ಕಾರ್ಖಾನೆಗಳಲ್ಲಿ 12 ತಾಸು ಕಾರ್ಮಿಕರು ಕೆಲಸ ಮಾಡುವ ಕುರಿತು ಹೇಳಿಕೆ ನೀಡಿರುವ ಅವರು, ಈಗಾಗಲೇ ಕಾರ್ಖಾನೆಗಳಲ್ಲಿ ಹಾಲಿ ಇರುವ 8 ಗಂಟೆಗಳ ಶ್ರಮ ಭಾರವನ್ನು ನಿರ್ವಹಿಸುವುದು ಕಷ್ಟವಾಗಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.
ದಾವಣಗೆರೆ(ಮೇ.16): ಕೊರೋನಾದಿಂದ ಇಡೀ ಪ್ರಪಂಚವೇ ತಲ್ಲಣಗೊಂಡಿದ್ದು, ಇಂತಹ ಸಂದರ್ಭದಲ್ಲಿ ನಮ್ಮನ್ನು ಆಳುವ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸಣ್ಣ ರೈತರು ಮತ್ತು ಕಾರ್ಮಿಕರಿಗೆ ನೋವಿನ ಮೇಲೆ ನೋವು ಕೊಡುವ ಪ್ರಯತ್ನ ಮಾಡುತ್ತಿರುವುದು ಗಾಯದ ಮೇಲೆ ಬರೆ ಎಳೆದಂತೆ ಎಂದು ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆವರಗೆರೆ ಹೆಚ್.ಜಿ.ಉಮೇಶ್ ಟೀಕಿಸಿದ್ದಾರೆ.
ಕಾರ್ಖಾನೆಗಳಲ್ಲಿ 12 ತಾಸು ಕಾರ್ಮಿಕರು ಕೆಲಸ ಮಾಡುವ ಕುರಿತು ಹೇಳಿಕೆ ನೀಡಿರುವ ಅವರು, ಈಗಾಗಲೇ ಕಾರ್ಖಾನೆಗಳಲ್ಲಿ ಹಾಲಿ ಇರುವ 8 ಗಂಟೆಗಳ ಶ್ರಮ ಭಾರವನ್ನು ನಿರ್ವಹಿಸುವುದು ಕಷ್ಟವಾಗಿದೆ. ಇಂತಹ ಸಂದರ್ಭದಲ್ಲಿ ಬಂಡವಾಳಶಾಹಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ಆಡಳಿತ ಪಕ್ಷದವರು 12 ಗಂಟೆಗಳ ಕಾಲ ಕಾರ್ಮಿಕರಿಂದ ಕೆಲಸ ಮಾಡಿಸಿಕೊಳ್ಳುವಂತೆ ಹೇಳಿಕೆ ನೀಡುತ್ತಿರುವುದು ಸರಿಯೇ ಎಂದು ಪ್ರಶ್ನಿಸಿದ್ದಾರೆ.
12 ಗಂಟೆಗಳ ಕೆಲಸಕ್ಕೆ ಮಾಲೀಕರು ಕೊಟ್ಟಷ್ಟು ಸಂಬಳವನ್ನು ಪಡೆಯಬೇಕು. ಅಲ್ಲದೇ ಯಾವುದೇ ಒಬ್ಬ ವ್ಯಕ್ತಿ ಕಂಪನಿಗೆ ಸೇರ್ಪಡೆಗೊಂಡ ನಂತರ 3 ವರ್ಷಗಳ ಕಾಲ ಯಾವುದೇ ರೀತಿಯ ವೇತನದ ಹೆಚ್ಚಳ, ಇತರೆ ಸೌಲಭ್ಯಗಳ ಕುರಿತು ಮಾತನಾಡುವಂತಿಲ್ಲ. ಇಂತಹ ನಿಯಮಗಳನ್ನು ಜಾರಿಗೆ ತರುವ ಮೂಲಕ ಕಾರ್ಮಿಕರನ್ನು ಜೀತದಾಳುಗಳಂತೆ ದುಡಿಸಿಕೊಳ್ಳುವುದಲ್ಲದೇ, ಅವರು ಕೆಲಸ ಬಿಟ್ಟರೆ ಬೀದಿಗೆ ಬರುವಂತೆ ಆಗುತ್ತದೆ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಕೊರೋನಾತಂಕ: ಮಹಾರಾಷ್ಟ್ರದಿಂದ ವಿಜಯಪುರಕ್ಕೆ ಬಂದ 1348 ಮಂದಿ..!
ಸರ್ಕಾರಗಳು ಮತ್ತು ಜನಪ್ರತಿನಿಧಿಗಳೇ ತಾವುಗಳು ಚುನಾಯಿತ ಜನಪ್ರತಿನಿಧಿಗಳಾಗಿರುವುದು ಸಾರ್ವಜನಿಕರ ಓಟಿನಿಂದಲೋ ಅಥವಾ ಬಂಡವಾಳಶಾಹಿಗಳ ನೋಟಿನಿಂದಲೋ ಎನ್ನುವುದು ಅರ್ಥವಾಗಬೇಕಿದೆ. ದೇಶವು ಇಂತಹ ದುಸ್ಥಿತಿಯಲ್ಲಿದ್ದಂತಹ ಸಮಯದಲ್ಲಿ ರಾಜಕೀಯ ಮಾಡಿಕೊಂಡು ಸಣ್ಣ ರೈತರು ಮತ್ತು ಬಡ ಕಾರ್ಮಿಕರಿಗೆ ಗಾಯದ ಮೇಲೆ ಬರೆ ಎಳೆದಂತೆ ಆಗುತ್ತದೆ. ಕಾರಣ ಇಂತಹ ಧೋರಣೆಗಳನ್ನು ಬಿಟ್ಟು ಅವರಿಗೆ ಸಿಗಬೇಕಾದ ಸವಲತ್ತುಗಳನ್ನು ಕೊಡಿಸುವ ನಿಟ್ಟಿನಲ್ಲಿ ಮುಂದಾಗಿ, ಅಲ್ಲದೇ ಕಾರ್ಮಿಕರಿಗೆ ಪ್ರತಿ ತಿಂಗಳೊಂದಕ್ಕೆ ಕನಿಷ್ಠ 15 ಸಾವಿರ ರೂ. ವೇತನ ಹಾಗೂ ರೈತ ಕಾರ್ಮಿಕರಿಗೆ ಪ್ರತಿ ತಿಂಗಳಿಗೆ 5 ಸಾವಿರ ನಿವೃತ್ತಿ ವೇತನ ಮಂಜೂರು ಮಾಡುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ರೈತರು ತಾವು ಬೆಳೆದ ಉತ್ಪನ್ನಗಳನ್ನು ತಂದು ಮಾರುವ ಮಾರುಕಟ್ಟೆಯಲ್ಲೂ ಬಂಡವಾಳಶಾಹಿಗಳನ್ನು ಕರೆ ತರುವ ಯತ್ನ ನಡೆಸಲಾಗುತ್ತಿದೆ. ಇದು ಯಾವ ಪುರುಷಾರ್ಥಕ್ಕಾಗಿ ಎನ್ನುವುದು ತಿಳಿಯುತ್ತಿಲ್ಲ. ಕೊರೋನಾ ಮಾರಕ ರೋಗದಿಂದ ಬಳಲಿ ಆರ್ಥಿಕವಾಗಿ ಅನೇಕ ದೇಶಗಳು ತತ್ತರಿಸಿವೆ. ಇದೇ ವಿಷಯವನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತಿರುವುದು ಯಾವ ನ್ಯಾಯ - ಆವರಗೆರೆ ಎಚ್.ಜಿ.ಉಮೇಶ