ಮೊಬೈಲ್‌ ತರಂಗಾಂತರ ವೇಗ ಹೆಚ್ಚಿಸಲು ಅಗತ್ಯ ಕ್ರಮ: ಸಂಸದ ಬಿ.ವೈ.ರಾಘವೇಂದ್ರ

By Kannadaprabha News  |  First Published May 19, 2020, 10:48 AM IST

ಮಲೆನಾಡಿನಲ್ಲಿ ಮೊಬೈಲ್ ನೆಟ್‌ವರ್ಕ್ ಸಮಸ್ಯೆಗೆ ಮುಕ್ತಿ ಹಾಡಲು ಸಂಸದ ಬಿ. ವೈ. ರಾಘವೇಂದ್ರ ಮುಂದಾಗಿದ್ದಾರೆ.‌ ಶಿವಮೊಗ್ಗ ಜಿಲ್ಲೆಯಾದ್ಯಂತ ಮೊಬೈಲ್ ನೆಟ್‌ವರ್ಕ್ ಟವರ್ ಸ್ಥಾಪಿಸುವ ಬಗ್ಗೆ ಗಮನ ಹರಿಸಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.


ಶಿವಮೊಗ್ಗ(ಮೇ.19): ಬೈಂದೂರು ಸೇರಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿನ ಮೊಬೈಲ್‌ ಹಾಗೂ ಇಂಟರ್‌ನೆಟ್‌ ಬಳಕೆದಾರರ ಅಗತ್ಯಕ್ಕೆ ಪೂರಕವಾಗಿ ಬಿಎಸ್‌ಎನ್‌ಎಲ್‌, ಜಿಯೋ ಮತ್ತು ಏರ್‌ಟೆಲ್‌ನಂತಹ ಪ್ರಸಿದ್ಧ ಖಾಸಗಿ ಟೆಲಿಕಾಂ ಕಂಪನಿಗಳ ಸಹಭಾಗಿತ್ವದಲ್ಲಿ ಟವರ್‌ಗಳನ್ನು ನಿರ್ಮಿಸುವ ಕಾರ್ಯ ಪ್ರಗತಿಯಲ್ಲಿದ್ದು, ಮುಂದಿನ ದಿನಗಳಲ್ಲಿ ಜಿಲ್ಲೆಯಾದ್ಯಂತ ಮೊಬೈಲ್‌ ಸಂಪರ್ಕ ಇನ್ನಷ್ಟು ಉತ್ತಮಗೊಳ್ಳಲಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.

ಸೋಮವಾರ ಖಾಸಗಿ ಟೆಲಿಕಾಂ ಕಂಪನಿಗಳ ಮುಖ್ಯಸ್ಥರು, ಆಡಳಿತಾಧಿಕಾರಿಗಳು, ಬಿಎಸ್‌ಎನ್‌ಎಲ್‌ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಸಮಾಲೋಚನೆ ಬಳಿಕ ಅವರು ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು.

Tap to resize

Latest Videos

ಲೋಕಸಭಾ ಚುನಾವಣೆ ಬಳಿಕ ನನ್ನ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ಮೊಬೈಲ್‌ ಮತ್ತು ನೆಟ್‌ವರ್ಕ್ ಸಂಪರ್ಕ ಕುರಿತು ಅಗತ್ಯ ಮೂಲ ಸೌಲಭ್ಯಗಳಿಗಾಗಿ ಕೇಂದ್ರ ಸಂಪರ್ಕ ಸಚಿವ ರವಿಶಂಕರ್‌ ಪ್ರಸಾದ್‌ ಜೊತೆ ಚರ್ಚಿಸಿದ್ದೆ. ಸಚಿವರು ಎಲ್ಲ ಸಹಕಾರ ನೀಡುವ ಆಶ್ವಾಸನೆ ನೀಡಿದ್ದು, ಅದರಂತೆ ಸಾಕಷ್ಟು ಕ್ರಮ ಕೈಗೊಳ್ಳಲಾಗಿದೆ ಎಂದರು. ಅಗತ್ಯಕ್ಕೆ ತಕ್ಕಂತೆ ಮೊಬೈಲ್‌ ಸೇವೆ ದೊರೆಯದಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ದೂರುಗಳು ಕೇಳಿ ಬರುತ್ತಿವೆ. ಗ್ರಾಮೀಣ ಭಾಗಗಳೂ ಸೇರಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ತರಂಗಾಂತರಗಳನ್ನು ಹೆಚ್ಚಿಸಲು ಉದ್ದೇಶಿಲಾಗಿದೆ. ಖಾಸಗಿ ಕಂಪನಿಗಳೊಂದಿಗಿನ ಒಪ್ಪಂದದಂತೆ ಈಗಾಗಲೇ ಟವರ್‌ಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಸೋಮವಾರ ನಡೆದ ಸಭೆಯಲ್ಲಿ ಸಮಸ್ಯೆಗಳ ಕುರಿತು ಚರ್ಚೆ ನಡೆದಿದೆ. ಟವರ್‌ ನಿರ್ಮಾಣಕ್ಕೆ ಭೂ ಲಭ್ಯತೆ, ವಿದ್ಯುತ್‌ ಇತ್ಯಾದಿ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಪ್ರಯತ್ನವೂ ನಡೆದಿದೆ ಎಂದು ರಾಘವೇಂದ್ರ ತಿಳಿಸಿದರು.

ಶಿವಮೊಗ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿ 120 ಟವರ್‌ಗಳ ಅಗತ್ಯವಿದ್ದು, ಕೂಡಲೇ ನಿರ್ಮಿಸಿಕೊಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಬಿಎಸ್‌ಎನ್‌ಎಲ್‌ ಟವರ್‌ ಮಾತ್ರವಲ್ಲದೇ ಜಿಯೋ ಮತ್ತು ಏರ್‌ಟೆಲ್‌ನ ಪ್ರತಿ ಕಂಪನಿಗಳಿಗೆ ನೀಡಿದ ಗುರಿಯಲ್ಲಿ 69 ಟವರ್‌ಗಳನ್ನು ನಿರ್ಮಿಸಲಾಗಿದೆ. ಪ್ರಸ್ತುತ ಜಿಯೋ 37 ಮತ್ತು ಏರ್‌ಟೆಲ್‌ 25 ಟವರ್‌ಗಳನ್ನು ನಿರ್ಮಿಸಿದ್ದು, ಮಲೆನಾಡು ಭಾಗದ ತೀರ್ಥಹಳ್ಳಿ, ಸಾಗರ ಮತ್ತು ಹೊಸನಗರ ತಾಲೂಕುಗಳಲ್ಲಿ ವಿವಿಧ ಕಾರಣಗಳಿಂದಾಗಿ ಉಳಿದ ಟವರ್‌ಗಳ ನಿರ್ಮಾಣ ಕಾರ್ಯದಲ್ಲಿ ಎದುರಾದ ಸಮಸ್ಯೆಗಳ ಕುರಿತು ಇನ್ನೂ ಒಂದು ವಾರದೊಳಗಾಗಿ ಜಿಲ್ಲಾಧಿಕಾರಿ ಹಾಗೂ ಬಿಎಸ್‌ಎನ್‌ಎಲ್‌ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಶಿವಮೊಗ್ಗ ಜಿಲ್ಲೆ ಅಪಾಯದ ಸ್ಥಿತಿಯಲ್ಲಿ ಇಲ್ಲ: ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್‌

ಜಿಲ್ಲೆಯಲ್ಲಿ 241 ಬಿಎಸ್‌ಎನ್‌ಎಲ್‌ ಟವರ್‌ಗಳಿದ್ದು, ಅವುಗಳಲ್ಲಿ 100 ಟವರ್‌ಗಳನ್ನು ವಿಶೇಷವಾಗಿ ಗಮನಹರಿಸಿ ನಿರ್ವಹಣೆ ಮಾಡಲಾಗುತ್ತಿದೆ. ಅಂತೆಯೇ ಉಳಿದ 141 ಟವರ್‌ಗಳನ್ನು ವಿದ್ಯುತ್‌, ಜನರೇಟರ್‌, ಸಿಬ್ಬಂದಿ ಸೇರಿದಂತೆ ವಿವಿಧ ಕಾರಣಗಳಿಂದಾಗಿ ಸರಿಯಾಗಿ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಪ್ರತಿ ಟವರ್‌ನ ವ್ಯವಸ್ಥಿತ ನಿರ್ವಹಣೆಗೆ ಕನಿಷ್ಟ10 ಕಿ.ವ್ಯಾ. ವಿದ್ಯುತ್‌ನ ಅಗತ್ಯವಿದ್ದು, ಇದರ ಪೂರೈಕೆಯಲ್ಲಿ ವ್ಯತ್ಯಯವಿರುವುದು ಕಂಡುಬರುತ್ತಿದೆ. ಇಂತಹ ಟವರ್‌ಗಳಿಗೆ ನಿರಂತರ ವಿದ್ಯುತ್‌ ಹರಿಸುವ ಅಗತ್ಯವಿದೆ ಎಂದರು.

ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಉಪಕಾರ್ಯದರ್ಶಿ ರವಿ, ಬಿಎಸ್‌ಎನ್‌ಎಲ್‌ ವಿಭಾಗೀಯ ವ್ಯವಸ್ಥಾಪಕ ಕೃಷ್ಣಮೊಗೇರ, ಜಿಯೋ ಸಂಸ್ಥೆಯ ಮಿಥುನ್‌, ಏರ್‌ಟೆಲ್‌ನ ಜನರಲ್‌ ಮ್ಯಾನೇಜರ್‌ ಪದ್ಮನಾಭ, ಶಾಂತಕುಮಾರ್‌, ಮ್ಯಾಥ್ಯೂ, ಮೆಸ್ಕಾಂ ಇಂಜಿನಿಯರ್‌ ನಟರಾಜ್‌, ಜ್ಯೋತಿಪ್ರಕಾಶ್‌, ಅಧಿಕಾರಿಗಳು ಹಾಗೂ ಗಣ್ಯರು ಇದ್ದರು.

112 ವಿದ್ಯುತ್‌ ಘಟಕ ಸ್ಥಾಪನೆಗೆ ಪ್ರಸ್ತಾವನೆ

ಟವರ್‌ಗಳ ಅಗತ್ಯಕ್ಕೆ ವಿದ್ಯುತ್‌ ಸರಬರಾಜು ಮಾಡಲು ಜಿಲ್ಲೆಯಲ್ಲಿ 110 ಕೆ.ವಿ.ಸಾಮರ್ಥ್ಯದ 112 ವಿದ್ಯುತ್‌ ಘಟಕ ಸ್ಥಾಪಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದರಿಂದಾಗಿ ಮಲೆನಾಡು ಭಾಗದಲ್ಲಿ ಬಿಎಸ್‌ಎನ್‌ಎಲ್‌ ಟವರ್‌ಗಳಿಗೆ ವಿದ್ಯುತ್‌ ಸರಬರಾಜು ಮಾಡಲು ಅನುಕೂಲವಾಗಲಿದೆ. ಪ್ರಸ್ತುತ ಬಿಎಸ್‌ಎನ್‌ಎಲ್‌ ವಿಯೋಮ್‌ ಸಂಸ್ಥೆಯ ಸ್ವಾಮ್ಯತೆಗೊಳಪಟ್ಟ30 ಟವರ್‌ಗಳ ಸೇವೆ ಬಳಸಿಕೊಳ್ಳುತ್ತಿದೆ. ಲಾಕ್‌ಡೌನ್‌ ವೇಳೆ ನಗರದಿಂದ
ಗ್ರಾಮೀಣ ಪ್ರದೇಶಕ್ಕೆ ಬಂದು ಮನೆಯಿಂದ ಕೆಲಸ ನಿರ್ವಹಿಸುತ್ತಿದ್ದ ಯುವ ಉದ್ಯೋಗಿಗಳಿಗೆ ಇಂಟರ್‌ನೆಟ್‌ ಸೌಲಭ್ಯ ಒದಗಿಸಲು ಗ್ರಾಮ ಪಂಚಾಯಿತಿಯ ನೆಟ್‌ಸೇವೆ ಬಳಸಿಕೊಳ್ಳಲು ಅವಕಾಶ ಮಾಡಿಕೊಡಲಾಗಿತ್ತು. ಕಳೆದ ಆರು ತಿಂಗಳಿಂದೀಚೆಗೆ ಸುಮಾರು 60 ಟವರ್‌ ಸ್ಥಾಪನೆಯಾಗಿದ್ದು, ಮುಂದಿನ ಆರು ತಿಂಗಳ ಅವಧಿಯಲ್ಲಿ ಇನ್ನೂ 60 ಟವರ್‌ ನಿರ್ಮಿಸಲು ಉದ್ದೇಶಿಸಲಾಗಿದೆ. ಅದಕ್ಕಾಗಿ ಖಾಸಗಿ ಟೆಲಿಕಾಂ ಕಂಪನಿಗಳಿಗೆ ಜಿಲ್ಲಾಡಳಿತದಿಂದ ಅಗತ್ಯ
ಸಹಕಾರ ನೀಡಲಾಗುವುದು ಎಂದು ರಾಘವೇಂದ್ರ ತಿಳಿಸಿದರು.
 

click me!