
ಶಿವಮೊಗ್ಗ: ಮಲೆನಾಡಿನಲ್ಲಿ ಭೂಮಿ ಹುಣ್ಣಿಮೆ ಹಬ್ಬವನ್ನು ರೈತ ಸಮುದಾಯವು ಅತ್ಯಂತ ಸಡಗರ-ಸಂಭ್ರಮದಿಂದ ಆಚರಿಸಿದೆ. ಈ ಸಮಯದಲ್ಲಿ ಬೆಳೆಗಳು ತೆನೆತುಂಬಿ ಬೆಳೆದು ನಿಲ್ಲುವುದರಿಂದ ಭೂತಾಯಿಯು ಮೈತುಂಬಿಕೊಂಡು ಗರ್ಭಿಣಿಯಂತೆ ಶೋಭಿಸುತ್ತಾಳೆ ಎಂಬ ಪವಿತ್ರ ನಂಬಿಕೆಯಿದೆ. ಹೀಗಾಗಿ ರೈತರು ಭೂತಾಯಿಗೆ ಸೀಮಂತದ ಮಾದರಿಯಲ್ಲಿ ವಿಶೇಷವಾಗಿ ಸಿಂಗರಿಸಿ, ಭಕ್ತಿ-ಶ್ರದ್ಧೆಗಳಿಂದ ಪೂಜೆ ಸಲ್ಲಿಸುತ್ತಾರೆ.
ವಿಶೇಷವಾಗಿ ಮಲೆನಾಡಿನ ಈಡಿಗ-ದೀವರ ಸಮುದಾಯದಲ್ಲಿ ಈ ಹಬ್ಬದ ಆಚರಣೆ ಅತ್ಯಂತ ವಿಶಿಷ್ಟವಾಗಿರುತ್ತದೆ. ಅವರು ವರ್ಣರಂಜಿತ ಚಿತ್ತಾರಗಳಿಂದ ಕೂಡಿದ 'ಭೂಮಣಿ ಬುಟ್ಟಿ'ಯನ್ನು ಸಿದ್ಧಪಡಿಸಿ, ಅದರಲ್ಲೇ ಮನೆಯಲ್ಲಿ ತಯಾರಿಸಿದ ವಿವಿಧ ಬಗೆಯ ತಿಂಡಿ-ತಿನಿಸುಗಳು ಹಾಗೂ ಅಡುಗೆಯನ್ನು ಹೊಲ-ಗದ್ದೆಗಳಿಗೆ ಕೊಂಡೊಯ್ಯುತ್ತಾರೆ. ರಾತ್ರಿಯಿಡೀ ಪ್ರೀತಿಯಿಂದ ಸಿದ್ಧಪಡಿಸಿದ ಈ ಭೋಜನವನ್ನು ಜಮೀನಿನಲ್ಲಿ ಭೂತಾಯಿಗೆ ನೈವೇದ್ಯವಾಗಿ ಅರ್ಪಿಸಿ, ನಂತರ ಕುಟುಂಬಸ್ಥರೆಲ್ಲರೂ ಹೊಲದಲ್ಲೇ ಕುಳಿತು ಸಾಮೂಹಿಕವಾಗಿ ಊಟ ಸವಿಯುವುದು ಇಲ್ಲಿನ ವಿಶೇಷ ಪರಂಪರೆಯಾಗಿದೆ.
ಶಿವಮೊಗ್ಗ ಜಿಲ್ಲೆಯಾದ್ಯಂತ, ವಿಶೇಷವಾಗಿ ಸಾಗರ, ತೀರ್ಥಹಳ್ಳಿ, ಹೊಸನಗರ ಹಾಗೂ ಆನಂದಪುರ, ಪುರದಾಳು, ಶೆಟ್ಟಿಹಳ್ಳಿ, ಮಲೆಶಂಕರ ಮುಂತಾದ ಭಾಗಗಳಲ್ಲಿ ಈ ಆಚರಣೆ ವಿಜೃಂಭಣೆಯಿಂದ ನಡೆದಿದೆ. ಆನಂದಪುರದ ರೈತ ಕುಟುಂಬದ ಸರ್ಕಾರಿ ಅಧಿಕಾರಿಯಾದ ಮಂಜುನಾಥ್ ಅವರ ಕುಟುಂಬವೂ ಸೇರಿದಂತೆ ಅನೇಕ ರೈತ ಕುಟುಂಬಗಳು ತಮ್ಮ ಜಮೀನುಗಳಲ್ಲಿ ಭೂಮಿ ಹುಣ್ಣಿಮೆಯನ್ನು ಸಂಪ್ರದಾಯಬದ್ಧವಾಗಿ ಆಚರಿಸಿ ಸಂಭ್ರಮಿಸಿವೆ.
ಭೂಮಿ ಹುಣ್ಣಿಮೆ ಸಂದರ್ಭದಲ್ಲಿ ಹೊಲ ಗದ್ದೆಗಳಲ್ಲಿ ಬಿತ್ತಿದ ಬೆಳೆಗಳು ತೆನೆಗಳಾಗಿ, ಕಾಳು ಗಟ್ಟಿಯಾಗುವ ಹಂತದಲ್ಲಿರುತ್ತದೆ, ಅಷ್ಟೇ ಅಲ್ಲದೆ ಅಡಿಕೆ, ತೆಂಗು, ಬಾಳೆ ಸೇರಿದಂತೆ ವಿವಿಧ ಬೆಳೆಗಳ ಫಸಲು ಚೆನ್ನಾಗಿ ಬಂದಿರುತ್ತದೆ. ಈ ಸಂದರ್ಭದಲ್ಲಿ ಭೂ ತಾಯಿ ಗರ್ಭಿಣಿ ಎಂಬ ನಂಬಿಕೆಯಲ್ಲಿ ರೈತಾಪಿ ವರ್ಗ ಪುರಾತನ ಕಾಲದಿಂದಲೂ ಭೂಮಿ ಹುಣ್ಣಿಮೆ ಹಬ್ಬವನ್ನು ಆಚರಿಸಿಕೊಂಡು ಬರುತ್ತಿದ್ದಾರೆ ಭೂಮಿ ತಾಯಿಗೆ ಅಂತಲೇ ಬಗೆ ಬಗೆಯ ಅಡುಗೆಗಳನ್ನು ಮಾಡುತ್ತಾರೆ. ಅವುಗಳನ್ನು ಚಿತ್ತಾರದಿಂದ ಕೂಡಿದ ಬೆತ್ತ ಅಥವಾ ಬಿದಿರಿನ ಬುಟ್ಟಿಯಲ್ಲಿ ಮನೆಯಿಂದ ತುಂಬಿಕೊಂಡು ಪೂಜೆ ಮಾಡುವ ಸ್ಥಳಕ್ಕೆ ಮನೆಯ ಯಜಮಾನ ತಲೆಯ ಮೇಲೆ ಹೊತ್ತು ಕೊಂಡೊಯ್ಯುವುದು ಸಂಪ್ರದಾಯ.
ಕೆಲವರು ಭತ್ತದ ಗದ್ದೆಯಲ್ಲಿ ಭತ್ತದ ಗಿಡಗಳಿಗೆ ಪೂಜೆ ಮಾಡಿದರೆ, ಅಡಿಕೆ ತೋಟ ಇರುವವರು ಅಡಿಕೆ ಮರಕ್ಕೆ ಸೀರೆಯನ್ನು ಉಡಿಸಿ, ಆಭರಣಗಳನ್ನು ಧರಿಸಿ ಶೃಂಗಾರ ಮಾಡಿರುತ್ತಾರೆ. ಕುಟುಂಬಸ್ಥರಲ್ಲೇ ಸೇರಿ ವಿಶೇಷ ಪೂಜೆ ಸಲ್ಲಿಸುತ್ತಾರೆ. ಬಳಿಕ ದೇವರುಗಳಿಗೆ ಹಾಗೂ ಭೂಮಿ ತಾಯಿಗೆ ಬಗೆ ಬಗೆಯ ಅಡುಗೆಗಳನ್ನು ನೈವೇದ್ಯ ಮಾಡಿ ಒಂದು ಎಡೆಯನ್ನು ಗದ್ದೆಯಲ್ಲಿ ಇಟ್ಟು, ಭೂಮಿ ತಾಯಿಯ ಬಳಿ ಉತ್ತಮ ಫಸಲನ್ನು ನೀಡಿ ನಮ್ಮ ಕುಟುಂಬಕ್ಕೆ ಒಳ್ಳೆಯದನ್ನು ಮಾಡಲಿ ಎಂದು ಬೇಡಿಕೊಳ್ಳುತ್ತಾರೆ ಎಂದರು.