ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದಲ್ಲಿ ಕೊರೋನಾ ಸೋಂಕಿನ ಭಯ ಇಲ್ಲ, ಯಾರೂ ಹೆದರುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ಹೇಳಿದ್ದಾರೆ. ಈ ಕುರಿತಾಧ ರಿಪೋರ್ಟ್ ಇಲ್ಲಿದೆ ನೋಡಿ.
ಶಿವಮೊಗ್ಗ(ಮೇ.19): ಬೇರೆ ರಾಜ್ಯಗಳಿಂದ ಜಿಲ್ಲೆಗೆ ಇದುವರೆಗೆ ಆಗಮಿಸಿರುವ 1428 ಮಂದಿಯನ್ನು ಸಾಂಸ್ಥಿಕ ಕ್ವಾರೆಂಟೈನ್‌ಗೆ ಒಳಪಡಿಸಲಾಗಿದ್ದು, ಇದುವರೆಗೆ ಕೊರೋನಾ ಪಾಸಿಟೀವ್ ಬಂದ 14 ಪ್ರಕರಣಗಳಲ್ಲಿ 13 ಪ್ರಕರಣ ಹೊರ ರಾಜ್ಯದಿಂದ ನೇರವಾಗಿ ಬಂದು ಕ್ವಾರಂಟೈನ್ ಆಗಿರುವುದರಿಂದ ಜಿಲ್ಲೆಯಲ್ಲಿ ಕೊರೋನಾ ಸೋಂಕಿನ ಭಯ ಇಲ್ಲ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊರ ಜಿಲ್ಲೆಗಳಿಂದ ಆಗಮಿಸಿದ್ದವರ ಪೈಕಿ 802 ಮಂದಿಯ ಗಂಟಲ ದ್ರವ ಪರೀಕ್ಷೆ ನಡೆಸಲಾಗಿದ್ದು, 14 ಪಾಸಿಟಿವ್ ಬಂದಿವೆ. ಇನ್ನುಳಿದವರ ಪರೀಕ್ಷೆ ಒಂದೆರಡು ದಿನಗಳಲ್ಲಿ ಪೂರ್ಣಗೊಳಿಸಲಾಗುವುದು ಎಂದು ಹೇಳಿದರು.
5.12 ಲಕ್ಷ ಜನರ ಆರೋಗ್ಯದ ಮೇಲೆ ನಿಗಾ:
ಜಿಲ್ಲೆಯಲ್ಲಿ ಎರಡನೇ ಹಂತದ ಮನೆ ಮನೆ ಆರೋಗ್ಯ ಸಮೀಕ್ಷೆ ಪೂರ್ಣಗೊಂಡಿದೆ. ಮೂರನೇ ಹಂತದ ಸಮೀಕ್ಷೆ ಆರಂಭಿಸಲಾಗಿದ್ದು, ಒಟ್ಟು 5.12 ಲಕ್ಷ ಜನರ ಆರೋಗ್ಯ ಮಾಹಿತಿ ಪಡೆಯಲಾಗುವುದು. ಆಶಾ ಕಾರ್ಯಕರ್ತೆಯರು ಮತ್ತು ಬಿಎಲ್‌ಒಗಳು ಸಮೀಕ್ಷೆ ಕಾರ್ಯ ಕೈಗೊಂಡಿದ್ದಾರೆ ಎಂದರು.
ಇಂದಿನಿಂದ ಶಿವಮೊಗ್ಗದಿಂದ ಹೊರ ಜಿಲ್ಲೆಗಳಿಗೆ KSRTC ಬಸ್ ಸೇವೆ ಆರಂಭ
5200 ಮಂದಿಗೆ ಪಾಸ್:
ಜಿಲ್ಲೆಯಿಂದ ಹೊರ ಜಿಲ್ಲೆಗಳಿಗೆ ಹಾಗೂ ರಾಜ್ಯಗಳಿಗೆ ತೆರಳಲು ಇದುವರೆಗೆ 5200 ಮಂದಿಗೆ ಪಾಸ್ ನೀಡಲಾಗಿದೆ. ಇದರಲ್ಲಿ 281 ಉತ್ತರ ಪ್ರದೇಶ, 79 ಮಂದಿ ಜಾರ್ಖಂಡ್, 316 ಮಂದಿ ಬಿಹಾರ, 150 ಮಂದಿ ಪಶ್ಚಿಮ ಬಂಗಾಳ, 250 ಮಂದಿ ರಾಜಸ್ತಾನ, 36 ಮಂದಿ ಮಧ್ಯಪ್ರದೇಶದವರು. ಇದೇ ವೇಳೆ ಬೇರೆ ಜಿಲ್ಲೆಗಳಿಂದ ಆರಂಭಿಕ ಹಂತದಲ್ಲಿ 59ಸಾವಿರ ಮಂದಿ ಬಳಿಕ 3300 ಮಂದಿ ಪಾಸ್ ಬಳಸಿ ಬಂದಿದ್ದಾರೆ. ಸುಮಾರು 150 ಮಂದಿ ಪಾಸ್ ಇಲ್ಲದೇ ಜಿಲ್ಲೆಗೆ ಬರುವ ಪ್ರಯತ್ನ ಮಾಡಿದ್ದು, ಅಂತವರನ್ನು ಚೆಕ್‌ಪೋಸ್ಟ್‌ಗಳಲ್ಲಿ ಪತ್ತೆ ಹಚ್ಚಿ ಕ್ವಾರೆಂಟೈನ್‌ಗೆ ಒಳಪಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಕ್ವಾರಂಟೈನ್‌ನಲ್ಲಿದ್ದ ವ್ಯಕ್ತಿ ನಾಪತ್ತೆ ಸುದ್ದಿ ಸುಳ್ಳು: ಡಿಸಿ ಸ್ಪಷ್ಟನೆ
ಕ್ವಾರಂಟೈನ್‌ನಲ್ಲಿ ಇದ್ದ ಹೊರ ಜಿಲ್ಲೆಯ ವ್ಯಕ್ತಿಯೊಬ್ಬ ತಪ್ಪಿಸಿಕೊಂಡಿದ್ದಾನೆ ಎಂಬುದು ಸುಳ್ಳು ಸುದ್ದಿ ಎಂದು ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ. ಹೊರ ಜಿಲ್ಲೆಯಿಂದ ಬಂದ ವ್ಯಕ್ತಿಗೆ ಶೀತದ ಲಕ್ಷಣವಿತ್ತು. ಆತ ಮೆಗ್ಗಾನ್ ಆಸ್ಪತ್ರೆಗೆ ತೋರಿಸಲು ಬಂದಿದ್ದರು. ಆದರೆ ಆ ವ್ಯಕ್ತಿಗೆ ಕೋವಿಡ್ ಸಂಬಂಧಿತ ಲಕ್ಷಣವಿರಲಿಲ್ಲ. ಆದರೂ ಇಲ್ಲಿಯೇ ಅಡ್ಮಿಟ್ ಆಗುವಂತೆ ಸೂಚಿಸಲಾಯಿತು. ಆದರೆ ಆ ವ್ಯಕ್ತಿ ತಾನು ತನ್ನ ಊರಿಗೆ ಹೋಗಿ ಅಲ್ಲಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯವುದಾಗಿ ಹೇಳಿದ. ಕೋವಿಡ್ ಸೋಂಕಿತ ಲಕ್ಷಣಗಳಿಲ್ಲದ ಕಾರಣ ಯಾರೂ ಒತ್ತಾಯ ಮಾಡುವಂತಿಲ್ಲ. ಇನ್ನು ಕ್ವಾರಂಟೈನ್ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದರು. ಆದರೆ ಈ ವ್ಯಕ್ತಿಗೂ ಕೋವಿಡ್‌ಗೂ ಸಂಬಂಧವಿಲ್ಲ. ಹೀಗಿರುವಾಗ ತಪ್ಪಿಸಿಕೊಂಡು ಹೋಗಿದ್ದಾನೆ ಎಂಬ ವಿಷಯವೇ ಬರುವುದಿಲ್ಲ. ಇದೆಲ್ಲ ಸುಳ್ಳು ಸುದ್ದಿ ಎಂದು ಸ್ಪಷ್ಟಪಡಿಸಿದರು.