
ವರದಿ- ವಿಘ್ನೇಶ್ ಎಂ. ಭೂತನಕಾಡು
ಕೊಡಗು (ಸೆ.28): ಕೊಡಗಿನ ತುಡುವೆ ಜೇನು ಪೆಟ್ಟಿಗೆಗಳಲ್ಲಿ ಥಾಯ್ ಸ್ಯಾಕ್ ಬ್ರೂಡ್ ವೈರಸ್ ಮತ್ತೆ ಕಾಣಿಸಿಕೊಂಡಿದ್ದು ಕೃಷಿಕರು ಆತಂಕಕ್ಕೆ ಒಳಗಾಗಿದ್ದಾರೆ. ಭಾಗಮಂಡಲದ ಮಾದರಿ ಜೇನು ಕೃಷಿಕ ಕುಸುಮಾಕರ ಅವರ ಮಧುವನದಲ್ಲಿ ಸುಮಾರು 15 ಪೆಟ್ಟಿಗೆಗಳಲ್ಲಿ ಈ ವೈರಸ್ ಕಾಣಿಸಿಕೊಂಡಿದೆ. ಇದರಿಂದ 15 ಜೇನು ಕುಟುಂಬಗಳು ಒಂದೆಡೆ ಕಾಫಿ ಗಿಡಗಳಲ್ಲಿ ಕುಳಿತುಕೊಂಡಿವೆ.
ಕಳೆದ ಮಾರ್ಚ್ ಏಪ್ರಿಲ್ ತಿಂಗಳಿನಲ್ಲಿಯೇ ಭಾಗಮಂಡಲ ವ್ಯಾಪ್ತಿಯ ಕೆಲವು ಕಡೆ ಕೊರಂಗಾಲ, ಚೇರಂಗಾಲ ಮತ್ತಿತರ ಕಡೆಗಳಲ್ಲಿ ರೋಗ ಕಾಣಿಸಿಕೊಂಡಿತ್ತು. ಒಂದೆರಡು ಪೆಟ್ಟಿಗೆಯಲ್ಲಿ ವೈರಸ್ ಬಂದಿತ್ತು. ಆದರೆ ಇದೀಗ ವೈರಸ್ ಬಾಧೆ ಹೆಚ್ಚಾಗುತ್ತಿದ್ದು, ಜೇನು ಕುಟುಂಬಗಳನ್ನು ಕೃಷಿಕರು ಕಳೆದುಕೊಳ್ಳುವಂತಾಗಿದೆ. ವಾತಾವರಣ ಹೊಂದಾಣಿಕೆಯಾಗಿ ಸರಿಯಾಗಬೇಕೇ ವೈರಸ್ ಹತೋಟಿಯಾಗಬೇಕೆ ಹೊರತು ಬೇರೆ ಯಾವುದೇ ನಿಯಂತ್ರಣ ಕ್ರಮಗಳಿಲ್ಲ. ಹೀಗಾಗಿ ಜೇನು ಕೃಷಿಕರಿಗೆ ಆತಂಕ ಎದುರಾಗಿದೆ.
ಕೇರಳ ಮಾದರಿಯಲ್ಲಿ ಒಂದು ಕುಟುಂಬಕ್ಕೆ ರೋಗ ಬಂದರೆ ರಾಣಿ ಜೇನು ನೊಣವನ್ನು ಕುಟುಂಬದಿಂದ ತೆಗೆದು ಮತ್ತೊಂದಕ್ಕೆ ಬೇರ್ಪಡಿಸುವುದರಿಂದ ರೋಗ ಬಾಧೆಯನ್ನು ನಿಯಂತ್ರಿಸಬಹುದಾಗಿದೆ. ಆದರೆ ಸೆರಾನ ಇಂಡಿಕಾ ( ತುಡೆವೆ ) ಸ್ಥಳೀಯ ಜೇನು ಕುಟುಂಬಗಳಲ್ಲಿ ಹತೋಟಿ ಕಷ್ಟ ಎನ್ನುತ್ತಾರೆ ಕೃಷಿಕರು. ಕೇರಳ ಮಾದರಿಗೆ ರೋಗವಿಲ್ಲ: ತಮ್ಮಲ್ಲಿ ಸೆರೆನಾ ಇಂಡಿಕಾ ಜೇನು ಕುಟುಂಬಕ್ಕೆ ಈ ವೈರಸ್ ಹೆಚ್ಚಾಗಿ ತಗುಲಿದೆ. ಕೇರಳದ 70 ಜೇನು ಕುಟುಂಬಗಳಿದ್ದು, ಅವು ಚೆನ್ನಾಗಿದೆ. ಆದರೆ ತುಡುವೆ ಜೇನಿನ ರೋಗ ಹತೋಟಿಗೆ ಬಂದಿಲ್ಲ. ಇದರಿಂದ ಜೇನು ಕುಟುಂಬಗಳನ್ನು ಕಳೆದುಕೊಳ್ಳುತ್ತಿದ್ದೇವೆ. ಈ ವೈರಸ್ ಅನ್ನು ನಿಯಂತ್ರಣ ಮಾಡುವುದು ಕಷ್ಟ. ಇತರೆ ಪೆಟ್ಟಿಗೆಗೂ ಬೇಗ ಈ ರೋಗ ಹರಡುತ್ತಿದೆ ಎಂದು ಕುಸುಮಾಕರ ಬೇಸರ ವ್ಯಕ್ತಪಡಿಸಿದ್ದಾರೆ.
ಸೆರಾನಾ ಇಂಡಿಕಾ ತಳಿಯ ಜೇನು ಸಾಕಾಣಿಕೆಯನ್ನು ಕೊಡಗು ಜಿಲ್ಲೆಯಲ್ಲಿ ಹೆಚ್ಚಾಗಿದೆ. ಆದರೆ ಇದಕ್ಕೆ ಥಾಯ್ ಸ್ಯಾಕ್ ಬ್ರೂಡ್ ವೈರಸ್ ತಗುಲಿ ಆದಷ್ಟು ಬೇಗ ರೋಗ ತಗಲುತ್ತದೆ. ಇದನ್ನು ನಿಯಂತ್ರಣ ಮಾಡಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಕೇರಳದಿಂದ ಸೆರಾನಾ ಸೆರಾನಾ ಜೇನು ಕುಟುಂಬವನ್ನು ತಂದು ಸಾಕುವವರ ಸಂಖ್ಯೆ ಹೆಚ್ಚುತ್ತಿದೆ.
ಥಾಯ್ ಸ್ಯಾಕ್ ಬ್ರೂಡ್ ವೈರಸ್ ರೋಗದ ಲಕ್ಷಣಗಳೆಂದರೆ ಜೇನುಹುಳುಗಳು ತಮ್ಮ ಕೆಲಸವನ್ನು ನಿಧಾನಗೊಳಿಸುವುದು, ಲಾರ್ವಾಗಳು ಒಣಗುವುದು, ಜೇನುನೊಣಗಳ ಸಾವು, ಮರಿಗಳು ಕೋಶಾವಸ್ಥೆಗೆ ಬರುವ ಮುನ್ನವೇ ಸಾಯುವುದು ರೋಗ ಲಕ್ಷಣ. ರೋಗವು ತೀವ್ರವಾದಾಗ ಇಡೀ ಜೇನು ಕುಟುಂಬವೇ ನಾಶವಾಗುತ್ತದೆ. ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಈ ಹಿಂದೆ ಹಾಗೂ ಆಗಾಗ್ಗೆ ಈ ರೋಗ ಕಾಣಿಸಿಕೊಂಡು ಜೇನು ಕೃಷಿಕರಿಗೆ ನಷ್ಟ ಉಂಟುಮಾಡಿತ್ತು
ಜೇನುಗೂಡಿನಲ್ಲಿ ಈ ವೈರಸ್ ಕಾಣಿಸಿಕೊಂಡ ನಂತರ, ಜೇನುನೊಣಗಳು ವಿವಿಧ ಹೂವುಗಳಿಂದ ಮಕರಂದವನ್ನು ಸಂಗ್ರಹಿಸಲು ಭೇಟಿ ನೀಡಿದಾಗ ವೈರಸ್ ಹರಡುತ್ತದೆ. ಆರಂಭದಲ್ಲಿ ಈ ರೋಗವು 1970 ರಲ್ಲಿ ಥೈಲ್ಯಾಂಡ್‌ನಲ್ಲಿ ಹರಡಿತು ಮತ್ತು ಆದ್ದರಿಂದ ಇದು ಈ ಹೆಸರನ್ನು ಪಡೆದುಕೊಂಡಿತು. ಜೇನುಗೂಡುಗಳನ್ನು ಸಾಧ್ಯವಾದಷ್ಟು ಸ್ವಚ್ಛವಾಗಿಡುವುದು ಮತ್ತು ಬಾಧಿತ ಜೇನುಗೂಡುಗಳನ್ನು ಸುಡುವುದು ರೋಗ ಹತೋಟಿ ವಿಧಾನವಾಗಿದೆ.
ನಮ್ಮ ಭಾಗದಲ್ಲಿ ಜೇನು ಪೆಟ್ಟಿಗೆಗಳಿಗೆ ಥಾಯ್ ಸ್ಯಾಕ್ ಬ್ರೂಡ್ ವೈರಸ್ ತಗುಲಿದೆ. ಇದನ್ನು ಹತೋಟಿಗೆ ತರುವುದು ತೀರಾ ಕಷ್ಟದ ಕೆಲಸವಾಗಿದೆ. ಇದೀಗ 15 ಪೆಟ್ಟಿಗೆಗಳಲ್ಲಿ ರೋಗ ಬಾಧೆ ಕಂಟುಬಂದಿದ್ದು, ಜೇನು ಕುಟುಂಬಗಳು ಬೇರೆ ಕಡೆ ಸ್ಥಳಾಂತರಗೊಂಡಿದೆ. ಇದನ್ನು ನಿಯಂತ್ರಿಸುವುದು ಹೇಗೆ ಎಂಬ ಆತಂಕ ಉಂಟಾಗಿದೆ.
-ಕುಸುಮಾಕರ, ಜೇನು ಕೃಷಿಕರು ಭಾಗಮಂಡಲ