
ಚಿಕ್ಕಮಗಳೂರು (ಮಾ.25) ನಾಗಾಲ್ಯಾಂಡ್ ಮೂಲದ ಯುವತಿ ಕಾಫಿನಾಡು ಎಂದೇ ಗುರುತಿಸಿಕೊಂಡಿರುವ ಚಿಕ್ಕಮಗಳೂರಿನಲ್ಲಿ ದುರಂತ ಅಂತ್ಯಕಂಡಿದ್ದಾರೆ. ನಾಗಾಲ್ಯಾಂಡ್‌ನಿಂದ ಬಂದು ಚಿಕ್ಕಮಗಳೂರಿನ ಗ್ಲೋಬಲ್ ವಿಲೇಜ್ ರೆಸಾರ್ಟ್‌ನಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಲಿನ್ಸುಲಾ ಆತ್ಮ**ತ್ಯೆಗೆ ಶರಣಾಗಿದ್ದಾರೆ. 22 ವರ್ಷದ ಲಿನ್ಸುಲಾಗೆ ಇಬ್ಬರು ಕಿರಕುಳ ನೀಡಿರುವ ಆರೋಪ ಕೇಳಿಬಂದಿದೆ. ದೈಹಿಕ ಹಾಗೂ ಮಾನಸಿಕ ಕಿರುಕುಳ ತೀವ್ರಗೊಂಡ ಕಾರಣ ಯುವತಿ ಬದುಕು ಅಂತ್ಯಗೊಳಿಸಿದ್ದಾರೆ ಎನ್ನಲಾಗಿದೆ.
ಲಿನ್ಸುಲಾ ರೆಸಾರ್ಟ್‌ನಲ್ಲಿ ಕೆಲಸ ಮಾಡುತ್ತಿದ್ದರು. ಇದೇ ವೇಳೆ ಇಬ್ಬರು ಯುವಕರಾದ ರಾಜೇಶ್ ಹಾಗೂ ತೇಜಸ್ ಲಿನ್ಸುಲಾಗೆ ಕಿರುಕುಳ ನೀಡುತ್ತಿದ್ದ ಬಗ್ಗೆ ಲಿನ್ಸುಲಾ ತಮ್ಮ ಡೈರಿಯಲ್ಲಿ ಉಲ್ಲೇಖಿಸಿದ್ದಾರೆ. 22 ವರ್ಷದ ಲಿನ್ಸುಲಾ ಹಿಂದೆ ಸುತ್ತುತ್ತಿದ್ದ ಈ ಇಬ್ಬರು ಪ್ರೀತಿ, ಪ್ರೇಮದ ಜೊತೆಗೆ ದೈಹಿಕವಾಗಿ, ಮಾನಸಿಕವಾಗಿ ಕಿರುಕುಳ ನೀಡಲು ಆರಂಭಿಸಿದ್ದರು. ಈ ಕುರಿತು ಲಿನ್ಸುಲಾ ತನ್ನ ಡೈರಿಯಲ್ಲಿ ಬರೆದುಕೊಂಡಿದ್ದಾರೆ. ಗ್ಲೋಬಲ್ ವಿಲೇಜ್ ರೆಸಾರ್ಟ್‌ನಲ್ಲಿ ತಾವು ಕೆಲಸ ಮಾಡುತ್ತಾ ಅನುಭವಿಸಿರುವ ನೋವುಗಳ ಬಗ್ಗೆಯೂ ಡೈರಿಯಲ್ಲಿ ಬರೆದುಕೊಂಡಿದ್ದಾರೆ. ಊರು ಬಿಟ್ಟು ಬೇರೆ ರಾಜ್ಯಕ್ಕೆ ಬಂದು ಕೆಲಸ ಮಾಡಿ ಜೀವನ ಕಟ್ಟಿಕೊಳ್ಳುವ ಕನಸು ಹೊತ್ತಿದ್ದರೆ, ಇಲ್ಲಿ ಆಗುತ್ತಿರುವ ಕಿರುಕುಳ ತೀವ್ರಗೊಳ್ಳುತ್ತಿದೆ ಎಂದು ಡೈರಿಯಲ್ಲಿ ಬರೆದಿದ್ದಾರೆ ಎನ್ನಲಾಗುತ್ತಿದೆ.
ಕುಟುಂಬ ನಿರ್ವಹಣೆ, ಪೋಷಕರ ಆರೈಕೆ, ಅವರ ಆರೋಗ್ಯ ಸೇರಿದಂತೆ ಹಲವು ಜವಾಬ್ದಾರಿಗಳು ಲಿನ್ಸುಲಾ ಮೇಲಿತ್ತು. ಹೀಗಾಗಿ ಕಿರಿಕುಳ ನೀಡುತ್ತಿದ್ದರೂ ಸಹಿಸಿಕೊಂಡು ಕೆಲಸ ಮಾಡುತ್ತಿದ್ದರು. ತಿಂಗಳ ವೇತನದಲ್ಲಿ ಹಲವು ಜವಾಬ್ದಾರಿ ನಿರ್ವಹಿಸಬೇಕಿದ್ದ ಕಾರಣ ಉದ್ಯೋಗ, ವೇತನ ಕುರಿತು ಆತಂಕಗೊಂಡಿದ್ದರು. ಹೀಗಾಗಿ ಯುವಕರ ಕಿರುಕುಳದ ನಡುವೆ ಕೆಲಸ ಮುಂದುವರಿಸಿದ್ದರು. ಆದರೆ ಅತೀಯಾದ ಕಿರುಕುಳದಿಂದ ಬದುಕು ಅಂತ್ಯಗೊಳಿಸಿದ್ದಾರೆ ಎಂದು ಪ್ರಾಥಮಿಕ ಮಾಹಿತಿಗಳು ಹೇಳುತ್ತಿದೆ.
ಘಟನೆ ಬೆಳಕಿಗೆ ಬಂದ ಬೆನ್ನಲ್ಲೇ ನಾಗಲ್ಯಾಂಡ್‌ನ ಲಶಿಲಾ ಇಂಚುಗರ್ ಎಂಬುವವರು ಬಸವನಹಳ್ಳಿ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತದೇಹ ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಇತ್ತ ಡೈರಿ ವಶಪಡಿಸಿಕೊಂಡಿದ್ದಾರೆ. ನಾಗಾಲ್ಯಾಂಡ್‌ನ ಕುಟುಂಬಸ್ಥರಿಗೆ ಮಾಹಿತಿ ನೀಡಲಾಗಿದೆ.