ಸಮರ್ಪಕ ಬಸ್ ಸೌಲಭ್ಯ ಇಲ್ಲದ್ದರಿಂದ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಸಮಸ್ಯೆ| 503 ಶೆಡ್ಯೂಲ್‌ಗಳ ಪೈಕಿ ಸದ್ಯ 476 ಮಾರ್ಗಗಳಲ್ಲಿ ಸಂಚರಿಸುತ್ತಿರುವ ಬಸ್| 151 ಸಿಬ್ಬಂದಿ ಕೊರತೆಯಿಂದ ಬೇಡಿಕೆಯಿದ್ದರೂ ಬಸ್ ಬಿಡಲಾಗದೇ ಅಸಹಾಯಕರಾಗಿರುವ ಅಧಿಕಾರಿಗಳು|
ನಾರಾಯಣ ಹೆಗಡೆ
ಹಾವೇರಿ(ಮಾ.14): ಜಿಲ್ಲೆಯಲ್ಲಿ ಸಾರಿಗೆ ಸಂಸ್ಥೆಯಲ್ಲಿ ಬಸ್‌ಗಳ ಸಂಖ್ಯೆ ಬೇಕಾದಷ್ಟಿವೆ. ಆದರೆ, ಅವನ್ನು ಓಡಿಸಲು ಚಾಲಕರೇ ಇಲ್ಲ. ಇದರಿಂದ ಗ್ರಾಮೀಣ ಭಾಗದ ಜನ ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳು ನಿತ್ಯವೂ ತೊಂದರೆ ಎದುರಿಸುವಂತಾಗಿದೆ.
ಕೊರೋನಾ ಸಂದರ್ಭದಲ್ಲಿ ಬಂದ್ ಆಗಿದ್ದ ಬಸ್ ಸಂಚಾರ ಈಗ ಹಳಿಗೆ ಬಂದಿವೆ. ಕೊರೋನಾ ಪ್ರಕರಣ ಇಳಿಮುಖವಾಗುತ್ತಿದ್ದಂತೆ ಜನಜೀವನ ಕೂಡ ಸಹಜ ಸ್ಥಿತಿಗೆ ಮರಳಿದೆ. ಪ್ರಯಾಣಿಕರ ಓಡಾಟ ಕೊರೋನಾ ಹಿಂದಿನ ಸ್ಥಿತಿಗೆ ಬಂದಿದೆ. ಶಾಲಾ-ಕಾಲೇಜುಗಳು ಕೂಡ ಆರಂಭವಾಗಿರುವುದರಿಂದ ಎಲ್ಲ ಮಾರ್ಗಗಳಲ್ಲಿ ಬಸ್ ಬೇಡಿಕೆಯಿದೆ. ಆದರೆ, ವಾಯವ್ಯ ಸಾರಿಗೆ ಸಂಸ್ಥೆಯ ಹಾವೇರಿ ವಿಭಾಗದಲ್ಲಿ ವರ್ಷದ ಹಿಂದಿದ್ದ ಸಿಬ್ಬಂದಿ ಸ್ಥಿತಿಗತಿ ಈಗಿಲ್ಲ. ಕೊರೋನಾದಿಂದ ಸಾವು, ವರ್ಗಾವಣೆ, ನಿವೃತ್ತಿ ಹೀಗೆ ವಿವಿಧ ಕಾರಣಗಳಿಂದ ಚಾಲಕರು, ನಿರ್ವಾಹಕರ ಹುದ್ದೆ ಖಾಲಿಯಾಗಿದೆ. ಜಿಲ್ಲೆಯಲ್ಲಿ ಈಗ ಬೇಕಾದಷ್ಟು ಸಂಖ್ಯೆಯ ಬಸ್‌ಗಳಿವೆ. ಕೊರೋನಾಕ್ಕಿಂತ ಮೊದಲು ಸಂಚರಿಸುತ್ತಿದ್ದ ಮಾರ್ಗಗಳಲ್ಲಿ ಬಸ್ ಬಿಡುವಂತೆ ಬೇಡಿಕೆಯೂ ಇದೆ. ಆದರೆ, ಬಸ್ ಓಡಿಸಲು ಸಿಬ್ಬಂದಿಯೇ ಇಲ್ಲದೇ ಅಧಿಕಾರಿಗಳು ಅಸಹಾಯಕರಾಗಿದ್ದಾರೆ.
151 ಹುದ್ದೆ ಖಾಲಿ:
ಕೊರೋನಾ ಪೂರ್ವದಲ್ಲಿ ಜಿಲ್ಲೆಯಲ್ಲಿ ಒಟ್ಟು 503 ಶೆಡ್ಯೂಲ್‌ಗಳಲ್ಲಿ ಬಸ್ ಓಡಿಸಲಾಗುತ್ತಿತ್ತು. ಇಷ್ಟು ಶೆಡ್ಯೂಲ್‌ಗಳಿಗೆ ಒಟ್ಟು 525 ಬಸ್‌ಗಳನ್ನು ಬಿಡಲಾಗುತ್ತಿತ್ತು. ಇಷ್ಟುಬಸ್ ಓಡಿಸಲು 1739 ಸಿಬ್ಬಂದಿ ಬೇಕಿತ್ತು. ಕೊರೋನಾ ಬಳಿಕ ಹಂತ-ಹಂತವಾಗಿ ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ಬಸ್ ಓಡಿಸಲಾಗುತ್ತಿತ್ತು. ಈಗ ಮಾರುಕಟ್ಟೆ, ಕಚೇರಿ ಕಾರ್ಯ, ಶಾಲಾ-ಕಾಲೇಜುಗಳಿಗೆ ಹೋಗುವವರ ಸಂಖ್ಯೆ ಹಿಂದಿನ ಸ್ಥಿತಿಗೆ ಬಂದಿದೆ. ಆದರೆ, ಸದ್ಯ 476 ಶೆಡ್ಯೂಲ್‌ಗಳಲ್ಲಿ ಬಸ್ ಆಪರೇಟ್ ಆಗುತ್ತಿದೆ. ಕೊರೋನಾದಿಂದ 6 ಜನ ಸಾರಿಗೆ ಸಿಬ್ಬಂದಿ ಮೃತಪಟ್ಟಿದ್ದಾರೆ. ಅನೇಕರು ನಿವೃತ್ತಿಯಾಗಿದ್ದಾರೆ. ಇದರಿಂದ ಸದ್ಯ ಹಾವೇರಿ ವಿಭಾಗದಲ್ಲಿ 1588 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು, 151 ಸಿಬ್ಬಂದಿ ಕೊರತೆಯಿದೆ. ಇದರಿಂದ ಬೇಡಿಕೆಯಿದ್ದರೂ ಹಲವು ಮಾರ್ಗಗಳಲ್ಲಿ ಬಸ್ ಬಿಡಲು ಸಾಧ್ಯವಾಗುತ್ತಿಲ್ಲ. ಚಾಲಕ, ನಿರ್ವಾಹಕರಿಲ್ಲದೇ ಸುಮಾರು 25ಕ್ಕೂ ಹೆಚ್ಚು ಬಸ್‌ಗಳು ಡಿಪೋದಲ್ಲೇ ನಿಲ್ಲುತ್ತಿವೆ.
'ಸಿದ್ದರಾಮಯ್ಯ ಜಾರಿಗೊಳಿಸಿದ ಯೋಜನೆಗಳೇ ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರಲಿವೆ'
ವಿದ್ಯಾರ್ಥಿಗಳಿಗೆ ಸಮಸ್ಯೆ:
ಶಾಲಾ-ಕಾಲೇಜುಗಳು ಆರಂಭವಾಗಿದ್ದು, ಪರೀಕ್ಷೆಗಳು ಸಮೀಪಿಸುತ್ತಿವೆ. ಆದ್ದರಿಂದ 6ನೇ ತರಗತಿ ಮೇಲ್ಪಟ್ಟ ತರಗತಿಗಳು ಪೂರ್ಣ ಪ್ರಮಾಣದಲ್ಲಿ ನಡೆಯುತ್ತಿವೆ. ಗ್ರಾಮೀಣ ಭಾಗದಿಂದ ಬರುವ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದರೆ, ಹಲವು ಗ್ರಾಮಗಳಿಗೆ ಇನ್ನೂ ಬಸ್ ಬಿಡಲು ಸಾಧ್ಯವಾಗುತ್ತಿಲ್ಲ. ಕಳೆದ ವರ್ಷ ಬಸ್ ಮೂಲಕ ಶಾಲಾ ಕಾಲೇಜುಗಳಿಗೆ ಬರುತ್ತಿದ್ದವರು ಈಗ ದೂರ ನಡೆದು ಬಂದು ಯಾವುದೋ ಬಸ್‌ಗೆ ಹತ್ತಿ ಕಷ್ಟಪಡುವಂತಾಗಿದೆ. ಹಲವು ಬಾರಿ ಸಾರಿಗೆ ಸಂಸ್ಥೆ ಅಧಿಕಾರಿಗಳಿಗೆ ಮನವಿ ಮಾಡಿದರೂ ಕನಿಷ್ಠ ಬೆಳಗ್ಗೆ ಮತ್ತು ಸಂಜೆ ಬಸ್ ಬಿಡಲು ಕೂಡ ಸಾಧ್ಯವಾಗುತ್ತಿಲ್ಲ. ಇದರಿಂದ ಹಲವು ಗ್ರಾಮಗಳಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ.
ಅಸಹಾಯಕ ಅಧಿಕಾರಿಗಳು:
ನಮ್ಮೂರಿಗೆ ಈ ಹಿಂದೆ ಓಡಿಸುತ್ತಿದ್ದ ಬಸ್ ಪುನಾರಂಭಿಸುವಂತೆ ಗ್ರಾಮಸ್ಥರಿಂದ ಒತ್ತಡ ಹೆಚ್ಚುತ್ತಿವೆ. ಜನಪ್ರತಿನಿಧಿಗಳು ಸಾರಿಗೆ ಸಂಸ್ಥೆ ಅಧಿಕಾರಿಗಳಿಗೆ ಬಸ್ ಬಿಡುವಂತೆ ಹೇಳುತ್ತಿದ್ದರೂ ಅವರು ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ. ಬಸ್‌ಗೆ ಕೊರತೆಯಿಲ್ಲ, ಆದರೆ ಸಿಬ್ಬಂದಿಯಿಲ್ಲ ಎಂದು ಹೇಳುತ್ತಿದ್ದಾರೆ. ಸಿಬ್ಬಂದಿ ಕೊರತೆಯಿಂದ ಸುಮಾರು 27 ಶೆಡ್ಯೂಲ್‌ಗಳು ಬಂದ್ ಆಗಿವೆ.
ಹಾವೇರಿ ವಿಭಾಗದಲ್ಲಿ ಬಸ್‌ಗಳ ಕೊರತೆಯಿಲ್ಲ. ಆದರೆ, ಸಿಬ್ಬಂದಿ ಕೊರತೆಯಿಂದ ಬೇಡಿಕೆಯಿದ್ದರೂ ಹಲವು ಮಾರ್ಗಗಳಲ್ಲಿ ಬಸ್ ಬಿಡಲು ಸಾಧ್ಯವಾಗುತ್ತಿಲ್ಲ. ಇರುವ ಸಿಬ್ಬಂದಿಯಿಂದಲೇ ವ್ಯವಸ್ಥೆ ಮಾಡಲಾಗುತ್ತಿದೆ. ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಾರಿಗೆ ವಿಭಾಗೀಯ ನಿಯಂತ್ರಣಾಧಿಕಾರಿ ಜಗದೀಶ್ ತಿಳಿಸಿದ್ದಾರೆ.
ಶಾಲೆ ಕಾಲೇಜುಗಳು ಆರಂಭವಾಗಿದ್ದರೂ ಗ್ರಾಮೀಣ ಭಾಗಕ್ಕೆ ಸಮರ್ಪಕವಾಗಿ ಬಸ್ ಸಂಚರಿಸುತ್ತಿಲ್ಲ. ಇದರಿಂದ ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ತರಗತಿಗೆ ಬರಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಅನೇಕ ಬಾರಿ ಹೋರಾಟ, ಮನವಿ ಮಾಡಿದರೂ ಪ್ರಯೋಜನವಾಗುತ್ತಿಲ್ಲ ಎಂದು ವಿದ್ಯಾರ್ಥಿ ಮುಖಂಡ ಬಸವರಾಜ ಭೋವಿ ಹೇಳಿದ್ದಾರೆ.