'ಮೋದಿಗಿಂತ ಟಿಪ್ಪು 100ಪಟ್ಟು ಉತ್ತಮ ಆಡಳಿತಗಾರ'..!

By Kannadaprabha NewsFirst Published Aug 2, 2019, 8:18 AM IST
Highlights

ಪ್ರಧಾನಿ ನರೇಂದ್ರ ಮೋದಿ ಆಡಳಿತಕ್ಕಿಂತಲೂ ಟಿಪ್ಪು ಸುಲ್ತಾನ್‌ ದೇಶಕ್ಕೆ ಉತ್ತಮ ಆಡಳಿತ ನೀಡಿದ್ದರು. ಪ್ರಸ್ತುತ ದಿನನಿತ್ಯ ಕೋಮು ಗಲಭೆ, ಮಹಿಳೆಯ ಮೇಲೆ ನಿರಂತರ ಅತ್ಯಾಚಾರ, ರೈತರ ಆತ್ಮಹತ್ಯೆ, ದಲಿತರ ಮೇಲೆ ದೌರ್ಜನ್ಯ ಯಾವುದನ್ನು ತಡೆಯಲಾಗದ ಬಿಜೆಪಿ ಸರ್ಕಾರಕ್ಕಿಂತ ಟಿಪ್ಪು ನೂರುಪಟ್ಟು ಉತ್ತಮ ಆಡಳಿತಗಾರ ಎಂದು ಬಿಎಸ್‌ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ. ಕೃಷ್ಣಮೂರ್ತಿ ಹೇಳಿದರು.

ಮಂಡ್ಯ(ಆ.02): ಪ್ರಧಾನಿ ನರೇಂದ್ರ ಮೋದಿ ಆಡಳಿತಕ್ಕಿಂತಲೂ ಟಿಪ್ಪು ಸುಲ್ತಾನ್‌ ದೇಶಕ್ಕೆ ಉತ್ತಮ ಆಡಳಿತ ನೀಡಿದ್ದರು ಎಂದು ಬಿಎಸ್‌ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ. ಕೃಷ್ಣಮೂರ್ತಿ ಅಭಿಪ್ರಾಯಪಟ್ಟರು.

ಹಲಗೂರಿನ ಬಹುಜನ ಸಮಾಜ ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ದೇಶ ಕಂಡ ಅಪ್ರತಿಮ ಹೋರಾಟಗಾರ ಟಿಪ್ಪು ಸುಲ್ತಾನ್‌ ಜಯಂತಿಯನ್ನು ಬಿಜೆಪಿ ಸರ್ಕಾರ ರದ್ದುಪಡಿಸಿರುವುದು ಮತಾಂಧ ಮತ್ತು ಕೋಮುವಾದಿ ನಿಲುವಿನ ಧ್ಯೋತಕವೇ ಹೊರತು ಬೇರೆ ಯಾವುದೇ ವೈಚಾರಿಕ ಕಾರಣಗಳಿಂದಲ್ಲ ಎಂದರು.

ಟಿಪ್ಪು ಜಯಂತಿ ಆಚರಣೆಗೆ ವಾಟಾಳ್ ಆಗ್ರಹ

ಟಿಪ್ಪು ಮೊದಲ ರೈತಪರ ಆಡಳಿತಗಾರ:

ಸ್ವಾತಂತ್ಯನಂತರ ನಮ್ಮ ದೇಶವನ್ನು ಆಳ್ವಿಕೆ ಮಾಡಿರುವ ಯಾವುದೇ ಸರ್ಕಾರಗಳಿಗಿಂತ ಟಿಪ್ಪು ಜನಾನುರಾಗಿ ಆಡಳಿತಗಾರನಾಗಿ ಕೆಲಸ ಮಾಡಿದ್ದಾರೆ. ಸಾರ್ವಜನಿಕರಿಗೆ ತನ್ನ ಆಡಳಿತಾವಧಿಯಲ್ಲಿ ಮೂರು ಸಾವಿರಕ್ಕೂ ಹೆಚ್ಚಿನ ಕೆರೆಗಳನ್ನು ಕಟ್ಟಿಸಿದರು. ಅಲ್ಲದೆ ರೈತರಿಗೆ ಸಾಲ ನೀಡುವ ವ್ಯವಸ್ಥೆ ನೀಡಿದ ಮೊದಲ ರೈತಪರ ಆಡಳಿತಗಾರ. ಕೃಷಿಯಲ್ಲಿ ಹೊಸತನ ತರಲೆಂದು ರೇಷ್ಮೆ ತೋಟಗಾರಿಕೆ ವಿವಿಧ ವಾಣಿಜ್ಯ ಬೆಳೆಗಳು ಸೇರಿದಂತೆ ಹೊಸ ಬೆಳೆಗಳನ್ನು ಪರಿಚಯಿಸಿದ ಕೀರ್ತಿ ಟಿಪ್ಪುವಿಗೆ ಸಲ್ಲುತ್ತದೆ ಎಂದರು.

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕೇವಲ ರಾಜಕಾರಣದ ಹಿತದೃಷ್ಟಿಯಿಂದ ಹಿಂದೂ ಮತಗಳನ್ನು ಕ್ರೋಡೀಕರಿಸಲು ಟಿಪ್ಪು ವಿರೋಧಿಸುತ್ತಿರುವ ಬಿಜೆಪಿಗರಿಗೆ ದೇಶದಲ್ಲಿ ಸಹಬಾಳ್ವೆ ಬೇಕಾಗಿಲ್ಲ. ಸದಾಕಾಲ ಜಾತಿ - ಧರ್ಮದ ವಿಚಾರದಲ್ಲಿ ಜನರನ್ನು ಭಾವನಾತ್ಮಕ ವಿಚಾರಗಳಿಂದ ದಿಕ್ಕು ತಪ್ಪಿಸಿ ಮರೆ ಮಾಚುತ್ತಿದ್ದಾರೆ ಎಂದು ಕಿಡಿಕಾರಿದರು. ಪ್ರಸ್ತುತ ದಿನನಿತ್ಯ ಕೋಮು ಗಲಭೆ, ಮಹಿಳೆಯ ಮೇಲೆ ನಿರಂತರ ಅತ್ಯಾಚಾರ, ರೈತರ ಆತ್ಮಹತ್ಯೆ, ದಲಿತರ ಮೇಲೆ ದೌರ್ಜನ್ಯ ಯಾವುದನ್ನು ತಡೆಯಲಾಗದ ಬಿಜೆಪಿ ಸರ್ಕಾರಕ್ಕಿಂತ ಟಿಪ್ಪು ನೂರುಪಟ್ಟು ಉತ್ತಮ ಆಡಳಿತಗಾರ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಬಿಎಸ್ಪಿ ಜಿಲ್ಲಾ ಉಸ್ತುವಾರಿ ಎಚ್‌.ಸಿ.ಸತೀಶ್‌, ಬಿಎಸ್ಪಿ ಜಿಲ್ಲಾ ಉಪಾಧ್ಯಕ್ಷ ಉಪಾಧ್ಯಕ್ಷ ಎಚ್‌.ಎನ್‌. ವೀರಭದ್ರಯ್ಯ, ಮುಖಂಡರಾದ ಟಿ.ವಿ. ಬಸವರಾಜ…, ಸಾಗ್ಯ ರಾಜು, ಕೆ.ಜಿ. ಸಿದ್ದಲಿಂಗಮೂರ್ತಿ, ಉಮೇಶ್‌, ಮುನಿರಾಜು, ಮಹೇಶ್‌ ಮೌರ್ಯ ಇದ್ದರು

click me!