* ಹೊಸಪೇಟೆ ನಗರದಲ್ಲಿ ನಡೆದ ಘಟನೆ
* ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆಗೆ ಯತ್ನಿಸಿದ ಯುವಕ
* ಯುವಕನನ್ನು ರಕ್ಷಿಸಿ ಪೊಲೀಸರಿಗೆ ಒಪ್ಪಿಸಿದ ಶಿಕ್ಷಕ
ಹೊಸಪೇಟೆ(ಸೆ.23): ನಗರದ ಬಲದಂಡೆ ಮೇಲ್ಮಟ್ಟದ ಕಾಲುವೆ (ಎಚ್‌ಎಲ್‌ಸಿ)ಯಲ್ಲಿ ಕುಷ್ಟಗಿ ಮೂಲದ ಯುವಕ ಯಮನೂರಪ್ಪ (22) ಆತ್ಮಹತ್ಯೆಗೆ ಯತ್ನಿಸಿದಾಗ ಶಿಕ್ಷಕ ಮಧುಸೂದನ ಕಾಲುವೆಗೆ ಹಾರಿ ಯುವಕನನ್ನು ರಕ್ಷಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಜೀವನದಲ್ಲಿ ಜಿಗುಪ್ಸೆಗೊಂಡು ಯುವಕ ಆತ್ಮಹತ್ಯೆಗೆ ಯತ್ನಿಸಿದ್ದು, ಅಲ್ಲೇ ಇದ್ದ ಖಾಸಗಿ ಚಾಲಕರಾದ ಶ್ರೀನಿವಾಸ, ಆಷಿಶ್ ಎಂಬವರು ಬಟ್ಟೆ ತೊಳೆಯುತ್ತಿದ್ದರು. ಈಜು ಬಾರದ ಅವರು ಸಹಾಯಕ್ಕೆ ಕೂಗುತ್ತಿದ್ದರು. ಈ ವೇಳೆ ಅಲ್ಲೇ ತೆರೆಳುತ್ತಿದ್ದ ಹೊಸಪೇಟೆಯ ಆಶ್ರಯ ಕಾಲನಿಯ ಸರ್ಕಾರಿ ಶಾಲೆಯ ಶಿಕ್ಷಕ ಮಧುಸೂದನ ಕಾಲುವೆಗೆ ಹಾರಿ ಯುವಕನ ಪ್ರಾಣ ಉಳಿಸಿದ್ದಾರೆ. ಬಳಿಕ ಯುವಕ ಯಮನೂರಪ್ಪನನ್ನು ಗ್ರಾಮೀಣ ಪೋಲಿಸ್ ಠಾಣೆ ಪಿಐ ಶ್ರೀನಿವಾಸ ಮೇಟಿ, ಎಎಸ್‌ಐ ಸುರೇಶ, ಮುಖ್ಯಪೇದೆ ರಾಮಚಂದ್ರಪ್ಪ ಅವರಿಗೆ ಒಪ್ಪಿಸಿದರು.
ಬೆಳಗಾವಿ: ಸಾಲಬಾಧೆಯಿಂದ ಮನನೊಂದು ರೈತ ಆತ್ಮಹತ್ಯೆ
ಪೊಲೀಸರು ಯಮನೂರಪ್ಪನ ಕುಟುಂಬಸ್ಥರನ್ನು ಸಂಪರ್ಕಿಸಿದ್ದಾರೆ. ಶಾಲೆಯಿಂದ ಮಧ್ಯಾಹ್ನ ಮರಳಿ ಬರುತ್ತಿದ್ದಾಗ ಕಾಲುವೆ ಬಳಿ ಇಬ್ಬರು ಕೂಗುತ್ತಿರುವುದು ಕೇಳಿಸಿತು. ಕೂಡಲೇ ಕಾಲುವೆಗೆ ಹಾರಿ ಯುವಕನ ಪ್ರಾಣ ಉಳಿಸಿರುವೆ. ಬಳಿಕ ಉಪಚರಿಸಿ ಪೊಲೀಸರಿಗೆ ಒಪ್ಪಿಸಿರುವೆ ಎಂದು ಶಿಕ್ಷಕ ಮಧುಸೂದನ ಕನ್ನಡಪ್ರಭಕ್ಕೆ ತಿಳಿಸಿದರು.