ಶಿಕ್ಷಕನ ಹೆಂಡ್ತಿ ಲವ್ವಿ-ಡವ್ವಿ : ಹೊಳೆದಂಡೇಲಿ ಅವನ ಜೊತೆ ಸಿಕ್ಕಿಬಿದ್ದು ದಾರುಣ ಅಂತ್ಯ

By Kannadaprabha News  |  First Published Nov 2, 2020, 3:01 PM IST

ಶಿಕ್ಷಕನ ಹೆಂಡತಿ ಲವ್ವ ಡವ್ವಿ ಪ್ರಕರಣ ಕೊನೆಗೆ ದಾರುಣ ಅಂತ್ಯ ಕಂಡ ಪ್ರಕರಣ ನಡೆದಿದೆ. 


ದಾವಣಗೆರೆ (ನ.02):  ಒಂದೇ ದಿನ ಬೇರೆ ಬೇರೆ ತಾಲೂಕಿನಲ್ಲಿ ನಡೆದಿದ್ದ ಜೋಡಿ ಕೊಲೆ ಪ್ರಕರಣ ಸಂಬಂಧ 48 ಗಂಟೆಯಲ್ಲೇ ಮೃತಳ ಪತಿಯನ್ನು ಬಂಧಿಸುವಲ್ಲಿ ಜಿಲ್ಲೆಯ ಪೊಲೀಸರು ಯಶಸ್ವಿಯಾಗಿದ್ದಾರೆ. ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಟಾಧಿಕಾರಿ ಹನುಮಂತರಾಯ ವಿಷಯ ತಿಳಿಸಿದರು.

ಚನ್ನಗಿರಿ ತಾ. ಕಾರಿಗನೂರು ಕ್ರಾಸ್‌ ನಿವಾಸಿ ಶ್ವೇತಾ (26) ಹಾಗೂ ವೇದಮೂರ್ತಿ(29) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಶ್ವೇತಾಳ ಪತಿ, ಶಿಕ್ಷಕ ಶಿವಕುಮಾರನನ್ನು ಪೊಲೀಸರು ಬಂಧಿಸಿದ್ದಾರೆ ಎಂದರು.

Latest Videos

undefined

ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕು ಮೂಲದ ಆರೋಪಿ ಶಿಕ್ಷಕ ಶಿವಕುಮಾರ ಕಾರಿಗನೂರು ಖಾಸಗಿ ಶಾಲೆಯಲ್ಲಿ ಶಿಕ್ಷಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದನು. ಶಿವಕುಮಾರ, ಶ್ವೇತಾ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಶ್ವೇತಾ ಕಾರಿಗನೂರುಗೆ ವೇದಮೂರ್ತಿ ಜೊತೆ ಅನೈತಿಕ ಸಂಬಂಧವಿತ್ತು. ಈ ಬಗ್ಗೆ ಶಿವಕುಮಾರ ಸಾಕಷ್ಟುಸಲ ಬುದ್ಧಿ ಹೇಳಿದ್ದ. ಅ.28ರಂದು ಹೊನ್ನಾಳಿ ತಾ. ತುಂಗಭದ್ರಾ ನದಿ ದಂಡೆಯಲ್ಲಿ ಶ್ವೇತಾ, ವೇದಮೂರ್ತಿ ಇರುವ ವಿಚಾರ ಶಿವಕುಮಾರನಿಗೆ ಗೊತ್ತಾಗಿದೆ.

ಮದುವೆ ಬಿಟ್ಟು ಕಕ್ಷಿದಾರನ ಜಾಮೀನಿಗೆ ವಕೀಲ ನೆರವು! ...

ಶಿಕ್ಷಕ ಶಿವಕುಮಾರ ತನ್ನ ಸಹೋದರ ಶಿವರಾಜನೊಂದಿಗೆ ಹೊನ್ನಾಳಿ ತಾ. ನದಿ ದಂಡೆಗೆ ಹೋಗಿದ್ದಾನೆ. ಅಲ್ಲಿ ವೇದಮೂರ್ತಿಯನ್ನು ಉಸಿರು ಕಟ್ಟಿಸಿ, ಸಾಯಿಸಿದ್ದಾನೆ. ನಂತರ ಶವವನ್ನು ನದಿಗೆ ಎಸೆದು, ಶ್ವೇತಾಳನ್ನು ಚನ್ನಗಿರಿ ತಾ. ಸೂಳೆಕೆರೆ ಬಿದ್ದು ಆತ್ಮಹತ್ಯೆ ಮಾಡಿ ಕೊಳ್ಳೋಣವೆಂದು ಶಿವಕುಮಾರ ಕರೆ ತಂದಿದ್ದಾನೆ. ನಂತರ ಚನ್ನಗಿರಿ ತಾ. ರಾಜ ಗೊಂಡನಹಳ್ಳಿ ತೋಟವೊಂದಕ್ಕೆ ಕರೆದೊಯ್ದು, ಆಕೆಯ ಉಸಿರು ಕಟ್ಟಿಸಿ, ಕೊಲೆ ಮಾಡಿದ್ದಾರೆ. ನಂತರ ಶ್ವೇತಾಳ ಶವವನ್ನು ಬಾವಿಗೆ ತಳ್ಳಿದ್ದ ಶಿವಕುಮಾರ ಅಲ್ಲಿಂದ ಪರಾರಿಯಾಗಿದ್ದನು ಎಂದು ವಿವರಿಸಿದರು.

ಪತ್ನಿಯ ಸ್ನೇಹಿತನನ್ನು ಹೊನ್ನಾಳಿ ತಾ. ತುಂಗಭದ್ರಾ ನದಿ ಬಳಿ ಹಾಗೂ ಪತ್ನಿಯನ್ನು ಚನ್ನಗಿರಿ ತಾಲೂಕಿನ ತೋಟವೊಂದರ ಬಾವಿಯಲ್ಲಿ ಕೊಲೆ ಮಾಡಿದ್ದ ಶಿವಕುಮಾರ ಹಾಗೂ ಆತನ ಸಹೋದರ ಶಿವರಾಜ ಪರಾರಿಯಾಗಿದ್ದರು. ಮೃತಳ ಸಹೋದರ ಚನ್ನಗಿರಿ ತಾ. ಮಾದೇನಹಳ್ಳಿ ಪ್ರದೀಪ ಚನ್ನಗಿರಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು.

ಪ್ರಕರಣದ ತನಿಖೆಗೆ ಗ್ರಾಮಾಂತರ ಡಿವೈಎಸ್ಪಿ ಪ್ರಶಾಂತ ಜಿ.ಮುನ್ನೋಳ್ಳಿ ನೇತೃತ್ವದಲ್ಲಿ ಸಿಪಿಐ ಆರ್‌.ಆರ್‌.ಪಾಟೀಲ, ಎಸ್‌ಐಗಳಾದ ಜಗದೀಶ, ರೂಪ್ಲಿಬಾಯಿ, ಅಪರಾಧ ವಿಭಾಗದ ಸಿಬ್ಬಂದಿಯಾದ ರುದ್ರೇಶ, ಮಂಜುನಾಥ, ರುದ್ರೇಶ, ಮೊಹಮ್ಮದ್‌ ಖಾನ್‌, ಧರ್ಮ, ಪ್ರವೀಣ ಗೌಡ, ಚಾಲಕರಾದ ರಘು, ರವಿ, ರೇವಣಸಿದ್ದಪ್ಪ ಒಳಗೊಂಡ 3 ತಂಡ ರಚಿಸಲಾಗಿತ್ತು.

ಆರೋಪಿಗಳ ಶೋಧ ಕೈಗೊಂಡ ಪೊಲೀಸರು ಶ್ವೇತಾ ಹಾಗೂ ವೇದಮೂರ್ತಿ ಜೋಡಿ ಕೊಲೆಯನ್ನು ಒಬ್ಬರೇ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದ ಹಿನ್ನೆಲೆ ಆರೋಪಿಯನ್ನು ಭಾನುವಾರ ಬಂಧಿಸಿ, ವಿಚಾರಣೆಗೆ ಒಳಪಡಿಸಿದಾಗ 9 ವರ್ಷದ ಹಿಂದೆ ತಾನು ಶ್ವೇತಾಗೆ ಮದುವೆಯಾಗಿದ್ದು, ಕಾರಿಗನೂರು ಕ್ರಾಸ್‌ ಬಳಿ ಮನೆ ಮಾಡಿಕೊಂಡಿದ್ದೆವು. ಅದೇ ಗ್ರಾಮದ ವೇದಮೂರ್ತಿ ಜೊತೆ ಶ್ವೇತಾ ಅನೈತಿಕ ಸಂಬಂಧ ಹೊಂದಿದ್ದು, ಎಷ್ಟೇ ಬುದ್ಧಿ ಹೇಳಿದರೂ ಮತ್ತೆ ಅನೈತಿಕ ಸಂಬಂಧ ಮುಂದುವರಿಸಿದ್ದರೆಂದು ಬಾಯಿ ಬಿಟ್ಟಿದ್ದಾನೆ ಎಂದು ಎಸ್ಪಿ ಹೇಳಿದರು.

ಅನೈತಿಕ ಸಂಬಂಧದ ವಿಚಾರಕ್ಕೆ ಜಗಳ ಮಾಡಿ, ಮಗಳನ್ನು ಕರೆದುಕೊಂಡು ಶ್ವೇತ ಮನೆ ಬಿಟ್ಟು ಹೋಗಿದ್ದಳು. ಇಬ್ಬರೂ ಹೊನ್ನಾಳಿ ತಾ. ನದಿ ತಂಡೆ ಮೇಲಿರುವ ವಿಚಾರ ಗೊತ್ತಾಗಿ, ತನ್ನ ಸಹೋದರ ಶಿವರಾಜನ ಜೊತೆಗೆ ಹೋಗಿ ವೇದಮೂರ್ತಿ ಕೊಲೆ ಮಾಡಿ, ನೀರಿನಲ್ಲಿ ಬಿಸಾಡಿದ್ದೆವು. ನಂತರ ಎಲ್ಲರೂ ಕಾರಿಗನೂರು ಬಂದು, ಶ್ವೇತಾ, ತಾನು ಸೂಳೆಕೆರೆಗೆ ಬಿದ್ದು ಸಾಯಲು ನಿರ್ಧರಿಸಿದ್ದೆವು. ಸಾಧ್ಯವಾಗದೇ ಚನ್ನಗಿರಿಗೆ ಹೋಗಿ ವಿಷ ಕುಡಿದು ಸಾಯೋಣವೆಂದು ಕೊಂಡಿದ್ದೆವು. ಆದರೆ, ಅಲ್ಲಿ ಯಾವುದೇ ಅಂಗಡಿ ತೆರೆಯದೇ ಇದ್ದುದರಿಂದ ಬೀರೂರು ರಸ್ತೆ ಮೂಲಕ ರಾಜಗೊಂಡನಹಳ್ಳಿ ಗ್ರಾಮದ ತೋಟಕ್ಕೆ ಹೋಗಿ, ಶ್ವೇತಾಳನ್ನು ಕೊಲೆ ಮಾಡಿ,ಬಾವಿಗೆ ಹಾಕಿದ್ದಾಗಿ ಆರೋಪಿ ಶಿವಕುಮಾರ ಬಾಯಿ ಬಿಟ್ಟಿದ್ದಾನೆ. ತಲೆ ಮರೆಸಿಕೊಂಡ ಮತ್ತೊಬ್ಬ ಆರೋಪಿ ಶಿವರಾಜನ ಮಾಹಿತಿ ಇದ್ದು, ಶೀಘ್ರವೇ ಬಂಧಿಸಲಿದ್ದೇವೆ ಎಂದು ತಿಳಿಸಿದರು.

ಎಎಸ್ಪಿ ಎಂ.ರಾಜೀವ್‌, ಚನ್ನಗಿರಿ ಡಿವೈಎಸ್ಪಿ ಪ್ರಶಾಂತ ಮುನ್ನೋಳ್ಳಿ, ಸಿಪಿಐ ಆರ್‌.ಆರ್‌.ಪಾಟೀಲ, ಎಸ್‌ಐಗಳಾದ ಜಗದೀಶ, ರೂಪ್ಲಿಬಾಯಿ ಹಾಗೂ ಸಿಬ್ಬಂದಿ ಇದ್ದರು.

click me!