ಹೋಟೆಲ್‌ಗಳಿಂದ ಟೀ-ಕಾಫಿ ಗ್ರಾಹಕರ ಸುಲಿಗೆ: ಮಧ್ಯಮ ವರ್ಗದವರು ಕಂಗಾಲು

Published : Apr 09, 2025, 12:45 PM ISTUpdated : Apr 09, 2025, 12:51 PM IST
ಹೋಟೆಲ್‌ಗಳಿಂದ ಟೀ-ಕಾಫಿ ಗ್ರಾಹಕರ ಸುಲಿಗೆ: ಮಧ್ಯಮ ವರ್ಗದವರು ಕಂಗಾಲು

ಸಾರಾಂಶ

ಹಾಲಿನ ದರ ಏರಿಕೆಯನ್ನೇ ನೆಪ ಮಾಡಿಕೊಂಡಿರುವ ನಗರದ ಹೋಟೆಲ್‌ ಮಾಲೀಕರು ಕಾಫಿ-ಟೀ ಪ್ರಿಯರ ಸುಲಿಗೆಗೆ ಇಳಿದಿರುವ ಆರೋಪ ಕೇಳಿಬಂದಿದೆ. 

ಬೆಂಗಳೂರು (ಏ.09): ಹಾಲಿನ ದರ ಏರಿಕೆಯನ್ನೇ ನೆಪ ಮಾಡಿಕೊಂಡಿರುವ ನಗರದ ಹೋಟೆಲ್‌ ಮಾಲೀಕರು ಕಾಫಿ-ಟೀ ಪ್ರಿಯರ ಸುಲಿಗೆಗೆ ಇಳಿದಿರುವ ಆರೋಪ ಕೇಳಿಬಂದಿದೆ. ಹಾಲಿನ ದರ ಪ್ರತಿ ಲೀಟರ್‌ಗೆ ಏರಿಕೆಯಾಗಿದ್ದು ₹4, ಆದರೆ ಹೋಟೆಲ್‌ಗಳು ಒಂದು ಕಪ್‌ ಟೀ-ಕಾಫಿ ಬೆಲೆ ಹೆಚ್ಚಿಸಿದ್ದು ₹5 - ₹10 ! ಸಿಲಿಕಾನ್‌ಸಿಟಿಯ ಹೋಟೆಲ್‌ಗಳು ಹೊರಿಸುತ್ತಿರುವ ಈ ದರ ಏರಿಕೆಗೆ ಮಧ್ಯಮ ವರ್ಗದ ಗ್ರಾಹಕ ವಲಯ ಕಂಗಾಲಾಗಿದೆ. ಬೆಳಗಿನ ವಾಕಿಂಗ್‌ ವೇಳೆಯ ಒಂದು ಗ್ಲಾಸ್‌ ಕಾಫಿ ಈಗ ತಿಂಗಳಿನ ಬಜೆಟ್‌ನ್ನು ₹150 ರಿಂದ ₹300 ವರೆಗೆ ಹೆಚ್ಚಿಸಿದೆ. ಹೋಟೆಲ್‌ ಸಂಘಗಳು ಸಭೆ ನಡೆಸಿ ಗ್ರಾಹಕರಿಗೆ ಹೊರೆ ಆಗದಂತೆ ದರ ಪರಿಷ್ಕರಿಸುವುದಾಗಿ ತಿಳಿಸಿದ್ದರೂ ಕೂಡ ಅದಕ್ಕೂ ಮುನ್ನವೇ ಬಹುತೇಕ ಹೊಟೆಲ್‌, ದರ್ಶಿನಿ, ಕ್ಯಾಂಟೀನ್‌ನಲ್ಲಿ ದರ ಏರಿಕೆಯಾಗಿದೆ. ಬೆಲೆ ಏರಿಕೆ ಮುಖ್ಯವಾಗಿ ಇದು ಬಡ, ಕೆಳ ಮಧ್ಯಮ, ಮಧ್ಯಮ ವರ್ಗಕ್ಕೆ ಹೊರೆಯಾಗಿದೆ. 

ರಿಕ್ಷಾ, ಮಿನಿಲಾರಿ ಚಾಲಕರು, ಸರಕು ಸಾಗಣೆ ಕೆಲಸದವರು, ಕಟ್ಟಡ ಕಾರ್ಮಿಕರು, ಅಂಗಡಿಕಾರರು, ಸಣ್ಣಪುಟ್ಟ ಖಾಸಗಿ ಉದ್ಯೋಗ ಮಾಡಿಕೊಂಡಿರುವವರು ಸೇರಿ ಈ ಹಂತದ ಜನತೆಗೆ ಹೆಚ್ಚು ದುಬಾರಿಯಾಗಿದೆ. ಕಾಫಿ-ಟೀ ಈವರೆಗೆ ರಿಲ್ಯಾಕ್ಸ್‌ ಉಂಟು ಮಾಡುತ್ತಿತ್ತು. ಆದರೆ, ಈಗ ಅವುಗಳ ಬೆಲೆ ಕೇಳಿದರೂ ನೆಮ್ಮದಿ ಹೋಗುತ್ತಿದೆ ಎಂದು ಶೇಷಾದ್ರಿಪುರಂನ ಜಿ.ಪ್ರಕಾಶ್‌ ಹೇಳುತ್ತಾರೆ. ಸಾಧಾರಣ ಹೋಟೆಲ್‌ಗಳು ದರ ಏರಿಸಿರುವುದರ ಜೊತೆಗೆ ಶೀಘ್ರ ಪ್ರತಿಷ್ಠಿತ ಸ್ಟಾರ್‌ ಹೊಟೆಲ್‌ಗಳು ಕೂಡ ದರ ಹೆಚ್ಚಿಸುವ ಯೋಚನೆಯಲ್ಲಿವೆ ಎಂದು ಹೋಟೆಲ್‌ ಉದ್ಯಮಿಗಳು ತಿಳಿಸಿದ್ದಾರೆ. ಹೀಗಾದಲ್ಲಿ ಮೇಲ್ವರ್ಗದವರ ಜೇಬಿಗೂ ಕತ್ತರಿ ಬೀಳಲಿದೆ.

₹14 ಕೋಟಿ ನಕಲಿ ನೋಟಿನ ಕಂತೆ ಪತ್ತೆ: ದಾಂಡೇಲಿಯ ಮನೆಯೊಂದರಲ್ಲಿ ಪತ್ತೆ

₹3 ನಿಂದ ₹10 ವರೆಗೆ ಏರಿಕೆ: ಸದ್ಯ ಬೆಂಗಳೂರಿನ ಬಹುತೇಕ ಹೋಟೆಲ್‌ಗಳು, ಕೆಫೆಗಳು ಮತ್ತು ಟೀ ಸ್ಟಾಲ್‌ಗಳಲ್ಲಿ ಒಂದು ಕಪ್ ಚಹಾ ಮತ್ತು ಕಾಫಿಯ ಬೆಲೆಯನ್ನು ₹3 ನಿಂದ ₹10 ವರೆಗೆ ಏರಿಸಿವೆ. ಕಫ್‌ ಕಾಫಿ ಬೆಲೆ ₹25 ಆಗಿದೆ. ವಿದ್ಯುತ್​ ದರ​, ಇಂಧನ ದರ ಮತ್ತು ತ್ಯಾಜ್ಯ ಸಂಗ್ರಹ ಶುಲ್ಕ ಹೆಚ್ಚಳ, ಅಗತ್ಯ ಸರಕು ಮತ್ತು ಸೇವೆಗಳ ಬೆಲೆ ಏರಿಕೆಯಿಂದಾಗಿ ಈ ಪ್ರಮಾಣದ ದರ ಏರಿಕೆ ಅನಿವಾರ್ಯ ಎಂದು ಹೋಟೆಲ್‌ ಉದ್ಯಮಿಗಳು ಹೇಳುತ್ತಾರೆ. ಅನೇಕ ಹೋಟೆಲ್‌ಗಳು ಮತ್ತು ಟೀ ಸ್ಟಾಲ್‌ಗಳು ಈಗಾಗಲೇ ತಮ್ಮ ಮೆನುವಿನಲ್ಲಿ ಬೆಲೆಗಳನ್ನು ಪರಿಷ್ಕರಿಸಿವೆ. "ಹಾಲು ಮತ್ತು ಇತರ ವಸ್ತುಗಳ ಬೆಲೆ ಏರಿಕೆಯಿಂದಾಗಿ, ನಾವೂ ದರ ಹೆಚ್ಚಿಸಿದ್ದೇವೆ. ಗ್ರಾಹಕರು ಸಹಕರಿಸುವಂತೆ ವಿನಂತಿ" ಎಂದು ನಗರದ ಮಲ್ಲೇಶ್ವರದ ಬಳಿಯ ಟೀ ಸ್ಟಾಲ್‌ವೊಂದರ ಹೊರಗೆ ಫಲಕ ಹಾಕಲಾಗಿದೆ.

ಕಾಫಿ ಪ್ರಿಯರಿಗೆ ಕಹಿ: ಹಾಲಿನ ದರ ಏರಿಕೆಯ ಜೊತೆಗೆ ಕಾಫಿ ಪುಡಿಯ ಬೆಲೆಯೂ ಹೆಚ್ಚಾಗಿದೆ. ಕಾಫಿ ಉದ್ಯಮದ ಮೂಲಗಳ ಪ್ರಕಾರ, ಇತ್ತೀಚಿನ ವಾರಗಳಲ್ಲಿ ಪ್ರತಿ ಕೆಜಿಗೆ ₹100 - ₹150 ಬೆಲೆ ಹೆಚ್ಚಾಗಿದೆ ಮತ್ತು ಮತ್ತಷ್ಟು ಏರಿಕೆಯಾಗುವ ನಿರೀಕ್ಷೆಯಿದೆ. ಇದು ಸಣ್ಣ ಟೀ ಅಂಗಡಿ ನಡೆಸುವವರು ಮತ್ತು ಹೋಟೆಲ್ ನಡೆಸುವವರಿಗೆ ಮತ್ತಷ್ಟು ಹೊರೆಯಾಗಿದೆ. ಇದರಿಂದ ವ್ಯಾಪಾರಿಗಳು ಕಾಫಿ, ಟೀ ದರ ಹೆಚ್ಚಿಸಿ ತಮ್ಮ ಹೊರೆಯನ್ನು ಗ್ರಾಹಕರ ಮೇಲೆ ಹಾಕುತ್ತಿದ್ದಾರೆ.

ಖಾದ್ಯಗಳ ಬೆಲೆ ಹೆಚ್ಚಳ ಅನಿವಾರ್ಯ: ಎಲ್ಲವುಗಳ ದರ ವಿಪರೀತ ಹೆಚ್ಚಳವಾಗಿದೆ. ಸಹಜವಾಗಿ ಕಾರ್ಮಿಕರ ವೇತನವನ್ನು ನಾವು ಹೆಚ್ಚಿಸಬೇಕಾಗುತ್ತದೆ. 2 ವರ್ಷದಿಂದ ಹಿಂದಿನ ಬೆಲೆಯಲ್ಲೆ ಇದ್ದ ಹೊಟೆಲ್‌ಗಳು ಈಗ ದರ ಪರಿಷ್ಕರಿಸಿವೆ. ಹಾಲಿನ ಉತ್ಪನ್ನಗಳಾದ ತುಪ್ಪ, ಬೆಣ್ಣೆ, ಖೋವಾ, ಚೀಸ್‌, ಪನ್ನೀರ್‌ ಖಾದ್ಯಗಳ ಬೆಲೆಯೂ ಹೆಚ್ಚಿಸುವುದು ಅನಿವಾರ್ಯ ಎಂದು ಹೋಟೆಲ್‌ ಸಂಘದ ಪಿ.ಸಿ.ರಾವ್‌ ಹೇಳುತ್ತಾರೆ.

ವಿದ್ಯಾರ್ಥಿಗಳೇ ಗಮನಿಸಿ... ಏ.24ರಿಂದ ದ್ವಿತೀಯ ಪಿಯು ಪರೀಕ್ಷೆ-2: ವೇಳಾಪಟ್ಟಿ ಪ್ರಕಟ

ತ್ಯಾಜ್ಯ ಶುಲ್ಕ ಹಿಂಪಡೆಯಲು ಒತ್ತಾಯ: ಏ.1ರಿಂದ ಅನ್ವಯವಾಗುವಂತೆ ವಿಧಿಸಲಾಗಿರುವ ಘನತ್ಯಾಜ್ಯ ನಿರ್ವಹಣಾ ಬಳಕೆದಾರರ ಸೇವಾಶುಲ್ಕವನ್ನು ಹಿಂಪಡೆಯುವಂತೆ ಬೆಂಗಳೂರು ಹೋಟೆಲ್‌ಗಳ ಸಂಘ ಒತ್ತಾಯಿಸಿದೆ. ಬಿಬಿಎಂಪಿ ವಿಧಿಸಿರುವ ಈ ಶುಲ್ಕದಿಂದ ಹೊಟೆಲ್‌ ಉದ್ಯಮಕ್ಕೆ ಸಾಕಷ್ಟು ಹೊರೆಯಾಗಲಿದೆ. ಅಲ್ಲದೆ ಈ ಹೊಸ ಶುಲ್ಕವನ್ನು ಭರಿಸುವುದು ಕೂಡ ಕಷ್ಟ. ಇದು ಹೋಟೆಲ್‌ ಉದ್ಯಮಕ್ಕೆ ಹೊಡೆತ ಕೊಡಲಿದೆ. ಹೀಗಾಗಿ ಇದನ್ನು ಸಂಪೂರ್ಣವಾಗಿ ರದ್ದುಪಡಿಸುವಂತೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಬಿಬಿಎಂಪಿಗೆ ಮನವಿ ಮಾಡಿಕೊಂಡಿದೆ.

PREV
Read more Articles on
click me!

Recommended Stories

ರಾಜ್ಯದಲ್ಲಿ ರಾಜಕೀಯ ಹೊಲಸೆದ್ದು, ಎಲ್ಲ ಪಕ್ಷಗಳು ಗಬ್ಬೆದ್ದು ಹೋಗಿವೆ: ಕೆ.ಎಸ್.ಈಶ್ವರಪ್ಪ
ದಾವಣಗೆರೆ ರಾಟ್‌ವೀಲರ್ ನಾಯಿಗಳ ಡೆಡ್ಲಿ ಅಟ್ಯಾಕ್; 50ಕ್ಕೂ ಹೆಚ್ಚು ಕಡೆ ಕಚ್ಚಿಸಿಕೊಂಡ ಮಹಿಳೆ ದುರ್ಮರಣ