ಪಟ್ಟಣದ ಆಮ್ ಆದ್ಮಿ ಪಕ್ಷದ ಕಚೇರಿಯಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ಸುಮಾರು 200 ಜನ ಕಾರ್ಯಕರ್ತರು ಸೇರಿದ್ದು, ಮೊದಲ ಬಾರಿಗೆ ಆಮ್ ಆದ್ಮಿ ಪಾರ್ಟಿಯು ಕೊರಟಗೆರೆಯಲ್ಲಿ ಲಗ್ಗೆಯಿಟ್ಟು ಕ್ಷೇತ್ರದಲ್ಲಿ ಸಂಚಲನ ಮೂಡಿಸುತ್ತಿದೆ.
ಕೊರಟಗೆರೆ : ಪಟ್ಟಣದ ಆಮ್ ಆದ್ಮಿ ಪಕ್ಷದ ಕಚೇರಿಯಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ಸುಮಾರು 200 ಜನ ಕಾರ್ಯಕರ್ತರು ಸೇರಿದ್ದು, ಮೊದಲ ಬಾರಿಗೆ ಆಮ್ ಆದ್ಮಿ ಪಾರ್ಟಿಯು ಕೊರಟಗೆರೆಯಲ್ಲಿ ಲಗ್ಗೆಯಿಟ್ಟು ಕ್ಷೇತ್ರದಲ್ಲಿ ಸಂಚಲನ ಮೂಡಿಸುತ್ತಿದೆ.
ತುಮಕೂರು ಜಿಲ್ಲಾಧ್ಯಕ್ಷ ಪ್ರೇಮ್ ಕುಮಾರ್ ಮಾತನಾಡಿ, ಕೊರಟಗೆರೆ ದಲ್ಲಿ ನಮ್ಮ ಪಕ್ಷದ ಮೊದಲನೇ ಕಾರ್ಯಕ್ರಮವಿದು. ಈ ಕಾರ್ಯಕ್ರಮ ಯಶಸ್ವಿಗೊಳ್ಳಲು ಕಾರಣ ನಿವೃತ್ತ ತಹಶೀಲ್ದಾರ್ ಹನುಮಂತರಾಯಪ್ಪನವರು. ಇವರು ಇದೇ ತಾಲೂಕಿನ ಚನ್ನರಾಯನದುರ್ಗ ಹೋಬಳಿಯವರಾಗಿದ್ದು, ರಾಜ್ಯದ ನಾನಾ ಕಡೆಯ ತಾಲೂಕುಗಳಲ್ಲಿ ಜನಸಾಮಾನ್ಯರ ಜೊತೆ ಬೆರೆತು ಬಡವರಿಗೆ,ದಲಿತರಿಗೆ ದೊರಕಿಸಿ ಕೊಡುವಂತಹ ಕೆಲಸಗಳನ್ನು ಮಾಡಿದ್ದಾರೆ ಎಂದು ತಿಳಿಸಿದರು.
ಕ್ಷೇತ್ರದಲ್ಲಿ ಇವರು ನಮ್ಮ ಪಕ್ಷ ಸಂಘಟನೆ ಮಾಡುತ್ತಿರುವುದು ನಮಗೆ ತೃಪ್ತಿಯನ್ನು ತಂದಿದೆ. ಆಮ್ ಆದ್ಮಿ ಪಕ್ಷವು ಹಲವು ರೀತಿಯ ಸಿದ್ಧಾಂತಗಳನ್ನು ಒಳಗೊಂಡಿದ್ದು, ಅವುಗಳೆಂದರೆ ನಾವು ಭ್ರಷ್ಟಾಚಾರ ಮುಕ್ತ ರಾಜ್ಯ ಮಾಡುವುದು, ಉತ್ತಮ ಶಾಲೆಗಳನ್ನು ನೀಡಿ ಒಳ್ಳೆಯ ವಿದ್ಯಾಭ್ಯಾಸವನ್ನು ಎಲ್ಲ ಮಕ್ಕಳಿಗೂ ನೀಡುವುದು ಮತ್ತು ಸುಸಜ್ಜಿತ ಆಸ್ಪತ್ರೆಗಳ ನಿರ್ಮಿಸಿ ಅತ್ಯುತ್ತಮ ಚಿಕಿತ್ಸೆ ನೀಡುವುದೇ ನಮ್ಮ ಪಕ್ಷದ ಧ್ಯೇಯ. ಆದ್ದರಿಂದ ಎಲ್ಲ ಮತದಾರರು ನಮ್ಮ ಪಕ್ಷವನ್ನು ಗುರುತಿಸಿ ಆಮ್ ಆದ್ಮಿ ಪಕ್ಷಕ್ಕೆ ಮತ ನೀಡಬೇಕೆಂದು ಎಂದು ವಿನಂತಿಸಿದರು.
ನಂತರ ಸಂಭಾವ್ಯ ಅಭ್ಯರ್ಥಿ ನಿವೃತ್ತ ತಹಸೀಲ್ದಾರ್ ಹನುಮಂತರಾಯಪ್ಪ ಮಾತನಾಡಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಕೇಜ್ರಿವಾಲ್ ದೆಹಲಿ ರಾಜ್ಯದಲ್ಲಿ ಬಡ ಮಕ್ಕಳ ವಿದ್ಯಾಭ್ಯಾಸ ಮತ್ತು ಉತ್ತಮ ಆರೋಗ್ಯಕ್ಕಾಗಿ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದಾರೆ. ಒಳ್ಳೆಯ ಶಾಲೆಗೆ ಮಕ್ಕಳನ್ನು ಸೇರಿಸಿ ಉತ್ತಮ ಹುದ್ದೆಗಳಲ್ಲಿ ತಮ್ಮ ಮಕ್ಕಳನ್ನು ನೋಡಬೇಕೆಂಬುದು ಎಲ್ಲ ಪೋಷಕರ ಮಹಾದಾಸೆಯಾಗಿರುತ್ತದೆ. ಆದರೆ ಬಡತನದಿಂದ ಇವೆಲ್ಲ ನಶಿಸಿ ಹೋಗುತ್ತಿದೆ ಎಂದರು.
ನಮ್ಮ ರಾಜ್ಯದಲ್ಲಿ ಈಗಲೂ ಸಹ ಕೆಲವು ಸರ್ಕಾರಿ ಶಾಲೆಗಳಲ್ಲಿ ತಗಡು ಶೀಟಿನ ಕೆಳಗೆ ಕೂತು ಪಾಠಗಳನ್ನು ಮಕ್ಕಳು ಕೇಳುತ್ತಿದ್ದಾರೆ. ಅಭಿವೃದ್ಧಿ ಮತ್ತು ಸ್ವಚ್ಛತೆ ಶಾಲೆಗಳಲ್ಲಿ ಮರೀಚಿಕೆಯಾಗಿವೆ. ಪಂಜಾಬ್ ರಾಜ್ಯದಲ್ಲಿ ಸರ್ಕಾರಿ ಶಾಲೆಗಳ ಶಿಕ್ಷಕರ ನೇಮಕಾತಿ ವಿಚಾರದಲ್ಲಿ ಮೊದಲಿಗೆ ವಿಶ್ವ ದರ್ಜೆಯ ತರಬೇತಿ ನೀಡಿ ನಂತರ ಶಿಕ್ಷಕರ ಹುದ್ದೆಗೆ ಆಯ್ಕೆ ಮಾಡುತ್ತಾರೆ.
ದೆಹಲಿ ರಾಜ್ಯದಲ್ಲಿ ನಮ್ಮ ಪಕ್ಷ ಆಡಳಿತವಿರುವುದರಿಂದ ರಸ್ತೆಯಲ್ಲಿ ಯಾವುದಾದರೂ ಅಪಘಾತ ಸಂಭವಿಸಿದರೆ ಕೇವಲ 20 ನಿಮಿಷದಲ್ಲಿ ಅಂಬುಲೆನ್ಸ್ ಸ್ಥಳಕ್ಕೆ ಭೇಟಿ ನೀಡಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುತ್ತಾರೆ. ದೆಹಲಿ ಹಾಗೂ ಪಂಜಾಬ್ ತರ ನಮ್ಮ ರಾಜ್ಯವು ಅಭಿವೃದ್ಧಿಗೊಳ್ಳಬೇಕೆಂದರೆ ಜನಸಾಮಾನ್ಯರ ಬಗ್ಗೆ ಕಾಳಜಿ ತೋರುವ ಹಾಗೂ ಬಡವರಿಗೆ ಸ್ಪಂದಿಸುವ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು. ಆದ್ದರಿಂದ ಆಮ್ ಆದ್ಮಿ ಪಕ್ಷವು ಬಡವರಿಗಾಗಿ ಬಡವರಿಗೋಸ್ಕರ ಇರುವ ಪಕ್ಷ. ನಮ್ಮ ತಾಲೂಕಿನಲ್ಲಿ ಬಡ ಜನರಿಗೆ ಸೇವೆ ಮಾಡಲು ನೀವೆಲ್ಲ ಒಂದು ಅವಕಾಶ ಮಾಡಿಕೊಡಬೇಕೆಂದು ತಿಳಿಸಿದರು.
ಜಿಲ್ಲಾ ಅಧ್ಯಕ್ಷೆ ರುಕ್ಸನಾ ಬಾನು ಮಾತನಾಡಿ, ಹೆಣ್ಣು ಮಕ್ಕಳಿಗೆ ನಮ್ಮ ಪಕ್ಷ ಹೆಚ್ಚು ಒತ್ತು ನೀಡುತ್ತಿದೆ. ದೆಹಲಿ ಹಾಗೂ ಪಂಜಾಬ್ ರಾಜ್ಯದಲ್ಲಿ ಮಹಿಳೆಯರಿಗೆ ಉಚಿತ ಬಸ್ ಪಾಸ್ ನೀಡಿದೆ. ನಮ್ಮ ಸರ್ಕಾರ. ಉಚಿತವೆಂದರೇ ನೀವು ತೆರಿಗೆ ಕಟ್ಟುತ್ತಿದಿರಲ್ಲ, ಅದೇ ಟ್ಯಾಕ್ಸಿನ ಹಣದಲ್ಲಿ ನಾವು ನಿಮಗೆ ಅನುಕೂಲ ಮಾಡಿಕೊಡುತ್ತಿದ್ದೇವೆ. ಶೂನ್ಯ ಶೇಕಡದ ಭ್ರಷ್ಟಾಚಾರವಿರುದು ನಮ್ಮ ಆಮ್ ಆದ್ಮಿ ಪಕ್ಷ ಮಾತ್ರ. ಈ ಭಾರಿ ನಮಗೆ ಅಧಿಕಾರ ನೀವು ಕೊಟ್ಟರೆ ಎಪ್ಪತ್ತು ವರ್ಷ ನೀವು ನೋಡಿಯೇ ಇರದ ಬದಲಾವಣೆಯನ್ನು ನಾವು ಐದು ವರ್ಷದಲ್ಲಿ ಅಭಿವೃದ್ಧಿಗೊಳಿಸುತ್ತೇವೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ಮಧುಸೂದನ್, ತಾಲೂಕು ಅಧ್ಯಕ್ಷ ಆನಂದ್ ಕುಮಾರ್,ಮುಖಂಡರಾದ ಸಿದ್ದಪ್ಪ, ಮಂಜುನಾಥ್, ರಫೀಕ್ ಅಹಮದ್, ಹಾಗೂ ಕಾರ್ಯಕರ್ತರು ಸೇರಿದಂತೆ ಅನೇಕ ಮುಖಂಡರುಗಳು ಭಾಗಿಯಾಗಿದ್ದರು.