ನಿಡುಗಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇರುವ ಪ್ರಸಿದ್ಧ ಪ್ರವಾಸಿ ತಾಣ ಅಬ್ಬಿಫಾಲ್ಸ್ ಬಳಿ ಇರುವ ಅಂಗಡಿ ಮಳಿಗೆಗಳು, ಪ್ರವಾಸಿಗರ ವಾಹನಗಳ ಪಾರ್ಕಿಂಗ್ ಸ್ಥಳ ಹಾಗೂ ಅಬ್ಬಿಫಾಲ್ಸ್ ಪ್ರವೇಶ ಶುಲ್ಕ ಸಂಗ್ರಹಗಳಿಗಾಗಿ ಪ್ರತೀ ವರ್ಷ ಓಪನ್ ಟೆಂಡರ್ ಪ್ರಕ್ರಿಯೆ ನಡೆಯುತ್ತದೆ.
ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಏ.03): ಪಂಚಾಯಿತಿ ಅಂದರೆ ಅದು ಸ್ಥಳೀಯ ಸರ್ಕಾರ. ಆ ಸ್ಥಳೀಯ ಸರ್ಕಾರ ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸಬೇಕು ಅಲ್ವಾ.? ಆದರೆ ಇಲ್ಲಿ ನ್ಯಾಯಾಂಗದ ಆದೇಶವನ್ನು ಪರಿಗಣಿಸದೆ ತರಾತುರಿಯಲ್ಲಿ ಟೆಂಡರ್ ಮಾಡಿರುವುದನ್ನು ನೋಡಿದರೆ ಪಂಚಾಯಿತಿ ಅಭಿವೃದ್ಧಿಗಿಂತ ಯಾರದ್ದೋ ಒಬ್ಬರಿಗೆ ಅನುಕೂಲ ಮಾಡುವುದಕ್ಕೆ ಪಂಚಾಯಿತಿಯಿಂದಲೇ ಪಿತೂರಿ ನಡೆಯಿತಾ ಎನ್ನುವ ಅನುಮಾನ ದಟ್ಟವಾಗಿದೆ. ಹಾಗಾದರೆ ಏನಿದು ತರಾತುರಿ ಟೆಂಡರ್. 18 ರಂದೇ ಬಿಡ್ಡಿಂಗ್, ಅಂದೇ ಕಾರ್ಯಾದೇಶ. ಆದರೆ ನ್ಯಾಯಾಲಯದಿಂದ ತಂದ ತಡೆಯಾಜ್ಞೆ ಸ್ವೀಕರಿಸುವುದಕ್ಕೆ ಮಾತ್ರ ಪಂಚಾಯಿತಿಯಲ್ಲಿ ಒಬ್ಬ ಸಿಬ್ಬಂದಿಯೂ ಇಲ್ಲ.
ಹಾಗಾದರೆ ಟೆಂಡರ್ ಪ್ರಕ್ರಿಯೆ ಪಂಚಾಯಿತಿಯಲ್ಲಿ ನಡೆಯಿತೋ, ಇಲ್ಲ ಹೊರಗಡೆ ನಡೆಯಿತೋ ಎನ್ನುವುದೇ ಪ್ರಶ್ನೆ. ಮಾರ್ಚ್ 17 ರಂದೇ ರಾಜ್ಯ ಉಚ್ಛನ್ಯಾಯಾಲಯ ನೀಡಿರುವ ತಡೆಯಾಜ್ಞೆಯನ್ನು ಉಲ್ಲಂಘಿಸಿ ಹೀಗೆ ತರಾತುರಿಯಲ್ಲಿ ಲಕ್ಷಾಂತರ ರೂಪಾಯಿಗಳ ಟೆಂಡರ್ ಪ್ರಕ್ರಿಯೆ ನಡೆದಿರುವುದು ಕೊಡಗು ಜಿಲ್ಲೆ ಮಡಿಕೇರಿ ತಾಲ್ಲೂಕಿನ ಕೆ. ನಿಡುಗಣೆ ಗ್ರಾಮ ಪಂಚಾಯಿತಿಯಲ್ಲಿ. ಹೌದು ಕೆ. ನಿಡುಗಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇರುವ ಪ್ರಸಿದ್ಧ ಪ್ರವಾಸಿ ತಾಣ ಅಬ್ಬಿಫಾಲ್ಸ್ ಬಳಿ ಇರುವ ಅಂಗಡಿ ಮಳಿಗೆಗಳು, ಪ್ರವಾಸಿಗರ ವಾಹನಗಳ ಪಾರ್ಕಿಂಗ್ ಸ್ಥಳ ಹಾಗೂ ಅಬ್ಬಿಫಾಲ್ಸ್ ಪ್ರವೇಶ ಶುಲ್ಕ ಸಂಗ್ರಹಗಳಿಗಾಗಿ ಪ್ರತೀ ವರ್ಷ ಓಪನ್ ಟೆಂಡರ್ ಪ್ರಕ್ರಿಯೆ ನಡೆಯುತ್ತದೆ.
ಸತ್ತು ಸಂಸ್ಕಾರವಾಗಿದ್ದ ಹೆಂಡತಿ 5 ವರ್ಷದ ಬಳಿಕ ಎದ್ದು ಬಂದ್ಲು: ಆದರೆ ಸೆರೆಮನೆ ವಾಸ ಅನುಭವಿಸಿದ್ದು ಮಾತ್ರ ಗಂಡ!
ಆದರೆ ಈ ಬಾರಿ ಟೆಂಡರ್ ಪ್ರಕ್ರಿಯೆಯಲ್ಲಿ ಇಲ್ಲ, ಸಲ್ಲದ ನಿಯಮಗಳನ್ನು ಸೇರಿಸಲಾಗಿತ್ತಂತೆ. ಇದು ಟೆಂಡರ್ ಪ್ರಕ್ರಿಯೆ ಮೇಲೆಯೇ ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿತ್ತಂತೆ. ಯಾರೋ ಒಬ್ಬರಿಗೆ ಅನುಕೂಲ ಮಾಡುವುದಕ್ಕಾಗಿ ಪಂಚಾಯಿತಿ ಅನಗತ್ಯ ನಿಯಮಗಳನ್ನು ಜಾರಿ ಮಾಡಿದೆ ಎಂದು ಸ್ಥಳೀಯರಾದ ವಿನೋದ್ ಎಂಬುವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಮಾರ್ಚ್ 17 ಕೋರ್ಟಿಗೆ ಮನವಿ ಮಾಡಿದ್ದರು. ಇದನ್ನು ಪರಿಗಣಿಸಿದ್ದ ನ್ಯಾಯಾಲಯ ಟೆಂಡರ್ ಪ್ರಕ್ರಿಯೆಗೆ ತಡೆ ನೀಡಿ ಆದೇಶಿಸಿತ್ತು. 17 ರಂದೇ ತಡೆ ನೀಡಿದ್ದರೂ ಪಂಚಾಯಿತಿ ಪಿಡಿಓ ಮಾತ್ರ ಮಾರ್ಚ್ 18 ರಂದು ಟೆಂಡರ್ ಪ್ರಕ್ರಿಯೆ ಮಾಡಿದ್ದಾರೆ. ಆ ಮೂಲಕ ನ್ಯಾಯಾಲಯದ ಆದೇಶಕ್ಕೂ ಬೆಲೆ ಕೊಡದೆ ಅಗೌರವ ತೋರಿಸಿದ್ದಾರೆ.
ತಡೆಯಾಜ್ಞೆ ತಂದಿದ್ದ ವಿನೋದ್ ಅವರು ನಾವು 18 ರಂದು ಪಂಚಾಯಿತಿಗೆ ಹೋಗಿ ತಡೆಯಾಜ್ಞೆ ನೋಟಿಸ್ ನೀಡಲು ಹೋದಾಗ ಅಟೆಂಡರ್ ಬಿಟ್ಟು ಯಾರೊಬ್ಬರೂ ಇರಲಿಲ್ಲ. ಪಂಚಾಯಿತಿ ಪಿಡಿಓ ಅವರನ್ನು ಮಧ್ಯಾಹ್ನದವರೆಗೂ ಕಾದು ಕುಳಿತರೂ ಪಂಚಾಯಿತಿಗೆ ಬಂದಿಲ್ಲ. ಹೀಗಾಗಿಯೇ ನಾನು ಮಡಿಕೇರಿಗೆ ತೆರಳಿ ಇಓ ಶೇಖರ್ ಅವರಿಗೆ ಲಿಖಿತ ದೂರು ನೀಡಿದ್ದೇನೆ ಎಂದಿದ್ದಾರೆ. ಇಷ್ಟೆಲ್ಲಾ ಆದರೂ ಪಂಚಾಯಿತಿ ಪಿಡಿಓ ಮಾತ್ರ ಕೋರ್ಟ್ ನೋಟಿಸ್ ನಮಗೆ ತಲುಪಿರಲಿಲ್ಲ. ಹೀಗಾಗಿ ನಾವು ಟೆಂಡರ್ ಮಾಡಿದ್ದೇವೆ ಎನ್ನುತ್ತಿದ್ದಾರೆ.
ನಿಯಮಗಳ ಪ್ರಕಾರ 2024 ರಲ್ಲಿ ಟೆಂಡರ್ ಪಡೆದಿದ್ದವರು ಮಾರ್ಚ್ 31 ರ ಸಂಜೆ ಒಳಗೆ ತಾವಿರುವ ಅಂಗಡಿ ಮುಂಗಟ್ಟುಗಳನ್ನು ಖಾಲಿ ಮಾಡಬೇಕು. ಆದರೆ ಇವರೆಲ್ಲರೂ ಕೋರ್ಟ್ ಮೊರೆ ಹೋಗಿದ್ದರಿಂದ ಅಂಗಡಿ ಮುಂಗಟ್ಟುಗಳನ್ನು ತೆರವು ಮಾಡಿರಲಿಲ್ಲ. ಆದರೆ ಅಂದು ಸರ್ಕಾರಿ ರಜೆ ಇದ್ದರೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಸದಸ್ಯರು ಸೇರಿ ರಾತ್ರೋ ರಾತ್ರಿ ಅಂಗಡಿಗಳಲ್ಲಿದ್ದ ಹಿಂದಿನ ಟೆಂಡರ್ ದಾರರ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಎಲ್ಲಾ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ಇದರ ವಿರುದ್ಧವೂ ಹಿಂದಿನ ಟೆಂಡರ್ ದಾರರು ಪಂಚಾಯಿತಿ ಆಡಳಿತ ಮಂಡಳಿ ಮತ್ತು ಪಿಡಿಓ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಒಬ್ಬರೇ ಇದ್ದರೆ ಹನಿಟ್ರ್ಯಾಪ್ ಆಗುತ್ತಾ ಸಚಿವ ಕೆ.ಎನ್ ರಾಜಣ್ಣ ತಪ್ಪು ಮಾಡಿದ್ದಾರೆ: ಡಿ.ಕೆ.ಶಿವಕುಮಾರ್
ಈ ಕುರಿತು ಕೊಡಗು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆನಂದ್ ಪ್ರಕಾಶ್ ಮೀನಾ ಅವರನ್ನು ಕೇಳಿದರೆ ಪಂಚಾಯಿತಿ ಆಡಳಿತ ಮಂಡಳಿ ಮತ್ತು ಅವರ ವಿರುದ್ಧದ ಅರ್ಜಿದಾರರು ಇಬ್ಬರೂ ಕೂಡ ಕೋರ್ಟಿನ ಒಂದೊಂದು ಆದೇಶವನ್ನು ತೋರಿಸುತ್ತಿದ್ದಾರೆ. ಹೀಗಾಗಿ ಅವರು ಅದನ್ನು ಕೋರ್ಟಿನಲ್ಲಿಯೇ ಬಗೆಹರಿಸಿಕೊಳ್ಳಲಿ ಎಂದು ಹೇಳಿ ಕೈ ತೊಳೆದುಕೊಂಡಿದ್ದಾರೆ. ಪಂಚಾಯಿತಿಗೆ ಆದಾಯ ಬರುವುದಕ್ಕಿಂತ ಪಂಚಾಯಿತಿಗೆ ನಷ್ಟವಾಗುವಂತೆ ಇದ್ದರೂ ಒಂದೇ ಕಂಪೆನಿಯ ಹೆಸರಿನ ಎರಡು ಜನರಿಗೆ ಮಾತ್ರವೇ ಎಲ್ಲಾ ಟೆಂಡರ್ ನೀಡಿರುವುದು ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಏನೇ ಆಗಲಿ ನ್ಯಾಯಾಲಯ ಏನು ಆದೇಶ ನೀಡುತ್ತದೆಯೋ ಅದರಂತೆ ಕ್ರಮ ಕೈಗೊಳ್ಳುತ್ತೇವೆ ಎಂದು ಸಿಇಓ ಕೂಡ ಹೇಳಿದ್ದು, ನ್ಯಾಯಾಲಯದ ಆದೇಶ ಏನು ಹೊರಬೀಳುತ್ತದೆಯೋ ಎಂಬುದನ್ನು ಕಾದು ನೋಡಬೇಕಾಗಿದೆ.