ಚಿಕ್ಕಮಗಳೂರಿನ ಶೃಂಗೇರಿ ತಾಲೂಕಿನ ನೆಮ್ಮಾರು ಗ್ರಾಮದಲ್ಲಿ 20 ವರ್ಷದ ಹಿಂದೆ ತೂಗುಸೇತುವೆ ನಿರ್ಮಿಸಿ ನಿರ್ವಹಣೆ ಮರೆತ ಸರ್ಕಾರ. ಅಧಿಕಾರಿಗಳು ಬರ್ತಾರೆ, ನೋಡ್ತಾರೆ, ಹೋಗ್ತಾರೆ. 2 ಹಳ್ಳಿಯ ಜನರಿಗೆ ಈ ಸೇತುವೆಯೇ ಜೀವಾಳ. 20 ವರ್ಷದಲ್ಲಿ ಒಮ್ಮೆ ಮಾತ್ರ ಗ್ರೀಸ್-ಬಣ್ಣ ಕಂಡ ಸೇತುವೆ
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ನ.3): ಮಲೆನಾಡಿನ ಜನರ ಅನುಕೂಲಕ್ಕಾಗಿ ಸರ್ಕಾರ ಹ್ಯಾಂಗಿಗ್ ಬ್ರಿಡ್ಜ್ ಗಳನ್ನು ನಿರ್ಮಾಣ ಮಾಡಿದೆ. ನಿರ್ಮಾಣ ಮಾಡಿದ ಬಳಿಕ ಜನಪ್ರತಿನಿಧಿಗಳು , ಅಧಿಕಾರಿಗಳು ಮತ್ತೆ ಆ ಕಡೆ ಮುಖಹಾಕುವುದಿಲ್ಲ, 20 ವರ್ಷದ ಹಿಂದೆ ನಿರ್ಮಿಸಿ ನಿರ್ವಹಣೆ ಮರೆತು ಇರುವ ಪರಿಣಾಮ ಸೇತುವೆಯ ತಡೆಗೋಡೆ, ಗ್ರೀಲ್ ಎಲ್ಲವೂ ಕಿತ್ತು ಹೋಗಿದೆ. ಇಂತಹ ಸ್ಥಿತಿ ನಿರ್ಮಾಣವಾಗಿರುವುದು ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕಿನ ನೆಮ್ಮಾರು ಗ್ರಾಮದಲ್ಲಿ. ನೆಮ್ಮಾರು ಗ್ರಾಮದಲ್ಲಿ ಇರುವ ಹ್ಯಾಂಗಿಗ್ ಬ್ರಿಡ್ಜ್ ಸೇತುವೆಯನ್ನ ನಂಬಿಕೊಂಡೇ ಸುಂಕದಮಕ್ಕಿ ಹಾಗೂ ಹೆಡದಾಳು ಗ್ರಾಮದ ನೂರಾರು ಕುಟುಂಬಗಳಿವೆ. ಸುಮಾರು 150ಕ್ಕೂ ಹೆಚ್ಚು ಕುಟುಂಬಗಳು. 500ಕ್ಕೂ ಅಧಿಕ ಜನ. ಇವರಿಗೆ ಬೇರೆ ಮಾರ್ಗ ಇದ್ರು 12 ಕಿ.ಮೀ. ಸುತ್ತಿ ಬರಬೇಕು. ಹಾಗಾಗಿ, 20 ವರ್ಷಗಳ ಹಿಂದೆ ಸರ್ಕಾರವೇ ತೂಗುಸೇತುವೆ ನಿರ್ಮಿಸಿ ಕೊಟ್ಟಿತ್ತು. ಆದ್ರೆ, ಟೇಪ್ ಕಟ್ ಮಾಡಿ, ಓಪನ್ ಮಾಡಿದ ರಾಜಕಾರಣಿಗಳು ಅಧಿಕಾರಿಗಳು ಅದು ಹೇಗಿದೆ ಅಂತ ಮತ್ತೆ ಈ ಕಡೆ ತಲೆ ಹಾಕಿಲ್ಲ. ನಿರ್ವಹಣೆ ಇಲ್ಲದೆ ಸೇತುವೆ ತನ್ನ ಸಾಮರ್ಥ್ಯವನ್ನ ಕಳೆದುಕೊಂಡಿದೆ. ಸೇತುವೆಯ ಹಾಕಿರುವ ಗ್ರಿಲ್ ಗಳು ಕಿತ್ತು ಬಂದಿವೆ. ಸೇತುವೆಯ ಫುಟ್ ಪಾತ್ ಹಾಗೂ ತಡೆಗೋಡೆಗೆ ಹಾಕಿರೋ ಗ್ರಿಲ್ ಗಳ ಜಾಂಯ್ಟ್ ಕೂಡ ಬಿಟ್ಟಿದ್ದು ಸ್ವಲ್ಪ ಯಾಮಾರಿದ್ರು ಕಾಲು ಕೆಳಗೆ ಹೋಗುತ್ತೆ. ಹಣೆಬರಹ ತೀರಾ ಕೆಟ್ಟಿದ್ರೆ ತುಂಗಾನದಿ ಪಾಲಾದ್ರು ಆಶ್ಚರ್ಯ ಇಲ್ಲ. ಹಾಗಾಗಿ, ಸರ್ಕಾರ ಕೂಡಲೇ ಇತ್ತ ಗಮನ ಹರಿಸಿ ಸೇತುವೆಗೆ ಬಣ್ಣ ಹೊಡೆದು, ಗ್ರೀಸ್ ಹಾಕಿ ಬಂದೋಬಸ್ತ್ ಮಾಡಬೇಕೆಂದು ವಿದ್ಯಾರ್ಥಿ ಪ್ರಣೀತ್ ಮನವಿ ಮಾಡಿಕೊಂಡಿದ್ದಾರೆ.
ತೂಗು ಸೇತುವೆ ಮೇಲೆ ಕಾರು ಚಲಾಯಿಸಿ ಪ್ರವಾಸಿಗರ ಹುಚ್ಚಾಟ!
ಸೇತುವೆ ಆಯಿತು, ಆದ್ರೆ ನಿರ್ವಹಣೆಯಿಂದ ದೂರ
ಸೇತುವೆ ಸ್ಥಿತಿ ಬಗ್ಗೆ ಸ್ಥಳಿಯರು ಹಲವು ಬಾರಿ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಆದರೆ, ಸ್ಥಳಕ್ಕೆ ಬಂದು ಹೋಗುವ ಅಧಿಕಾರಿಗಳ ಕಥೆ ಬಂದ ಪುಟ್ಟ ಹೋದ ಪುಟ್ಟ ಎಂಬಂತಾಗಿದೆ. ಒಂದು ವೇಳೆ ಈ ಸೇತುವೆ ಹಾಳಾದ್ರೆ, ಈ ಭಾಗದ ಜನ ಸಣ್ಣ ಕೆಲಸಕ್ಕೂ ಹೆದ್ದಾರಿಗೆ ಬರಬೇಕೆಂದ್ರೆ ಕನಿಷ್ಠ 10 ಕಿ.ಮೀ. ಸುತ್ತಿ ಬಳಸಿ ಬರಬೇಕು. ಮಳೆಗಾಲದಲ್ಲಿ ಆ 10 ಕಿ.ಮೀ. ಹೋಗೋದು ಅಸಾಧ್ಯದ ಮಾತು. ಮಕ್ಕಳು ಶಾಲಾ-ಕಾಲೇಜಿಗೆ ಹೋಗೋದಕ್ಕೆ ಆಗಲ್ಲ. ನಿತ್ಯ 20 ಕಿ.ಮೀ. ನಡೆದು ಹೋಗಬೇಕಾಗುತ್ತದೆ.
ತುಕ್ಕು ಹಿಡಿದ ಸೇತುವೆಗೆ ಬಣ್ಣ ಬಳಿದು ನಾಟಕ: Bridge Collapse ದೇವರಿಚ್ಛೆ ಎಂದ ಕಂಪನಿ ಮ್ಯಾನೇಜರ್
ಈ ಸೇತುವೆ ನಿರ್ಮಾಣವಾದಗಿನಿಂದ ಒಂದೇ ಒಂದು ಬಾರಿ ಮಾತ್ರ ಬಣ್ಣ ಮತ್ತು ಗ್ರೀಸ್ ಕಂಡಿದೆ. ಮೊದಲೆಲ್ಲಾ 4-5 ಜನ ಓಡಾಡಿದ್ರು ಏನೂ ಆಗ್ತಿರಲ್ಲಿಲ್ಲ. ಈಗ ಒಬ್ಬಿಬ್ಬರು ಓಡಾಡುದ್ರೆ ತೂಗಾಡುತ್ತೆ, ಓಡಾಡೋಕೆ ಭಯವಾಗುತ್ತೆ ಅಂತಾರೆ ಸ್ಥಳಿಯರಾದ ರವಿ ಒಟ್ಟಾರೆ, ಸರ್ಕಾರ ಬಡಜನರಿಗೆಂದು ತೂಗು ಸೇತುವೆಯನ್ನೇನೋ ನಿರ್ಮಿಸಿ ಕೊಡ್ತು. ಆದ್ರೆ, ಅದರ ನಿರ್ವಹಣೆ ಮರೆತಿದೆ. ಸರ್ಕಾರವೇ ಮರೆತ ಕಾರಣ ಇಂದು ಆ ಸೇತುವೆ ಸಂಪೂರ್ಣ ಶಿಥಿಲಾವಸ್ಥೆ ತಲುಪಿದೆ. ಕಂಬಿ ಕಿತ್ತಿವೆ, ಇಂಟರ್ ಲಿಂಕ್ ಹೋಗಿವೆ, ತೂಗುಸೇತುವೆ ಸಂಪೂರ್ಣ ತೂಗಾಡ್ತಿದೆ. ಮುಂದೊಂದು ದಿನ ಏನಾದ್ರು ಅನಾಹುತವಾದಾಗ ಸರ್ಕಾರ ಪರಿಹಾರ ನೀಡೋ ಬದಲು. ಈಗಲೇ ಇತ್ತ ಗಮನ ಹರಿಸಿ ಅದಕ್ಕೊಂದು ಭದ್ರತೆ ಕಲ್ಪಿಸಿದರೆ ಏನೂ ಆಗಲ್ಲ. ಸರ್ಕಾರ ಆ ನಿಟ್ಟಿನಲ್ಲಿ ಯೋಚಿಸಬೇಕಿದೆ.