
ಬೆಂಗಳೂರು: ನಗರ ಹೊರವಲಯದಲ್ಲಿ ನಡೆಯುವ ಸಂಗೀತ ಕಾರ್ಯಕ್ರಮಕ್ಕೆ ಮೊಬೈಲ್ ಕಳ್ಳತಕ್ಕಾಗಿ ದೆಹಲಿಯಿಂದ ವಿಮಾನದಲ್ಲಿ ಬರುತ್ತಿದ್ದ ಇಬ್ಬರು ಚಾಲಾಕಿ ಖದೀಮರು ವೈಟ್‌ಫೀಲ್ಡ್ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ದೆಹಲಿ ಮೂಲದ ಜಯಚಂದ್ ಹಾಗೂ ತರುಣ್ ಬಂಧಿತರಾಗಿದ್ದು, ಆರೋಪಿಗಳಿಂದ 9 ಲಕ್ಷ ರು. ಮೌಲ್ಯದ 14 ಐಫೋನ್ ಗಳನ್ನು ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ದೇವನಹಳ್ಳಿ ಸಮೀಪದ ಚನ್ನರಾಯಪಟ್ಟಣ ಸಮೀಪ ಸಂಗೀತ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವೀಕ್ಷಕರ ಬಳಿ ಮೊಬೈಲ್ ಕಳ್ಳತನವಾಗಿತ್ತು. ಈ ಬಗ್ಗೆ ವೈಟ್‌ಫೀಲ್ಡ್ ಠಾಣೆಗೆ ಮಹದೇವಪುರದ ನಿವಾಸಿ ನೀಡಿದ ದೂರಿನ ಮೇರೆಗೆ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಕೃತ್ಯದ ನಡೆದ ಕೆಲವೇ ತಾಸುಗಳಲ್ಲಿ ಆರೋಪಿಗಳು ಪೊಲೀಸರು ಸೆರೆ ಹಿಡಿದಿದ್ದಾರೆ.
ನಗರದಲ್ಲಿ ನಡೆಯುವ ಸಂಗೀತ ಕಾರ್ಯಕ್ರಮಗಳ ಬಗ್ಗೆ ಆನ್‌ಲೈನ್ ಮೂಲಕ ದೆಹಲಿ ಮೂಲದ ಚಂದ್ ಹಾಗೂ ತರುಣ್ ಮಾಹಿತಿ ಪಡೆಯುತ್ತಿದ್ದರು. ಬಳಿಕ ಆ ಕಾರ್ಯಕ್ರಮಗಳಿಗೆ ವೀಕ್ಷಕರ ಸೋಗಿನಲ್ಲಿ ಭಾಗವಹಿಸಿ ಆರೋಪಿಗಳು ಕೈ ಚಳಕ ತೋರಿಸುತ್ತಿದ್ದರು.
ಅಂತೆಯೇ ಜ.23 ರಂದು ಚನ್ನರಾಯಪಟ್ಟಣದಲ್ಲಿ ನಡೆದ ಸಂಗೀತ ಸಂಜೆ ಸಮಾರಂಭಕ್ಕೆ ಪಾಲ್ಗೊಳ್ಳಲು ದೆಹಲಿಯಿಂದ ಚಂದನ್ ಹಾಗೂ ತರುಣ್ ಬಂದಿದ್ದರು. ವೈಟ್ ಫೀಲ್ಡ್ ಸಮೀಪ ಅವರು ರೂಮ್ ಬಾಡಿಗೆ ಪಡೆದಿದ್ದರು. ಆ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಮಹದೇವಪುರದ ನಿವಾಸಿ ಐ ಫೋನ್ ಮೊಬೈಲ್ ಅನ್ನು ಆರೋಪಿಗಳು ಎಗರಿಸಿದ್ದರು. ಈ ಬಗ್ಗೆ ದೂರು ದಾಖಲಾದ ಕೂಡಲೇ ಟವರ್ ಲೋಕೇಷನ್ ಆಧರಿಸಿ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಮಾಹಿತಿ ನೀಡಿದ್ದಾರೆ.
ದೆಹಲಿ ಗ್ಯಾಂಗ್ ಬಳಿ 14 ಮೊಬೈಲ್‌ಗಳು ಜಪ್ತಿಯಾಗಿದ್ದು, ಈ ಸಂಬಂಧ ಚನ್ನರಾಯಪಟ್ಟಣ ಠಾಣೆಯಲ್ಲಿ 13 ಹಾಗೂ ವೈಟ್ ಫೀಲ್ಡ್ ಠಾಣೆಯಲ್ಲಿ 1 ಪ್ರಕರಣ ಪತ್ತೆಯಾಗಿವೆ. ಇದೇ ಮೊದಲ ಬಾರಿಗೆ ಈ ಇಬ್ಬರು ಬಂಧಿತರಾಗಿದ್ದಾರೆ. ಆದರೆ ಈ ಹಿಂದೆ ಸಹ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಅವರು ಮೊಬೈಲ್ ಕಳ್ಳತನ ಮಾಡಿರುವ ಶಂಕೆ ಇದೆ. ಈ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಆಯುಕ್ತರು ತಿಳಿಸಿದ್ದಾರೆ.