು ಹೆಮ್ಮೆ ಎನಿಸುತ್ತದೆ. ಈ ಕಾರ್ಯಕ್ಕೆ ವಿಶ್ವವಿದ್ಯಾಲಯದ ಸಹೋದ್ಯೋಗಿಗಳೆಲ್ಲರ ಪರಿಶ್ರಮ ಅಡಗಿದೆ ಎಂದರು.

ಸ್ವರಾಜ್‌ ಒಂದು ಆಂದೋಲನ ಈ ಆಂದೋಲನದ ಮೂಲಕ ಸುಭದ್ರ ದೇಶ ಕಟ್ಟುವ, ಮುನ್ನಡೆಸುವ ಪರಿಕಲ್ಪನೆ ಇದ್ದು ಅದನ್ನು ಸರಿಯಾಗಿ ಯೋಜಿಸಿ ಕಾರ್ಯರೂಪಕ್ಕೆ ತರುವ ಮೂಲಕ ಮುನ್ನಡೆಯೋಣ ಎಂದರು.

ಪ್ರಜ್ಞಾ ಪ್ರವಾಹದ ಅಖಿಲ ಭಾರತೀಯ ಸಂಯೋಜಕ ಜೆ. ನಂದಕುಮಾರ್‌ ಪ್ರಾಸ್ತಾವಿಕವಾಗಿ ಮಾತನಾಡಿ, ವೈದಿಕ ಕಾಲದಿಂದಲೂ ಈವರೆಗೆ ಸ್ವರಾಜ್‌ ಪರಿಕಲ್ಪನೆ ಜಾರಿಯಲ್ಲಿದೆ. ಈ ವಿಶ್ವ ವಿದ್ಯಾಲಯದಲ್ಲಿ ಮಾರ್ಚ 1ರಿಂದ ಸ್ವರಾಜ್‌ ಅಂತಾರಾಷ್ಟ್ರೀಯ ಸಮ್ಮೇಳನ ಆರಂಭಗೊಳ್ಳಲಿದ್ದು, ಇದರಲ್ಲಿ ಸ್ವರಾಜ್‌ ಪರಿಕಲ್ಪನೆಯ ಯೋಜನೆ, ಅನುಷ್ಠಾನ ಕುರಿತಂತೆ ಚರ್ಚಿಸಲು ಹಾಗೂ ಭಾಷಣಕಾರರಾಗಿ ಅಗಾಧ ಜ್ಞಾನ ಹೊಂದಿದ ಅನುಭವಿಗಳ ಸಂಗಮವಾಗಲಿದೆ. ಈ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಅತ್ಯಂತ ಅಚ್ಚುಕಟ್ಟಾಗಿ ಶಿಸ್ತು ಬದ್ಧವಾಗಿ ಹಾಗೂ ಪರಿಣಾಮಕಾರಿಯಾಗಿ ಸಂಘಟಿಸಿ, ಯಶಸ್ವಿಗೊಳಿಸಲು ತಮ್ಮೆಲ್ಲರ ಸಹಕಾರ ಅತ್ಯಗತ್ಯ ಎಂದರು.

ಈ ವೇಳೆ ವಿಪ ಸದಸ್ಯ ಎಸ್‌.ವಿ. ಸಂಕನೂರ, ಧಾರಾವಾಡದ ಐಐಟಿ ಸಂಸ್ಥೆಯ ನಿರ್ದೇಶಕ ಡಾ. ವೆಂಕಪ್ಪಯ್ಯ ದೇಸಾಯಿ, ಶಿಕ್ಷಣ ತಜ್ಞ ಬಿ.ಎಫ್‌. ದಂಡಿನ, ಪ್ರಮುಖರಾದ ಅರವಿಂದರಾವ್‌ ದೇಶಪಾಂಡೆ, ಸಂಜಯ ನಾಡಗೌಡ್ರ, ಜಗದೀಶ ಹಿರೇಮಠ, ಬಸವರಾಜ ಪಾಟೀಲ, ವಿಶ್ವ ವಿದ್ಯಾಲಯದ ರೆಜಿಸ್ಟ್ರರ್‌ ಪ್ರೊ. ಬಸವರಾಜ ಲಕ್ಕಣ್ಣವರ ಸೇರಿದಂತೆ ಇತರರು ಹಾಜರಿದ್ದರು.

 

 

ಸಿದ್ದೇಶ್ವರ ಶ್ರೀಗಳ ಆರೋಗ್ಯ ವಿಚಾರಿಸಿದ ಸಿಎಂ ಬೊಮ್ಮಾಯಿ, ಜೋಶಿ: ಕರೆ ಮಾಡಿ ಮಾಹಿತಿ ಪಡೆದ ಪ್ರಧಾನಿ ಮೋದಿ

ಕಾರ್ಯಕ್ರಮಕ್ಕೂ ಮುನ್ನ ಅತಿಥಿಗಳೆಲ್ಲರೂ ಸಬರಮತಿ ಆಶ್ರಮದಲ್ಲಿರುವ ಗಾಂಧಿ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿ ನಂತರ ವೇದಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ವಿಶ್ವವಿದ್ಯಾಲಯದ ಉಪನ್ಯಾಸಕ ಚಂದ್ರಪ್ಪ ಬಾರಂಗಿ ಕಾರ್ಯಕ್ರಮ ನಿರ್ವಹಿಸಿದರು. ಪ್ರಜ್ಞಾ ಪ್ರವಾಹದ ಕರ್ನಾಟಕ ಉತ್ತರ ಪ್ರಾಂತ್ಯದ ಸಂಯೋಜಕ ಡಾ. ನಿರಂಜನ ಪೂಜಾರ ಸ್ವಾಗತಿಸಿದರು. ರವಿ ನರೇಗಲ್‌ ಪ್ರಾರ್ಥಿಸಿದರು. ವಿವಿಯ ಆಂತರಿಕ ಗುಣಮಟ್ಟಭರವಸೆ ಕೋಶದ ಸಂಯೋಜಕ ಡಾ. ಸಂತೋಷಕುಮಾರ್‌ ಪಿ.ಕೆ. ವಂದಿಸಿದರು.

click me!