ಕಾಂಗ್ರೆಸ್ ನಾಯಕಿ ಬಿಜೆಪಿ ಸೇರ್ಪಡೆಯಾದ ಘಟನೆ ನಡೆದಿದೆ. ಇದರಿಂದ ಕಾಂಗ್ರೆಸ್ ಕನಸು ಭಗ್ನವಾದಂತಾಗಿದೆ
ಶಿಕಾರಿಪುರ (ನ.02): ಕಾಂಗ್ರೆಸ್‌ನಿಂದ ಬಿಜೆಪಿಗೆ ಚುನಾಯಿತ ಪುರಸಭಾ ಸದಸ್ಯರ ಸೇರ್ಪಡೆ ಪರ್ವ ಮುಂದುವರಿದಿದ್ದು, ಭಾನುವಾರ ದೊಡ್ಡಪೇಟೆ ವಾರ್ಡ್‌ನಿಂದ ಕಾಂಗ್ರೆಸ್ ಮೂಲಕ ಆಯ್ಕೆಯಾಗಿದ್ದ ಮತ್ತೊಬ್ಬ ಮಹಿಳಾ ಸದಸ್ಯೆ ಜ್ಯೋತಿ ಅಧಿಕೃತವಾಗಿ ಪಕ್ಷ ಹಾಗೂ ಚುನಾಯಿತ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವ ಮೂಲಕ ಅಧಿಕಾರದ ಗದ್ದುಗೆ ಏರಬೇಕೆಂದಿದ್ದ ಕಾಂಗ್ರೆಸ್ ಕನಸಿಗೆ ಬಲವಾದ ಮರ್ಮಾಘಾತ ನೀಡಿದ್ದಾರೆ.
23 ಸದಸ್ಯರ ಪುರಸಭೆಯಲ್ಲಿ ಕಳೆದ ಒಂದೂವರೆ ವರ್ಷದ ಹಿಂದೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನ 12 ಸದಸ್ಯರು, ಬಿಜೆಪಿಯಿಂದ 9 ಸದಸ್ಯರು ಹಾಗೂ ಇಬ್ಬರು ಪಕ್ಷೇತರರು ಗೆಲವು ಸಾಧಿಸಿದ್ದು, ಕಳೆದ ಎರಡು ದಶಕದಿಂದ ಅಧಿಕಾರ ವಂಚಿತವಾಗಿದ್ದ ಕಾಂಗ್ರೆಸ್‌ನಲ್ಲಿ ಸ್ಪಷ್ಟಬಹುಮತದ ಮೂಲಕ ಅಧಿಕಾರ ಗದ್ದುಗೆ ಏರಲು ತೀವ್ರ ರೀತಿ ಪೈಪೋಟಿ ಆರಂಭವಾಗಿತ್ತು.
15ರಲ್ಲಿ 14 ಸ್ಥಾನ ಜೆಡಿಎಸ್ ಪಾಲು : ಭರ್ಜರಿ ಜಯಭೇರಿ .
ಬದಲಾದ ಸನ್ನಿವೇಶದಲ್ಲಿ ಆಶ್ರಯ ಬಡಾವಣೆಯಿಂದ ಆಯ್ಕೆಯಾಗಿದ್ದ ಉಮಾವತಿ ಹಾಗೂ ಜಯನಗರದಿಂದ ಆಯ್ಕೆಯಾಗಿದ್ದ ರಮೇಶ (ಗುಂಡ) ಅವರು ಪಕ್ಷ ಹಾಗೂ ಸದಸ್ಯತ್ವಕ್ಕೆ ಅಧಿಕೃತವಾಗಿ ರಾಜೀನಾಮೆ ಸಲ್ಲಿಸಿ ಬಿಜೆಪಿಗೆ ಸೇರ್ಪಡೆಗೊಂಡು ಕಾಂಗ್ರೆಸ್ ಪಕ್ಷದ ಅಧಿಕಾರದ ಕನಸನ್ನು ಭಗ್ನಗೊಳಿಸಿದ್ದರು. ಇದೀಗ ದೊಡ್ಡಪೇಟೆಯಿಂದ ಆಯ್ಕೆಯಾಗಿದ್ದ ಜ್ಯೋತಿ ಸಿದ್ದಲಿಂಗೇಶ್ ಸಹ ಅದೇ ಮಾದರಿಯಲ್ಲಿ ಕಾಂಗ್ರೆಸ್ ಹಾಗೂ ಪುರಸಭಾ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿ 12 ಸದಸ್ಯ ಬಲವನ್ನು 9ಕ್ಕೆ ಕುಗ್ಗಿಸಿದ್ದಾರೆ. ಇದರಿಂದ ಬಿಜೆಪಿ ಬಲ 11ಕ್ಕೆ ಏರಿಕೆಯಾಗಿದ್ದು, ಇದೇ 9ರ ಸೋಮವಾರ ನಿಗದಿಯಾಗಿರುವ ಅಧ್ಯಕ್ಷ (ಬಿಸಿಎಂಎ ಮಹಿಳೆ) ಹಾಗೂ ಉಪಾಧ್ಯಕ್ಷ (ಸಾಮಾನ್ಯ)ರ ಆಯ್ಕೆಯಲ್ಲಿ ಅಧಿಕಾರದ ಗದ್ದುಗೆ ಹಿಡಿಯುವುದು ನಿಚ್ಚಳವಾಗಿದೆ.
ಭಾನುವಾರ ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಗೊಂಡ ಜ್ಯೋತಿ ಸಿದ್ದಲಿಂಗೇಶ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ದೊಡ್ಡಪೇಟೆ ಮತದಾರರ ಸಮಸ್ಯೆ ಪರಿಹರಿಸಿ ನಿವೇಶನ ಮತ್ತಿತರ ಸೌಲಭ್ಯ ಕಲ್ಪಿಸಿಕೊಡುವ ಭರವಸೆ ಮೇರೆಗೆ ಆಯ್ಕೆಯಾಗಿದ್ದು, ಕಾಂಗ್ರೆಸ್‌ನಿಂದ ಭರವಸೆ ಈಡೇರಿಸುವುದು ಅಸಾಧ್ಯ. ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಸಂಸದ ರಾಘವೇಂದ್ರರ ಬಗ್ಗೆ ನಂಬಿಕೆಯಿಂದ ಮತದಾರರಿಗೆ ಸಾಧ್ಯವಾದ ಸೌಲಭ್ಯ ಕಲ್ಪಿಸಿಕೊಟ್ಟು ಋುಣ ಕಡಿಮೆಗೊಳಿಸಲು ವೈಯುಕ್ತಿಕ ಆಸೆ ಆಕಾಂಕ್ಷೆಗಳಿಗೆ ತಿಲಾಂಜಲಿ ಹೇಳಿ ಬಿಜೆಪಿಗೆ ಸೇರ್ಪಡೆಗೊಂಡಿರುವುದಾಗಿ ತಿಳಿಸಿದರು.
ಬಿಜೆಪಿ ನಗರಾಧ್ಯಕ್ಷ ಟಿ.ಎಸ್.ಮೋಹನ್ ಮಾತನಾಡಿ, ಮುಖ್ಯಮಂತ್ರಿ ಹಾಗೂ ಸಂಸದರ ಅಭಿವೃದ್ಧಿ ಪರ ರಾಜಕಾರಣದ ಜತೆಗೆ ಪಕ್ಷದ ತತ್ವ ಸಿದ್ಧಾಂತ ರಾಷ್ಟ್ರೀಯತೆಯ ವಿಶಾಲ ತಳಹದಿಯನ್ನು ಮೆಚ್ಚಿ ಈಗಾಗಲೇ ಹಲವು ವಿರೋಧಿ ಮುಖಂಡರು, ಪುರಸಭಾ ಸದಸ್ಯರು ಪಕ್ಷಕ್ಕೆ ಸೇರ್ಪಡೆಯಾಗಿದ್ದು, ಶೀಘ್ರದಲ್ಲೇ ಹೆಚ್ಚಿನ ಮುಖಂಡರು ಆಗಮಿಸಲಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಡಿಸಿಸಿ ಬ್ಯಾಂಕ್ ಪ್ರಭಾರ ಅಧ್ಯಕ್ಷ ಚನ್ನವೀರಪ್ಪ, ಪುರಸಬಾ ಸದಸ್ಯ ರೇಣುಕಸ್ವಾಮಿ, ನಾಮನಿರ್ದೇಶಿತ ಸದಸ್ಯ ಬಿ.ಪಿ.ಶಿವನಗೌಡ, ದೇವೇಂದ್ರಪ್ಪ ಬೆಣ್ಣೆ, ತಾಲೂಕು ಅಧ್ಯಕ್ಷ ವೀರೇಂದ್ರ ಪಾಟೀಲ್, ಉಪಾಧ್ಯಕ್ಷ ಸುಕೇಂದ್ರಪ್ಪ, ಪರಶುರಾಮ, ಸಿದ್ದಲಿಂಗೇಶ್, ಯುವ ಮೋರ್ಚಾ ಅಧ್ಯಕ್ಷ ಪ್ರವೀಣ ಬೆಣ್ಣೆ, ಮಮತಾ ಚಂದ್ರಕುಮಾರಗೌಡ ಉಪಸ್ಥಿತರಿದ್ದರು.