ಕೃಷ್ಣಮಠದಲ್ಲಿ ಎಡೆಸ್ನಾನಕ್ಕೂ ವಿದಾಯ: ಪಲಿಮಾರು ಶ್ರೀ ದಿಟ್ಟ ನಿರ್ಧಾರ!

By Web DeskFirst Published Dec 3, 2019, 9:00 AM IST
Highlights

ಕೃಷ್ಣಮಠದಲ್ಲಿ ಎಡೆಸ್ನಾನಕ್ಕೂ ವಿದಾಯ: ಪಲಿಮಾರು ಶ್ರೀಗಳಿಂದ ದಿಟ್ಟ ನಿರ್ಧಾರ| ಎಡೆಸ್ನಾನಕ್ಕೆಂದು ಬಂದಿದ್ದವರು ಖಾಲಿ ನೆಲದಲ್ಲಿ ಉರುಳುಸೇವೆ ನಡೆಸಿದರು

ಉಡುಪಿ[ಡಿ.03]: ನಾಡಿನಾದ್ಯಂತ ಭಾರಿ ವಿವಾದಕ್ಕೆ ಕಾರಣವಾಗಿರುವ ಮಡೆಸ್ನಾನ ಹಾಗೂ ಎಡೆಸ್ನಾನಗಳಿಗೆರಡನ್ನೂ ಉಡುಪಿ ಕೃಷ್ಣ ಮಠದಲ್ಲಿ ನಿಲ್ಲಿಸುವ ಐತಿಹಾಸಿಕ ನಿರ್ಧಾರವನ್ನು ಪರ್ಯಾಯ ಪಲಿಮಾರು ಮಠದ ಶ್ರೀವಿದ್ಯಾಧೀಶ ಸ್ವಾಮೀಜಿ ಕೈಗೊಂಡಿದ್ದಾರೆ.

ಹಿಂದೆ ಕೃಷ್ಣ ಮಠದ ಸುಬ್ರಹ್ಮಣ್ಯ ಗುಡಿಯ ಮುಂದೆ ಭಕ್ತರು ಊಟ ಮಾಡಿದ ಎಂಜಲೆಲೆಗಳ ಮೇಲೆ ಹರಕೆ ಹೇಳಿದವರು ಉರುಳುವ ಮಡೆ (ಎಂಜಲು) ಸ್ನಾನ ನಡೆಯುತ್ತಿತ್ತು. ಐದು ವರ್ಷಗಳ ಹಿಂದೆ ಇದು ನಾಡಿನಾದ್ಯಂತ ವಿವಾದಕ್ಕೆ ಕಾರಣವಾದ ಮೇಲೆ ಪೇಜಾವರ ಶ್ರೀಗಳು ಇದನ್ನು ನಿಲ್ಲಿಸಿ, ಎಲೆಯ ಮೇಲೆ ಅನ್ನ (ಎಡೆ) ಬಡಿಸಿ, ಹರಕೆ ಹೊತ್ತವರು ಅದರ ಮೇಲೆ ಉರುಳಾಡುವ ಎಡೆಸ್ನಾನ ಜಾರಿಗೆ ಬಂತು. ಆದರೆ ಉಣ್ಣುವ ಅನ್ನದ ಮೇಲೆ ಉರುಳುವುದು ಎಷ್ಟುಸರಿ ಎನ್ನುವ ಆಕ್ಷೇಪ ಕೇಳಿ ಬಂದಿತ್ತು.

ಇದೀಗ ಪಲಿಮಾರು ಶ್ರೀಗಳು ಮಡೆಸ್ನಾನ ಮತ್ತು ಎಡೆಸ್ನಾನ ಎರಡಕ್ಕೂ ಅವಕಾಶ ನೀಡದೇ ವಿವಾದಕ್ಕೆ ವಿದಾಯ ಹೇಳಿದ್ದಾರೆ. ಅನಗತ್ಯ ಗೊಂದಲ ಬೇಡ ಎಂಬ ಕಾರಣಕ್ಕೆ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಸ್ವಾಮೀಜಿ ತಿಳಿಸಿದ್ದಾರೆ.

ಹೀಗಾಗಿ ಎಡೆಸ್ನಾನ ಕೈಗೊಳ್ಳಲು ಬಂದಿದ್ದ ಹರಕೆ ಹೊತ್ತಿದ್ದ ಕೆಲವು ಭಕ್ತರು, ಸುಬ್ರಹ್ಮಣ್ಯ ಗುಡಿಯ ಮುಂದೆ ಖಾಲಿ ನೆಲದಲ್ಲಿ ಉರುಳು ಸೇವೆ ನಡೆಸಿ ವಾಪಸಾದರು. ಪಲಿಮಾರು ಶ್ರೀಗಳ ಈ ನಿರ್ಧಾರ ಕೃಷ್ಣಮಠದಲ್ಲಿ ಮುಂದುವರಿಯುತ್ತದೋ ಅಥವಾ ಮುಂದಿನ ಪರ್ಯಾಯಗಳಲ್ಲಿ ಮತ್ತೆ ಹಳೆಯ ಸಂಪ್ರದಾಯ ಚಾಲ್ತಿಗೆ ಬರುತ್ತೋ ಗೊತ್ತಿಲ್ಲ. ಒಟ್ಟಾರೆ ಸ್ವಾಮಿಗಳ ಈ ನಿರ್ಧಾರವನ್ನು ಪ್ರಜ್ಞಾವಂತರು ಸ್ವಾಗತಿಸಿದ್ದಾರೆ.

click me!