
ವಿಜಯಪುರ/ಚಿಕ್ಕೋಡಿ: ಉತ್ತರ ಕರ್ನಾಟಕದ ಭಾಗದಲ್ಲಿ ಕಬ್ಬು ಬೆಳೆಗಾರರ ಹೋರಾಟ ತೀವ್ರಗೊಂಡಿದೆ. ವಿಜಯಪುರ, ಬೆಳಗಾವಿ, ಚಿಕ್ಕೋಡಿಯಲ್ಲಿ ಇಂದು ಭಾರೀ ಬೆಳವಣಿಗೆಗಳು ನಡೆದಿವೆ. ಚಿಕ್ಕೋಡಿಯಲ್ಲಿ ರೈತರ ಹೋರಾಟಕ್ಕೆ ವಿದ್ಯಾರ್ಥಿಗಳಿಂದ ಭಾರೀ ಬೆಂಬಲ ಸಿಕ್ಕಿದೆ. ಬೆಳಗಾವಿ ಜಿಲ್ಲೆಯಾದ್ಯಂತ ಭಾರೀ ಪ್ರಮಾಣದಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ಒಂದು ಟನ್ ಕಬ್ಬಿಗೆ 3500ರೂ ನೀಡುವಂತೆ ಆಗ್ರಹಿಸಿ ಧರಣಿ ನಡೆಸಲಾಗುತ್ತಿದೆ. ಬೆಳಗಾವಿ ಜಿಲ್ಲೆಯ ಅಥಣಿ ಸಂಪೂರ್ಣ ಬಂದ್ ಆಗಿದ್ದು, ಶಾಲಾ ವಿದ್ಯಾರ್ಥಿಗಳಿಂದ ಪ್ರತಿಭಟನೆಗೆ ಬೆಂಬಲ ವ್ಯಕ್ತವಾಗಿದೆ. ರೈತರ ಹೋರಾಟಕ್ಕೆ ವಕೀಲರು, ವೈದ್ಯರು ಸಾಥ್ ನೀಡಿದ್ದಾರೆ.
ಕಬ್ಬಿನ ದರ ನಿಗದಿಗೆ ಆಗ್ರಹಿಸಿ ವಿಜಯಪುರದಲ್ಲೂ ಪ್ರತಿಭಟನೆ ನಡೆದಿದೆ. ವಿಜಯಪುರ ನಗರದಲ್ಲಿ ಗಾಂಧಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆದಿದೆ. ಕಬ್ಬು ಬೆಳೆಗಾರರು, ರೈತ ಸಂಘಟನೆ ಮುಖಂಡರು ಪ್ರತಿಭಟನಾ ಮೆರವಣಿಗೆ ಮಾಡಿದ್ದಾರೆ. 3500 ದರ ನೀಡುವಂತೆ ರೈತರು ಆಗ್ರಹಿಸಿದ್ದಾರೆ. ರಾಜಕಾರಣಿಗಳ ಕಾರ್ಖಾನೆಗಳಿಗೆ ದರ ನಿಗದಿ ಮಾಡಲಿ ಎಂದು ಕೈಯಲ್ಲಿ ಕಬ್ಬು ಹಿಡಿದು ಸರ್ಕಾರದ ವಿರುದ್ಧ ಆಕ್ರೋಶ ತೋರಿದ್ದಾರೆ. ದರ ನಿಗದಿ ಮಾಡುವವರೆಗೂ ಹೋರಾಟ ಮುಂದುವರೆಯಲಿದೆ ಎಂದು ರೈತರು ಹೇಳಿದ್ದಾರೆ.
ಪ್ರತಿಭಟನಾ ಮೆರವಣಿಗೆ ವೇಳೆ ರೈತನೊಬ್ಬ ಕುಸಿದು ಬಿದ್ದಿರುವ ಘಟನೆ ನಡೆದಿದೆ. ಸಾಯಬಣ್ಣ ಅಂಗಡಿ ಪ್ರತಿಭಟನಾ ಮೆರವಣಿಗೆ ವೇಳೆ ಅಸ್ವಸ್ಥರಾಗಿದ್ದಾರೆ. ರೈತ ಸಂಘದ ನಿಡಗುಂದಿ ತಾಲೂಕಾ ಅಧ್ಯಕ್ಷ ಆಗಿರುವ ಸಾಯಬಣ್ಣ, ಗಾಂಧಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗಿಯಾಗಿದ್ದರು. ಅಂಬೇಡ್ಕರ್ ವೃತ್ತದ ಬಳಿ ಬರುತ್ತಿದ್ದಂತೆ ಅವರು ಅಸ್ವಸ್ಥಗೊಂಡಿದ್ದರು. ಸ್ಥಳಕ್ಕೆ ವೈದ್ಯರ ಭೇಟಿ ನೀಡಿದ ಬಳಿ ರೈತ ಸಾಯಬಣ್ಣ ಸುಧಾರಿಸಿಕೊಂಡಿದ್ದಾರೆ.
ಕಬ್ಬಿನ ಬೆಳೆಗೆ ನಿಗದಿತ ಬೆಲೆ ನೀಡುವಂತೆ ಆಗ್ರಹಿಸಿ ರೈತರ ಹೋರಾಟಕ್ಕೆ ಮಂಗಳವಾರ ಚಿಕ್ಕೋಡಿ ಸಂಪೂರ್ಣ ಬಂದ್ ಆಗಿದೆ
ಹುಕ್ಕೇರಿ ಪಟ್ಟಣದಲ್ಲಿ ಸಾವಿರಾರು ರೈತರಿಂದ ಪ್ರತಿಭಟನಾ ಮೆರವಣಿಗೆ ನಡೆದಿದ್ದು, ಇಡೀ ಪಟ್ಟಣ ಬಂದ್ ಮಾಡಲಾಗಿದೆ. ಬಂದ್ ಕರೆಯಿಂದ ಸಂಪೂರ್ಣವಾಗಿ ಹುಕ್ಕೇರಿ ಪಟ್ಟಣ ಸ್ಥಬ್ದವಾಗಿದೆ. ಅಡವಿಸಿದ್ಧೇಶ್ವರ ಮಠದಿಂದ ಕೋರ್ಟ ವೃತ್ತದ ವರೆಗೆ ಪ್ರತಿಭಟನಾ ಮೆರವಣಿಗೆ ನಡೆದಿದೆ. ವಕೀಲರು ಕೋರ್ಟ್ ಕಲಾಪ ಬಹಿಷ್ಕರಿಸಿ ಬಂದ್‌ಗೆ ಬೆಂಬಲ ಸೂಚಿಸಿದ್ದಾರೆ. ಯರಗಟ್ಟಿ - ಸಂಕೇಶ್ವರ ಹೆದ್ದಾರಿ ಬಂದ ಮಾಡಿ ಧರಣಿ ಸತ್ಯಾಗ್ರಹ ಮಾಡಲಾಗಿದ್ದು, ಹೆದ್ದಾರಿ ಬಂದ್ ಆಗಿದ್ದರಿಂದ ವಾಹನ ಸವಾರರು ಪರದಾಟ ನಡೆಸಿದರು.
ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಗುರ್ಲಾಪುರದಲ್ಲೂ ತೀವ್ರ ಪ್ರತಿಭಟನೆ ನಡೆದಿತ್ತು. ಇಲ್ಲಿ ಭಾಷಣ ಮಾಡಿದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ,' ಕಳೆದ 6 ದಿನಗಳಿಂದ ಕಬ್ಬು ಬೆಳಗಾರರು ಹೋರಾಟ ಮಾಡುತ್ತಿದ್ದಾರೆ. ರೈತನ ಮಗನಾಗಿ ನಾನೂ ಇವತ್ತು ಹೋರಾಟಕ್ಕೆ ಬಂದಿದ್ದೇನೆ ನಾನೂ ಕೂಡಾ ವೇದಿಕೆಯಲ್ಲಿ ರಾಜಕಾರಣೆ ಮಾಡಲಿಕ್ಕೆ ಬಂದಿಲ್ಲ. ಕಾರ್ಖಾನೆ ಮಾಲೀಕರ ಪರವಾಗಿ ಒತ್ತಾಯ ಮಾಡಲು ಬಂದಿಲ್ಲ. ನಿಮ್ಮ ನ್ಯಾಯಯುತವಾಗಿ ಬೇಡಿಕೆಗೆ ಧ್ವನಿ ಕೂಡಿಸಲು ನಾವು ಬಂದಿದ್ದೇವೆ . ಸ್ವಾಭಿಮಾನಕ್ಕೆ ಮತ್ತೊಂದು ಹೆಸರೇ ರೈತ. ರೈತನ ಕಣ್ಣಲ್ಲಿ ಕಣ್ಣೀರು ತರಿಸಿದರೆ ನಮಗೆ ದೇವರು ಒಳ್ಳೆಯದು ಮಾಡೋದಿಲ್ಲ' ಎಂದು ಹೇಳಿದ್ದಾರೆ.
ಸಿಎಂ ಉಸ್ತುವಾರಿ ಸಚಿವ ಸಕ್ಕರೆ ಸಚಿವರು ರೈತರ ಕಡೆ ಗಮನ ಹರಿಸುತ್ತಿಲ್ಲ. ಬಿ ಎಸ್ ಯಡಿಯೂರಪ್ಪ ಸಹಾಯ ಮಾಡಿದ್ದನ್ನು ಈ ವೇಳೆ ವಿಜಯೇಂದ್ರ ನೆನೆದರು.'ಪ್ರವಾಹದಲ್ಲಿ ಮನೆ ಕಳೆದುಕೊಂಡ ರೈತರಿಗೆ ಐದು ಲಕ್ಷ ಸಹಾಯ ಧನ ನೀಡಿದ್ದು ಯಡಿಯೂರಪ್ಪನವರು. ರೈತರ ತೊಂದರೆ ಕೇಳಲು ಬರದ ಲಜ್ಜೆ ಗೆಟ್ಟ ಸರ್ಕಾರಕ್ಕೆ ಏನು ಹೇಳಬೇಕು ಅನ್ನೋದೇ ಗೊತ್ತಾಗುತ್ತಿಲ್ಲ. ಕಬ್ಬು ಬೆಳಗಾರರು ಮಾಡುತ್ತಿರುವ ಹೋರಾಟ ಇದೇ ಮೊದಲಲ್ಲ. 2014 ರಲ್ಲಿ ಕಬ್ಬು ಬೆಲೆ ನಿಗದಿ ಮಾಡುವಂತೆ ವಿಠ್ಠಲ ಅರಭಾವಿ ಎನ್ನುವ ರೈತ ಆತ್ಮಹತ್ಯೆ ಮಾಡಿಕೊಂಡ. ರೈತ ಎಂದರೆ ಆ ಜಾತಿ ಈ ಜಾತಿ, ಆ ಪಕ್ಷ ಈ ಪಕ್ಷ ಅಲ್ಲ ಜಾತ್ಯಾತೀತವಾಗಿರುವಂತವರೆ ರೈತರು. ಗೌರವಾನ್ವಿತ ಸಿಎಂ ಅವರೆ ಕಬ್ಬು ಬೆಳೆಗರ ಹೋರಾಟವನ್ನ ನೀವ ಗಮನಿಸಬೇಕಿದೆ. ಸಮಯ 1 ಗಂಟೆ 10 ನಿಮಿಷ ಆಗಿದೆ ಸಾಯಂಕಾಲ 5 ಗಂಟೆ ಒಳಗೆ ರೈತರ ಬೇಡಿಕೆ ಇಡೇರಬೇಕು ಅಲ್ಲಿವರೆಗೂ ನಾನು ಇಲ್ಲೇ ಇರುತ್ತೇನೆ. ನಾಳೆ ಹುಟ್ಟು ಹಬ್ಬ ಇಲ್ಲ ನಾನು ರೈತರಿಗೊಸ್ಕರ ಇಲ್ಲೆ ಇರತ್ತೇನೆ ಎಂದು ಹೇಳಿದ್ದಾರೆ.