
ಬೆಂಗಳೂರು (ನ.08): ನಗರದಲ್ಲಿ ಅಪರಾಧ ಚಟುವಟಿಕೆಗಳು ಹಾಗೂ ರೌಡಿ ಚಟುವಟಿಕೆಗಳ ನಿಯಂತ್ರಣದ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಅವರು ನಗರದ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಗುರುವಾರ ನಡೆದ ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ವಿಭಾಗ ಹಾಗೂ ಉಪವಿಭಾಗವಾರು ಅಪರಾಧ ಪ್ರಕರಣಗಳು, ಪತ್ತೆ ಕಾರ್ಯ, ಕಾನೂನು ಮತ್ತು ಸುವ್ಯವಸ್ಥೆ ಬಗ್ಗೆ ಪರಾಮರ್ಶೆ ನಡೆಸಿದರು.
ಡಿಸಿಪಿ ಹಾಗೂ ಎಸಿಪಿಗಳು ಪ್ರತಿ ದಿನ ತಮ್ಮ ವ್ಯಾಪ್ತಿಯ ಒಂದೊಂದು ಪೊಲೀಸ್ ಠಾಣೆಗೆ ಭೇಟಿ ನೀಡಬೇಕು. ವಾರಕೊಮ್ಮೆ ಪ್ರಕರಣಗಳ ತನಿಖೆ, ಪತ್ತೆ ಕಾರ್ಯ ಕುರಿತು ಪರಿಶೀಲಿಸುವುದು ಸೇರಿದಂತೆ ಅಪರಾಧಗಳ ನಿಯಂತ್ರಣ ಹಾಗೂ ರೌಡಿ ಚಟುವಟಿಕೆಗಳ ನಿಯಂತ್ರಣ ಕುರಿತಂತೆ ಅಧಿಕಾರಿಗಳಿಗೆ ಕೆಲವು ಸಲಹೆ-ಸೂಚನೆಗಳನ್ನು ನೀಡಿದ್ದಾರೆ.
ಲೋಕಾಯುಕ್ತ ಪೊಲೀಸರ ವಿಚಾರಣೆ ಬಳಿಕ ಸಿಎಂ ಸಿದ್ದರಾಮಯ್ಯಗೆ ಈಗ ಇ.ಡಿ. ನೋಟಿಸ್?
ಸುಮಾರು 6 ತಾಸು ನಡೆದ ಹಿರಿಯ ಅಧಿಕಾರಿಗಳ ಸಭೆಯಲ್ಲಿ ನಗರದ 8 ವಿಭಾಗಗಳ ಪೈಕಿ ಆಗ್ನೇಯ, ಪೂರ್ವ, ಪಶ್ಚಿಮ ಹಾಗೂ ಉತ್ತರ ವಿಭಾಗಗಳ ವ್ಯಾಪ್ತಿಯ ಪೊಲೀಸ್ ಠಾಣೆಗಳ ಅಪರಾಧ ಪ್ರಕರಣಗಳು ಹಾಗೂ ಪತ್ತೆ ಕಾರ್ಯ, ತನಿಖೆ ಕುರಿತು ಸಂಬಂಧಪಟ್ಟ ಡಿಸಿಪಿಗಳು ಹಾಗೂ ಎಸಿಪಿಗಳಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಉಳಿದ ನಾಲ್ಕು ವಿಭಾಗಗಳ ಬಗ್ಗೆ ಮತ್ತೊಂದು ದಿನ ಸಭೆ ಕರೆದು ಚರ್ಚಿಸುವುದಾಗಿ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ. ಗುರುವಾರ ಸಂಜೆ ಸುಮಾರು 4 ಗಂಟೆಯಿಂದ ರಾತ್ರಿ 10ರವರೆಗೂ ನಡೆದ ಸಭೆಯಲ್ಲಿ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ, ಹೆಚ್ಚುವರಿ ಪೊಲೀಸ್ ಆಯುಕ್ತರು, ಜಂಟಿ ಪೊಲೀಸ್ ಆಯುಕ್ತರು, ಎಂಟು ವಿಭಾಗಗಳ ಡಿಸಿಪಿಗಳು ಹಾಗೂ ಎಸಿಪಿಗಳು ಪಾಲ್ಗೊಂಡಿದ್ದರು.