ಒಣಗುತ್ತಿವೆ ತೆಂಗು-ಅಡಿಕೆಗೆ ಮರ । ಟ್ಯಾಂಕರ್ ಮೊರೆ ಹೋದ ರೈತರು

By Kannadaprabha News  |  First Published May 6, 2024, 12:57 PM IST

ಮಳೆ ಕೊರತೆಯಿಂದ ತಾಲೂಕಿನಾದ್ಯಂತ ಬರದ ಛಾಯೆ ಆವರಿಸಿದೆ. ಹಲವು ಭಾಗಗಳಲ್ಲಿ ಜನ ಜಾನುವಾರುಗಳ ಕುಡಿಯುವ ನೀರು ಹಾಗೂ ಮೇವಿಗೆ ತೊಂದರೆ ಉಂಟಾಗಿದೆ. ರೈತರ ಸ್ಥಿತಿ ಅತ್ಯಂತ ಶೋಚನೀಯವಾಗಿದ್ದು, ಅಂತರ್ಜಲ ಮಟ್ಟ ಕುಸಿದಿರುವುದರಿಂದ ರೈತರು ತೋಟಗಳಿಗೆ ನೀರುಣಿಸಲು ಪರಿತಪಿಸುವಂತಾಗಿದೆ.


  ತಿಪಟೂರು :  ಮಳೆ ಕೊರತೆಯಿಂದ ತಾಲೂಕಿನಾದ್ಯಂತ ಬರದ ಛಾಯೆ ಆವರಿಸಿದೆ. ಹಲವು ಭಾಗಗಳಲ್ಲಿ ಜನ ಜಾನುವಾರುಗಳ ಕುಡಿಯುವ ನೀರು ಹಾಗೂ ಮೇವಿಗೆ ತೊಂದರೆ ಉಂಟಾಗಿದೆ. ರೈತರ ಸ್ಥಿತಿ ಅತ್ಯಂತ ಶೋಚನೀಯವಾಗಿದ್ದು, ಅಂತರ್ಜಲ ಮಟ್ಟ ಕುಸಿದಿರುವುದರಿಂದ ರೈತರು ತೋಟಗಳಿಗೆ ನೀರುಣಿಸಲು ಪರಿತಪಿಸುವಂತಾಗಿದೆ.

ತಾಲೂಕಿನಾದ್ಯಂತ ಕುಡಿಯುವ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಜನರಂತೂ ನೀರಿಗಾಗಿ ಪರದಾಡುವಂತಾಗಿದೆ. ಸಾಕಷ್ಟು ಗ್ರಾಮಗಳಲ್ಲಿನ ಗಳು ನೀರಿಲ್ಲದೆ ಬತ್ತಿಹೋಗಿವೆ. ಕೆಲ ಹಳ್ಳಿಗಳಲ್ಲಿ ಮಹಿಳೆಯರು ದೂರದ ತೋಟಗಳಿಗೆ ಹೋಗಿ ನೀರು ತರುವಂತಹ ಪರಿಸ್ಥಿತಿ ಉಂಟಾಗಿದೆ. ಹೊಸ ಬೋರ್‌ವೆಲ್‌ಗಳನ್ನು ಕೊರೆಸುವ ಬಗ್ಗೆ ತಾಲೂಕು ಆಡಳಿತ ಸಮರೋಪಾದಿಯಲ್ಲಿ ಕಾರ್ಯೋನ್ಮುಖವಾಗಬೇಕಾಗಿದೆ.

Tap to resize

Latest Videos

undefined

ಕೆಲ ಗ್ರಾಮಗಳಲ್ಲಿ ಒಂದೊಂದೇ ಬೋರ್‌ವೆಲ್‌ನಲ್ಲಿ ನೀರಿದ್ದು, ಅವುಗಳಲ್ಲಿ ಬರುತ್ತಿರುವ ಕಡಿಮೆ ನೀರು ಅರ್ಧ ಗ್ರಾಮಕ್ಕೂ ಸಾಕಾಗುತ್ತಿಲ್ಲ. ಹಳ್ಳಿಗಳಲ್ಲಿ ಜನರಿಗೆ, ಜಾನುವಾರುಗಳಿಗೆ ಹಾಗೂ ಕುರಿ-ಮೇಕೆಗಳಿಗೂ ಇದೇ ನೀರನ್ನು ಬಳಸಬೇಕಾಗಿರುವುದು ದೊಡ್ಡ ಸಮಸ್ಯೆಯಾಗಿದೆ. ಕೆಲ ಗ್ರಾಮಗಳಲ್ಲಿ ಲಬ್ಯವಿರುವ ನೀರನ್ನು ಸರಿಯಾಗಿ ಬಿಡುವಲ್ಲಿಯೂ ಗ್ರಾಮ ಪಂಚಾಯಿತಿ ಅಧಿಕಾರಿಗಳು ನಿರ್ಲಕ್ಷ್ಯತೋರಿದ್ದು, ಇದನ್ನು ಸರಿಪಡಿಸುವಲ್ಲಿ ತಾಲುಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಯೂ ವಿಫಲರಾಗಿದ್ದಾರೆ ಎಂಬುದು ಗ್ರಾಮಸ್ಥರ ಆರೋಪವಾಗಿದೆ. ಒಣಗಿರುವ ಕೆರೆಕಟ್ಟೆಗಳು:

ಕಳೆದ ಎರಡು ವರ್ಷಗಳಿಂದ ಸಮರ್ಪಕ ಮಳೆ ಇಲ್ಲದ ಕಾರಣ ಎಲ್ಲ ಕೆರೆ-ಕಟ್ಟೆಗಳು ಒಣಗಿ ಹೋಗಿವೆ. ತಾಲೂಕಿಗೆ ಯಾವುದೇ ಶಾಶ್ವತ ನೀರಾವರಿ ಮೂಲ ಅಥವಾ ಯೋಜನೆಗಳು ಇಲ್ಲದಿರುವುದರಿಂದ ಅಂತರ್ಜಲ ಪಾತಾಳ ತಲುಪಿದೆ. ನೀರಿಲ್ಲದೆ ಬಣಗುಡುತ್ತಿರುವ ಕೆರೆಗಳೆಲ್ಲೆಲ್ಲಾ ಕಾಡುಜಾಲಿ ಗಿಡ, ವಿವಿಧ ಗಿಡಗೆಂಟೆ, ಮರಗಿಡಗಳು ಬೆಳೆದು ಮಳೆ ನೀರು ಸರಾಗವಾಗಿ ಹರಿದು ಬರುವ ಜಲಮೂಲಗಳು ಮುಚ್ಚಿಹಾಕಿಕೊಂಡಿವೆ. ಕೆರೆಗಳ ಏರಿಗಳಲ್ಲಿಯೂ ಬಿರುಕುಗಳುಂಟಾಗಿದ್ದು, ಸಂಬಂಧಿಸಿದ ಇಲಾಖೆಗಳು ಸಹ ನಿರ್ಲಕ್ಷ್ಯವಹಿಸಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಟ್ಯಾಂಕರ್ ಮೊರೆಹೋದ ರೈತರು:

ತಾಲೂಕಿನ ರೈತರ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ತೆಂಗಿನ ಕಥೆ ವ್ಯಥೆ ತರುವಂತಿದೆ. ಬಹುತೇಕ ಗ್ರಾಮಗಳ ರೈತರು ತಾವು ಹಲವಾರು ವರ್ಷಗಳಿಂದ ಕಷ್ಟಪಟ್ಟು ಬೆಳೆಸಿರುವ ತೆಂಗು ಹಾಗೂ ಅಡಿಕೆ ಮರ ಉಳಿಸಿಕೊಳ್ಳಲು ದುಬಾರಿ ಹಣ ನೀಡಿ ಟ್ಯಾಂಕರ್ ನೀರು ಪಡೆಯುವಂತಾಗಿದೆ. ರೈತರು ಎಷ್ಟೇ ಆರ್ಥಿಕವಾಗಿ ತೊಂದರೆಯಲ್ಲಿದ್ದರೂ ಹೊಸ ಹೊಸ ಬೋರ್‌ವೆಲ್‌ಗಳನ್ನು ಕೊರೆಸುವಲ್ಲಿ ಸಾಲಗಾರರಾಗುತ್ತಿದ್ದಾರೆ. ಕೃಷಿಯಿಂದ ಆದಾಯ ಬರದೇ ಇರುವುದರಿಂದ ಸಾಲ ತೀರಿಸಲಾಗದೇ ಸಂಕಷ್ಟ ಎದುರಿಸುವಂತಾಗಿದೆ.

ಸಂಕಷ್ಟದಲ್ಲಿ ಹೈನೋಧ್ಯಮ:

ತಾಲೂಕಿನ ಪ್ರಮುಖ ಬೆಳೆ ತೆಂಗು ಸಂಪೂರ್ಣ ಕೈಕೊಟ್ಟಿರುವುದರಿಂದ, ರೈತರ ಜೀವನ ಹೈನೋಧ್ಯಮದಿಂದಲೇ ನಡೆಯುತ್ತಿದೆ. ಆದರೆ ಮೇವು, ನೀರು ರೈತರಿಗೆ ಇಲ್ಲದಿರುವುದರಿಂದ ಹಸುಗಳನ್ನು ಸಾಕಲಾಗುತ್ತಿಲ್ಲ. ಕೆರೆಕಟ್ಟೆಗಳಲ್ಲಿ ನೀರಿಲ್ಲದ ಕಾರಣ ಮತ್ತು ಕೆರೆ ಅಂಗಳ ಹಾಗೂ ಸುತ್ತಮುತ್ತ ಸಿಗುತ್ತಿದ್ದ ಮೇವು ಸಹ ಒಣಗಿ ಹೋಗಿದ್ದು, ಜಾನುವಾರುಗಳ ಮೇವಿಗೂ ಸಂಕಷ್ಟವುಂಟಾಗಿದೆ. ಕಳೆದ ಬಾರಿ ಮಳೆ ಕೈಕೊಟ್ಟಿದ್ದರಿಂದ ರಾಗಿ ಹುಲ್ಲು ಸಿಗಲಿಲ್ಲ. ಈಗ ರೈತರು ಹಣ ನೀಡಿ ಮೇವು ಕೊಳ್ಳಲು ಪ್ರಯತ್ನಿಸುತ್ತಿದ್ದರೆ ಎಲ್ಲೂ ಮೇವು ಸಿಗುತ್ತಿಲ್ಲ. ರೈತರ ಜೀವನಕ್ಕೆ ಆಸರೆಯಾಗಿರುವ ಈ ಉಪಕಸುಬಾದ ಹೈನೋಧ್ಯಮಕ್ಕೂ ತೊಂದರೆಯಲ್ಲಿದೆ. ಕೂಡಲೇ ಸರ್ಕಾರ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಗೋಶಾಲೆಗಳನ್ನು ತೆರೆಯಬೇಕೆಂದು ರೈತರ ಒತ್ತಾಯವಾಗಿದೆ.

ತಾಲೂಕಿನಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಬಾರದೆಂಬ ಕಾರಣಕ್ಕಾಗಿ ಈಗಾಗಲೆ ಹಲವು ಬಾರಿ ಟಾಸ್ಕ್ ಪೋರ್ಸ್ ಸಮಿತಿ ಸಭೆ ಕರೆಯಲಾಗಿತ್ತು. ಎಲ್ಲೆಲ್ಲಿ ನೀರಿನ ಸಮಸ್ಯೆ ಇದೆಯೋ ಆ ಭಾಗಕ್ಕೆ ಟ್ಯಾಂಕರ್ ಮೂಲಕ ನೀರು ಒದಗಿಸುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ, ಬೋರ್‌ವೆಲ್ ಅವಶ್ಯಕತೆ ಇರುವ ಕಡೆಗಳಲ್ಲಿ ಹೊಸದಾಗಿ ಬೋರ್‌ವೆಲ್‌ಗಳನ್ನು ಸಹ ಕೊರೆಸಲಾಗುತ್ತಿದೆ. ನೀರಿಗೆ ಎಲ್ಲಿ ತೀವ್ರ ತೊಂದರೆಯಿದೆ ಎಂಬ ಬಗ್ಗೆ ಸಂಬಂಧಿಸಿದ ಅಧಿಕಾರಿ, ಸಾರ್ವಜನಿಕರು ನಮ್ಮ ಗಮನಕ್ಕೆ ತಂದರೆ ಕೂಡಲೇ ಕ್ರಮವಹಿಸಲಾಗುವುದು.

- ಸಪ್ತಶ್ರೀ, ಉಪವಿಭಾಗಾಧಿಕಾರಿಗಳು, ತಿಪಟೂರು.

ಏಪ್ರಿಲ್ ತಿಂಗಳ ಮೊದಲ ವಾರದಲ್ಲಿ ಪೂರ್ವ ಮುಂಗಾರು ಮಳೆ ಆಗಬೇಕಿತ್ತು. ಈ ಬಾರಿ ಈವರೆಗೂ ಮಳೆ ಬಂದಿಲ್ಲ. ಬೋರ್‌ವೆಲ್‌ಗಳಲ್ಲಿ ನೀರಿಲ್ಲದೆ ತೆಂಗು ಮತ್ತು ಅಡಿಕೆ ಮರಗಳು ಬಾಡುತ್ತಿವೆ. ಕಾಯಿ, ಹರಳುಗಳು ಉದುರುತ್ತಿದ್ದು ಇಳುವರಿಯಲ್ಲಿ ಬಾರಿ ಕಡಿಮೆಯಾಗಲಿದೆ. ಕೆಲವರು ಟ್ಯಾಂಕರ್ ಮೂಲಕ ನೀರು ಹಾಯಿಸಿದರೂ ನೀರು ಸಾಲುತ್ತಿಲ್ಲ. ಸಾಲ ಮಾಡಿ ಕೊಳವೆ ಬಾವಿಗಳನ್ನು ಕೊರೆಸಿದರೂ ನೀರು ಬರುತ್ತಿಲ್ಲ. ಸರ್ಕಾರ ಇದಕ್ಕೇನಾದರೂ ಪರಿಹಾರ ನೀಡಬೇಕಿದೆ.

। ತಡಸೂರು ಗುರುಮೂರ್ತಿ, ಕೃಷಿಕ

click me!