ಶಾಲೆಯ ಕುಡಿಯುವ ನೀರಿನ ಬಾವಿಗೆ ವಿಷ : ಹಲವು ಮಕ್ಕಳು ಅಸ್ವಸ್ಥ

By Kannadaprabha NewsFirst Published Dec 3, 2019, 9:02 AM IST
Highlights

ಶಾಲೆಯ ಬಾವಿಗೆ ದುಷ್ಕರ್ಮಿಗಳು ವಿಷ ಹಾಕಿದ ಹಿನ್ನೆಲೆ ನೀರನ್ನು ಕುಡಿದ ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ. 

ಉಪ್ಪಿನಂಗಡಿ [ಡಿ.03]:  ಬೆಳ್ತಂಗಡಿ ತಾಲೂಕು ಶಿಬಾಜೆ ಗ್ರಾಮದ ಪೆರ್ಲ ಸರ್ಕಾರಿ ಶಾಲೆಯ ಆವರಣದೊಳಗಿನ ಕುಡಿಯುವ ನೀರಿನ ಬಾವಿಗೆ ಕಿಡಿಗೇಡಿಗಳು ವಿಷ ಹಾಕಿದ್ದು, ಅದನ್ನು ಕುಡಿದ ಎಂಟು ಮಂದಿ ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ.

ಶಿಬಾಜೆ ಗ್ರಾಮದ ಪೆರ್ಲ ಸರ್ಕಾರಿ ಉನ್ನತೀಕರಿಸಿದ ಶಾಲೆಯ ಆವರಣದೊಳಗೆ ಇರುವ ಬಾವಿಯಿಂದ ಸೋಮವಾರ ಬೆಳಗ್ಗೆ ಶಾಲಾ ತೋಟಕ್ಕೆ ನೀರುಣಿಸುವ ಸಲುವಾಗಿ ಶಾಲಾ ವಿದ್ಯಾರ್ಥಿ ನಾಯಕ ಸುದೀಶ್‌ ನೀರನ್ನು ಸೇದಿದ್ದ. ನಂತರ ಬಾಯಾರಿಕೆಗಾಗಿ ಇದೇ ನೀರನ್ನು ಕುಡಿದಿದ್ದ. ಈತನೊಂದಿಗಿದ್ದ ಇತರ ವಿದ್ಯಾರ್ಥಿಗಳೂ ಈ ನೀರನ್ನು ಕುಡಿದಿದ್ದರು. ನೀರನ್ನು ಕುಡಿದಾಕ್ಷಣ ವಿದ್ಯಾರ್ಥಿಗಳಿಗೆ ಹೊಟ್ಟೆನೋವು, ವಾಕರಿಕೆ ಆರಂಭವಾದದ್ದನ್ನು ಕಂಡ ಶಾಲಾ ಶಿಕ್ಷಕರು ಕೂಡಲೇ ಈ ಬಾವಿಯ ಬಳಿ ಹೋಗಿ ನೀರನ್ನು ಪರಿಶೀಲಿಸಿದಾಗ ಬಾವಿಯೊಳಗಿನ ನೀರು ಒಂದು ಕೆಟ್ಟವಾಸನೆ ಬರುತ್ತಿರುವುದನ್ನು ಗಮನಿಸಿದ್ದಾರೆ. ಅಂತೆಯೇ ಬಾವಿಯ ಸಮೀಪ ಒಂದು ಹಳದಿ ಬಣ್ಣದ ಕ್ಯಾನ್‌ ಕೂಡಾ ಮುಚ್ಚಳ ಸಹಿತ ದೊರೆತಿದ್ದು, ಕುಡಿಯುವ ನೀರಿನ ಈ ಬಾವಿಗೆ ಯಾರೋ ದುಷ್ಕರ್ಮಿಗಳು ವಿಷವನ್ನು ಬೆರೆಸಿದ್ದಾರೆ.

ಕೂಡಲೇ ಸಾರ್ವಜನಿಕರ ಸಹಕಾರ ಪಡೆದು ವಾಹನವೊಂದರ ಮೂಲಕ ಕೊಕ್ಕಡದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕೊಂಡೊಯ್ದು ಪ್ರಾಥಮಿಕ ಚಿಕಿತ್ಸೆ ನೀಡಿ ಮಂಗಳೂರಿಗೆ ಆಂಬುಲೆನ್ಸ್‌ ಮೂಲಕ ಕಳುಹಿಸಿಕೊಡಲಾಯಿತು. ಅಂತೆಯೇ ಇದೇ ನೀರನ್ನು ಇತರ ನಾಲ್ಕು ಮಕ್ಕಳೂ ಕುಡಿದಿರುವ ಬಗ್ಗೆ ಶಾಲಾ ಶಿಕ್ಷಕರು ವಿಚಾರಿಸಿ ಈ ಮಕ್ಕಳ ಆರೋಗ್ಯದಲ್ಲೂ ತುಸು ಬದಲಾವಣೆ ಗಮನಿಸಿ ಈ ನಾಲ್ಕು ಮಕ್ಕಳನ್ನೂ ಆಸ್ಪತ್ರೆಗೆ ತುರ್ತು ಚಿಕಿತ್ಸೆಗೆ ದಾಖಲಿಸಲಾಗಿದೆ.

ಧರ್ಮಸ್ಥಳ ಪೊಲೀಸ್‌ ಉಪ ನಿರೀಕ್ಷಕ ಓಡಿಯಪ್ಪ ಗೌಡ ಘಟನಾ ಸ್ಥಳಕ್ಕೆ ಆಗಮಿಸಿ ಘಟನೆಯ ಬಗ್ಗೆ ಮಾಹಿತಿ ಕಲೆ ಹಾಕಿದರು. ಬಾವಿಯ ನೀರನ್ನು ಆರು ಬಾಟಲಿಗಳಿಗೆ ತುಂಬಿಸಿ ಜೊತೆಯಲ್ಲಿ ಸಿಕ್ಕಿದ ಖಾಲಿ ಕ್ಯಾನನ್ನೂ ಪರೀಕ್ಷೆಗಾಗಿ ಕಳುಹಿಸಲಾಗುವುದು. ಮುಂದಿನ ಸೂಚನೆ ಬರುವ ವರೆಗೆ ಯಾವುದೇ ಕಾರಣಕ್ಕೂ ಬಾವಿಯ ನೀರನ್ನು ಬಳಸಬಾರದು ಎಂದು ಸೂಚಿಸಿದ್ದಾರೆ.

ಬಾವಿಯ ಸಮೀಪ ಬಿದ್ದಿದ್ದ ಸಂಶಯ ಉಳ್ಳ ಖಾಲಿ ಕ್ಯಾನ್‌ ಮತ್ತು ಬಾವಿಯಿಂದ ಆರು ಬಾಟಲಿ ನೀರನ್ನು ಪರೀಕ್ಷೆಗೊಳಪಡಿಸಲು ಪೊಲೀಸ್‌ ಸಿಬ್ಬಂದಿ ಸಂಗ್ರಹಿಸಿದ್ದಾರೆ. ಈ ಸಂದರ್ಭ ನೂರಾರು ಮಕ್ಕಳ ಪೋಷಕರು ಮತ್ತು ಗ್ರಾಮಸ್ಥರು ಶಾಲಾ ಆವರಣದಲ್ಲಿ ಸೇರಿದ್ದರು. ತಮ್ಮ ಗ್ರಾಮದ ಶಾಲೆಯಲ್ಲೂ ಈ ರೀತಿ ಮಕ್ಕಳ ಜೀವದ ಮೇಲೆ ದಾಳಿಯನ್ನು ನಡೆಸಲು ಮುಂದಾಗಿರುವ ದುಷ್ಕರ್ಮಿಗಳನ್ನು ಕೂಡಲೇ ಪತ್ತೆ ಮಾಡಿ ತಕ್ಕ ಶಿಕ್ಷೆಯನ್ನು ನೀಡಬೇಕು ಎಂದು ಗ್ರಾಮಸ್ಥರು ಒಕ್ಕೊರಲಿನಿಂದ ಪೊಲೀಸರನ್ನು ಆಗ್ರಹಿಸಿದರು.

ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದು ಕೃತ್ಯವನ್ನು ಎಸಗಿದ ದುಷ್ಕರ್ಮಿಗಳನ್ನು ಪತ್ತೆ ಮಾಡಲು ಕ್ರಮ ಕೈಗೊಳ್ಳಲಿದ್ದೇವೆ. ಈ ಶಾಲೆಯಲ್ಲಿ ಈ ಹಿಂದೆಯೂ ಕುಡಿಯುವ ನೀರಿನ ಪೈಪ್‌ಗಳನ್ನು ಅನೇಕ ಬಾರಿ ಒಡೆದು ಹಾಕುವಂತಹ ಪ್ರಕರಣಗಳೂ ನಡೆದಿರುವ ಬಗ್ಗೆ ಇಲಾಖೆಗೆ ದೂರುಗಳು ಬಂದಿದ್ದು, ಪ್ರಕರಣ ಕೂಲಂಕಶವಾಗಿ ತನಿಖೆ ನಡೆಸಿ ಅಪರಾಧಿಗಳನ್ನು ಪತ್ತೆ ಮಾಡುವ ಕಾರ್ಯ ಇಲಾಖೆ ಮಾಡಲಿದೆ. ಗ್ರಾಮಸ್ಥರಿಗೆ ಲಭ್ಯವಿರುವ ಮಾಹಿತಿಗಳನ್ನೂ ಪೊಲೀಸರಿಗೆ ನೀಡಿದಲ್ಲಿ ಮಾಹಿತಿ ನೀಡಿದವರ ಹೆಸರನ್ನು ಗೌಪ್ಯವಾಗಿಟ್ಟು ಅಪರಾಧಿಗಳನ್ನು ಪತ್ತೆ ಮಾಡಲಾಗುವುದು. ಶಾಲೆ ಆವರಣದಲ್ಲಿ ಇಂತಹ ಕೃತ್ಯಗಳು ನಡೆಯುತ್ತಲೇ ಇರುವುದರಿಂದ ಶಾಲಾ ಆವರಣಕ್ಕೆ ಸಿಸಿ ಕ್ಯಾಮೆರಾವನ್ನೂ ಅಳವಡಿಸುವ ಕುರಿತೂ ಗ್ರಾಮಸ್ಥರು, ಶಾಲಾಭಿವೃದ್ಧಿ ಸಮಿತಿ ಮುಂದಾಗಬೇಕು ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಘಟನೆಯಿಂದ ಎಂಟನೇ ತರಗತಿಯ ಸುದೀಶ್‌, ರಾಜೇಶ್‌, ರಾಧಾಕೃಷ್ಣ, ಯೋಗೀಶ್‌, 7ನೇ ತರಗತಿಯ ಚೇತನ್‌, ಮೋನಿಷ್‌, 6ನೇ ತರಗತಿಯ ಸುದೀಪ್‌, ಶ್ರವಣ್‌ ಎಂಬ ಎಂಟು ಮಂದಿ ವಿದ್ಯಾರ್ಥಿಗಳು ಈ ಸಂಶಯಯುಕ್ತ ವಿಷ ಬೆರೆತ ನೀರನ್ನು ಸೇವಿಸಿ ಆಸ್ಪತ್ರೆಗೆ ದಾಖಲಾಗಿದ್ದು ಎಲ್ಲ ಮಕ್ಕಳೂ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದ್ದಾರೆ ಎಂದು ಶಾಲೆ ಶಿಕ್ಷಕ ವರ್ಗ ತಿಳಿಸಿದೆ. ಬೆಳ್ತಂಗಡಿ ತಾ.ಪಂ. ಅಧ್ಯಕ್ಷೆ ದಿವ್ಯಜ್ಯೋತಿ ಸ್ಥಳಕ್ಕಾಗಮಿಸಿ ಸೂಕ್ತ ಸಲಹೆ ನೀಡಿದರು.

ತಾಲೂಕು ಶಿಕ್ಷಣಾಧಿಕಾರಿ ಲೋಕೇಶ್‌, ಅಕ್ಷರ ದಾಸೋಹದ ಸುರೇಶ್‌, ಶಿಕ್ಷಣ ಸಂಯೋಜಕ ಜಾಧವ್‌, ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಭುವನೇಶ್‌ ಭೇಟಿ ನೀಡಿ ಮುನ್ನೆಚ್ಚರಿಕೆಯ ಕುರಿತಂತೆ ಶಾಲಾ ಶಿಕ್ಷಕರಿಗೆ ಮತ್ತು ಪೋಷಕರಿಗೆ ಮಾಹಿತಿ ನೀಡಿದ್ದಾರೆ.

ಎಸ್‌ಡಿಎಂಸಿ ಅಧ್ಯಕ್ಷ ವೆಂಕಪ್ಪ ಗೌಡ, ಶಿಬಾಜೆ ಗ್ರಾ.ಪಂ. ಅಧ್ಯಕ್ಷೆ ಸುಶೀಲ, ಗ್ರಾ.ಪಂ. ಸದಸ್ಯರಾದ ರಮೇಶ್‌ ಗೌಡ ಕುರುಂಜ, ಪೈಲಿ, ಗಂಗೆ, ಊರ ಪ್ರಮುಖರಾದ ಕೃಷ್ಣಪ್ಪ ಗೌಡ ಬೇಂಗಳ, ಪುರಂದರ ರಾವ್‌ ಊರ್ತಾಜೆ, ಪ್ರೇಮಚಂದ್ರ ರಾವ್‌, ರತೀಶ್‌ ಗೌಡ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

click me!