ಅಂತಾರಾಜ್ಯ ಗಡಿಸರ್ವೇ ಕ್ರಮ ಬದ್ಧವಾಗಿ ನಡೆಯುತ್ತಿಲ್ಲ| ಈ ಹಿಂದೆ ಅಕ್ರಮ ಗಣಿಗಾರಿಕೆ ಮಾಡಿದವರು ನ್ಯಾಯಾಧೀಶರನ್ನು ಬುಕ್ ಮಾಡಿಕೊಂಡಿದ್ದರು| ಇದೀಗ ಅಧಿಕಾರಿಗಳನ್ನೇ ಬುಕ್ ಮಾಡಿಕೊಂಡಿರುವ ಗುಮನಿ ವ್ಯಕ್ತಪಡಿಸಿದ ಟಪಾಲ್ ಗಣೇಶ|
ಬಳ್ಳಾರಿ(ಮಾ.10): ಅಂತಾರಾಜ್ಯ ಗಡಿ ಸರ್ವೇ ವೈಜ್ಞಾನಿಕವಾಗಿ ನಡೆಯುತ್ತಿಲ್ಲ ಎಂದು ಮತ್ತೆ ಆರೋಪಿಸಿರುವ ಗಣಿ ಉದ್ಯಮಿ ಟಪಾಲ್ ಗಣೇಶ್, ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ಅಕ್ರಮ ಮುಚ್ಚಿ ಹಾಕುವ ಎಲ್ಲ ಹುನ್ನಾರ ಕೇಂದ್ರ ಸರ್ಕಾರ ಹಾಗೂ ಅಧಿಕಾರಿಗಳಿಂದ ಆಗುತ್ತಿದೆ ಎಂದು ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಗಡಿ ಸರ್ವೇ ಬಗೆಗಿನ ತಮ್ಮ ಅಸಮಾಧಾನ ಹೊರ ಹಾಕಿದ ಟಪಾಲ್ ಗಣೇಶ್, ಈ ಹಿಂದೆ ಅಕ್ರಮ ಗಣಿಗಾರಿಕೆ ಮಾಡಿದವರು ನ್ಯಾಯಾಧೀಶರನ್ನು ಬುಕ್ ಮಾಡಿಕೊಂಡರು. ಇದೀಗ ಅಧಿಕಾರಿಗಳನ್ನು ಬುಕ್ ಮಾಡಿಕೊಂಡಿರುವ ಗುಮಾನಿ ವ್ಯಕ್ತವಾಗುತ್ತಿದೆ. ಕಳೆದ ಮೂರು ತಿಂಗಳಿನಿಂದ ನಡೆಯುತ್ತಿರುವ ಗಡಿ ಸರ್ವೇ ಕ್ರಮ ಬದ್ಧವಾಗಿ ನಡೆಯುತ್ತಿಲ್ಲ. ಬರೀ ತಪ್ಪು ತಪ್ಪಾಗಿ ಸರ್ವೇ ಮಾಡಿ ಅಧಿಕಾರಿಗಳು ಕೈ ತೊಳೆದುಕೊಳ್ಳುತ್ತಿದ್ದಾರೆ. ಇದನ್ನು ಸರಿಪಡಿಸುವ ಜವಾಬ್ದಾರಿಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತೆಗೆದುಕೊಳ್ಳುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬಳ್ಳಾರಿ: ಕರ್ನಾಟಕ ಆಂಧ್ರ ಗಡಿ ಸರ್ವೇ ಮುಕ್ತಾಯ
ಗಡಿ ಸರ್ವೇ ಕಾರ್ಯ ಸುಪ್ರೀಂ ಕೋರ್ಟ್ ಸೂಚನೆಯಂತೆ ನಡೆಯುತ್ತಿಲ್ಲ. ಬೇಕಾಬಿಟ್ಟಿನಡೆಯುತ್ತಿರುವ ಸರ್ವೇಯಿಂದ ಅಕ್ರಮ ಗಣಿಗಾರಿಕೆಯ ಆರೋಪ ಹೊತ್ತಿರುವ ಜನಾರ್ದನ ರೆಡ್ಡಿ ಅವರಿಗೆ ಅನುಕೂಲವಾಗಲಿದೆ ಎಂದು ಪುನರುಚ್ಛರಿಸಿದ ಟಪಾಲ್ ಗಣೇಶ್, ಗ್ರಾಮ ನಕ್ಷೆಯನ್ನು ಆಧರಿಸಿ ಸರ್ವೇ ಕಾರ್ಯ ನಡೆದಲ್ಲಿ, ಅಕ್ರಮ ಎಸಗಿದವರು ಯಾರು ಎಂಬುದು ಗೊತ್ತಾಗುತ್ತದೆ. ಮಾಜಿ ಸಚಿವ ಜನಾರ್ದನ ರೆಡ್ಡಿ ನಡೆಸಿದ್ದಾರೆ ಎನ್ನಲಾಗುವ ಅಕ್ರಮ ಗಣಿಗಾರಿಕೆಯ ಸತ್ಯ ಹೊರ ಬರಬೇಕಾದರೆ ಕೇಂದ್ರ ಸರ್ಕಾರ, ಸರ್ವೇ ಆಫ್ ಇಂಡಿಯಾ ಅಧಿಕಾರಿಗಳು ಕಟ್ಟುನಿಟ್ಟಿನ ಸೂಚನೆ ನೀಡಬೇಕು ಎಂದು ಒತ್ತಾಯಿಸಿದರು.