ಕೋಲಾರದ ಕಲಾಂ ಖ್ಯಾತಿಯ ಶ್ರೀರಾಮರೆಡ್ಡಿ ಮೇಷ್ಟ್ರು ಇನ್ನಿಲ್ಲ

By Kannadaprabha News  |  First Published Dec 9, 2023, 6:03 PM IST

ಆದಿಚುಂಚನಗಿರಿ ಶ್ರೀ ನಿರ್ಮಲಾನಂದನಾಥ ಸ್ವಾಮಿಜಿ ಅವರ ಶಿಕ್ಷಣ ಕ್ಷೇತ್ರದ ಆಸಕ್ತಿಗೆ ಮಾರುಹೋಗಿ ಕೆಲ ವರ್ಷಗಳ ಹಿಂದೆ ಬೈರವೇಶ್ವರ ವಿದ್ಯಾಸಂಸ್ಥೆಯನ್ನು ಶ್ರೀ ಆದಿಚುಂಚನಗಿರಿ ಮಠಕ್ಕೆ ದಾನವಾಗಿ ಸಮರ್ಪಿಸಿದ್ದ ಶ್ರೀರಾಮರೆಡ್ಡಿ 


ಶ್ರೀನಿವಾಸಪುರ(ಡಿ.09):  ಅವಿಭಜಿತ ಕೋಲಾರ ಜಿಲ್ಲೆಯ ಶೈಕ್ಷಣಿಕ ಕ್ಷೇತ್ರದಲ್ಲಿ ವಿಶಿಷ್ಠ ಹೆಸರು ಮಾಡಿದ್ದ ಶಿಕ್ಷಣ ತಜ್ಞ ಶ್ರೀನಿವಾಸಪುರ ಬೈರವೇಶ್ವರ ಶಾಲೆಯ ಎಂ.ಶ್ರೀರಾಮರೆಡ್ಡಿ (೮೪) ಅವರು ಗುರುವಾರ ರಾತ್ರಿ ೮.೩೦ಕ್ಕೆ ನಿಧನರಾಗಿದ್ದಾರೆ. ಮೂರು ವರ್ಷದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಪತ್ನಿ, ಇಬ್ಬರು ಪುತ್ರರು, ಒಬ್ಬ ಪುತ್ರಿ ಹಾಗೂ ಅಪಾರ ಶಿಷ್ಯಕೋಟಿಯನ್ನು ಅಗಲಿದ್ದಾರೆ

ಶ್ರೀನಿವಾಸಪುರ ಹೊರವಲಯದ ಬೈರಪಲ್ಲಿ ಶಾಲೆಯಲ್ಲೇ ಕೊನೆಯುಸಿರೆಳೆದ ಶ್ರೀರಾಮರೆಡ್ಡಿ ಯವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕಾಗಿ ಶಾಲೆ ಆವರಣದಲ್ಲಿ ಇರಿಸಲಾಗಿತ್ತು. ಶುಕ್ರವಾರ ಮಧ್ಯಾಹ್ನ ೧೨ ಗಂಟೆ ನಂತರ ಅಂತಿಮ ವಿಧಿವಿಧಾನ ನಡೆಯಿತು.

Latest Videos

undefined

ಕನ್ನಡ ಚಿತ್ರರಂಗಕ್ಕೆ ಆಘಾತ, ಹಿರಿಯ ನಟಿ ಲೀಲಾವತಿ ನಿಧನ!

೧೯೬೦ರಲ್ಲಿ ಕೋಲಾರ ತಾಲೂಕಿನ ಹರಟಿ ಸರ್ಕಾರಿ ಪ್ರೌಢಶಾಲೆಯಲ್ಲಿ ಸಹ ಶಿಕ್ಷಕರಾಗಿ ವೃತ್ತಿ ಆರಂಭಿಸಿದ ಶ್ರೀರಾಮರೆಡ್ಡಿ ತಮ್ಮ ‘ಚೈತನ್ಯ’ ಇರುವವರೆಗೂ ‘ಶೈಕ್ಷಣಿಕ ತಪಸ್ಸು’ ಮುಂದುವರೆಸಿದ್ದರು. ಹರಟಿಯ ನಂತರ ಶ್ರೀನಿವಾಸಪುರ ತಾಲೂಕಿನ ಸೋಮಯಾಜಲಹಳ್ಳಿ ಮತ್ತು ಅರಿಕುಂಟೆ ಪ್ರೌಢ ಶಾಲೆಗಳಲ್ಲಿ ಮುಖ್ಯ ಶಿಕ್ಷಕರಾಗಿ ಕೆಲಸ ಮಾಡಿದ ಅವರು ಹೋದ ಕಡೆಯಲ್ಲೆಲ್ಲ ತಮ್ಮ ಸರಳ- ಸಜ್ಜನಿಕೆಯ ನಡವಳಿಕೆ ಮೂಲಕ ಆ ಭಾಗದ ಮಕ್ಕಳ ಅಚ್ಚುಮೆಚ್ಚಿನ ಶಿಕ್ಷಕರಾಗಿದ್ದರು

೧೯೯೮ರಲ್ಲಿ ಸರ್ಕಾರಿ ಸೇವೆಯಿಂದ ನಿವೃತ್ತರಾದ ನಂತರ ೧೯೯೯ರಲ್ಲಿ ಶ್ರೀನಿವಾಸಪುರ ತಾಲ್ಲೂಕಿನ ಗ್ರಾಮೀಣ ಮಕ್ಕಳಿಗಾಗಿ ಶ್ರೀನಿವಾಸಪುರ ಹೊರವಲಯದ ಬೈರಪಲ್ಲಿಯಲ್ಲಿ ದಾನಿಗಳ ನೆರವಿನಿಂದ ಭೈರವೇಶ್ವರ ವಿದ್ಯಾಸಂಸ್ಥೆಯನ್ನು ಸ್ಥಾಪಿಸಿದರು. ಗ್ರಾಮೀಣ ಮಕ್ಕಳ ಕೀಳರಿಮೆ ನಿವಾರಿಸಲು ಇಂಗ್ಲಿಷ್ ಮತ್ತು ಕಂಪ್ಯೂಟರ್ ಶಿಕ್ಷಣಕ್ಕೆ ಒತ್ತುದ್ದರು.

ಆದಿಚುಂಚನಗಿರಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರ ಶಿಕ್ಷಣ ಕ್ಷೇತ್ರದ ಆಸಕ್ತಿಗೆ ಮಾರುಹೋಗಿದ್ದ ಶ್ರೀರಾಮರೆಡ್ಡಿ ಅವರು ಕೆಲ ವರ್ಷಗಳ ಹಿಂದೆ ಬೈರವೇಶ್ವರ ವಿದ್ಯಾಸಂಸ್ಥೆಯನ್ನು ಶ್ರೀ ಆದಿಚುಂಚನಗಿರಿ ಮಠಕ್ಕೆ ದಾನವಾಗಿ ಸಮರ್ಪಿಸಿದ್ದರು.

click me!