ನೋವಿನಿಂದ ಬರುವ ಕಣ್ಣೀರು ಶಾಶ್ವತ: ಡಿಕೆಶಿ

By Kannadaprabha NewsFirst Published Mar 14, 2023, 5:51 AM IST
Highlights

ನಾನು ರೈತನ ಮಗ, ಮಣ್ಣಿನ ಮಗ ಎಂದೆಲ್ಲಾ ಜನರ ಮುಂದೆ ಹೇಳಿಕೊಂಡು ಕೆಲವರು ಕಣ್ಣೀರು ಹಾಕುತ್ತಾರೆ. ಸಾಮಾನ್ಯವಾಗಿ ನಕ್ಕಾಗಲೂ ಕಣ್ಣೀರು ಬರುತ್ತದೆ. ಆದರೆ, ನೋವಿನಿಂದ ಬರುವ ಕಣ್ಣೀರು ಶಾಶ್ವತ ಎಂದು ದಳಪತಿಗಳ ಕಣ್ಣೀರು ಕುರಿತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ವ್ಯಂಗ್ಯವಾಡಿದರು.

  ನಾಗಮಂಗಲ :  ನಾನು ರೈತನ ಮಗ, ಮಣ್ಣಿನ ಮಗ ಎಂದೆಲ್ಲಾ ಜನರ ಮುಂದೆ ಹೇಳಿಕೊಂಡು ಕೆಲವರು ಕಣ್ಣೀರು ಹಾಕುತ್ತಾರೆ. ಸಾಮಾನ್ಯವಾಗಿ ನಕ್ಕಾಗಲೂ ಕಣ್ಣೀರು ಬರುತ್ತದೆ. ಆದರೆ, ನೋವಿನಿಂದ ಬರುವ ಕಣ್ಣೀರು ಶಾಶ್ವತ ಎಂದು ದಳಪತಿಗಳ ಕಣ್ಣೀರು ಕುರಿತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ವ್ಯಂಗ್ಯವಾಡಿದರು.

ಪಟ್ಟಣದಲ್ಲಿ ನಡೆದ ಪ್ರಜಾಧ್ವನಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಮುಖ್ಯಮಂತ್ರಿಯಾಗಿಅವರಿಗೆ ಅಧಿಕಾರ ನೀಡಿದಾಗ 14-15 ತಿಂಗಳ ಕಾಲ ಅವರಿಗೆ ಶಕ್ತಿ ಕೊಟ್ಟೆವು. ಒಮ್ಮೆ ನಾವು ಶಕ್ತಿ ಕೊಡಲಿಲ್ಲ ಎಂದಾದರೆ ನಾವು ನಂಬಿರುವ ಶಕ್ತಿ ನಮಗೆ ಏನು ಬೇಕಾದರೂ ಶಿಕ್ಷೆ ಕೊಡಲಿ. ನಾವು ಕೊಟ್ಟ ಅಧಿಕಾರವನ್ನು ಕುಮಾರಸ್ವಾಮಿ ಉಳಿಸಿಕೊಳ್ಳಲಿಲ್ಲ. ಅಧಿಕಾರವಿದ್ದಾಗ ಏನೂ ಮಾಡಲಿಲ್ಲ. ಅಧಿಕಾರ ಹೋದ ಮೇಲೆ ಅಳುವುದರಿಂದ ಏನು ಪ್ರಯೋಜನ ಎಂದು ಪ್ರಶ್ನಿಸಿದರು.

Latest Videos

ಮರಕ್ಕೆ ಬೇರು ಎಷ್ಟು ಮುಖ್ಯವೋ ಮನುಷ್ಯರಿಗೆ ನಂಬಿಕೆ ಎನ್ನುವುದು ಅಷ್ಟೇ ಮುಖ್ಯ. ನಂಬಿಕೆ ಇಲ್ಲದಿದ್ದರೆ ಯಾವ ಸಂಬಂಧವೂ ಉಳಿಯುವುದಿಲ್ಲ. ಸಮಾಜಕ್ಕೆ ಕೊಟ್ಟಮಾತು ಉಳಿಸಿಕೊಂಡರೆ ಪ್ರಜಾಪ್ರಭುತ್ವದಡಿ ಕೆಲಸ ಮಾಡಲು ಸಾಧ್ಯ ಎಂದು ಸೂಚ್ಯವಾಗಿ ಹೇಳಿದರು.

ಪಕ್ಷ ನಿಷ್ಠರನ್ನು ಉಳಿಸಿಕೊಳ್ಳಲಿಲ್ಲ:

1999ರಲ್ಲಿ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಜೆಡಿಎಸ್‌ನವರು ಕೇವಲ 10 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರು. ಆಗ ಒಕ್ಕಲಿಗರಾಗಿ ಆ ಪಕ್ಷದಿಂದ ಗೆದ್ದಿದ್ದವರು ಚಲುವರಾಯಸ್ವಾಮಿ, ಚನ್ನಿಗಪ್ಪ. ಆಗ ನಾವು ಇವರನ್ನು ಪಕ್ಷಕ್ಕೆ ಕರೆದೆವು. ಇವರು ಒಪ್ಪಲಿಲ್ಲ. ದೇವೇಗೌಡರ ಮೇಲಿನ ಅಭಿಮಾನ, ಪ್ರೀತಿಯಿಂದ ಅಲ್ಲೇ ಉಳಿದರು. ಅಂತಹ ಪಕ್ಷ ನಿಷ್ಠರನ್ನು ಜೆಡಿಎಸ್‌ನಿಂದ ಉಳಿಸಿಕೊಳ್ಳಲಾಗಲಿಲ್ಲ ಎಂದು ಟೀಕಿಸಿದರು.

ಬಿಜೆಪಿ ಜೊತೆ ಸೇರಿ ಜೆಡಿಎಸ್‌ ಸರ್ಕಾರ ರಚನೆಗೆ ಮುಂದಾದಾಗ ಕುಮಾರಸ್ವಾಮಿಯನ್ನು ಮುಖ್ಯಮಂತ್ರಿ ಮಾಡಲು ಚಲುವರಾಯಸ್ವಾಮಿ, ಬಾಲಕೃಷ್ಣ, ಪುಟ್ಟಣ್ಣ, ಜಮೀರ್‌ ಎಲ್ಲರೂ ಸೇರಿ ಬೆಂಬಲಕೊಟ್ಟರು. ಇದನ್ನು ಆ ದಿನಗಳಲ್ಲಿ ಕುಮಾರಸ್ವಾಮಿ ಅವರೇ ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. ಕುಮಾರಸ್ವಾಮಿಗೆ ಅಧಿಕಾರ ಸಿಗಲು ನೆರವಾದವರನ್ನೇ ಇಂದು ರಾಜಕೀಯವಾಗಿ ತುಳಿಯಲು ಹೊರಟಿದ್ದಾರೆ. ಅದಕ್ಕಾಗಿ ಇತಿಹಾಸವನ್ನು ಯಾರೂ ಮರೆಯಬಾರದು ಎಂದು ಕುಮಾರಸ್ವಾಮಿಗೆ ನೆನಪಿಸಿದರು.

ಕುಮಾರಸ್ವಾಮಿಗೆ ಈಗಾಗಲೇ ಎರಡು ಅವಕಾಶ ನೀಡಿದ್ದೀರಿ. ನಾನೂ ಸಹ ಒಕ್ಕಲಿಗ ನಾಯಕ. ನನಗೂ ಒಂದು ಅವಕಾಶ ಕೊಡಿ. ನೀವು ಕೊಡುವ ಅಧಿಕಾರವನ್ನು ಸ್ವಾರ್ಥಕ್ಕಾಗಿ ಬಳಸಿಕೊಳ್ಳುವುದಿಲ್ಲ. ನಿಮ್ಮ ಆತ್ಮಗೌರವಕ್ಕೆ ಧಕ್ಕೆ ತರುವ ಕೆಲಸವನ್ನು ನಾನೆಂದಿಗೂ ಮಾಡುವುದಿಲ್ಲ ಎಂದು ಭರವಸೆ ನೀಡಿದರು.

ಸುರೇಶ್‌ಗೌಡ ಕೊಡುಗೆ ಶೂನ್ಯ:

ಕಳೆದ ಐದು ವರ್ಷದಲ್ಲಿ ನಾಗಮಂಗಲ ಕ್ಷೇತ್ರದಲ್ಲಿ ಆಗಿರುವ ಅಭಿವೃದ್ಧಿ ಏನು. ಶಾಸಕರಾಗಿ ಸುರೇಶ್‌ಗೌಡರು ಯಾವ ಬದಲಾವಣೆಯನ್ನು ತಂದಿದ್ದಾರೆ ಎಂದು ಬಹಿರಂಗವಾಗಿ ಹೇಳಲಿ. ಇಂತಹ ನೂರು ಸುರೇಶ್‌ಗೌಡರನ್ನು ಹುಟ್ಟಿಹಾಕಬಹುದು. ಆದರೆ, ಒಬ್ಬ ಚಲುವರಾಯಸ್ವಾಮಿಯನ್ನು ಹುಟ್ಟಿಹಾಕಲಾಗುವುದಿಲ್ಲ. ಚಲುವರಾಯಸ್ವಾಮಿ ಕೇವಲ ನಾಗಮಂಗಲಕ್ಕೆ ಸೀಮಿತನ ಆದ ನಾಯಕನಲ್ಲ. ಅವರೊಬ್ಬ ಪಕ್ಷದ ಹಿರಿಯ ನಾಯಕ. ರಾಷ್ಟ್ರೀಯ ಪಕ್ಷವೊಂದರ ಧೀಮಂತ ನಾಯಕ ಎಂದು ಬಣ್ಣಿಸಿದರು.

ಕಾರ್ಯಕ್ರಮದಲ್ಲಿ ಕೆಪಿಸಿಸಿ ಉಪಾಧ್ಯಕ್ಷ ಎನ್‌.ಚಲುವರಾಯಸ್ವಾಮಿ, ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್‌, ವಿಧಾನಪರಿಷತ್‌ ಸದಸ್ಯರಾದ ಮಧು ಜಿ.ಮಾದೇಗೌಡ, ದಿನೇಶ್‌ ಗೂಳಿಗೌಡ, ಮಾಜಿ ಶಾಸಕರಾದ ರಮೇಶ್‌ ಬಂಡಿಸಿದ್ದೇಗೌಡ, ಕೆ.ಬಿ.ಚಂದ್ರಶೇಖರ್‌, ಹೆಚ್‌.ಬಿ.ರಾಮು, ಬಿ.ಪ್ರಕಾಶ್‌, ಬಿ.ರಾಮಕೃಷ್ಣ, ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್‌, ಮಹಿಳಾಧ್ಯಕೆ ಅಂಜನಾ, ಮುಖಂಡರಾದ ಕೆ.ಕೆ.ರಾಧಾಕೃಷ್ಣ, ಅಮರಾವತಿ ಚಂದ್ರಶೇಖರ್‌, ಗುರುಚರಣ್‌, ಮನ್‌ಮುಲ್‌ ಮಾಜಿ ಅಧ್ಯಕ್ಷ ಜವರೇಗೌಡ, ಮಂಡ್ಯ ಎಪಿಎಂಸಿ ಮಾಜಿ ಅಧ್ಯಕ್ಷೆ ಪಲ್ಲವಿ, ನಾಗಮಂಗಲ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ರಾಜೇಶ್‌, ಎಸ್‌ಎಲ್‌ಡಿಬಿ ಅಧ್ಯಕ್ಷ ತಿಮ್ಮರಾಯಿಗೌಡ, ಎಂಡಿಸಿಸಿ ನಿರ್ದೇಶಕ ನರಸಿಂಹಯ್ಯ, ಗ್ರಾಮಾಂತರ ಬ್ಲಾಕ್‌ ಅಧ್ಯಕ್ಷ ದಿವಾಕರ್‌ ಸೇರಿದಂತೆ ಇತರರಿದ್ದರು.

ಅಭಿವೃದ್ಧಿ ಸಾಕ್ಷಿ ಗುಡ್ಡೆಗಳೇನು?

ಕಳೆದ ಚುನಾವಣೆಯಲ್ಲಿ ಜಿಲ್ಲೆಯ ಜನರು ಏಳಕ್ಕೆ ಏಳು ಸ್ಥಾನಗಳಲ್ಲೂ ಜೆಡಿಎಸ್‌ ಪಕ್ಷವನ್ನು ಗೆಲ್ಲಿಸಿದರು. ಅದಕ್ಕೆ ಪ್ರತಿಯಾಗಿ ಜಿಲ್ಲೆಯೊಳಗೆ ನೀವು ನಿರ್ಮಿಸಿರುವ ಸಾಕ್ಷಿ ಗುಡ್ಡೆಗಳೇನು ಎಂದು ಪ್ರಶ್ನಿಸಿದ ಡಿ.ಕೆ.ಶಿವಕುಮಾರ್‌, ಈ ಬಗ್ಗೆ ಜಿಲ್ಲೆಯ ಜನರು ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ಅಭಿವೃದ್ಧಿಯ ಪರವಾಗಿರುವವರು ಯಾರು, ಅಭಿವೃದ್ಧಿಯ ವಿರೋಧಿಗಳು ಯಾರು ಎನ್ನುವುದನ್ನು ಅರ್ಥ ಮಾಡಿಕೊಂಡು ಮತ ಹಾಕಬೇಕು ಎಂದರು.

click me!