ಸಕಲೇಶಪುರದಲ್ಲಿ ಶಂಕಿತ ನಕ್ಸಲರು ಪ್ರತ್ಯಕ್ಷ

By Kannadaprabha NewsFirst Published Jul 18, 2019, 10:42 AM IST
Highlights

ತಾಲೂಕಿನಲ್ಲಿ ಶಂಕಿತ ನಕ್ಸಲರು ಸಂಚರಿಸುತ್ತಿದ್ದಾರೆ ಎಂಬ ಹಿನ್ನೆಲೆಯಲ್ಲಿ ಬುಧವಾರ ಪೊಲೀಸರು ಹಾಗೂ ಇತರೆ ತಂಡವರು ವ್ಯಾಪಕ ಶೋಧ ಕಾರ್ಯ ನಡೆಸಿದರು. ರೈಲ್ವೆ ಹಳಿಯ ಪೆಟ್ರೋಲಿಂಗ್‌ ಕೆಲಸ ಮಾಡುತ್ತಿದ್ದ ಮಾರನಹಳ್ಳಿ ಗ್ರಾಮದ ವಿಜಯ್‌ ಹಾಗೂ ರಾಜು ಎಂಬುವವರಿಗೆ ಮಂಗಳವಾರ ರಾತ್ರಿ 7.10ರ ವೇಳೆಗೆ ಇಬ್ಬರು ಅನುಮಾನಾಸ್ಪದ ವ್ಯಕ್ತಿಗಳು ಎದುರಾಗಿದ್ದಾರೆ. ರಿವಾಲ್ವರ್‌ ತೋರಿಸಿ ಅಲ್ಲೆ ಕುಳಿತುಕೊಳ್ಳುವಂತೆ ಹೇಳಿ ತಾವು ತಂದಿದ್ದ ಊಟವನ್ನು ಸೇವಿಸಿ ಅಲ್ಲಿಂದ ತೆರಳಿದ್ದಾರೆ.

ಹಾಸನ (ಜು.18): ಸಕಲೇಶಪುರದಲ್ಲಿ ಶಂಕಿತ ನಕ್ಸಲರು ಸಂಚರಿಸುತ್ತಿದ್ದಾರೆ ಎಂಬ ಹಿನ್ನೆಲೆಯಲ್ಲಿ ಬುಧವಾರ ಪೊಲೀಸರು ಹಾಗೂ ಇತರೆ ತಂಡವರು ವ್ಯಾಪಕ ಶೋಧ ಕಾರ್ಯ ನಡೆಸಿದರು. ಗ್ರಾಮಾಂತರ ಠಾಣೆಯ ಪಿಎಸ್‌ಐ ಬ್ಯಾಟರಾಯಗೌಡರ ನೇತೃತ್ವದಲ್ಲಿ ಸುಮಾರು 15 ಸಿಬ್ಬಂದಿಯೊಂದಿಗೆ ಕಡಗರಹಳ್ಳಿ, ಮಾರನಹಳ್ಳಿ, ಕೆಂಚನಕುಮಾರಿ, ಕಾಗಿನಹರೆ, ಕೆಂಪಹೊಳೆ ರಕ್ಷಿತಾ ಅರಣ್ಯ, ಸುತ್ತಮುತ್ತ ಕೂಂಬಿಂಗ್‌ ಕಾರ್ಯಾಚರಣೆ ಮಾಡಲಾಯಿತು.

ಪೊಲೀಸರ ಜೊತೆಗೆ ರೈಲ್ವೆ ಪೋಲಿಸರು ಹಾಗೂ ಅರಣ್ಯ ಇಲಾಖೆಯ ಸುಮಾರು 15 ಮಂದಿ ಸಿಬ್ಬಂದಿ ಸಹ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಬೆಳಗ್ಗೆ 9 ಗಂಟೆಗೆ ಕಾರ್ಯಾಚರಣೆ ಆರಂಭಿಸಿ, ಸಂಜೆ 4ಗಂಟೆ ಹೊತ್ತಿಗೆ ಕಾರ್ಯಾಚರಣೆ ಮುಕ್ತಾಯಗೊಳಿಸಲಾಯಿತು.

ಘಟನೆ ವಿವರ:

ತಾಲೂಕಿನ ಕಡಗರವಳ್ಳಿ ಗ್ರಾಮದಿಂದ ಸುಮಾರು ಒಂದು ಕಿ.ಮಿ ದೂರದಲ್ಲಿನ ರೈಲ್ವೆ ಹಳಿಯ ಪೆಟ್ರೋಲಿಂಗ್‌ ಕೆಲಸ ಮಾಡುತ್ತಿದ್ದ ಮಾರನಹಳ್ಳಿ ಗ್ರಾಮದ ವಿಜಯ್‌ ಹಾಗೂ ರಾಜು ಎಂಬುವವರಿಗೆ ಮಂಗಳವಾರ ರಾತ್ರಿ 7.10ರ ವೇಳೆಗೆ ಇಬ್ಬರು ಅನುಮಾನಾಸ್ಪದ ವ್ಯಕ್ತಿಗಳು ಎದುರಾಗಿದ್ದು, ಈ ವೇಳೆ ಇಬ್ಬರನ್ನು ಪ್ರಶ್ನಿಸಿದಾಗ ಹಿಂದಿಯಲ್ಲಿ ಮಾತನಾಡಿದ್ದಾರೆ.

ಈ ವ್ಯಕ್ತಿಗಳು ತಮ್ಮ ಬಳಿಯಿದ್ದ ರಿವಾಲ್ವರ್‌ ತೋರಿಸಿ ಅಲ್ಲೆ ಕುಳಿತುಕೊಳ್ಳುವಂತೆ ಹೇಳಿ ತಾವು ತಂದಿದ್ದ ಊಟವನ್ನು ಅಲ್ಲೆ ಸೇವಿಸಿ ಅಲ್ಲಿಂದ ತೆರಳಿದ್ದಾರೆ. ಈ ಹಿನ್ನೆಲೆಯಲ್ಲಿ ಅನುಮಾನಾಸ್ಪದ ವ್ಯಕ್ತಿಗಳನ್ನು ಹುಡುಕಲು ಬುಧವಾರ ಕಾರ್ಯಾಚರಣೆ ಮಾಡಲಾಯಿತು.

ಕೊಡಗಿನಲ್ಲಿ ನಕ್ಸಲರು ಪ್ರತ್ಯಕ್ಷ..!

click me!