
ಆನಂದ ಭಮ್ಮನ್ನವರ
ಸಂಕೇಶ್ವರ(ಸೆ.14): ರಾಜ್ಯ ಸರ್ಕಾರದ ಬಹು ನಿರೀಕ್ಷಿತ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆ ರಾಜ್ಯದ ಮಹಿಳೆಯರ ಮನ ಗೆದ್ದಿದೆ. ಆದರೆ, ಈ ಯೋಜನೆಯ ಪರಿಣಾಮ ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಸ್ವಕ್ಷೇತ್ರದ ಗೋಟುರ ಮತ್ತು ಗವನಾಳ ಗ್ರಾಮದಲ್ಲಿ ಸಾರಿಗೆ ಬಸ್ ವ್ಯವಸ್ಥೆ ಇಲ್ಲದೆ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ.
ಗವನಾಳ ಮತ್ತು ಗೋಟುರ ಗ್ರಾಮದಿಂದ ನಿತ್ಯ ನೂರಕ್ಕೂ ಅಧಿಕ ವಿದ್ಯಾರ್ಥಿಗಳು ಸಾರಿಗೆ ಬಸ್ ಮೂಲಕವೇ ಶಾಲಾ ಕಾಲೇಜುಗಳಿಗೆ ತೆರಳುತ್ತಾರೆ. ಆದರೆ ಸಾರಿಗೆ ಬಸ್ ವ್ಯವಸ್ಥೆ ಅವ್ಯವಸ್ಥೆಯಿಂದ ನಿತ್ಯ ವಿದ್ಯಾರ್ಥಿಗಳು ಬೈಕ್ ಅಥವಾ ಖಾಸಗಿ ವಾಹನದ ಆಸರೆಯಲ್ಲಿ ಶಾಲೆಗೆ ಹೋಗಬೇಕಾದ ಅನಿವಾರ್ಯತೆ ಎದುರಾಗಿದೆ.
"ಶಕ್ತಿ'' ಯೋಜನೆಗೆ ಮೂರು ತಿಂಗಳು: 13.20 ಕೋಟಿ ಮಹಿಳೆಯರ ಪ್ರಯಾಣ
ನಿತ್ಯ ಮೂರು ಕಿಮೀ ಕಾಲ್ನಡಿಗೆ:
ಗೋಟುರ - ವಿಜಯಪುರ ರಾಷ್ಟ್ರೀಯ ಹೆದ್ದಾರಿ ಗವನಾಳ ಗ್ರಾಮದ ಮೂಲಕ ಹಾದು ಹೋಗಿದೆ. ಆದರೆ ಇಲ್ಲಿನ ವಿದ್ಯಾರ್ಥಿಗಳು ನಿತ್ಯ ಮೂರು ಕಿ.ಮೀ. ನಡೆದುಕೊಂಡು ಶಿಕ್ಷಣ ಪಡೆಯಬೇಕಿದೆ. ಗವನಾಳ ಗ್ರಾಮಕ್ಕೆ ಸಂಕೇಶ್ವರ ಸಾರಿಗೆ ಸಂಸ್ಥೆಯಿಂದ ಹಲಕರ್ಣಿ- ಸಂಕೇಶ್ವರ ಬಸ್ ಸಂಚರಿಸುತ್ತದೆ. ಆದರೆ ಮುಂಜಾನೆ 9.30ಕ್ಕೆ ಗವನಾಳ ಮೂಲಕ ಸಂಚರಿಸುವ ಈ ಬಸ್ ಹಲಕರ್ಣಿ, ಉಳ್ಳಾಗಡ್ಡಿ ಖಾನಾಪೂರ, ಚಿಕ್ಕಾಲಗುಡ್ಡ, ಹೆಬ್ಬಾಳ ಗೋಟುರ ಮಾರ್ಗವಾಗಿ ಸಂಚರಿಸಿ ಗವನಾಳ ಗ್ರಾಮಕ್ಕೆ ಬರುತ್ತದೆ. ಆದರೆ ಈ ಬಸ್‌ನಲ್ಲಿ ಸ್ವಲ್ಪವು ಸ್ಥಳವಿಲ್ಲದೆ ನಿತ್ಯ ವಿದ್ಯಾರ್ಥಿಗಳು ಕಾಲ್ನಡಿಗೆ ಮೂಲಕ ಕಮತನೂರ ಗೇಟ್ ತಲುಪಿ ಅಲ್ಲಿಂದ ಸಂಕೇಶ್ವರಕ್ಕೆ ಪ್ರಯಾಣಿಸುತ್ತಾರೆ.
ಗೋಟುರ ಗ್ರಾಮದ ವಿದ್ಯಾರ್ಥಿಗಳಿಗೂ ತಪ್ಪದ ಗೋಳು:
ಗೋಟುರ ಗ್ರಾಮದಿಂದ ನಿತ್ಯ ನೀಡಸೊಸಿ ಶಾಲಾ- ಕಾಲೇಜಿಗೆ 50ಕ್ಕೂ ಅಧಿಕ ವಿದ್ಯಾರ್ಥಿಗಳು ತೆರಳುತ್ತಾರೆ. ಆದರೆ ಗೋಟುರ ಗ್ರಾಮದ ಮೂಲಕ ಸಂಚರಿಸುವ ಬೆಳಗಾವಿ ಚಿಕ್ಕೋಡಿ, ಬೆಳಗಾವಿ ವಿಜಯಪುರ ಬಸ್ ಸಂಚಾರ ಇದ್ದು ಇಲ್ಲದಂತಾಗಿದೆ. ಸಾರಿಗೆ ಇಲಾಖೆ ಬಸ್ ಮುಂಜಾನೆ ಸಮಯ ಜನಜಂಗುಳಿಂದ ತುಂಬಿರುತ್ತವೆ. ಪರಿಣಾಮ ವಿದ್ಯಾರ್ಥಿಗಳು ನಿತ್ಯ ಪಾಲಕರ ಸಹಾಯದಿಂದ ದ್ವಿಚಕ್ರ ಮೂಲಕ ಶಾಲೆಗೆ ಹೋಗಬೇಕಿದೆ.
ವಿದ್ಯಾರ್ಥಿಗಳಿಗಾಗಿ ಬೇಕಿದೆ ಹೆಚ್ಚಿನ ಬಸ್:
ಗವನಾಳ ಹಾಗೂ ಗೋಟುರ ಗ್ರಾಮದಲ್ಲಿ ಸುಮಾರು 150ಕ್ಕೂ ಅಧಿಕ ವಿದ್ಯಾರ್ಥಿಗಳು ಸಂಕೇಶ್ವರ, ಹುಕ್ಕೇರಿ , ನೀಡಸೊಸಿ, ಮಜಲಟ್ಟಿ ಸೇರಿ ವಿವಿಧ ಕಡೆ ಶಿಕ್ಷಣಕ್ಕಾಗಿ ಸಂಚರಿಸುತ್ತಾರೆ. ಆದರೆ ಗವನಾಳ ಗ್ರಾಮಕ್ಕೆ ಸ್ಥಳೀಯವಾಗಿ ಇರುವುದು ಒಂದೆ ಒಂದು ಬಸ್. ಅದು ಕೂಡ ತುಂಬಿಕೊಂಡೆ ಬರುತ್ತದೆ. ಆದ್ದರಿಂದ ಗವನಾಳ ಗೋಟುರ ಎರಡು ಗ್ರಾಮಗಳ ವಿದ್ಯಾರ್ಥಿಗಳಿಗಾಗಿಯೇ ಮುಂಜಾನೆ ಹಾಗೂ ಸಾಯಂಕಾಲ ವಿಶೇಷ ಬಸ್ ಆರಂಭಿಸುವಂತೆ ಎರಡು ಗ್ರಾಮಗಳ ವಿದ್ಯಾರ್ಥಿಗಳ ಒತ್ತಾಯವಾಗಿದೆ.
'ಗ್ಯಾರಂಟಿಗಳ ಅಡ್ಡಪರಿಣಾಮದಿಂದ ಅನೇಕರ ಬದುಕಿಗೆ ಗ್ಯಾರಂಟಿ ಇಲ್ಲದಂತಾಗಿದೆ'- ಎಚ್‌ಡಿಕೆ
ಶಕ್ತಿ ಯೋಜನೆಯಿಂದ ರಾಜ್ಯ ರಸ್ತೆ ಸಾರಿಗೆ ಬಸ್ ನಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದು, ಗವನಾಳ ಮತ್ತು ಗೋಟುರ ಗ್ರಾಮದ ವಿದ್ಯಾರ್ಥಿಗಳ ಬಸ್ ಸಮಸ್ಯೆ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ.ಒಂದು ವೇಳೆ ಸಮಸ್ಯೆ ಇದ್ದಲ್ಲಿ ನಮ್ಮ ಅಧಿಕಾರಿಗಳನ್ನ ಕಳುಹಿಸಿ ಸಮಸ್ಯೆ ಬಗೆಹರಿಸಲಾಗುವುದು ಎಂದು ಸಂಕೇಶ್ವರ ಘಟಕ ವ್ಯವಸ್ಥಾಪಕ ವಿಜಯಕುಮಾರ ಕಾಗವಾಡೆ ತಿಳಿಸಿದ್ದಾರೆ.
ಗವನಾಳ ಗ್ರಾಮಕ್ಕೆ ಇರುವುದು ಒಂದೆ ಒಂದು ಬಸ್.ಅದು ಕೂಡ ತುಂಬಿಕೊಂಡೆ ಬರುತ್ತದೆ.ಪರಿಣಾಮ ನಿತ್ಯ ನಾವು ಮೂರು ಕಿ.ಮೀ. ನಡೆದುಕೊಂಡು ಶಾಲಾ ಕಾಲೇಜಿಗೆ ಹೋಗಿ ಬರಬೇಕಿದೆ.ಗೋಟುರ ,ಗವನಾಳ ಎರಡು ಗ್ರಾಮಗಳ ವಿದ್ಯಾರ್ಥಿಗಳಿಗಾಗಿ ಸಾರಿಗೆ ಇಲಾಖೆಯಿಂದ ವಿಶೇಷ ಬಸ್ ಆರಂಭಿಸಬೇಕು ಎಂದು ಗವನಾಳ ವಿದ್ಯಾರ್ಥಿ ಅಕ್ಷಯ ತಿಳಿಸಿದ್ದಾನೆ.