ಹಳ್ಳ ಹಿಡಿದ ನೀರು ಶುದ್ಧೀಕರಣ ಘಟಕಗಳು: ನೀರಿಗಾಗಿ ಜನರ ಪರದಾಟ

By Web DeskFirst Published Sep 27, 2019, 12:29 PM IST
Highlights

ಸುರಪುರದಲ್ಲಿ ಮೂಲೆ ಗುಂಪಾದ ಶುದ್ಧ ಕುಡಿಯುವ ನೀರಿನ ಘಟಕ| ತಾಲೂಕಿನ ಗ್ರಾಮೀಣ ಭಾಗದಲ್ಲಿ ಶುದ್ಧ ನೀರಿಗಾಗಿ ಜನರ ಪರದಾಟ| ಸರ್ಕಾರದ ಹಣ ಸಾರ್ವಜನಿಕರ ಉಪಯೋಗಿಕ್ಕಿಲ್ಲದೆ ವಥಾ ಪೋಲಾಗುತ್ತಿದೆ| ನಗರಸಭೆಯಿಂದಲೇ ಚಾಲನೆಗೊಂಡ ಘಟಕ ಒಂದೆರಡು ವರ್ಷಗಳ ಕಾಲ ಕೆಲಸ ನಿರ್ವಹಿಸಿ ಬಳಿಕ ಒಂದು ವರ್ಷದಿಂದ ಬಂದ್ ಆಗಿದೆ| ಜನರು ಶುದ್ಧ ಕುಡಿಯುವ ನೀರಿಗಾಗಿ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ| 

ಸುರಪುರ(ಸೆ.27) ನೀರಿನ ಕೊರತೆ, ಮೇಲುಸ್ತುವಾರಿ ನಿರ್ವಹಣೆ ಕೊರತೆಯಿಂದಾಗಿ ಸರ್ಕಾರದದ ಮಹತ್ವಾಕಾಂಕ್ಷಿ ಶುದ್ಧ ಕುಡಿಯುವ ನೀರು ಪೂರೈಸುವ ಯೋಜನೆ ತಾಲೂಕಿನ ಸುರಪುರ ನಗರ, ವಾಗಣಾಗೇರಾ, ತಳವಾರಗೇರಾ, ಬೋನಾಳ ಗ್ರಾಮಗಳಲ್ಲಿ ಹಳ್ಳ ಹಿಡಿದಿದ್ದು, ಶುದ್ಧ ನೀರಿಗೆ ಜನರು ಪರದಾಡುವಂತಾಗಿದೆ. 

ತಾಲೂಕಿನ ವಿವಿಧ ಹಳ್ಳಗಳಲ್ಲಿ 13  ಮತ್ತು 14 ನೇ ಹಣಕಾಸು ಯೋಜನೆಯಡಿ ಅಂದಾಜು 5  ರಿಂದ 10 ಲಕ್ಷ ರು. ವರೆಗಿನ ಶುದ್ಧ ನೀರಿನ ಘಟಕಗಳು ಆರಂಭದ ಕೆಲ ದಿನಗಳ ನಂತರ ಕೆಲಸ ಮಾಡದೆ ಸ್ಥಗಿತಗೊಂಡಿವೆ. ಇದರಿಂದ ಸರ್ಕಾರದ ಹಣ ಸಾರ್ವಜನಿಕರ ಉಪಯೋಗಿಕ್ಕಿಲ್ಲದೆ ವಥಾ  ಪೋಲಾಗುತ್ತಿದೆ. 

ನೀರಿಲ್ಲದೆ ಘಟಕ ಸ್ಥಗಿತ: 

ನಗರದ ಸುಮಾರು 16  ವಾರ್ಡ್ ನಿವಾಸಿಗಳಿಗೆ ಶುದ್ಧ ಕುಡಿಯವ ನೀರು ಪೂರೈಸುವ ಘಟಕ ನಗರಸಭೆಯ ಅನತಿ ದೂರದಲ್ಲಿ ಆರಂಭಿಸಲಾಗಿತ್ತು. ನಗರಸಭೆಯಿಂದಲೇ ಚಾಲನೆಗೊಂಡ ಘಟಕ ಒಂದೆರಡು ವರ್ಷಗಳ ಕಾಲ ಕೆಲಸ ನಿರ್ವಹಿಸಿ ಬಳಿಕ ಒಂದು ವರ್ಷದಿಂದ ಬಂದ್ ಆಗಿದೆ. ಇದರಿಂದ ಜನರು ಶುದ್ಧ ಕುಡಿಯುವ ನೀರಿಗಾಗಿ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಉಳ್ಳವರು ಹಣ ತೆತ್ತು ಶುದ್ಧ ನೀರು ಖರೀದಿಸಿದರೆ ಇಲ್ಲದವರು ಹಳ್ಳದಿಂದ ನೇರವಾಗಿ ನಲ್ಲಿಗಳಿಗೆ ಬರುವ ಕಚ್ಚಾ ನೀರನ್ನೇ ಕುಡಿಯಬೇಕಿದೆ. 

ಬತ್ತಿದ ಅಂತರ್ಜಲ: 

ಯಂತ್ರಗಳು ಉತ್ತಮ ಸ್ಥಿತಿಯಲ್ಲಿದ್ದರೂ ಕೊಳವೆ ಬಾವಿಯಲ್ಲಿನ ಅಂತರ್ಜಲ ಕುಸಿದಿದ್ದರಿಂದ ಶುದ್ಧ ಕುಡಿಯುವ ನೀರು ಘಟಕ ನಿಲುಗಡೆಯಾಗಿದೆ. ಕುಸಿದಿರುವ ಮೋಟಾರ್ ಎತ್ತಿ ಸರಿಪಡಿಸಿದರೆ ಮತ್ತೆ ನೀರು ಬರುತ್ತದೆ ಎನ್ನುತ್ತಾರೆ ಆಟೋ ನಿಲ್ದಾಣದ ಚಾಲಕರು.

ಕಿತ್ತು ಹೋದ ಘಟಕ: 

ವಾಗಣಗೇರಾದಲ್ಲಿ ಸುಮಾರು 10 ಲಕ್ಷ ರು. ವೆಚ್ಚದಲ್ಲಿ ಸ್ಥಾಪಿಸಲಾಗಿರುವ ಶುದ್ಧ ಕುಡಿಯುವ ಘಟಕವೂ ಉಪಯೋಗಿಸದೇ ಕೆಟ್ಟು ನಿಂತಿದೆ. ಭೂಸೇನಾ ಇಲಾಖೆ ಅವರು ಘಟಕ ನಿರ್ಮಿಸಿದ್ದು, ಸಂರಕ್ಷಣೆ ಮಾಡಲು ಯಾವುದೇ ವ್ಯವಸ್ಥೆ ಮಾಡಿಲ್ಲ. ಇದರಿಂದ ರಕ್ಷಣೆಯಿಲ್ಲದೆ ಯಂತ್ರಗಳು ಮಳೆ, ಗಾಳಿಗೆ ಹಾಳಾಗಿ ಹೋಗಿವೆ. ಯಂತ್ರಗಳು ತುಕ್ಕು ಹಿಡಿದ ಸ್ಥಿತಿಯಲ್ಲಿದೆ. ಬಾಗಿಲು ಮುರಿದು ಹೋಗಿದೆ. ಕಿಟಕಿ ಗ್ಲಾಸ್‌ಗಳು ಪುಡಿಪುಡಿಯಾಗಿವೆ. ಸಿಂಟಿಕ್ಸ್ ಗಾಳಿಗೆ ಹಾರಿಹೋಗಿ ಹಳ್ಳದ ಕಾಲುವೆಗೆ ಬಿದ್ದಿವೆ. ನೀರಿನ ಸಂಪರ್ಕ ಕಲ್ಪಿಸದೇ ಘಟಕ ಹಾಳಾಗಿರುವುದು ತಾಪಂ ಆಡಳಿತಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ನೀರಿಲ್ಲದೆ ಸ್ಥಗಿತ: 

ತಳವಾರಗೇರಾದಲ್ಲಿ ಶುದ್ಧ ಕುಡಿಯವ ನೀರು ಕಳೆದಾರು ತಿಂಗಳಿಂದ ನೀರು ಪೂರೈಕೆಯಿಲ್ಲದೆ ಸ್ಥಗಿತಗೊಂಡಿದೆ. ಗ್ರಾಮದಲ್ಲಿ ಕೊಳವೆಬಾವಿಯಿದ್ದು, ನೀರನ್ನು ಶುದ್ಧ ಕುಡಿಯುವ ನೀರು ಘಟಕಕ್ಕೆ ಬಿಡದೆ ಸಾರ್ವಜನಿಕರ ಬಳಕೆಗೆ ಬಳಸಲಾಗುತ್ತಿದೆ. ಇದರಿಂದ ಶುದ್ಧ ಕುಡಿವ ನೀರಿಲ್ಲದೆ ನಲ್ಲಿಗಳಲ್ಲಿ ಬರುವ ನೀರನ್ನೇ ಕುಡಿಯುವಂತಾಗಿದೆ.

ಗುಜರಿಯಂತಾದ ಘಟಕ: 

ಬೋನಾಳ ಗ್ರಾಮದಲ್ಲಿ ಆರಂಭಿಸಲಾಗಿರುವ ಶುದ್ಧ ಕುಡಿಯುವ ನೀರಿನ ಘಟಕ ಕಿತ್ತು ಹೋಗಿ ಗುಜರಿಯಂತಾಗಿದೆ. ಘಟಕ ಬಾಗಿಲು ಕಿತ್ತು ಹೋಗಿದೆ. ಘಟಕದ ಮುಂದೆಯೇ ಎರಡು ಬೋರ್‌ವೆಲ್ ಗಳಿದ್ದರೂ ಕೆಟ್ಟು ನಿಂತಿರುವುದು ದುರಂತವಾಗಿದೆ. ಗುತ್ತಿಗೆ ಪಡೆದ ಖಾಸಗಿ ಏಜೆನ್ಸಿಗಳು ಬೇರೆ ಜಿಲ್ಲೆಯವರಾಗಿದ್ದು, ಕೆಲವೆಡೆ ಕೆಲಸ ಪೂರ್ಣಗೊಳಿಸಿದ್ದರೆ ಮತ್ತು ಕೆಲವು ಕಡೆ ಅಪೂರ್ಣಗೊಂಡಿವೆ. 

ಲ್ಯಾಂಡ್ ಆರ್ಮಿ ಇಲಾಖೆ ಅಧಿಕಾರಿಗಳನ್ನು ಕೇಳಿದರೆ ಘಟಕ ನಿರ್ಮಿಸಲು ಅವಕಾಶ ಕೊಟ್ಟ ಏಜೇನ್ಸಿಯೇ 10 ವರ್ಷ ನಿರ್ವಹಣೆ ಬಳಿಕ ಗ್ರಾಮ ಪಂಚಾಯ್ತಿಗೆ ಹಸ್ತಾಂತರಿಸಬೇಕು ಎನ್ನುವ ನಿಯಮವಿದೆ. ಈ ಹಿನ್ನೆಲೆ ಗ್ರಾಮ ಪಂಚಾಯ್ತಿಗಳು ಶುದ್ಧ ಕುಡಿಯುವ ನೀರಿನ ಘಟಕ ಪಡೆಯಲು ಹಿಂದೇಟು ಹಾಕುತ್ತಿವೆ ಎನ್ನುತ್ತಾರೆ ಗ್ರಾಮಸ್ಥರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ  

ಈ ಬಗ್ಗೆ ಮಾತನಾಡಿದ ವಾಗಣಿಗೇರಾದ ಪಿಡಿಒ ಹುಸೇನ್ ಭಾಷಾ ಅವರು, ಕಿರು ನೀರು ಸರಬರಾಜು ಯೋಜನೆ ಪೈಪ್ ಹಾದು ಹೋಗಿದ್ದು, ಸಂಪರ್ಕ ಕಲ್ಪಿಸಿಲ್ಲ. ಕೊಳವೆ ಬಾವಿ ಇಲ್ಲವಾಗಿದೆ. ಲ್ಯಾಂಡ್ ಆರ್ಮಿ ಅವರು ವಾಗಣಿಗೇರಾ ಶುದ್ಧ ಕುಡಿಯುವ ನೀರು ಘಟಕಕ್ಕೆ ಕ್ಯಾಬಿನ್ ನಿರ್ಮಿಸಿಕೊಟ್ಟರೆ ನೀರು ಸಂಪರ್ಕ ಕಲ್ಪಿಸಿಕೊಡುವ ಕೆಲಸ ಮಾಡಲಾಗುವುದು. ಈ ಬಗ್ಗೆ ಲ್ಯಾಂಡ್ ಆರ್ಮಿ ಇಲಾಖೆಗೆ ಪತ್ರ ಸಲ್ಲಿಸಲಾಗುವುದು ಎಂದು ಹೇಳಿದ್ದಾರೆ. 

ಪಟ್ಟಣದ 16 ವಾರ್ಡ್‌ಗಳಿಗೆ ಶುದ್ಧ ನೀರು ಘಟಕದಿಂದ ದೊರೆಯುತ್ತಿತ್ತು. ಇದರಿಂದ ಜನರುಶುದ್ಧ ನೀರು ಕುಡಿಯುತ್ತಿದ್ದರು. ಕಳೆದ ಒಂದು ವರ್ಷದಿಂದ ಬೋರಿನಲ್ಲಿ ನೀರು ಇಲ್ಲವಾಗಿದೆ. ಇದರಿಂದ ಶುದ್ಧ ಕುಡಿಯುವ ನೀರಿಗೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ನಗರಸಭೆ ಅಧಿಕಾರಿಗಳು ಆರಂಭಿಸಲು ಕ್ರಮ ಕೈಗೊಳ್ಳಬೇಕು ಎಂದು ಸುರಪುರದ ಸಾಮಾಜಿಕ ಕಾರ್ಯಕರ್ತ ಗೋಪಾಲ ಚಿನ್ನಾಕರ ಅವರು ಆಗ್ರಹಿಸಿದ್ದಾರೆ. 

click me!