ಅಯೋಧ್ಯೆ ಶ್ರೀರಾಮ ವಿಗ್ರಹಕ್ಕೆ ಸೂರ್ಯಕಿರಣ ಸ್ಪರ್ಶದ ವ್ಯವಸ್ಥೆ : ಮೋದಿ ಸೂಚನೆ

Kannadaprabha News   | Asianet News
Published : Nov 18, 2020, 10:24 AM ISTUpdated : Nov 18, 2020, 10:58 AM IST
ಅಯೋಧ್ಯೆ ಶ್ರೀರಾಮ ವಿಗ್ರಹಕ್ಕೆ ಸೂರ್ಯಕಿರಣ ಸ್ಪರ್ಶದ ವ್ಯವಸ್ಥೆ : ಮೋದಿ ಸೂಚನೆ

ಸಾರಾಂಶ

ಅಯೋಧ್ಯೆ ರಾಮಮಂದಿರದಲ್ಲಿ ರಾಮನವಮಿಯಂದು ಶ್ರೀರಾಮನ ವಿಗ್ರಹವನ್ನು ಸೂರ್ಯನ ಕಿರಣಗಳು ಸ್ಪರ್ಶಿಸುವಂತೆ ವ್ಯವಸ್ಥೆ ಮಾಡುವುದು, ಭಕ್ತರು ದೇವರಿಗೆ ನಮಸ್ಕರಿಸುವಾಗ ಸ್ವತಃ ದೇವರ ಪಾದ ಸ್ಪರ್ಶಿಸುವ ಅನುಭೂತಿ ಸಿಗುವಂತಾಗಲು ತ್ರೀಡಿ ತಂತ್ರಜ್ಞಾನ ಅಳವಡಿಕೆಗೆ ಪ್ರಧಾನಿ ಮೋದಿ ಸೂಚಿಸಿದ್ದಾರೆ

ಮಂಗಳೂರು (ನ.18): ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರದಲ್ಲಿ ರಾಮನವಮಿಯಂದು ಶ್ರೀರಾಮನ ವಿಗ್ರಹವನ್ನು ಸೂರ್ಯನ ಕಿರಣಗಳು ಸ್ಪರ್ಶಿಸುವಂತೆ ವ್ಯವಸ್ಥೆ ಮಾಡುವುದು, ಭಕ್ತರು ದೇವರಿಗೆ ನಮಸ್ಕರಿಸುವಾಗ ಸ್ವತಃ ದೇವರ ಪಾದ ಸ್ಪರ್ಶಿಸುವ ಅನುಭೂತಿ ಸಿಗುವಂತಾಗಲು ತ್ರೀಡಿ ತಂತ್ರಜ್ಞಾನ ಅಳವಡಿಕೆಗೆ ಪ್ರಧಾನಿ ಮೋದಿ ಸೂಚಿಸಿದ್ದಾರೆ ಎಂದು ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ತಿಳಿಸಿದ್ದಾರೆ.

ಇತ್ತೀಚೆಗೆ ಅಯೋಧ್ಯೆ, ದೆಹಲಿ ಸೇರಿ ಉತ್ತರ ಪ್ರದೇಶದ ಪುಣ್ಯ ಕ್ಷೇತ್ರಗಳ ದರ್ಶನ ನಡೆಸಿ, ವಿಎಚ್‌ಪಿ ಮಾರ್ಗದರ್ಶಕ ಮಂಡಳಿ ಸಮಾವೇಶ, ರಾಮಜನ್ಮಭೂಮಿ ಟ್ರಸ್ಟ್‌ ಸಭೆಯಲ್ಲಿ ಭಾಗವಹಿಸಿ ಹಿಂತಿರುಗಿರುವ ಅವರು ಮಂಗಳೂರಿನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಪ್ರಧಾನಿ ಅವರ ಸೂಚನೆಯಂತೆ ಈ ಎರಡು ಆಕರ್ಷಣೆಯ ವ್ಯವಸ್ಥೆಗಳು ಕಾರ್ಯಗತವಾಗಲಿವೆ. ದೇವರ ಮೂರ್ತಿಗೆ ಸೂರ್ಯ ಕಿರಣ ಸ್ಪರ್ಶ ವ್ಯವಸ್ಥೆಯ ಜವಾಬ್ದಾರಿಯನ್ನು ಕೌನ್ಸಿಲ್‌ ಫಾರ್‌ ಸೈಂಟಿಫಿಕ್‌ ಆ್ಯಂಡ್‌ ಇಂಡಸ್ಟ್ರಿಯಲ್‌ ರಿಸಚ್‌ರ್‍ಗೆ ವಹಿಸಲಾಗಿದ್ದು, ತ್ರೀಡಿ ತಂತ್ರಜ್ಞಾನಕ್ಕೆ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯನ್ನು ನಿಯೋಜಿಸಲಾಗಿದೆ ಎಂದರು.

ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ಶ್ರೀರಾಮ ಮಂದಿರ ಸಂಪೂರ್ಣವಾಗಿ ಶಿಲಾಮಯವಾಗಿ ರೂಪುಗೊಳ್ಳುವುದರಿಂದ ಅಷ್ಟುಭಾರ ಹೊರಲು ಅಲ್ಲಿನ ಭೂಮಿಯ ಧಾರಣಾ ಸಾಮರ್ಥ್ಯ ಎಷ್ಟಿದೆ ಎಂಬ ಬಗ್ಗೆ 200 ಅಡಿ ಆಳದವರೆಗೆ ಪರೀಕ್ಷೆ ನಡೆಯುತ್ತಿದೆ. ಈ ಪರೀಕ್ಷೆ, ಪರಿಶೀಲನೆಯ ಬಳಿಕವೇ ಸದೃಢವಾದ ಮಂದಿರ ರೂಪುಗೊಳ್ಳಲಿದೆ ಎಂದರು.

ಅಯೋಧ್ಯೆ ಭೂಮಿಯ ಧಾರಣಾ ಸಾಮರ್ಥ್ಯ ಪರೀಕ್ಷೆಯೇ ಪ್ರಸ್ತುತ ದೊಡ್ಡ ಕೆಲಸ. ಅಲ್ಲಿರುವುದು ಗಟ್ಟಿನೆಲವಲ್ಲ, ಬದಲಿಗೆ ಧೂಳು ಮರಳು ತುಂಬಿದ ನೆಲ ಆಗಿರುವುದರಿಂದ ಸೂಕ್ಷ್ಮ ಪರೀಕ್ಷೆಗಳು ವೈಜ್ಞಾನಿಕವಾಗಿ ನಡೆಯುತ್ತಿವೆ. ಅದರ ಬಳಿಕವೇ ಗಟ್ಟಿಯಾದ ತಳಪಾಯ ಹಾಕಿ ಶಿಲಾಮಯ ದೇಗುಲದ ನಿರ್ಮಾಣ ಆಗಲಿದೆ. ಈ ಪರೀಕ್ಷೆ ಕಾರ್ಯಕ್ಕೆ ತಗಲುವ ಅವಧಿಯ ಬಗ್ಗೆ ಇನ್ನೂ ಸ್ಪಷ್ಟತೆಯಿಲ್ಲ. ಈಗ ನೆಲ ಸಮತಟ್ಟು ಮತ್ತಿತರ ಕಾರ್ಯಗಳು ನಡೆಯುತ್ತಿವೆ ಎಂದು ಹೇಳಿದರು.

ಅಂಜನಾದ್ರಿ ಬೆಟ್ಟದಲ್ಲಿ ವಿಶ್ವದ ಅತಿ ಎತ್ತರದ ಹನುಮ ಪ್ರತಿಮೆ.. ಜೈ ಆಂಜನೇಯ

ಮಂದಿರ ನಿರ್ಮಾಣಕ್ಕೆ ವೈದಿಕ ವೈದಿಕ ವಾಸ್ತುಶಾಸ್ತ್ರ ತಂಡದ ರಚನೆಯಾಗುತ್ತಿದ್ದು, ಕುಡುಪು ಕೃಷ್ಣರಾಜ ತಂತ್ರಿಗಳು, ಗುಂಡಿಬೈಲಿನ ತಜ್ಞರು ಸೇರಿ ಕೇರಳದ ಒಬ್ಬರು, ಉತ್ತರ ಭಾರತದ ಇಬ್ಬರು ಮಹನೀಯರು ತಂಡದಲ್ಲಿ ಇರುತ್ತಾರೆ ಎಂದರು.
 
ಸಂಸ್ಕೃತಿ ಪುನರುತ್ಥಾನವಾಗಲಿ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಭಾರತೀಯರ ಶತಮಾನದ ಕನಸು. ಇದಕ್ಕಾಗಿ ಹೋರಾಡಿದವರೆಲ್ಲರ ಕನಸು ನನಸಾಗುವ ಕಾಲ ಸನ್ನಿಹಿತವಾಗಿದೆ ಎಂದ ಶ್ರೀಗಳು, ರಾಮ ಮಂದಿರ ನಿರ್ಮಾಣದೊಂದಿಗೆ ಸಂಸ್ಕೃತಿಯ ಪುನರುತ್ಥಾನವೂ ಜತೆಜತೆಗೇ ಆಗಬೇಕಿದೆ. ಬದುಕೆಲ್ಲವೂ ಭಗವಂತನ ಆರಾಧನೆಯಾಗಬೇಕು. ನಮ್ಮಿಂದ ಯಾರಿಗೂ ಹಿಂಸೆ ಆಗಬಾರದು ಮತ್ತು ಆಗುವ ಹಿಂಸೆಯನ್ನು ತಡೆಯುವ ಧರ್ಮಪಾಲನೆಯ ಅವಶ್ಯಕತೆಯಿದೆ ಎಂದು ಕರೆ ನೀಡಿದರು.

PREV
click me!

Recommended Stories

ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಮುಗಿಸಿ ಬೈಕ್‌ನಲ್ಲಿ ತೆರಳುತ್ತಿದ್ದ ಜೋಡಿಗೆ ಲಾರಿ ಡಿಕ್ಕಿ, ಸ್ಥಳದಲ್ಲೇ ಸಾವು
ಕಾಂಗ್ರೆಸ್ ಸರ್ಕಾರ ಶೇ.60ರಷ್ಟು ಭ್ರಷ್ಟಾಚಾರದಲ್ಲಿ ಮುಳುಗಿದೆ: ಮಾಜಿ ಸಚಿವ ಬಿ.ಸಿ.ಪಾಟೀಲ್ ಆರೋಪ