
ದಾವಣಗೆರೆ: ಚಾಲಕನ ನಿಯಂತ್ರಣ ಕಳೆದುಕೊಂಡ ಕಾರು ರಸ್ತೆ ಪಕ್ಕದ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ವ್ಯಕ್ತಿಯೊಬ್ಬರು ಕೊನೆಯುಸಿರೆಳೆಯುವ ಘಟನೆ ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಬೆನಕನಹಳ್ಳಿಯಲ್ಲಿ ನಡೆದಿದೆ. ಮೃತರನ್ನು ಕ್ಯಾಸಿನಕೆರೆ ಗ್ರಾಮದ 29 ವರ್ಷದ ರೇಣುಕಾರಾಧ್ಯ ಶಾಸ್ತ್ರಿ ಎಂದು ಗುರುತಿಸಲಾಗಿದೆ.
ಮೃತ ರೇಣುಕಾರಾಧ್ಯ ಶಾಸ್ತ್ರಿ ಕ್ಯಾಸಿನಕೆರೆಯ ವೀರಭದ್ರೇಶ್ವರ ದೇವಸ್ಥಾನದ ಪೂಜಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಬೆನಕನಹಳ್ಳಿ ಹೊರವಲಯದಲ್ಲಿ ನಸುಕಿನ ಜಾವ ಕಾರಿನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ದುರ್ಘಟನೆ ಸಂಭವಿಸಿದೆ. ಕ್ಯಾಸಿನಕೆರೆಯಿಂದ ಹೊನ್ನಾಳಿಗೆ ತೆರಳುತ್ತಿದ್ದ ರೇಣುಕಾರಾಧ್ಯ ಶಾಸ್ತ್ರಿ ಅವರ ಕಾರು ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಅಪಘಾತ ನಡೆದಿದೆ. ರೇಣುಕಾರಾಧ್ಯ ಶಾಸ್ತ್ರಿ ಅವರಿಗೆ ಕೇವಲ ಮೂರು ತಿಂಗಳ ಹಿಂದೆಯಷ್ಟೇ ವಿವಾಹವಾಗಿತ್ತು ಎಂದು ತಿಳಿದು ಬಂದಿದೆ. ಘಟನೆ ಸಂಬಂಧ ಹೊನ್ನಾಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ನಡೆಸಿದ್ದಾರೆ.
ಮೃತರ ಕುಟುಂಬಕ್ಕೆ ಸಾಂತ್ವನ ತಿಳಿಸಿರುವ ಮೃತ ರೇಣುಕಾರಾಧ್ಯ ಶಾಸ್ತ್ರಿ ಸ್ನೇಹಿತರಾದ ಬೆನಕಯ್ಯ ಶಾಸ್ತ್ರಿ ಅವರು, ಇಂದು ಒಂದು ವಿಷಾದನೀಯ ಘಟನೆ ನಡೆದಿದೆ. ನಮ್ಮ ಆತ್ಮೀಯ ಸ್ನೇಹಿತ, ಸಹೋದರ ಸಮಾನರಾದ ರೇಣುಕಾರಾಧ್ಯ ಶಾಸ್ತ್ರಿ ಅವರು ಇಂದು ಅಪಘಾತದಲ್ಲಿ ಅಕಾಲಿಕವಾಗಿ ದುರ್ಮರಣ ಹೊಂದಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಮೃತರು ಹಲವರು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಂಡಿದ್ದರು. ಪೌರೋಹಿತ್ಯ ಕ್ಷೇತ್ರದಲ್ಲೂ ಕಡಿಮೆ ವಯಸ್ಸಿನಲ್ಲಿ ಅಪಾರ ಸಾಧನೆ ಮಾಡಿದ್ದರು. ಮಠಾದೀಶರು ಹಾಗು ಭಕ್ತರ ಬಳಿ ಒಳ್ಳೆಯ ಹೆಸರು ಪಡೆದುಕೊಂಡಿದ್ದರು. ಇಂತಹ ವ್ಯಕ್ತಿ ನಮ್ಮನ್ನು ಅಗಲಿರುವುದು ತುಂಬಲಾರದ ನಷ್ಟ, ಭಗವಂತ ಅವರ ಕುಟುಂಕಕ್ಕೆ ಧೈರ್ಯವನ್ನು ಕರುಣಿಸಲಿ ಎಂದು ಪ್ರಾರ್ಥನೆ ಮಾಡುವುದಾಗಿ ತಿಳಿಸಿದ್ದಾರೆ.
ಬಸವಾಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯ ಚಿರಡೋಣಿ ಗ್ರಾಮದಲ್ಲಿ ಹಾಗೂ ಚಿರಡೋಣಿ ಕ್ಯಾಂಪ್ ನ ಸಾರ್ವಜನಿಕ ಸ್ಥಳದಲ್ಲಿ ಶುಕ್ರವಾರ ಕಾನೂನು ಬಾಹಿರ ಮಟ್ಕಾ ಜೂಜಾಟ ಆಡುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಪೊಲೀಸ್ ಅಧೀಕ್ಷಕರ ಮಾರ್ಗದರ್ಶನದಲ್ಲಿ ಎ.ಎನ್.ಟಿ.ಎಫ್ ತಂಡದ ಪೊಲೀಸ್ ನಿರೀಕ್ಷಕರವರ ನೇತೃತ್ವದಲ್ಲಿ ಅಧಿಕಾರಿ ಅವರು ಹಾಗೂ ಸಿಬ್ಬಂದಿ ತಂಡ ಪ್ರತ್ಯೇಕ ದಾಳಿ ನಡೆಸಿದರು.
ಪ್ರತ್ಯೇಕ ಪ್ರಕರಣಗಳಲ್ಲಿ ಕಾನೂನು ಬಾಹಿರವಾಗಿ ಮಟ್ಕಾ ಜೂಜಾಟದಲ್ಲಿ ತೊಡಗಿದ್ದ ಮೂವರು ಆರೋಪಿತರನ್ನು ವಶಕ್ಕೆ ಪಡೆದು, ಆರೋಪಿತರುಗಳಿಂದ ಮಟ್ಕಾ ಜೂಜಾಟದಲ್ಲಿ ತೊಡಗಿಸಿದ್ದ ಒಟ್ಟು ₹38,700/- ಹಾಗೂ ಮಟ್ಕಾ ಚೀಟಿಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ಈ ಸಂಬಂಧ ಬಸವಾಪಟ್ಟಣ ಠಾಣೆಯಲ್ಲಿ 2 ಪ್ರಕರಣ ದಾಖಲಿಸಲಾಗಿದೆ. ದಾಳಿಯಲ್ಲಿ ಭಾಗವಹಿಸಿದ ಎ.ಎನ್.ಟಿ.ಎಫ್ ತಂಡದ ಪೊಲೀಸ್ ಅಧಿಕಾರಿ ಸಿಬ್ಬಂದಿಯನ್ನು ಪೊಲೀಸ್ ಅಧೀಕ್ಷಕ ಎಚ್.ಟಿ. ಶೇಖರ್, ಎಎಸ್‌ಪಿ ಪರಮೇಶ್ವರ ಹೆಗಡೆ ಪ್ರಶಂಸಿಸಿರುತ್ತಾರೆ.