ಕಾವೇರಿ ನೀರು ನಿರ್ವಹಣಾ ಮಂಡಳಿ ಆದೇಶಕ್ಕೆ ತೀವ್ರ ವಿರೋಧ

Published : Sep 03, 2023, 07:59 AM IST
 ಕಾವೇರಿ ನೀರು ನಿರ್ವಹಣಾ ಮಂಡಳಿ ಆದೇಶಕ್ಕೆ  ತೀವ್ರ ವಿರೋಧ

ಸಾರಾಂಶ

ತಮಿಳುನಾಡಿಗೆ ಪ್ರತಿನಿತ್ಯ 5000 ಕ್ಯುಸೆಕ್‌ ನೀರು ಹರಿಸುವಂತೆ ಆದೇಶಿಸಿರುವ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವನ್ನು ರದ್ದುಗೊಳಿಸಲು ಆಗ್ರಹಿಸಿ ಕರ್ನಾಟಕ ಸೇನಾ ಪಡೆಯವರು ಮೈಸೂರು ಜಿಪಂ ಕಚೇರಿ ಮುಂಭಾಗದಲ್ಲಿ ಶನಿವಾರ ಗೋವಿಂದ ಎಂದು ಕೂಗಿ ಗಂಟೆ ಶಂಖ ಬಾರಿಸುವ ಮೂಲಕ ಪ್ರತಿಭಟಿಸಿದರು.

  ಮೈಸೂರು :  ತಮಿಳುನಾಡಿಗೆ ಪ್ರತಿನಿತ್ಯ 5000 ಕ್ಯುಸೆಕ್‌ ನೀರು ಹರಿಸುವಂತೆ ಆದೇಶಿಸಿರುವ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವನ್ನು ರದ್ದುಗೊಳಿಸಲು ಆಗ್ರಹಿಸಿ ಕರ್ನಾಟಕ ಸೇನಾ ಪಡೆಯವರು ಮೈಸೂರು ಜಿಪಂ ಕಚೇರಿ ಮುಂಭಾಗದಲ್ಲಿ ಶನಿವಾರ ಗೋವಿಂದ ಎಂದು ಕೂಗಿ ಗಂಟೆ ಶಂಖ ಬಾರಿಸುವ ಮೂಲಕ ಪ್ರತಿಭಟಿಸಿದರು.

ಕೇಂದ್ರ ಸರ್ಕಾರ ಹಿಂದೆ ತಮಿಳುನಾಡಿನ ನಾಯಕರು ಹಾಗೂ ಸರ್ಕಾರದ ಒತ್ತಡಕ್ಕೆ ಮಣಿದು ಕಾವೇರಿ ನೀರು ನಿರ್ಮಾಣ ಪ್ರಾಧಿಕಾರವನ್ನು ರಚಿಸಿರುವುದೇ ಖಂಡನಿಯ ಹಾಗೂ ರಾಜ್ಯಕ್ಕೆ ಮರಣ ಶಾಸನವಾಗಿದೆ. ಹಿಂದಿನಿಂದಲೂ ಕಾವೇರಿ ನೀರು ಹಂಚಿಕೆಯಲ್ಲಿ ರಾಜ್ಯದ ಜನರಿಗೆ, ರೈತರಿಗೆ ಅನ್ಯಾಯವಾಗುತ್ತಲೇ ಇದೆ ಎಂದು ಅವರು ಕಿಡಿಕಾರಿದರು.

ಈಗ ಇತ್ತೀಚೆಗೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ರಚನೆಯಾಗಿರುವುದೇ ತಮಿಳುನಾಡಿನ ಹಿತ ರಕ್ಷಣೆಗೆ ಇರುವಂತಿದೆ. ಈ ಪ್ರಾಧಿಕಾರ ಸ್ವಾಭಾವಿಕವಾಗಿ ಪ್ರತಿ ವರ್ಷ ಸರಿಯಾಗಿ ಮಳೆಯಾದಲ್ಲಿ ಕಾವೇರಿ ನೀರು ನಮ್ಮ ರಾಜ್ಯದಿಂದ ತಮಿಳುನಾಡಿಗೆ ಪ್ರಮಾಣಕ್ಕಿಂತ ಹೆಚ್ಚಾಗಿಯೇ ಹರಿಸಲಾಗುತ್ತದೆ. ಆದರೆ, ಈ ವರ್ಷ ಮಳೆ ಸರಿಯಾಗಿ ಬಾರದೆ, ನಮ್ಮ ರಾಜ್ಯ ಕಷ್ಟದಲ್ಲಿದೆ. ನಮಗೆ ಮುಂದಿನ ದಿನಗಳಲ್ಲಿ ಕುಡಿಯಲು ನೀರು ಸಿಗುವುದಿಲ್ಲ, ಬೆಂಗಳೂರಿನಲ್ಲಂತೂ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಲಿದೆ. ಪ್ರಾಧಿಕಾರ ನಮ್ಮ ರಾಜ್ಯದ ಜಲಾಶಯಗಳ ವಸ್ತುಸ್ಥಿತಿ ಜಲಾಶಯಗಳ ನೀರಿನ ಮಟ್ಟನೋಡಿ ತದನಂತರ ನೀರು ಬಿಡಲು ಆದೇಶಿಸಬೇಕು ಎಂದು ಅವರು ಒತ್ತಾಯಿಸಿದರು.

ಈಗಾಗಲೇ ಕೆಆರ್‌ಎಸ್‌ ಡ್ಯಾಮ್‌ನಲ್ಲಿ 113 ಅಡಿ ಇದ್ದ ನೀರು 100 ಅಡಿಗೆ ಕುಸಿದಿದೆ. ನಮ್ಮ ರಾಜ್ಯದಲ್ಲಿ ಈಗ 28 ಜನ ಸಂಸದರು, 11 ರಾಜ್ಯಸಭಾ ಸದಸ್ಯರು ಹಾಗೂ ನಾಲ್ಕು ಕೇಂದ್ರ ಮಂತ್ರಿಗಳಿದ್ದಾರೆ. ಇವರು ಈ ಕೂಡಲೇ ಕೇಂದ್ರ ಸರ್ಕಾರ ಹಾಗೂ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ನಮ್ಮ ರಾಜ್ಯದ ಜಲಾಶಯಗಳ ನೀರಿನ ಮಟ್ಟಮನವರಿಕೆ ಮಾಡಿಸಿ, ನೀರು ಬಿಡದಂತೆ ಹೋರಾಟ ಮಾಡಬೇಕು ಎಂದು ಅವರು ಆಗ್ರಹಿಸಿದರು.

ರಾಜ್ಯ ಕಾಂಗ್ರೆಸ್‌ ಸರ್ಕಾರವು ಅಧಿಕಾರಕ್ಕೆ ಬರುವ ಮುಂಚೆ ಮೇಕೆದಾಟು ಪಾದಯಾತ್ರೆ ಮಾಡಿ, ನಾವು ನಾಡಿನ ರೈತರ, ನೆಲ- ಜಲಗಳ ಪರವಾಗಿರುತ್ತೇವೆ, ರೈತರ ಹಿತ ರಕ್ಷಣೆಯನ್ನು ಕಾಪಾಡುತ್ತೇವೆ ಎಂದು ಹೇಳಿ, ಈಗ ರೈತರ ಹಿತ ರಕ್ಷಣೆಯನ್ನು ಕಾಪಾಡದೆ, ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್‌ ಜೊತೆ ಸೇರಿ, ಲೋಕಸಭಾ ಚುನಾವಣೆಗಾಗಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ. ಹೀಗಾಗಿ, ರಾಜ್ಯ ಸರ್ಕಾರ ಈ ಕೂಡಲೇ ತಮಿಳುನಾಡಿಗೆ ನೀರು ಬಿಡುವುದನ್ನು ನಿಲ್ಲಿಸಬೇಕು ಎಂದು ಅವರು ಒತ್ತಾಯಿಸಿದರು.

ಕರ್ನಾಟಕ ಸೇನಾ ಪಡೆಯ ಜಿಲ್ಲಾಧ್ಯಕ್ಷ ತೇಜೇಶ್‌ ಲೋಕೇಶ್‌ ಗೌಡ, ಮುಖಂಡರಾದ ರಘು, ಪ್ರಭುಶಂಕರ, ವಿಜಯೇಂದ್ರ, ಕೃಷ್ಣಯ್ಯ, ಶಾಂತರಾಜೇ ಅರಸ್‌, ಅಂಬಾ ಅರಸ್‌, ನೇಹಾ, ಶಿವಲಿಂಗಯ್ಯ, ರವಿ, ಮಿನಿ ಬಂಗಾರಪ್ಪ, ರಾಮಣ್ಣ, ದರ್ಶನ್‌ ಗೌಡ, ರಾಧಾಕೃಷ್ಣ, ಚಂದ್ರು, ಪ್ರಭಾಕರ, ವೆಂಕಟೇಶ್‌, ಗಣೇಶ್‌ಪ್ರಸಾದ್‌, ರವಿನಾಯಕ ಮೊದಲಾದವರು ಇದ್ದರು.

PREV
Read more Articles on
click me!

Recommended Stories

ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಮುಗಿಸಿ ಬೈಕ್‌ನಲ್ಲಿ ತೆರಳುತ್ತಿದ್ದ ಜೋಡಿಗೆ ಲಾರಿ ಡಿಕ್ಕಿ, ಸ್ಥಳದಲ್ಲೇ ಸಾವು
ಕಾಂಗ್ರೆಸ್ ಸರ್ಕಾರ ಶೇ.60ರಷ್ಟು ಭ್ರಷ್ಟಾಚಾರದಲ್ಲಿ ಮುಳುಗಿದೆ: ಮಾಜಿ ಸಚಿವ ಬಿ.ಸಿ.ಪಾಟೀಲ್ ಆರೋಪ