ಸಚಿವ ಭಗವಂತ ಖೂಬಾ ಹಾಗೂ ಶಾಸಕ ಶರಣು ಸಲಗರ ನಡುವೆ ಕಳೆದ 6 ತಿಂಗಳಿಂದ ಹುಟ್ಟಿಕೊಂಡಿರುವ ವೈಮನಸ್ಸು
ಬಸವಕಲ್ಯಾಣ(ಆ.14): ಕೇಂದ್ರ ಸಚಿವ ಭಗವಂತ ಖೂಬಾ ಅವರ ಕಟ್ಟಾ ಬೆಂಬಲಿಗರೆಂದೆ ಗುರುತಿಸಿಕೊಂಡಿದ್ದ ಬಸವಕಲ್ಯಾಣ ಶಾಸಕ ಶರಣು ಸಲಗರ ಹಾಗೂ ಭಗವಂತ ಖೂಬಾ ನಡುವೆ ಶನಿವಾರ ಮಾತಿನ ಚಕಮಕಿಯಾಗಿದ್ದು, ರೊಚ್ಚಿಗೆದ್ದ ಶಾಸಕರ ಬೆಂಬಲಿಗರು ಖೂಬಾ ಅವರ ಕಾರು ಜಖಂಗೊಳಿಸಿ, ಕಾರಿನ ನಂಬರ ಪ್ಲೇಟ್ ಕಿತ್ತು ಹಾಕಿದ್ದಾರೆ. ಆಜಾದಿ ಕಾ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಬಸವಕಲ್ಯಾಣದಲ್ಲಿ ತಿರಂಗಾ ಕಾರ್ ಜಾಥಾ ನಡೆಸಿದ್ದ ಕೇಂದ್ರ ಸಚಿವ ಭಗವಂತ ಖೂಬಾ ಅವರು ಸ್ಥಳೀಯ ಶಾಸಕ ಶರಣು ಸಲಗರ ಅವರನ್ನು ಬಿಟ್ಟು ನಡೆಸಿದ್ದರು. ಆದರೆ ಕೇಂದ್ರ ಸಚಿವರಿಂದ ಆಯೋಜಿಸಲಾಗಿದೆ ಎಂಬ ಕಾರಣಕ್ಕೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಿದ್ದ ಶರಣು ಸಲಗರ ಅವರನ್ನು ಭಗವಂತ ಖೂಬಾ ಅವರು ತಳ್ಳಿದ್ದಾರೆ ಎಂದು ಹೇಳಲಾಗಿದೆ.
ಯಾವುದೋ ವಿಷಯಕ್ಕೆ ಸಂಬಂಧಿಸಿದಂತೆ ಸಚಿವ ಭಗವಂತ ಖೂಬಾ ಹಾಗೂ ಶಾಸಕ ಶರಣು ಸಲಗರ ನಡುವೆ ಕಳೆದ 6 ತಿಂಗಳಿಂದ ವೈಮನಸ್ಸು ಹುಟ್ಟಿಕೊಂಡಿತ್ತು. ಹೀಗಾಗಿ ಇಬ್ಬರ ನಡುವæ ಮಾತುಕತæ ಸ್ಥಗಿತವಾಗಿತ್ತು ಎನ್ನಲಾಗಿದೆ. ತಮ್ಮದೇ ಪಕ್ಷದವರಿಂದ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಶಾಸಕ ಶರಣು ಸಲಗರ ಜಾಥಾಗೆ ಬಂದಿದ್ದರಿಂದ ಮತ್ತೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಇದರಿಂದ ರೊಚ್ಚಿಗೆದ್ದ ಶಾಸಕರ ಬೆಂಬಲಿಗರು ಖೂಬಾ ಅವರ ಕಾರು ಜಖಂಗೊಳಿಸಿ, ಕಾರಿನ ನಂಬರ ಪ್ಲೇಟ್ ಕೂಡ ಕಿತ್ತು ಹಾಕಿದ್ದಾರೆ.
ಮನೆ ಕುಸಿತ ಸಂತ್ರಸ್ತರಿಗೆ ತಾತ್ಕಾಲಿಕ ಪರಿಹಾರ ನೀಡಲು ಸೂಚನೆ
ರಾರಯಲಿಯು ಬೀದರ್ ಜಿಲ್ಲೆಯ ಎಲ್ಲ ತಾಲೂಕುಗಳಿಂದ ಹೊರಟು ಬಸವಕಲ್ಯಾಣಕ್ಕೆ ತಲುಪಿ ಸಮಾರೋಪ ನಡೆಯಬೇಕಿತ್ತು. ಸಮಾರೋಪದಲ್ಲಿ ಬಸವಕಲ್ಯಾಣದ ಶಾಸಕ ಶರಣು ಸಲಗರ ಅವರನ್ನು ಕೇಂದ್ರ ಸಚಿವವರು ಕಡೆಗಣಿಸಿದ್ದರಿಂದ ಇಬ್ಬರ ಬೆಂಬಲಿಗರು ಪರಸ್ಪರ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಹಾಜರಿದ್ದ ಪಕ್ಷದ ಅನೇಕ ಪ್ರಮುಖರು ಮೂಕ ಪ್ರೇಕ್ಷಕರಾಗಿದ್ದರು.
ಈ ಸಂದರ್ಭದಲ್ಲಿ ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ಕೈ ಮಿರದಂತೆ ಎಚ್ಚರಿಕೆ ವಹಿಸಿ ಕೇಂದ್ರ ಸಚಿವ ಭಗವಂತ ಖೂಬಾ ಅವರ ವಾಹನವನ್ನು ಅಲ್ಲಿಂದ ಮುಂದಕ್ಕೆ ಕಳುಹಿಸಿ ಪರಿಸ್ಥಿಯನ್ನು ತಿಳಿಗೊಳಿಸಿದ್ದಾರೆ ಎನ್ನಲಾಗಿದೆ.