ಜನರ ಬದುಕು ಮೂರಾಬಟ್ಟೆ ಮಾಡಿದ ಕೇಂದ್ರ ಬಿಜೆಪಿ ಸರ್ಕಾರ : ಎಸ್‌ಯುಸಿಐ ಕಮ್ಯುನಿಸ್ಟ್‌ ಪಕ್ಷದ ಅಭ್ಯರ್ಥಿ

By Kannadaprabha NewsFirst Published Mar 27, 2024, 10:03 AM IST
Highlights

ಕಳೆದ ಹತ್ತು ವರ್ಷಗಳಿಂದ ದೇಶವನ್ನು ಆಳುತ್ತಿರುವ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಜನರ ಬದುಕನ್ನು ಮೂರಾಬಟ್ಟೆ ಮಾಡಿದೆ. ರೈತ, ಕಾರ್ಮಿಕರ, ದುಡಿಯುವ ಜನರ, ಸಮಸ್ಯೆಗಳ ಪರಿಹಾರಕ್ಕೆ ಹೋರಾಟ ಕಟ್ಟುತ್ತಿರುವ ಎಸ್‌ಯುಸಿಐ (ಕಮ್ಯುನಿಸ್ಟ್) ಪಕ್ಷ ಲೋಕಸಭಾ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸುತ್ತಿದ್ದು, ರಾಜ್ಯದಲ್ಲಿ ಈ ಬಾರಿ ಒಟ್ಟು೧೯ ಕ್ಷೇತ್ರಗಳಲ್ಲಿ ಸ್ಪರ್ಧೆ ನಡೆಸುತ್ತಿದೆ ಎಂದು ತುಮಕೂರು ಲೋಕಸಭಾ ಕ್ಷೇತ್ರದ ಎಸ್‌ಯುಸಿಐ ಕಮ್ಯುನಿಸ್ಟ್‌ ಪಕ್ಷದ ಅಭ್ಯರ್ಥಿ ಎಸ್.ಎನ್.ಸ್ವಾಮಿ ತಿಳಿಸಿದರು.

 ತಿಪಟೂರು :  ಕಳೆದ ಹತ್ತು ವರ್ಷಗಳಿಂದ ದೇಶವನ್ನು ಆಳುತ್ತಿರುವ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಜನರ ಬದುಕನ್ನು ಮೂರಾಬಟ್ಟೆ ಮಾಡಿದೆ. ರೈತ, ಕಾರ್ಮಿಕರ, ದುಡಿಯುವ ಜನರ, ಸಮಸ್ಯೆಗಳ ಪರಿಹಾರಕ್ಕೆ ಹೋರಾಟ ಕಟ್ಟುತ್ತಿರುವ ಎಸ್‌ಯುಸಿಐ (ಕಮ್ಯುನಿಸ್ಟ್) ಪಕ್ಷ ಲೋಕಸಭಾ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸುತ್ತಿದ್ದು, ರಾಜ್ಯದಲ್ಲಿ ಈ ಬಾರಿ ಒಟ್ಟು೧೯ ಕ್ಷೇತ್ರಗಳಲ್ಲಿ ಸ್ಪರ್ಧೆ ನಡೆಸುತ್ತಿದೆ ಎಂದು ತುಮಕೂರು ಲೋಕಸಭಾ ಕ್ಷೇತ್ರದ ಎಸ್‌ಯುಸಿಐ ಕಮ್ಯುನಿಸ್ಟ್‌ ಪಕ್ಷದ ಅಭ್ಯರ್ಥಿ ಎಸ್.ಎನ್.ಸ್ವಾಮಿ ತಿಳಿಸಿದರು.

ನಗರದ ಪಕ್ಷದ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಬಿಜೆಪಿ ದನಿ ಎತ್ತಿದ ಬೆಲೆ ಏರಿಕೆ, ನಿರುದ್ಯೋಗ, ಭ್ರಷ್ಟಾಚಾರದಂತಹ ಸಮಸ್ಯೆಗಳ ಕುರಿತು ಈಗ ಮೌನವಾಗಿದೆ. ವರ್ಷಕ್ಕೆ ಕೋಟಿ ಉದ್ಯೋಗದ ಮಾತಿರಲಿ, ಭಾರತದ ಯುವಕರು ನಿರುದ್ಯೋಗದ ಕಷ್ಟ ತಡೆಯಲಾಗದೆ, ಯುದ್ಧಪೀಡಿತ ಇಸ್ರೇಲ್, ರಷ್ಯಾಗಳಿಗೆ ಕೆಲಸ ಹುಡುಕಿಕೊಂಡು ವಲಸೆ ಹೋಗುತ್ತಿದ್ದಾರೆ. ಅಂಬಾನಿ, ಅದಾನಿಗಳು ಜಗತ್ತಿನ ಅತಿ ಶ್ರೀಮಂತ ಬಂಡವಾಳಶಾಹಿಗಳಾಗಿದ್ದಾರೆ. ಜನರ ಮತವನ್ನು ಕೋಮುವಾದದ ಮೂಲಕ ಧ್ರುವೀಕರಣ ಮಾಡಲು ಮಂದಿರ, ಮಸೀದಿ, ಬಾವುಟ, ಸಿಎಎ ಮುಂತಾದ ಬಗೆಬಗೆಯ ದಾರಿಗಳನ್ನು ಬಿಜೆಪಿ ಹುಡುಕುತ್ತಿದೆ ಎಂದರು.

ಚುನಾವಣಾ ಆಯೋಗವನ್ನು ತನ್ನ ನಿಯಂತ್ರಣದಲ್ಲಿ ಇಟ್ಟುಕೊಳ್ಳಲು, ಚುನಾವಣಾ ಆಯುಕ್ತರ ನೇಮಕಾತಿ ಕಾಯಿದೆಗೆ ತಿದ್ದುಪಡಿ ತಂದಿದೆ. ಇಂತಹ ಕೋಮುವಾದಿ, ಫ್ಯಾಸಿವಾದಿ, ಬಂಡವಾಳಶಾಹಿ ನೀತಿಗಳ ವಿರುದ್ಧ ಈ ಚುನಾವಣೆಯಲ್ಲಿ ಜನಪರ ಧ್ವನಿ ಮೊಳಗಬೇಕು. ಇಂತಹ ಪರಿಸ್ಥಿತಿಯಲ್ಲಿ ಎಸ್‌ಯುಸಿಐ ಪಕ್ಷವು ಶೋಷಿತ ಜನರ ನೈಜ ಹೋರಾಟದ ಪರ್ಯಾಯವಾಗಿ ತನ್ನ ಶಕ್ತಿಮೀರಿ ಈ ಚುನಾವಣೆಯಲ್ಲಿ ಸ್ಪರ್ಧಿಸಲು ಮುಂದಾಗಿದೆ. ಆದ್ದರಿಂದ ಕಮ್ಯುನಿಷ್ಟ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿ ರುವ ನನಗೆ ಹೆಚ್ಚಿನ ಮತಗಳನ್ನು ನೀಡಿ ಗೆಲ್ಲಿಸುವ ಮೂಲಕ ದೇಶದ ಬದಲಾವಣೆಗೆ ನಾಂದಿ ಹಾಡಬೇಕಿದೆ ಎಂದರು.

ಎಸ್‌ಯುಸಿಐ ಕಮ್ಯುನಿಷ್ಟ್ ಪಕ್ಷದ ಮುಖಂಡ ಭೈರನಾಯಕನಹಳ್ಳಿ ಲೋಕೇಶ್ ಮಾತನಾಡಿ, ರಾಜ್ಯ ವಿವಿಧ ಜಿಲ್ಲೆಗಳಲ್ಲಿ ನಮ್ಮ ಪಕ್ಷ ಮತ್ತು ಪಕ್ಷದ ಮುಂದಾಳುಗಳು ಸಂಘಟಿಸುತ್ತಿರುವ ಹೋರಾಟಗಳ ಮುಂದುವರಿಕೆಯಾಗಿ ಈ ಚುನಾವಣೆ ಪರಿಗಣಿಸುತ್ತಿದ್ದೇವೆ. ತುಮಕೂರಿನಲ್ಲಿ ಪಕ್ಷವು ಕಳೆದ ಇಪ್ಪತ್ತು ವರ್ಷಗಳಿಂದ ಹಲವು ಹೋರಾಟಗಳಿಗೆ ನಾಯಕತ್ವ ನೀಡಿದೆ. ಪಕ್ಷದ ಮುಂದಳ ಸಂಘಟನೆಗಳ ಮೂಲಕ ಹಲವು ಹೋರಾಟಗಳನ್ನು ಕಟ್ಟಿದೆ. ತುಮಕೂರು ಲೋಕಸಭಾ ಕ್ಷೇತ್ರದಿಂದ ಪಕ್ಷದ ಅಭ್ಯರ್ಥಿಯಾಗಿ ಎಸ್.ಎನ್.ಸ್ವಾಮಿ ಸ್ಪರ್ಧಿಸುತ್ತಿದ್ದು, ಇವರು ನಮ್ಮ ಪಕ್ಷದ ಸಂಸ್ಥಾಪಕರಾದ ಕಾಮ್ರೆಡ್ ಶಿವದಾಸ್ ಘೋಷ್‌ರವರ ವಿಚಾರಕ್ಕೆ ಆಕರ್ಷಿತರಾಗಿ ತಮ್ಮ ವಿದ್ಯಾರ್ಥಿ ದೆಸೆಯಿಂದಲೂ ಕಳೆದ ನಲವತ್ತು ವರ್ಷಗಳಿಂದಲೂ ಹೋರಾಟದಲ್ಲಿ ತೊಡಗಿಸಿಕೊಂಡಿದ್ದಾರೆ.

ಬಗರ್ ಹುಕುಂ, ನರೇಗಾ, ರಾಷ್ಟ್ರೀಯ ಹೆದ್ದಾರಿ ಹೋರಾಟ, ಎತ್ತಿನಹೊಳೆ ಹೋರಾಟ ಸೇರಿದಂತೆ ಹಲವು ಯಶಸ್ವಿ ಚಳವಳಿಗೆ ನಾಯಕತ್ವ ನೀಡಿದ್ದಾರೆ. ರೈತ-ಕಾರ್ಮಿಕರು, ದುಡಿಯುವ ಜನರ ವಿಮುಕ್ತಿಯ ದಾರಿಯಾದ ಶೋಷಣಾ ರಹಿತ ಸಮಸಮಾಜದ ಸ್ಥಾಪನೆಯ ಕ್ರಾಂತಿಕಾರಿ ಹೋರಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಜನರ ಸಮಸ್ಯೆಗಳ ಧ್ವನಿಯನ್ನು ಸಂಸತ್ತಿನಲ್ಲಿ ಎತ್ತಿಹಿಡಿಯುವ ಸೂಕ್ತ ಅಭ್ಯರ್ಥಿಯಾಗಿರುವ ಸ್ವಾಮಿಯವರನ್ನು ಪ್ರಜ್ಞಾವಂತ ದುಡಿಯುವ ಜನತೆ ಆಯ್ಕೆ ಮಾಡಬೇಕು ಎಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ರಾಜ್ಯ ಸೆಕ್ರಟೇರಿಯಟ್ ಸದಸ್ಯರಾದ ಎಂ.ಶಶಿಧರ್, ತಾಲೂಕು ಸಂಘಟಕರಾದ ಪ್ರಸನ್ನಕುಮಾರ್ ಹಾಲೇನಹಳ್ಳಿ, ತುಮಕೂರು ನಗರ ಸಮಿತಿ ಸದಸ್ಯೆ ಅಶ್ವಿನಿ, ಕಾರ್ಯಕರ್ತರಾದ ಲಕ್ಕಪ್ಪ, ನವೀನ್, ಅಕ್ಷರ, ಪಲ್ಲವಿ ಮತ್ತಿತರರಿದ್ದರು.

click me!