ಮೀಸಲಾತಿಗಾಗಿ ಮತ್ತೆ ಹೋರಾಟಕ್ಕೆ ಅಣಿಯಾದ ಪಂಚಮಸಾಲಿ ಸಮಾಜ..!

By Girish Goudar  |  First Published Dec 9, 2023, 5:04 PM IST

ಸಿಎಂ ಸಿದ್ದರಾಮಯ್ಯ ತಮ್ಮ ಮನವಿಗೆ ಸ್ಪಂದಿಸದ ಹಿನ್ನೆಲೆ ಡಿಸೆಂಬರ್ 13ರಂದು ಬೆಳಗಾವಿಯಲ್ಲಿ ಬೃಹತ್ ಪ್ರತಿಭಟನೆಗೆ ನಿರ್ಧರಿಸಿದ ಪಂಚಮಸಾಲಿ ಸಮುದಾಯ 


ಬೆಳಗಾವಿ(ಡಿ.09):  ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವಂತೆ ಆಗ್ರಹಿಸಿ ಕಳೆದ ಬಾರಿ ಬೆಳಗಾವಿ ಅಧಿವೇಶನದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗಿತ್ತು. ಅಂದಿನ ಬಿಜೆಪಿ ಸರ್ಕಾರ ಕೊನೆಯ ಹಂತದಲ್ಲಿ 2ಡಿ ಮೀಸಲಾತಿ ಘೋಷಣೆ ಮಾಡಿ ಕೈ ತೊಳೆದುಕೊಂಡಿತ್ತು. 

ಬಳಿಕ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಸಿದ್ದರಾಮಯ್ಯ ಸಿಎಂ ಆದ ಬಳಿಕ ಬಜೆಟ್ ಅಧಿವೇಶನ ಮುಗಿದ ಮೇಲೆ ಪಂಚಮಸಾಲಿ ಸಮುದಾಯದ ನಾಯಕರ ಸಭೆ ಕರೆದು ಚರ್ಚಿಸುವುದಾಗಿ ಹೇಳಿದ್ರು.  ಬಜೆಟ್ ಅಧಿವೇಶನ ಮುಗಿದು ಬೆಳಗಾವಿ ಅಧಿವೇಶನ ಆರಂಭವಾಗಿ ವಾರ ಕಳೆದರೂ ಸಿಎಂ ಸಭೆ ಕರೆದಿಲ್ಲ. ಹೀಗಾಗಿ ಬೆಳಗಾವಿ ಅಧಿವೇಶನ ವೇಳೆ‌ ಮತ್ತೊಂದು ಸುತ್ತಿನ ಹೋರಾಟಕ್ಕೆ ಪಂಚಮಸಾಲಿ ಸಮುದಾಯ ಅಣಿಯಾಗಿದೆ. ಈ ಕುರಿತು ಡಿಟೇಲ್ ರಿಪೋರ್ಟ್ ಇಲ್ಲಿದೆ ನೋಡಿ‌...

Latest Videos

undefined

ಪಂಚಮಸಾಲಿ ಮೀಸಲಾತಿ ಹೋರಾಟಕ್ಕೆ ಸರಿಯಾದ ನ್ಯಾಯ ಸಿಕ್ಕಿಲ್ಲ: ಬಸವಜಯಮೃತ್ಯುಂಜಯ ಸ್ವಾಮೀಜಿ

ಪಂಚಮಸಾಲಿ ಸಚಿವರು, ಶಾಸಕರ ಮನವಿಗೆ ಕ್ಯಾರೇ ಎನ್ನದ ಸಿಎಂ?

ಹೌದು, ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವಂತೆ ಕಳೆದ ಮೂರು ವರ್ಷಗಳಲ್ಲಿ ಆರು ಸುತ್ತಿನಲ್ಲಿ ಹೋರಾಟ ನಡೆಸಿದರೂ ಫಲ ಮಾತ್ರ ಸಿಕ್ಕಿಲ್ಲ.‌ ಕಳೆದ ವರ್ಷ ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ಪಂಚಮಸಾಲಿ ಸಮುದಾಯದ ಒತ್ತಡಕ್ಕೆ ಮಣಿದು ಕೊನೆ ಘಳಿಗೆಯಲ್ಲಿ 2ಡಿ ಮೀಸಲಾತಿ ಘೋಷಣೆ ಮಾಡಿದ್ರು. ಗೊಂದಲದ ಗೂಡಾಗಿದ್ದ 2ಡಿ ಮೀಸಲಾತಿ ಅನುಷ್ಠಾನಕ್ಕೆ ಬರಲೇ ಇಲ್ಲ. ವಿಧಾನಸಭೆ ಚುನಾವಣೆ ಬಳಿಕ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷ ತಮ್ಮ ಮನವಿಗೆ ಸ್ಪಂದಿಸಿ ಸರ್ಕಾರ ಮೀಸಲಾತಿ ಘೋಷಿಸುತ್ತೆ ಎಂಬ ನಿರೀಕ್ಷೆಯಲ್ಲಿ ಇದ್ದ ಪಂಚಮಸಾಲಿ ಸಮುದಾಯಕ್ಕೆ ನಿರಾಸೆಯಾಯಿತು. ಬಳಿಕ ಸಿಎಂ ಸಿದ್ದರಾಮಯ್ಯ ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಸಮುದಾಯದ ನಾಯಕರ ಸಭೆ ಕರೆದು ಚರ್ಚಿಸಿ ನಿರ್ಧಾರ ಕೈಗೊಳ್ಳುವ ಭರವಸೆ ನೀಡಿದ್ರು. 

ಬಜೆಟ್ ಅಧಿವೇಶನ ಬಳಿಕ ಸಭೆ ಕರೆದು ಚರ್ಚಿಸುವುದಾಗಿ ಹೇಳಿದ್ದ ಸಿಎಂ ಸಿದ್ದರಾಮಯ್ಯ ಸಭೆ ಕರೆಯದ ಹಿನ್ನೆಲೆ ಬಸವ ಜಯಮೃತ್ಯುಂಜಯ ಸ್ವಾಮೀಜಿ ಇಷ್ಟಲಿಂಗ ಪೂಜೆ ಮೂಲಕ ಆರನೇ ಸುತ್ತಿನ ಹೋರಾಟ ಆರಂಭಿಸಿದ್ರು. ಬೆಳಗಾವಿಯ ಅಧಿವೇಶನ ವೇಳೆ ಪಂಚಮಸಾಲಿ ಸಮುದಾಯದ ನಾಯಕರ ಸಭೆ ಕರೆಯುವಂತೆ ಆಗ್ರಹಿಸಿದ್ರು. ಆದ್ರೆ ಸಿಎಂ ಮಾತ್ರ ಮನವಿಗೆ ಸ್ಪಂದಿಸದ ಹಿನ್ನೆಲೆ ಮಂಗಳವಾರದಂದು ಬೆಳಗಾವಿಯ ಪ್ರೆಸಿಡೆನ್ಸಿ ಕ್ಲಬ್‌ನಲ್ಲಿ ಪಂಚಮಸಾಲಿ ಸಮುದಾಯದ ಸಚಿವರು, ಶಾಸಕರ ಜೊತೆ ಬಸವ ಜಯಮೃತ್ಯುಂಜಯ ಶ್ರೀ ಕ್ಲೋಸ್ ಡೋರ್ ಮೀಟಿಂಗ್ ಮಾಡಿದ್ರು. 

ಸಭೆಗೆ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್, ಶಿವಾನಂದ ಪಾಟೀಲ್, ಶಾಸಕರಾದ ಬಿ.ಆರ್‌.ಪಾಟೀಲ್, ಅರವಿಂದ ಬೆಲ್ಲದ, ವಿಜಯಾನಂದ ಕಾಶಪ್ಪನವರ್ ಸೇರಿ ಹಲವರು ಭಾಗಿಯಾಗಿದ್ರು. ಆದ್ರೆ ಪ್ರಮುಖ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಮಾತ್ರ ಗೈರಾಗಿದ್ರು. ಅಂದು ನಡೆದ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಭೇಟಿಯಾಗಿ ಬೆಳಗಾವಿ ಅಧಿವೇಶನದೊಳಗೆ ಸಭೆ ಕರೆಯುವಂತೆ ಸಿಎಂಗೆ ಮನವಿ ಮಾಡುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿತ್ತು‌. ಅದರಂತೆ ಪಂಚಮಸಾಲಿ ಸಮುದಾಯದ ಸಚಿವರು, ಶಾಸಕರು ಸಿಎಂ ಸಿದ್ದರಾಮಯ್ಯಗೆ ಮನವಿ ಮಾಡಿದ್ದಾರೆ. ಆದ್ರೆ ಸಿಎಂ ಸಿದ್ದರಾಮಯ್ಯ ಬೆಳಗಾವಿಯಲ್ಲಿ ಬೇಡ ಬೆಂಗಳೂರಿನಲ್ಲಿ ಸಭೆ ಕರೆಯೋಣ ಅಂತಾ ತಿಳಿಸಿದ್ದಾರಂತೆ. ಸಿಎಂ ಸಿದ್ದರಾಮಯ್ಯ ತಮ್ಮ ಮನವಿಗೆ ಸ್ಪಂದಿಸದ ಹಿನ್ನೆಲೆ ಡಿಸೆಂಬರ್ 13ರಂದು ಬೆಳಗಾವಿಯಲ್ಲಿ ಬೃಹತ್ ಪ್ರತಿಭಟನೆಗೆ ಪಂಚಮಸಾಲಿ ಸಮುದಾಯದ ನಿರ್ಧರಿಸಿದೆ. 

ಈ ಕುರಿತು ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿರುವ ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯಮೃತ್ಯುಂಜಯ ಶ್ರೀ ಡಿ.13ರ ಬೆಳಗ್ಗೆ 11ಕ್ಕೆ ಬೆಳಗಾವಿಯ ಗಾಂಧಿ ಭವನದಿಂದ ಚನ್ನಮ್ಮ ವೃತ್ತದ ವರೆಗೆ ಮೆರವಣಿಗೆ ಮೂಲಕ ತೆರಳಿ ಪ್ರತಿಭಟನೆ ನಡೆಸುವುದಾಗಿ ತಿಳಿಸಿದ್ದಾರೆ.

ಇನ್ನು ಕಳೆದ ಬಾರಿ ಬೆಳಗಾವಿಯ ಅಧಿವೇಶನ ವೇಳೆ ಪಂಚಮಸಾಲಿ ಸಮುದಾಯದ ಹೋರಾಟ ಜೋರಾಗಿತ್ತು. ಸದನದ ಒಳಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿಷಯ ಪ್ರಸ್ತಾಪಿಸಿ ಹೋರಾಟ ಸಹ ಮಾಡಿದ್ರು. ಆದ್ರೆ ಈ ಬಾರಿ ಯಾವ ಶಾಸಕರು ಸಹ ವಿಧಾನಸಭೆಯಲ್ಲಿ ವಿಚಾರ ಪ್ರಸ್ತಾಪಿಸಿಲ್ಲ. ಅಲ್ಲದೇ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಹ ಹೋರಾಟದಿಂದ ಅಂತರ ಕಾಯ್ದುಕೊಂಡ ರೀತಿ ಕಾಣುತ್ತಿದೆ. ಮಂಗಳವಾರದಂದು ಬಸವ ಜಯಮೃತ್ಯುಂಜಯ ಶ್ರೀಗಳ ನೇತೃತ್ವದಲ್ಲಿ ನಡೆದ ಸಭೆಗೂ ಬಸನಗೌಡ ಪಾಟೀಲ್ ಯತ್ನಾಳ್ ಗೈರಾಗಿದ್ರು. ಪಂಚಮಸಾಲಿ ನಾಯಕರ ಕ್ಲೋಸ್ ಡೋರ್ ಮೀಟಿಂಗ್ ನಲ್ಲೂ ಬಿಜೆಪಿ ಶಾಸಕ ಅರವಿಂದ ಬೆಲ್ಲದ್ ಕಾಂಗ್ರೆಸ್ ಪಂಚಮಸಾಲಿ ನಾಯಕರ ನಡೆಗೆ ಬೇಸರ ವ್ಯಕ್ತಪಡಿಸಿದ್ರು‌. 

ಪಂಚಸಾಲಿ ನಾಯಕರಿಗೆ ತಪ್ಪಿದ ವಿರೋಧ ಪಕ್ಷದ ನಾಯಕ ಸ್ಥಾನ; ಸಿಡಿದೆದ್ದ ಜಯಮೃತ್ಯುಂಜಯಶ್ರೀ

ಈಗ ಪಂಚಮಸಾಲಿ ಸಮುದಾಯದ ಶಾಸಕರು ಸದನದ ಒಳಗೆ ಧ್ವನಿ ಎತ್ತುವಂತೆ ಬಸವ ಜಯಮೃತ್ಯುಂಜಯ ಸ್ವಾಮೀಜಿ ಮನವಿ ಮಾಡಿದ್ದು, ಸೋಮವಾರದಿಂದ ನಡೆಯುವ ಅಧಿವೇಶನದಲ್ಲಿ ಶಾಸಕರು ವಿಷಯ ಪ್ರಸ್ತಾಪಿಸುತ್ತಾರಾ ಎಂಬುದನ್ನು ಕಾದು ನೋಡಬೇಕಾಗಿದೆ.‌ ಮತ್ತೊಂದೆಡೆ ಪಂಚಮಸಾಲಿ ಸಮುದಾಯದ ಹೋರಾಟವನ್ನು ರಾಜಕಾರಣಿಗಳು ರಾಜಕೀಯ ದಾಳವಾಗಿ ಬಳಸುತ್ತಿದ್ದಾರಾ ಎಂಬ ಪ್ರಶ್ನೆ ಮೂಡಿದೆ. ಈ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿರುವ ಬಸವ ಜಯಮೃತ್ಯುಂಜಯ ಸ್ವಾಮೀಜಿ ಸದನದ ಒಳಗೆ ಶಾಸಕರು ಧ್ವನಿ ಎತ್ತುತ್ತಾರೆ. ಸದನದ ಹೊರಗೆ ನಾವು ಹೋರಾಟ ಮಾಡ್ತೀವಿ ಅಂದಿದ್ದಾರೆ. ಡಿ.13ರೊಳಗೆ‌ ಸಿಎಂ ಸಿದ್ದರಾಮಯ್ಯ ಸಭೆ ಕರೆಯದಿದ್ರೆ ಬೃಹತ್ ಹೋರಾಟ ನಡೆಸುವುದಾಗಿಯೂ ತಿಳಿಸಿದ್ದಾರೆ.

ಒಟ್ಟಾರೆಯಾಗಿ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಹೋರಾಟ 6ನೇ ಹಂತ ತಲುಪಿದರೂ ಫಲಪ್ರದವಾಗುತ್ತಿಲ್ಲ. ಡಿಸೆಂಬರ್ 13ರಂದು ಬೆಳಗಾವಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಲು ಸಮುದಾಯ ಸಜ್ಜಾಗಿದ್ದು ಸರ್ಕಾರ ಯಾವ ಕ್ರಮ ಕೈಗೊಳ್ಳುತ್ತೆ ಕಾದು ನೋಡಬೇಕು.

click me!