ರೈತರ ಜೀವನಾಡಿ ತೆಂಗು ಬೆಳೆಯನ್ನು ರೋಗಗಳಿಂದ ಉಳಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದ್ದು ರೈತರೊಂದಿಗೆ ಸದಾ ಇರುವುದಾಗಿ ಶಾಸಕ ಕೆ.ಷಡಕ್ಷರಿ ತಿಳಿಸಿದರು.
ತಿಪಟೂರು : ರೈತರ ಜೀವನಾಡಿ ತೆಂಗು ಬೆಳೆಯನ್ನು ರೋಗಗಳಿಂದ ಉಳಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದ್ದು ರೈತರೊಂದಿಗೆ ಸದಾ ಇರುವುದಾಗಿ ಶಾಸಕ ಕೆ.ಷಡಕ್ಷರಿ ತಿಳಿಸಿದರು.
ತಾಲೂಕಿನ ಕಿಬ್ಬನಹಳ್ಳಿ ಹೋಬಳಿ ಜಕ್ಕನಹಳ್ಳಿ ಗ್ರಾಮದ ರೈತ ಮಲ್ಲಿಕಾರ್ಜುನಯ್ಯವರ ತೋಟದಲ್ಲಿ ತೋಟಗಾರಿಕೆ ಇಲಾಖೆ ವತಿಯಿಂದ ತೆಂಗು ಬೆಳೆಯ ಕಾಂಡ ಸೋರುವ ಮತ್ತು ಅಣಬೆ ರೋಗಗಳ ಹತೋಟಿ ಕ್ರಮಗಳ ಬಗ್ಗೆ ಹಮ್ಮಿಕೊಂಡಿದ್ದ ಪ್ರಾತ್ಯಕ್ಷಿಕೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ತೆಂಗಿಗೆ ಸಾಕಷ್ಟುರೋಗಗಳು ತಗುಲುತ್ತಿದ್ದು ಇವುಗಳ ಹತೋಟಿ ಕ್ರಮಕ್ಕೆ ಅಗತ್ಯ ಕ್ರಮಕೈಗೊಳ್ಳಲಾಗುವುದು.ಇಲಾಖೆ ಮತ್ತು ಅರಸೀಕೆರೆ ತೋಟಗಾರಿಕೆ ಸಂಶೋಧನಾ ಕೇಂದ್ರದ ವಿಜ್ಞಾನಿಗಳು ಶಿಫಾರಸ್ಸು ಮಾಡುವ ಆಧುನಿಕ ತಂತ್ರಜ್ಞಾನವನ್ನು ಹಾಗೂ ಉಪಚರಿಸುವ ವಿಧಾನಗಳನ್ನು ಅಳವಡಿಸಿಕೊಂಡು ರೈತರು ಆರ್ಥಿಕ ಸುಧಾರಣೆಯಾಗಬೇಕೆಂದರು.
ಸಂಶೋಧನಾ ಕೇಂದ್ರದ ಮುಖ್ಯಸ್ಥ ಜಗದೀಶ್ ಮಾತನಾಡಿದ, ತೆಂಗಿನಲ್ಲಿ ಬಾಧಿಸುವ ರೋಗ ಮತ್ತು ಕೀಟಗಳ ಸಮಗ್ರ ನಿರ್ವಹಣೆ ಬಗ್ಗೆ ಸವಿವರವಾಗಿ ರೈತರಿಗೆ ತಿಳಿಸಿದರು. ವಿಜ್ಞಾನಿ ಕಿರಣ್‌ಕುಮಾರ್ ಅಣಬೆ ಮತ್ತು ರಸ ಸೋರುವ ತೆಂಗಿನ ಮರಕ್ಕೆ ಔಷಧಿ ಉಪಚರಿಸುವ ವಿಧಾನವನ್ನು ನೆರೆದಿದ್ದ ರೈತರಿಗೆ ಪ್ರಾಯೋಗಿಕವಾಗಿ ತೋರಿಸುವ ಮೂಲಕ ವೈಜ್ಞಾನಿಕ ಪದ್ದತಿಯನ್ನು ತಿಳಿಸಿಕೊಟ್ಟರು.
ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಎಚ್.ಆರ್. ಚಂದ್ರಶೇಖರ್ ಮಾತನಾಡಿ, ಇಲಾಖೆಯು ಪ್ರತಿ ಹೋಬಳಿಯಲ್ಲಿ ಎರಡು ಪ್ರಾತ್ಯಕ್ಷಿತೆಯನ್ನು ಮಾಡಲು ನಿರ್ಧರಿಸಿದ್ದು, ರೈತರಿಗೆ ತಾಂತ್ರಿಕವಾಗಿ ಮಾಹಿತಿಯನ್ನು ಕೊಟ್ಟು ರೋಗ ನಿಯಂತ್ರಣಕ್ಕೆ ಸಂಪೂರ್ಣ ಬೆಂಬಲವನ್ನು ನೀಡುವುದಕ್ಕಾಗಿ ಇಲಾಖೆ ಸಿಬ್ಬಂದಿ ಸನ್ನದ್ದರಾಗಿದ್ದು ರೈತರು ಸದ್ಬಳಕೆ ಮಾಡಿಕೊಳ್ಳಬೇಕೆಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಕೀಟಶಾಸ್ತ್ರಜ್ಞ ಚಂದ್ರಶೇಖರ್, ಇಲಾಖೆ ಸಿಬ್ಬಂದಿಗಳಾದ ಡಾ. ಕೆ.ಎಸ್. ನವೀನ್‌ಕುಮಾರ್, ಎಂ. ಕರಣ್, ಅಶ್ವಿನಿಬಡ್ನಿ, ಮಲ್ಲಿಕಾರ್ಜುನ ಹೆಬ್ಬಾಳ, ಕೆ.ಎನ್. ರಕ್ಷಿತ, ಟಿ.ಆರ್. ಶಮಂತ, ಗವಿರಂಗನಾಥಸ್ವಾಮಿ, ಜೆ.ಟಿ. ರತ್ನಮ್ಮ, ಬಿ.ವಿ. ಶ್ರೀನಿವಾಸ್, ಕುಪ್ಪಾಳು ಸಹಕಾರ ಸಂಘದ ಅಧ್ಯಕ್ಷ ಸಿದ್ದಲಿಂಗಮೂರ್ತಿ ಸೇರಿದಂತೆ ರೈತರು ಭಾಗವಹಿಸಿದ್ದರು.