
ಬೆಂಗಳೂರು (ಜು.03): ದೇಶದ ಸಾಕ್ಷಿ ಪ್ರಜ್ಞೆ, ಕನ್ನಡ ನಾಡಿನ ದಿಗ್ಗಜ ಚೇತನ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರ ಆಯುಷ್ಯದ ಬಗ್ಗೆ ಕಾಂಗ್ರೆಸ್ ನಾಯಕ ರಾಜಣ್ಣ ಹೀನಾಯ ಮಾತುಗಳು, ಅವರ ನೀಚ ಮತ್ತು ತುಚ್ಛ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿ ಎಂದು ಜೆಡಿಎಸ್ ವಿಧಾನಪರಿಷತ್ ಸದಸ್ಯ ಟಿ.ಎ.ಶರವಣ ಹೇಳಿದ್ದಾರೆ. ಹುಟ್ಟು-ಸಾವು ಪ್ರಕೃತಿ ನಿಯಮ. ಅದನ್ನು ಮೀರಿದವರು ಯಾರೂ ಇಲ್ಲ. ಇದು ವಾಸ್ತವದ ಸತ್ಯ.
ಇಂತಹ ಜಗದ ನಿಯಮವನ್ನು ದೇವೇಗೌಡ ಅವರಿಗೆ ಸಮೀಕರಿಸಿ ಮಾತನಾಡಿರುವ ರಾಜಣ್ಣ ತಾವು ಶಾಶ್ವತವಾಗಿ ಈ ಭೂಮಿಯ ಮೇಳೆ ಚಿರಸ್ಥಾಯಿಯಾಗಿ ಉಳಿಯುತ್ತೇನೆ ಎಂಬ ಹುಚ್ಚುತನ, ಹುಸಿ ನಂಬಿಕೆಯಿಂದ ದುರಹಂಕಾರದ ಮಾತುಗಳನ್ನು ಆಡಿರುವುದು ಖಂಡನಾರ್ಹ ಎಂದು ಪ್ರಕಟಣೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ನೆಲದ ಮಗ, ಈ ಮಣ್ಣಿನ ಮಗ ದೇವೇಗೌಡ ಅವರಿಗೆ ನಾಡಿನ ಜನಮಾನಸದ ಪ್ರೀತಿಯೇ ಆಯಸ್ಸು. ಜನರ ಬೆಂಬಲವೇ ಶ್ರೀರಕ್ಷೆ. ಜನರಿಗಾಗಿ ಅವರು ನಡೆಸುತ್ತಿರುವ ಪ್ರತಿ ಹೋರಾಟವೂ ಅವರ ಆಯಸ್ಸನ್ನು ಹೆಚ್ಚಿಸುತ್ತಲೇ ಇದೆ. ನಮ್ಮೆಲ್ಲರ ಪ್ರೀತಿ ಹಾರೈಕೆ ಅವರ ಜತೆಗಿದೆ.
ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 70 ದಾಟಲ್ಲ, ಚಾಲೆಂಜ್: ಎಚ್‌ಡಿಕೆ
ದೇವೇಗೌಡ ಅವರ ಬದುಕೇ ಒಂದು ಯುಗ. ಅವರ ಜೀವನ ಪ್ರೀತಿಗೆ ಸರಿಸಾಟಿಯೇ ಇಲ್ಲ. ಈ ಇಳಿವಯಸ್ಸಲ್ಲೂ ಯೋಗ, ಓದು, ಸಭೆ, ಸಮಾರಂಭದಲ್ಲಿ ಪಾದರಸದಂತೆ ಪಾಲ್ಗೊಳ್ಳುವ ಅವರ ಚೈತನ್ಯಕ್ಕೆ ಕೊನೆಯೇ ಇಲ್ಲ. ಯುವಕರನ್ನೂ ನಾಚಿಸುವ ಅವರ ಸಾಮರ್ಥ್ಯ ಅವರನ್ನು ದೇಶದ ಉನ್ನತ ನಾಯಕರಲ್ಲಿ ಒಬ್ಬರನ್ನಾಗಿಸಿದೆ. ರಾಜಣ್ಣ ಅವರ ಹೇಳಿಕೆ ಅವರಿಗೆ ಘನತೆ ತರಲ್ಲ. ರಾಜಕೀಯವಾಗಿ ಕುಸಿದು ಹೋದ ವ್ಯಕ್ತಿಯ ಇಂತಹ ಹೇಳಿಕೆ ಕೋಟ್ಯಂತರ ಅಭಿಮಾನಿಗಳಿಗೆ ಬೇಸರವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಜಣ್ಣ ಬಾಯ್ತಪ್ಪಿ ಹೇಳಿದ್ದಾರೆ: ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಭೀಷ್ಮಾಚಾರ್ಯ ಇದ್ದಂತೆ. ಅವರಿಗೆ ಸಾವು ಎನ್ನುವುದು ಅವರು ಬಯಸಿದಾಗಲೇ ಬರುತ್ತದೆಯೇ ಹೊರತು ಯಾರೋ ಹೇಳಿದಾಗ ಬರುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಇದೇ ವೇಳೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಖಾಸಗಿ ಟೀಂನಲ್ಲಿ ಈ ಬಗ್ಗೆ ಚರ್ಚೆಯಾಗಿದ್ದು, ದೇವೇಗೌಡರು ಇನ್ನೆಷ್ಟುವರ್ಷ ಇರುತ್ತಾರೆ. ಅವರ ಕಾಲ ಮುಗಿಯಿತು ಅಂತ ಆಂತರಿಕವಾಗಿ ಮಾತನಾಡಿಕೊಂಡಿರುತ್ತಾರೆ. ಹೀಗಾಗಿ ಮಾಜಿ ಶಾಸಕ ರಾಜಣ್ಣನವರು ವೇದಿಕೆ ಮೇಲೆ ಅದನ್ನೇ ಬಾಯಿತಪ್ಪಿ ಹೇಳಿದ್ದಾರೆ ಅಷ್ಟೇ ಎಂದೂ ಅವರು ಹೊಸಬಾಂಬ್ ಸಿಡಿಸಿದ್ದಾರೆ.
ಸ್ನೇಹಿತರ ಒತ್ತಡಕ್ಕೆ ಮಣಿದು 75ನೇ ಹುಟ್ಟುಹಬ್ಬ: ಸಿದ್ದರಾಮಯ್ಯ
ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಜ್ಯದಲ್ಲಿ ಜೆಡಿಎಸ್ ಅನ್ನು ಅಧಿಕಾರಕ್ಕೆ ತರಲೇಬೇಕು ಎಂದು ದೇವೇಗೌಡ ಅವರು ಶಪಥ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಭೀಷ್ಮಾಚಾರ್ಯರ ಗುಣ ಅವರಿಗೆ ಇದೆ. ಅವರು ಬಯಸಿದಾಗ ಸಾವು ಬರುತ್ತದೆ. ಅವರು ಇಚ್ಛಾಮರಣಿ ಎಂಬುದು ನನ್ನ ಅಚಲ ನಂಬಿಕೆ. ಭಗವಂತ ಅವರಿಗೆ ಇನ್ನೂ ಶಕ್ತಿ ಕೊಟ್ಟಿದ್ದಾನೆ. ನಾನು ಅವರ ಭಾವನೆಗಳನ್ನು ಗಮನಿಸಿದ್ದೇನೆ. ಯಾವುದೇ ಕಾರಣಕ್ಕೂ ಅವರ ಆಯಸ್ಸಿನ ಮೇಲೆ ದುಷ್ಪರಿಣಾಮ ಬೀರುವುದಿಲ್ಲ. ಅವರ ಬಗ್ಗೆ ಕೆಟ್ಟದಾಗಿ ಚರ್ಚೆ ಮಾಡಿರುವ ವ್ಯಕ್ತಿಗಳ ಬಯಕೆ ಈಡೇರುವುದಿಲ್ಲ ಎಂದು ತಿರುಗೇಟು ನೀಡಿದರು.